ವಾರ್ಷಿಕ 45 ಲಕ್ಷ ರೂಪಾಯಿ ಸಂಬಳದ ಕೆಲಸವನ್ನು ತೊರೆದು ಎರಡು ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಿದ ಪ್ರತಿಷ್ಠಿತ ಕಾಲೇಜಿನ ಪದವೀಧರನೊಬ್ಬ, ಎರಡೂ ವಿಫಲವಾದ ಕಾರಣ ತನ್ನೆಲ್ಲಾ ಸೇವಿಂಗ್ಸ್ ಹಣ ಕಳೆದುಕೊಂಡಿದ್ದಾನೆ. ಮತ್ತೆ ಉದ್ಯೋಗಕ್ಕೆ ಮರಳಲು ಹೆಣಗಾಡುತ್ತಿರುವ ಈತನ ಕಥೆ ವೈರಲ್ ಆಗಿದೆ.

ದೇಶಾದ್ಯಂತ ಸ್ಟಾರ್ಟ್‌ಅಪ್‌ಗಳ (Indian Startup) ಹವಾ ಜೋರಾಗಿದೆ. ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಸ್ವಂತ ಉದ್ಯಮ (Own Business) ಸ್ಥಾಪಿಸಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಕನಸು ಕಾಣುವ ಯುವಕರ ಸಂಖ್ಯೆ ಹೆಚ್ಚಿದೆ. ಆದರೆ, ಈ ಹಾದಿ ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಉದಾಹರಣೆ ಎಂಬಂತೆ, ಪ್ರತಿಷ್ಠಿತ ಕಾಲೇಜಿನ ಪದವೀಧರನೊಬ್ಬ 45 ಲಕ್ಷ ರೂಪಾಯಿ ಸಂಬಳದ (salary) ಕೆಲಸ ಬಿಟ್ಟು, ಇಂದು ಬೀದಿಗೆ ಬಿದ್ದಿರುವ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನಸಿನ ಹಿಂದೆ ಹೋಗಿ ಕಳೆದುಕೊಂಡಿದ್ದೇನು?

ಟಿಯರ್-1 ಕಾಲೇಜಿನಿಂದ ಪದವಿ ಪಡೆದಿದ್ದ ಈ ಯುವಕನಿಗೆ ವಾರ್ಷಿಕ 45 ಲಕ್ಷ ರೂಪಾಯಿ ಪ್ಯಾಕೇಜ್‌ನ ಅತ್ಯುತ್ತಮ ಕೆಲಸವಿತ್ತು. ಆದರೆ, ಸ್ವಂತವಾಗಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಆತ ಕಳೆದ ವರ್ಷ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ. ಆ ಬಳಿಕ ಒಂದಲ್ಲ, ಎರಡಲ್ಲ ಸತತವಾಗಿ ಎರಡು ಸ್ಟಾರ್ಟ್‌ಅಪ್‌ಗಳನ್ನು ಶುರುಮಾಡಿದ. ಆದರೆ ದುರದೃಷ್ಟವಶಾತ್, ಎರಡೂ ಕಂಪನಿಗಳು ನೆಲಕಚ್ಚಿದವು. ಇದರಿಂದಾಗಿ ತನ್ನೆಲ್ಲಾ ಉಳಿತಾಯವನ್ನು ಕಳೆದುಕೊಂಡ ಯುವಕ, ಇಂದು ಜೀವನದಲ್ಲಿ ಮತ್ತೆ ಸೊನ್ನೆಯಿಂದ ಆರಂಭಿಸುವ ಪರಿಸ್ಥಿತಿಗೆ ತಲುಪಿದ್ದಾನೆ.

ರೆಡ್ಡಿಟ್‌ನಲ್ಲಿ ಅಳಲು ತೋಡಿಕೊಂಡ ಯುವಕ:

ಈ ಕುರಿತು ರೆಡ್ಡಿಟ್‌ನಲ್ಲಿ ಸುದೀರ್ಘ ಪೋಸ್ಟ್ ಬರೆದಿರುವ ಆತ, 'ಕಳೆದ ವರ್ಷ ನನ್ನ ಕನಸಿಗಾಗಿ ಕೆಲಸ ಬಿಟ್ಟೆ. ಇಂದು ನನ್ನ ಬಳಿ ಉಳಿತಾಯವಿಲ್ಲ, ಸಾಧನೆ ಎಂದು ತೋರಿಸಿಕೊಳ್ಳಲು ಸೋಷಿಯಲ್ ಮೀಡಿಯಾ ಅಕೌಂಟ್ ಕೂಡ ಇಲ್ಲ. ಹಣ ಕಳೆದುಕೊಂಡಿದ್ದಕ್ಕಿಂತ ಹೆಚ್ಚಾಗಿ ನನ್ನ ಮೇಲೆ ನನಗಿದ್ದ ನಂಬಿಕೆಯೇ ಹೊರಟುಹೋಗಿದೆ. ನಾನು ನಿಜವಾಗಿಯೂ ಕಷ್ಟಪಟ್ಟಿದ್ದೇನೆಯೇ ಅಥವಾ ಈ ಸೋಲಿಗೆ ನನ್ನ ಸೋಮಾರಿತನ ಕಾರಣವೇ ಎಂಬ ಅನುಮಾನ ಕಾಡುತ್ತಿದೆ' ಎಂದು ಭಾವುಕವಾಗಿ ಬರೆದುಕೊಂಡಿದ್ದಾನೆ.

ಮತ್ತೆ ಕೆಲಸಕ್ಕೆ ಸೇರಲು ಭಯ:

ಜೀವನ ನಿರ್ವಹಣೆಗಾಗಿ ಮತ್ತೆ ಕಾರ್ಪೊರೇಟ್ ಕೆಲಸಕ್ಕೆ ಮರಳಲು ನಿರ್ಧರಿಸಿರುವ ಆತನಿಗೆ ಆತ್ಮವಿಶ್ವಾಸದ ಕೊರತೆ ಕಾಡುತ್ತಿದೆ. ಇಂಟರ್‌ವ್ಯೂಗೆ ಸಿದ್ಧವಾಗುವಾಗ 'ನನ್ನಂತವನನ್ನು ಒಂದು ಕಂಪನಿ ಯಾಕೆ ಕೆಲಸಕ್ಕೆ ತೆಗೆದುಕೊಳ್ಳಬೇಕು?' ಎಂಬ ಯೋಚನೆ ನನ್ನನ್ನು ಕುಗ್ಗಿಸುತ್ತಿದೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ. ಈತನ ನೋವಿನ ಪೋಸ್ಟ್ ಈಗ ವೈರಲ್ ಆಗಿದ್ದು, ಸಾವಿರಾರು ಜನರು ಆತನಿಗೆ ಧೈರ್ಯ ತುಂಬುತ್ತಿದ್ದಾರೆ.

ನೆಟ್ಟಿಗರ ಬೆಂಬಲ:

'ಸೋಲು ಎಂಬುದು ಜೀವನದ ಅಂತ್ಯವಲ್ಲ, ಇದು ಮುಂದಿನ ದೊಡ್ಡ ಯಶಸ್ಸಿಗೆ ಮೆಟ್ಟಿಲು' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 'ಹತ್ತರಲ್ಲಿ ಒಂಬತ್ತು ಸ್ಟಾರ್ಟ್‌ಅಪ್‌ಗಳು ವಿಫಲವಾಗುತ್ತವೆ, ಇದು ನಿಮ್ಮೊಬ್ಬರ ತಪ್ಪಲ್ಲ. ನೀವು ಧೈರ್ಯ ಮಾಡಿ ಉದ್ಯಮಕ್ಕೆ ಇಳಿದಿದ್ದೇ ದೊಡ್ಡ ಸಾಧನೆ' ಎಂದು ಅನೇಕರು ಆತನಿಗೆ ಬೆಂಬಲ ಸೂಚಿಸಿದ್ದಾರೆ. ಈ ಯುವಕನ ಕಥೆ ಈಗ ಉದ್ಯಮಶೀಲತೆಯ ಹಾದಿಯಲ್ಲಿರುವ ಸಾವಿರಾರು ಜನರಿಗೆ ಪಾಠದಂತಾಗಿದೆ.