ನವದೆಹಲಿ(ಜ.26): 2020ರ ಬಜೆಟ್’ಗೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ಇದೇ ಫೆ.01ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.

ಈ ಬಾರಿಯ ಬಜೆಟ್ ಮೂಲಕ ಚೀನಾಗೆ ಹೊಡೆತ ನೀಡಲು ಮೋದಿ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಚೀನಾದ ಅಗ್ಗದ ವಸ್ತುಗಳಿಂದಾಗಿ ದೇಶೀಯ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರಿದ್ದು, ಇದನ್ನು ತಪ್ಪಿಸುವುದು ಮೋದಿ ಸರ್ಕಾರದ ಉದ್ದೇಶ ಎನ್ನಲಾಗಿದೆ. 

ಚೀನಾದ ಅಗ್ಗದ ವಸ್ತುಗಳ ಭಾರಿ ಲಗ್ಗೆಯಿಂದ ಕಂಗಾಲಾಗಿರುವ ಭಾರತೀಯ ಉದ್ದಿಮೆ ಮತ್ತು ಕರಕುಶಲ ವಲಯಕ್ಕೆ ಪುನಶ್ಚೇತನ ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ ಚೀನಾದ 50ಕ್ಕೂ ಹೆಚ್ಚು ವಸ್ತುಗಳ ಆಮದು ಮೇಲೆ ಸುಂಕವನ್ನು ಏರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಬಾರಿಯ ಬಜೆಟ್’ನಲ್ಲಿ ಈ ಅಂಶಗಳನ್ನು ನಮೂದಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

ಸೈಲೆಂಟಾಗಿ ಚೀನಾಗೆ ಗುದ್ದಿದ ಮೋದಿ: ಮಕ್ಕಳಿಗಾಗಿ ಒಂದೊಳ್ಳೆ ನಿರ್ಧಾರ!

ಒಟ್ಟು 56 ಶತಕೋಟಿ ಡಾಲರ್‌(3.92 ಲಕ್ಷ ಕೋಟಿ ರೂ.) ಮೌಲ್ಯದ ಆಮದಿನ ಮೇಲೆ  ಸುಂಕ ಹೆಚ್ಚಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಇದು ಸಹಜವಾಗಿ ಚೀನಾದ ಆತಂಕ ಹೆಚ್ಚಿಸಿದೆ.

ಪ್ರಮುಖವಾಗಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು, ರಾಸಾಯನಿಕ ಮತ್ತು ಕರಕುಶಲ ಉತ್ಪನ್ನಗಳ ವಸ್ತುಗಳ ಆಮದು ಸುಂಕ ಹೆಚ್ಚಿಸುವುದು ಕೇಂದ್ರದ ಉದ್ದೇಶ ಎನ್ನಲಾಗಿದೆ.

ಚೀನಾದ ಅಗ್ಗದ ವಸ್ತುಗಳ ಮೇಲೆ ಆಮದು ಸುಂಕ ಏರಿಕೆಯಿಂದ ಮೇಕ್‌ ಇನ್‌ ಇಂಡಿಯಾಗೆ ಬಲ ಸಿಗಲಿದ್ದು, ಇದು ಉತ್ತಮ ಬೆಳವಣಿಗೆ ಎಂದು ಅಸೊಚೆಮ್‌ ದಕ್ಷಿಣ ಕೌನ್ಸಿಲ್‌ ಉಪಾಧ್ಯಕ್ಷ ಜೆ. ಕ್ರಾಸ್ಟಾ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2020: ಆದಾಯ ತೆರಿಗೆ ಸ್ತರದಲ್ಲಿ ಬದಲಾವಣೆ?

ದೇಶೀಯ ಉದ್ಯಮವನ್ನು ಬಲಪಡಿಸುವುದು ಕೇಂದ್ರ  ಸರ್ಕಾರದ ಮುಂದಿರುವ ಸದ್ಯದ ಸವಾಲು. ಇದಕ್ಕೆ ಬಹುದೊಡ್ಡ ತಡೆಯಾಗಿರುವ ಚೀನಾದ ವಸ್ತುಗಳ ಮೇಲೆ ಅಧಿಕ ಆಮದು ಸುಂಕ ವಿಧಿಸುವ ಮೂಲಕ ಮಾರುಕಟ್ಟೆ ಪುನಶ್ಚೇತನಕ್ಕೆ ಮೋದಿ ಸರ್ಕಾರ ಮುಂದಾಗಿದೆ.

ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ