ವರ್ಷ ಪೂರೈಸಿದ ಹತ್ಯಾಕಾಂಡ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಯುದ್ಧದ ಪರಿಣಾಮವೇನು?
ಉಕ್ರೇನಿನ ಅಧಿಕೃತ ಹೇಳಿಕೆಯ ಪ್ರಕಾರ 13,000 ಸೈನಿಕರು ಸಾವಿಗೀಡಾಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ಸಾವಿಗೀಡಾಗಿದ್ದಾರೆ ಅಥವಾ ಗಾಯಾಳುಗಳಾಗಿದ್ದಾರೆ ಎಂದು ಜನರಲ್ ಮಿಲ್ಲೆವ್ ಜನವರಿಯಲ್ಲಿ ಹೇಳಿದ್ದರು. ಕನಿಷ್ಠ 8,006 ನಾಗರಿಕರು ಯುದ್ಧದಲ್ಲಿ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 13,287 ನಾಗರಿಕರು ಗಾಯಾಳುಗಳಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಉಕ್ರೇನಿನ ಮೇಲೆ ರಷ್ಯಾ ನಡೆಸಿದ ಯುದ್ಧವನ್ನು ಸಂಖ್ಯೆಯಲ್ಲಿ ಹೇಳುವುದಾದರೆ, ಸಾಮೂಹಿಕ ಹತ್ಯೆ, ಬಿಲಿಯನ್‌ಗಟ್ಟಲೆ ಸಹಾಯ, ಸಾವಿರಾರು ನಾಶಗೊಂಡ ಟ್ಯಾಂಕ್‌ಗಳು, ಹಾಗೂ ರಷ್ಯಾದ ಅಪ್ರಚೋದಿತ ದಾಳಿಯ ಇನ್ನಷ್ಟು ಅಂಕಿ ಸಂಖ್ಯೆಗಳೇ ನಮ್ಮ ಕಣ್ಣಿಗೆ ಬೀಳುತ್ತವೆ. ಫೆಬ್ರವರಿ 24, 2023ರಂದು ರಷ್ಯಾ ಉಕ್ರೇನ್ ಮೇಲೆ ನಡೆಸಿದ ದಾಳಿಗೆ ಒಂದು ವರ್ಷ ಪೂರ್ಣಗೊಂಡಿತು. ಲಕ್ಷಾಂತರ ರಷ್ಯನ್ನರು ಮತ್ತು ಉಕ್ರೇನಿಯನ್ನರು ಈ ಯುದ್ಧದಲ್ಲಿ ಸಾವನ್ನಪ್ಪಿದರು, ಅಥವಾ ಗಾಯಾಳುಗಳಾದರು. ಬಿಲಿಯನ್ ಡಾಲರ್‌ಗಳಷ್ಟು ಹಣ ಸಹಾಯವನ್ನು ಉಕ್ರೇನ್‌ಗೆ ಕಳುಹಿಸಲಾಯಿತು. ರಷ್ಯಾ ತನ್ನ ಪಡೆಯಲ್ಲಿದ್ದ ಅರ್ಧದಷ್ಟು ಟ್ಯಾಂಕ್‌ಗಳನ್ನು ಕಳೆದುಕೊಂಡಿತು.
ಎರಡನೇ ಮಹಾಯುದ್ಧದ ಬಳಿಕ, ಯುರೋಪ್ ಕಂಡ ಅತ್ಯಂತ ಘೋರವಾದ ಕದನ ಆರಂಭಗೊಂಡು, ಶುಕ್ರವಾರಕ್ಕೆ ಒಂದು ವರ್ಷ ಪೂರ್ಣಗೊಂಡಿತು.
ಇದನ್ನು ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್
ಫೆಬ್ರವರಿ 24, 2022ರಂದು ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗ ಪುಟಿನ್ ಸೈನಿಕರು ಅತ್ಯಂತ ಕ್ಷಿಪ್ರವಾಗಿ ಸಂಪೂರ್ಣ ದೇಶವನ್ನು ಆವರಿಸಿ, ರಾಜಧಾನಿ ಕೀವ್ ಅನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಜೆಲೆನ್‌ಸ್ಕಿ ಮತ್ತು ಅವರ ಸೈನ್ಯ ರಷ್ಯಾದ ಆಕ್ರಮಣವನ್ನು ಅತ್ಯಂತ ಬಲವಾಗಿ ವಿರೋಧಿಸಿತು. ಇದಕ್ಕೆ ಪಾಶ್ಚಾತ್ಯ ಜಗತ್ತಿನ ಸಹಾಯ ಮತ್ತು ರಷ್ಯನ್ನರ ಪ್ರಮಾದಗಳೂ ನೆರವಾಗಿದ್ದವು. ಆ ಮೂಲಕ ಉಕ್ರೇನ್ ಪಡೆಗಳು ರಷ್ಯಾದ ಮುನ್ನಡೆಯನ್ನು ತಡೆಯಲು ಸಾಧ್ಯವಾಯಿತು.
ಆದರೂ, ಜೀವಗಳ ಲೆಕ್ಕದಲ್ಲಿ, ಡಾಲರ್ ಲೆಕ್ಕದಲ್ಲಿ, ಹಾಗೂ ಮಿಲಿಟರಿ ಉಪಕರಣಗಳ ಲೆಕ್ಕದಲ್ಲಿ ಈ ಯುದ್ಧದ ವೆಚ್ಚ ಅತ್ಯಂತ ಹೆಚ್ಚಾಗಿತ್ತು. ಈ ಲೇಖನದಲ್ಲಿ ಯುದ್ಧದ ಪರಿಣಾಮವನ್ನು ವಿವರಿಸುವ ಒಂದಷ್ಟು ಅಂಕಿ ಸಂಖ್ಯೆಗಳನ್ನು ಗಮನಿಸೋಣ.
ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!
ಸಾವು ನೋವು
ಯುಕೆ ರಕ್ಷಣಾ ಸಚಿವಾಲಯದ ಅಂದಾಜಿನ ಪ್ರಕಾರ, 40,000ದಿಂದ 60,000 ರಷ್ಯನ್ ಸೈನಿಕರು ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ರಷ್ಯಾದ ಸಾವು, ನೋವು, ಯುದ್ಧದಲ್ಲಿ ಗಾಯಾಳುಗಳಾದವರ ಸಂಖ್ಯೆ ಅಂದಾಜು 2 ಲಕ್ಷ ತಲುಪಬಹುದು ಎಂದು ಸಚಿವಾಲಯ ಹೇಳಿದೆ.
ಡಿಸೆಂಬರ್ ತಿಂಗಳಲ್ಲಿ ಉಕ್ರೇನಿನ ಅಧಿಕೃತ ಹೇಳಿಕೆಯ ಪ್ರಕಾರ 13,000 ಸೈನಿಕರು ಸಾವಿಗೀಡಾಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ಸಾವಿಗೀಡಾಗಿದ್ದಾರೆ ಅಥವಾ ಗಾಯಾಳುಗಳಾಗಿದ್ದಾರೆ ಎಂದು ಜನರಲ್ ಮಿಲ್ಲೆವ್ ಜನವರಿಯಲ್ಲಿ ಹೇಳಿದ್ದರು. ಕನಿಷ್ಠ 8,006 ನಾಗರಿಕರು ಯುದ್ಧದಲ್ಲಿ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 13,287 ನಾಗರಿಕರು ಗಾಯಾಳುಗಳಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಚಿಲ್ಡ್ರನ್ ಆಫ್ ವಾರ್ ಪ್ರಕಾರ, 461 ಉಕ್ರೇನಿನ ಮಕ್ಕಳು ಅಸುನೀಗಿದ್ದು, 927 ಮಕ್ಕಳು ಗಾಯಾಳುಗಳಾಗಿದ್ದಾರೆ, ಹಾಗೂ 345 ಮಕ್ಕಳು ಕಾಣೆಯಾಗಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!
ದ ಅಟ್ಲಾಂಟಿಕ್ ಪ್ರಕಾರ, ಕನಿಷ್ಠ 24 ಪ್ರಮುಖ ರಷ್ಯನ್ನರು ಯುದ್ಧ ಆರಂಭವಾದಂದಿನಿಂದ ಸಾವಿಗೀಡಾಗಿದ್ದಾರೆ.
ಕೀವ್ ಪ್ರಾಂತ್ಯದಲ್ಲಿ 1,700ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದಾರೆ. ಅದರಲ್ಲಿ 700 ಜನರು ಬುಚ್ಚಾದಲ್ಲಿ ಸಾವಿಗೀಡಾಗಿದ್ದಾರೆ ಎಂದು ಉಕ್ರೇನಿನ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಫೆಬ್ರವರಿ 22ರಂದು ತಿಳಿಸಿದೆ.
ಇದನ್ನೂ ಓದಿ: ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂದು ನಮನ
ನಿರಾಶ್ರಿತರು, ಓಡಿಹೋದವರು ಅಥವಾ ಸೆರೆಯಾದವರು
ಯುಎನ್ಎಚ್‌ಸಿಆರ್ ಪ್ರಕಾರ, 8 ಮಿಲಿಯನ್ ಉಕ್ರೇನಿಯನ್ನರು ನಿರಾಶ್ರಿತರಾಗಿದ್ದು, 5.9 ಮಿಲಿಯನ್ ಉಕ್ರೇನಿಯನ್ನರು ದೇಶದೊಳಗೇ ಚದುರಿ ಹೋಗಿದ್ದಾರೆ.
ಕನಿಷ್ಠ 6,000 ಉಕ್ರೇನಿ ಮಕ್ಕಳು ರಷ್ಯಾ ವಶದಲ್ಲಿದ್ದಾರೆ ಎಂದು ಕಾನ್‌ಫ್ಲಿಕ್ಟ್ ಅಬ್ಸರ್ವೇಟರಿ ವರದಿ ಮಾಡಿದೆ. (ಕೀವ್ ಈ ಸಂಖ್ಯೆ 14,000 ಎಂದಿದೆ)
ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಕನಿಷ್ಠ 5,00,000 ರಷ್ಯನ್ನರು ದೇಶ ಬಿಟ್ಟು ತೆರಳಿದ್ದಾರೆ.
ಉಕ್ರೇನಿಗೆ ಸಹಾಯ
ಉಕ್ರೇನಿಗೆ ಅಮೆರಿಕಾ 29.8 ಬಿಲಿಯನ್ ಡಾಲರ್ ಸಹಾಯ ಮಾಡಿದೆ ಎಂದು ಡಿಒಡಿ ವರದಿ ಮಾಡಿದೆ. ಅಮೆರಿಕಾದಿಂದ ಮಾನವೀಯ ಸಹಾಯ, ಹಣಕಾಸು ಮತ್ತು ಮಿಲಿಟರಿ ಸಹಾಯದ ಒಟ್ಟು ಮೊತ್ತ 76.8 ಬಿಲಿಯನ್ ಡಾಲರ್ ಆಗಿದೆ ಎಂದು ಕೀಲ್ ಇನ್ಸ್ಟಿಟ್ಯೂಟ್ ಫಾರ್ ದ ವರ್ಲ್ಡ್ ಎಕಾನಮಿ ವರದಿ ಮಾಡಿದೆ.
ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..
ಕೀಲ್ ಇನ್ಸ್ಟಿಟ್ಯೂಟ್ ಪ್ರಕಾರ, ಐರೋಪ್ಯ ಒಕ್ಕೂಟದಿಂದ ಉಕ್ರೇನಿಗೆ 58.2 ಬಿಲಿಯನ್ ಡಾಲರ್ ಧನಸಹಾಯ ಲಭಿಸಿದೆ.
ಮಿಲಿಟರಿ
ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟಜಿಕ್ ಸ್ಟಡೀಸ್ ಪ್ರಕಾರ, ರಷ್ಯಾ ಅಂದಾಜು 2,000 - 2,300 ಅಥವಾ ತನ್ನ ಅರ್ಧದಷ್ಟು ಟ್ಯಾಂಕ್‌ಗಳನ್ನು ಕಳೆದುಕೊಂಡಿದೆ.
ಒರಿಕ್ಸ್ ಪ್ರಕಾರ, ರಷ್ಯಾ ತನ್ನ 342 ಏರ್‌ಕ್ರಾಫ್ಟ್‌ಗಳನ್ನು ಕಳೆದುಕೊಂಡಿದ್ದು, 9,394 ಒಟ್ಟು ಮಿಲಿಟರಿ ಉಪಕರಣಗಳನ್ನು ಕಳೆದುಕೊಂಡಿದೆ.
ಡಿಒಡಿ ಪ್ರಕಾರ, ಅಮೆರಿಕ ಒಂದು ಮಿಲಿಯನ್ ಸುತ್ತಿಗೂ ಹೆಚ್ಚಿನ ಆರ್ಟಿಲರಿಯನ್ನು ಉಕ್ರೇನಿಗೆ ಕಳುಹಿಸಿದೆ.
ಉಕ್ರೇನಿಗೆ ಅಮೆರಿಕಾ ಕಳುಹಿಸಿದ ಆಯುಧಗಳು ಸಾಕಷ್ಟು ಬದಲಾವಣೆ ತಂದಿವೆ. ಆ ಆಯುಧಗಳೆಂದರೆ,
- 38 ಹಿಮಾರ್ಸ್ ಅಥವಾ ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್.
- 8,500 ಜ್ಯಾವೆಲಿನ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳು.
- 1,600 ಸ್ಟಿಂಗರ್ ಆ್ಯಂಟಿ ಏರ್‌ಕ್ರಾಫ್ಟ್ ಕ್ಷಿಪಣಿಗಳು.
ಇತರ ಅಂಕಿ ಸಂಖ್ಯೆಗಳು
ಉಕ್ರೇನಿನ ಪ್ರಾಸಿಕ್ಯೂಟರ್ ಜನರಲ್ ಹಾಗೂ ಐರೋಪ್ಯ ಒಕ್ಕೂಟದ ಜಸ್ಟೀಸ್ ಕಮಿಷನರ್ ಪ್ರಕಾರ, ಒಟ್ಟು 65,000 ಯುದ್ಧಾಪರಾಧಗಳು ಜರುಗಿವೆ. ಉಕ್ರೇನಿನ ಮೂಲಭೂತ ಸೌಕರ್ಯಗಳು ಮತ್ತು ಆರ್ಥಿಕತೆಗೆ 700 ಬಿಲಿಯನ್ ಡಾಲರ್‌ಗೂ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶಿಮಾಲ್ ಹೇಳಿದ್ದಾರೆ.
ಅಟ್ಲಾಂಟಿಕ್ ಕೌನ್ಸಿಲ್ ಮಾಹಿತಿಯ ಪ್ರಕಾರ, ರಷ್ಯಾ ವಿರುದ್ಧ ಒಟ್ಟು 11,800 ನಿರ್ಬಂಧಗಳನ್ನು ಹೇರಲಾಗಿದೆ. ಅವುಗಳಲ್ಲಿ 9,025 ವೈಯಕ್ತಿಕ, 2,636 ಸಾಂಸ್ಥಿಕ, 119 ನೌಕೆಗಳು ಮತ್ತು 22 ವಿಮಾನಗಳ ನಿರ್ಬಂಧಗಳಾಗಿವೆ.
ಅಮೆರಿಕ ರಷ್ಯಾದ ಮೇಲೆ 2,700 ನಿರ್ಬಂಧಗಳನ್ನು ಹೇರಿದ್ದು, ಇಲ್ಲಿಯವರೆಗಿನ ಅತ್ಯಧಿಕ ನಿರ್ಬಂಧಗಳಾಗಿವೆ.