ಎಂಡಿಆರ್ (MDR) ನಿಯಮ ಜಾರಿಗೆ ಬರುವ ಮುನ್ನವೇ ಸೆಪ್ಟೆಂಬರ್ ತಿಂಗಳ ಯುಪಿಐ ವಹಿವಾಟಿನ ಪ್ರಮಾಣ, ಮೌಲ್ಯ ಅಚ್ಚರಿಯ ಇಳಿಕೆ ಕಂಡುಬಂದಿದೆ. ಆದರೆ, ದೈನಂದಿನ ಸರಾಸರಿ ವಹಿವಾಟು ಇದೇ ಮೊದಲ ಬಾರಿಗೆ 800 ಮಿಲಿಯನ್ ದಾಟಿ ದಾಖಲೆ ಬರೆದಿದೆ. ಮುಂಬರುವ ಹಬ್ಬದ ಸೀಸನ್‌ನಲ್ಲಿ ಯುಪಿಐ ಬಳಕೆ ಮತ್ತಷ್ಟು ಹೆಚ್ಚುತ್ತಾ?

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 15ರಿಂದ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಜಾರಿಗೆ ಬರಲಿದೆ. ಆದರೆ ಇದಕ್ಕೂ ಮೊದಲೇ ಅಂದರೆ ಸೆಪ್ಟೆಂಬರ್‌ನಲ್ಲಿ ಯುಪಿಐ (UPI) ವಹಿವಾಟಿನ ಪ್ರಮಾಣ ಮತ್ತು ಮೌಲ್ಯ ಶೇ.1.5ರಷ್ಟು ಇಳಿಕೆಯಾಗಿರುವುದು ಅಚ್ಚರಿ ಮೂಡಿಸಿದೆ.

ಆಗಸ್ಟ್ 2026 ಎಷ್ಟಿತ್ತು ಯುಪಿಐ ವಹಿವಾಟು?

ಆಗಸ್ಟ್ 2026ರಲ್ಲಿ 24.51 ಬಿಲಿಯನ್ ಇದ್ದ UPI ವಹಿವಾಟುಗಳ ಸಂಖ್ಯೆ ಸೆಪ್ಟೆಂಬರ್‌ನಲ್ಲಿ ಅಂದರೆ ಒಂದೇ ತಿಂಗಳಿಗೆ 24.07 ಬಿಲಿಯನ್‌ಗೆ ಇಳಿಕೆಯಾಗಿದೆ. ಇದೇ ವೇಳೆ ಆಗಸ್ಟ್‌ನಲ್ಲಿ ₹29.82 ಲಕ್ಷ ಕೋಟಿ ಇದ್ದ ವಹಿವಾಟಿನ ಮೌಲ್ಯ ಸೆಪ್ಟೆಂಬರ್‌ನಲ್ಲಿ ₹29.37 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಸೆಪ್ಟೆಂಬರ್‌ನಲ್ಲಿ ಭಾರತೀಯರ ಸರಾಸರಿ ಯುಪಿಐ ಪಾವತಿ ಎಷ್ಟು?

ಸೆಪ್ಟೆಂಬರ್‌ನಲ್ಲಿ ಭಾರತೀಯರು ಪ್ರತಿದಿನ ಸರಾಸರಿ 802 ಮಿಲಿಯನ್ UPI ಪಾವತಿಗಳನ್ನು ಮಾಡಿದ್ದಾರೆ. ಇದರ ಒಟ್ಟು ಮೌಲ್ಯ ₹97,913 ಕೋಟಿಯಾಗಿದೆ. ಇದು ದಿನದ ವಹಿವಾಟಿನ ಪ್ರಮಾಣ ಮತ್ತು ಮೌಲ್ಯ ಎರಡರಲ್ಲೂ ದಾಖಲೆಯಾಗಿದೆ. ಇದೇ ಮೊದಲ ಬಾರಿಗೆ ಒಂದು ದಿನದ UPI ಪಾವತಿಗಳ ಸಂಖ್ಯೆ 800 ಮಿಲಿಯನ್ ದಾಟಿದೆ. ಆಗಸ್ಟ್‌ನಲ್ಲಿ ದೈನಂದಿನ ವಹಿವಾಟಿನ ಮೌಲ್ಯ ₹96,205 ಕೋಟಿಯಾಗಿತ್ತು. NPCI ಅಂಕಿ-ಅಂಶಗಳ ಪ್ರಕಾರ, ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ವಹಿವಾಟಿನ ಪ್ರಮಾಣ ಶೇ.1.8ರಷ್ಟು ಇಳಿಕೆಯಾಗಿದೆ. ವಹಿವಾಟಿನ ಮೌಲ್ಯದಲ್ಲೂ ತಿಂಗಳ ಆಧಾರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

ಯುಪಿಐ ವಹಿವಾಟಿನ ಪ್ರಮಾಣದಲ್ಲಿ ಹೆಚ್ಚಳ

ವರ್ಷದಿಂದ ವರ್ಷಕ್ಕೆ ಹೋಲಿಸಿದರೆ, UPI ವಹಿವಾಟಿನ ಪ್ರಮಾಣ ಶೇ.23ರಷ್ಟು ಏರಿಕೆಯಾಗಿದೆ. ವಹಿವಾಟಿನ ಮೌಲ್ಯ ಶೇ.18ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಿಂದ ಪ್ರತಿ ತಿಂಗಳು UPI ವಹಿವಾಟಿನ ಸಂಖ್ಯೆ 20 ಬಿಲಿಯನ್‌ಗಿಂತ ಹೆಚ್ಚಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ವ್ಯಾಪಾರಿಗಳು UPI ಸ್ವೀಕರಿಸುತ್ತಿರುವುದು, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚುತ್ತಿರುವುದು ಮತ್ತು ಗ್ರಾಹಕರಲ್ಲಿ UPI ಬಳಕೆ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದೇ ವೇಳೆ, ಇತ್ತೀಚೆಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದಾಗಿ ವ್ಯಾಪಾರಿಗಳು ಮತ್ತು ಪಾವತಿ ಸೇವಾ ಸಂಸ್ಥೆಗಳಿಗೆ UPI ಪಾವತಿಗಳ ಆರ್ಥಿಕ ಲೆಕ್ಕಾಚಾರದಲ್ಲಿ ಸ್ವಲ್ಪ ಬದಲಾವಣೆ ಉಂಟಾಗಿದೆ.

ಕ್ಯಾಶ್‌ಫ್ರೀ ಸಹ-ಸಂಸ್ಥಾಪಕ ರೀಜು ದತ್ತಾ ಹೇಳಿದ್ದೇನು?

ಕ್ಯಾಶ್‌ಫ್ರೀ ಸಹ-ಸಂಸ್ಥಾಪಕ ರೀಜು ದತ್ತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಸೆಪ್ಟೆಂಬರ್‌ನಲ್ಲಿ UPI ವಹಿವಾಟಿನ ಒಟ್ಟು ಪ್ರಮಾಣ ಆಗಸ್ಟ್‌ಗಿಂತ ಸ್ವಲ್ಪ ಕಡಿಮೆಯಾಗಿರುವುದಕ್ಕೆ ಸೆಪ್ಟೆಂಬರ್ ತಿಂಗಳಲ್ಲಿ ಒಂದು ದಿನ ಕಡಿಮೆ ಇರುವುದು ಮಾತ್ರ ಕಾರಣ. ಪ್ರತಿದಿನ ಸರಾಸರಿ 802 ಮಿಲಿಯನ್ UPI ಪಾವತಿಗಳು ನಡೆದಿದ್ದು ಅವುಗಳ ಮೌಲ್ಯ ₹97,913 ಕೋಟಿಯಾಗಿದೆ. ಎರಡೂ ಕೂಡ ಇದುವರೆಗಿನ ಗರಿಷ್ಠ ಮಟ್ಟವಾಗಿದೆ. ಇದೇ ಮೊದಲ ಬಾರಿಗೆ ದೈನಂದಿನ UPI ಪಾವತಿಗಳ ಸಂಖ್ಯೆ 800 ಮಿಲಿಯನ್ ದಾಟಿದೆ ಎಂದು ಹೇಳಿದ್ದಾರೆ.

UPI ಮೇಲಿನ ಎಂಡಿಆರ್(MDR) ಯಾವಾಗ ಜಾರಿಯಾಗುತ್ತೆ?

ಇತ್ತೀಚೆಗೆ ಘೋಷಿಸಲಾದ UPI ಮೇಲಿನ MDR ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ಆದರೆ ಇದರಿಂದ UPI ವಹಿವಾಟಿನ ಪ್ರಮಾಣ ಅಥವಾ ಮೌಲ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಾಣುತ್ತಿಲ್ಲ ಎಂದು ದತ್ತಾ ಹೇಳಿದ್ದಾರೆ. 'ಕಾರ್ಡ್ ಪಾವತಿಗಳಿಗೆ ಹೋಲಿಸಿದರೆ UPI MDR ಇನ್ನೂ ಕಡಿಮೆಯಾಗಿದೆ. ಅದಲ್ಲದೆ ಯುಪಿಐ ಪಾವತಿಯೇ ಅನುಕೂಲವಾಗಿರುವುದರಿಂದ UPI ಈಗಾಗಲೇ ಅನೇಕ ಜನರಿಗೆ ಮೊಬೈಲ್ ಮೂಲಕ ಪೇ ಮಾಡುವುದು ಅಭ್ಯಾಸವಾಗಿದೆ. ಇದು ಮುಂಬರುವ ಹಬ್ಬದ ಸೀಸನ್‌ಗಳಲ್ಲೂ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.

NPSTನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ದೀಪಕ್ ಚಂದ್ ಠಾಕೂರ್ ಹೇಳುವ ಪ್ರಕಾರ, 'ಸೆಪ್ಟೆಂಬರ್‌ನ UPI ಅಂಕಿ-ಅಂಶಗಳು ಮತ್ತೊಂದು ಮಾಸಿಕ ದಾಖಲೆಗಿಂತಲೂ, ಹಬ್ಬದ ಋತುವನ್ನು ಎದುರಿಸಲು ಭಾರತದಲ್ಲಿ ರೂಪುಗೊಂಡಿರುವ ಪಾವತಿ ವ್ಯವಸ್ಥೆಯ ಪ್ರಮಾಣವನ್ನು ತೋರಿಸುತ್ತವೆ. ಈಗಾಗಲೇ UPI ಮೂಲಕ ಪ್ರತಿದಿನ 800 ಮಿಲಿಯನ್‌ಗೂ ಹೆಚ್ಚು ವಹಿವಾಟುಗಳು ನಡೆಯುತ್ತಿವೆ. ಮುಂದಿನ ತಿಂಗಳುಗಳಲ್ಲಿ ಹಬ್ಬದ ಖರೀದಿ, ಪ್ರವಾಸ, ಊಟ, ಉಡುಗೊರೆ ಹಾಗೂ ಮನರಂಜನೆಗೆ ಖರ್ಚು ಹೆಚ್ಚಾಗುವುದರಿಂದ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಕಡೆ ಡಿಜಿಟಲ್ ಪೇ ಹಾಗೂ ಗ್ರಾಹಕರ ಖರೀದಿ ಚಟುವಟಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ' ಎಂದು ಹೇಳಿದ್ದಾರೆ.