ಅದಾನಿ ಕಂಪನೀಲಿ ವಿದೇಶಿ ಹೂಡಿಕೆ ಬಗ್ಗೆ ಸೆಬಿ ತನಿಖೆ; ಹೂಡಿಕೆದಾರರ ಹಿತ ಕಾಯಲು ತಜ್ಞರ ಸಮಿತಿ ರಚಿಸಿ ಎಂದ ಸುಪ್ರೀಂ

ಷೇರುಗಳ ಬೆಲೆ ಭಾರಿ ಕುಸಿತ ಬೆನ್ನಲ್ಲೇ ಅದಾನಿಗೆ ಇನ್ನೊಂದು ಆಘಾತ ಎದುರಾಗಿದೆ. ಎಫ್‌ಪಿಒ ಖರೀದಿಗೆ ಬಂದಿದ್ದ ಮಾರಿಷಸ್‌ನ 2 ಕಂಪನಿಗಳ ವಿರುದ್ಧ ಆರೋಪ ಕೇಳಿಬಂದಿದೆ. 

sebi probes adanis links to investors linked in flagship firms fpo ash

ನವದೆಹಲಿ (ಫೆಬ್ರವರಿ 11, 2023): ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಎಂಟರ್‌ಪ್ರೈಸಸ್‌ನ 20 ಸಾವಿರ ಕೋಟಿ ರು. ಮೌಲ್ಯದ ಷೇರು (ಎಫ್‌ಪಿಒ) ಮಾರಾಟವನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಂಡ ಈ ವಹಿವಾಟಿನಲ್ಲಿ ಹೂಡಿಕೆ ಮಾಡಲು ಬಂದಿದ್ದ ಇಬ್ಬರು ಮಾರಿಷಸ್‌ ಹೂಡಿಕೆದಾರರಿಗೂ ಅದಾನಿಗೂ ಯಾವ ನಂಟಿದೆ ಎಂಬ ಬಗ್ಗೆ ತನಿಖೆಗೆ ಮಾರುಕಟ್ಟೆನಿಯಂತ್ರಕ ‘ಸೆಬಿ’ ತನಿಖೆ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.

ಅದಾನಿ ಸಮೂಹ ವ್ಯಾಪಾರದಲ್ಲಿ ಅಕ್ರಮ ಎಸಗಿದೆ ಎಂದು ಹಿಂಡನ್‌ಬರ್ಗ್‌ ಎಂಬ ಮಾಜಿ ಪಾಲುದಾರ ಕಂಪನಿ ಆರೋಪಿಸಿದ ಬೆನ್ನಲ್ಲೇ ಈ ತನಿಖೆ ಆರಂಭಗೊಂಡಿರುವುದು ಭಾರಿ ಕುತೂಹಲ ಹುಟ್ಟುಹಾಕಿದೆ.

ಇದನ್ನು ಓದಿ: ಎಲ್‌ಐಸಿ, ಎಸ್‌ಬಿಐ ಮುಂದೆ ಕಾಂಗ್ರೆಸ್‌ ದೇಶವ್ಯಾಪಿ ಪ್ರತಿಭಟನೆ; ಸತತ 3ನೇ ದಿನವೂ ಸಂಸತ್‌ ಕಲಾಪ ಭಂಗ

ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದ್ದ 2 ಮಾರಿಷಸ್‌ ಕಂಪನಿಗಳಾದ ಗ್ರೇಟ್‌ ಇಂಟರ್‌ನ್ಯಾಷನಲ್‌ ಟಸ್ಕರ್‌ ಫಂಡ್‌ ಮತ್ತು ಆಯುಷ್‌ಮತ್‌ ಲಿಮಿಟೆಡ್‌ನ ಹೂಡಿಕೆಗಳ ಕುರಿತಾಗಿ ಸೆಬಿ ತನಿಖೆ ನಡೆಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ತನಿಖೆಗೆ ಕಾರಣ ಏನು?:
ಷೇರು ಮಾರಾಟ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆಯೇ ಅಥವಾ ಭಾರತೀಯ ಭದ್ರತಾ ಕಾನೂನುಗಳನ್ನು ಮುರಿಯಲಾಗಿದೆಯೇ ಎಂಬುದರ ಕುರಿತಾಗಿ ಸೆಬಿ ತನಿಖೆ ನಡೆಸುತ್ತಿದೆ. ಮಾರಿಷಸ್‌ನ 2 ಕಂಪನಿಗಳು ಪ್ರಮುಖ ಹೂಡಿಕೆದಾರರಾಗಿದ್ದು, ಎಫ್‌ಪಿಒವನ್ನು ಹಿಂಪಡೆಯಲು ಈ ಕಂಪನಿಗಳ ಹೂಡಿಕೆ ಕಾರಣವಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಈ 2 ಕಂಪನಿಗಳಿಗೂ ಅದಾನಿ ಗ್ರೂಪ್‌ಗೂ ಏನು ನಂಟು ಎಂಬ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅದಾನಿ ಕೇಸಿಂದ ಆರ್ಥಿಕತೆಗೆ ಪೆಟ್ಟಿಲ್ಲ: ನಿರ್ಮಲಾ ಸೀತಾರಾಮನ್‌; ಮೋದಿಗೆ 3 ಪ್ರಶ್ನೆ ಕೇಳಿದ ಕಾಂಗ್ರೆಸ್‌

ಹೂಡಿಕೆದಾರರ ಹಿತ ಕಾಯಲು ತಜ್ಞರ ಸಮಿತಿ ರಚಿಸಿ: ಸುಪ್ರೀಂ
ಅದಾನಿ ಸಮೂಹ ಕಂಪನಿಗಳ ಷೇರು ಕುಸಿತ ಬೆನ್ನಲ್ಲೇ, ಷೇರುಪೇಟೆಗಳಲ್ಲಿ ಹೂಡಿಕೆದಾರರ ಹಿತ ಕಾಯಲು ಬಲಿಷ್ಠ ವ್ಯವಸ್ಥೆ ಇರಬೇಕು. ಈ ಸಂಬಂಧ ನ್ಯಾಯಾಧೀಶರು ಸೇರಿದಂತೆ ವಿಷಯ ತಜ್ಞರು ಹಾಗೂ ಮತ್ತಿತರರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ.

ಹೂಡಿಕೆದಾರರ ಹಿತ ಕಾಯಲು ಬಲಿಷ್ಠ ನಿಯಂತ್ರಣ ವ್ಯವಸ್ಥೆ ರೂಪಿಸುವುದು ಸೇರಿದಂತೆ ವಿವಿಧ ವಿಚಾರಗಳ ಸಂಬಂಧ ಹಣಕಾಸು ಸಚಿವಾಲಯ, ಮಾರುಕಟ್ಟೆನಿಯಂತ್ರಣ ಸಂಸ್ಥೆ ಸೆಬಿಗೆ ಅಭಿಪ್ರಾಯ ನೀಡುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ: ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ಅದಾನಿ ಸಮೂಹದ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಹಿಂಡನ್‌ಬರ್ಗ್‌ ವರದಿ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್‌ ನಿವೃತ್ತ ಜಡ್ಜ್‌ ಉಸ್ತುವಾರಿಯಲ್ಲಿ ಸಮಿತಿ ರಚನೆ ಮಾಡಬೇಕು, ಅದಾನಿ ಕಂಪನಿಗಳ ಷೇರಿನ ಕೃತಕ ಕುಸಿತಕ್ಕೆ ಕಾರಣವಾಗಿರುವ ಹಿಂಡನ್‌ಬರ್ಗ್‌ ಸಂಸ್ಥೆಯ ಸಂಸ್ಥಾಪಕನ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಕೋರಿದ್ದ 2 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್‌ ಈ ಸೂಚನೆಗಳನ್ನು ನೀಡಿದೆ.

‘ಇಂದು ಬಂಡವಾಳವು ಭಾರತದ ಒಳಗೆ ಮತ್ತು ಹೊರಗೆ ಮನಬಂದಂತೆ ಚಲಿಸುತ್ತಿದೆ. ಭವಿಷ್ಯದಲ್ಲಿ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲಾಗಿದೆ ಎಂದು ನಾವು ಹೇಗೆ ಖಚಿತಪಡಿಸಿಕೊಳ್ಳಬೇಕು? ಎಲ್ಲರೂ ಈಗ ಮಾರುಕಟ್ಟೆಯಲ್ಲಿದ್ದಾರೆ. 10 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎನ್ನಲಾಗಿದೆ. ಅವುಗಳನ್ನು ರಕ್ಷಿಸಲಾಗಿದೆ ಎಂದು ನಾವು ಹೇಗೆ ಖಚಿತಪಡಿಸಿಕೊಳ್ಳಬೇಕು? ಭವಿಷ್ಯದಲ್ಲಿ ಇದು ಸಂಭವಿಸದಂತೆ ನಾವು ಹೇಗೆ ನೋಡಿಕೊಳ್ಳಬೇಕು?’ ಎಂದು ಕೋರ್ಟ್‌ ಪ್ರಶ್ನಿಸಿತು.

ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?

 

ಅದಾನಿ ಸಮೂಹದ 4 ಕಂಪನಿಗಳ ರೇಟಿಂಗ್‌ ಕಡಿತಗೊಳಿಸಿದ ಮೂಡೀಸ್‌
ಸ್ಥಿರವಾಗಿದ್ದ ಅದಾನಿ ಸಮೂಹ ಸಂಸ್ಥೆಗಳ 4 ಕಂಪನಿಗಳ ರೇಟಿಂಗ್‌ ಅನ್ನು ಮೂಡೀಸ್‌ ಇನ್ವೆಸ್ಟರ್‌ ಸರ್ವೀಸ್‌ ಸಂಸ್ಥೆ ಶುಕ್ರವಾರ ಕಡಿತಗೊಳಿಸಿದೆ. ಅಮೆರಿಕ ಮೂಲಕ ಹಿಂಡನ್‌ಬರ್ಗ್‌ ವರದಿಯಿಂದಾಗಿ ಅದಾನಿ ಸಮೂಹದ ಷೇರುಮೌಲ್ಯ ಭಾರಿ ಕುಸಿತ ಕಂಡಿತ್ತು. ಇದರ ಬೆನ್ನಲ್ಲೇ ಮೂಡೀಸ್‌ ಸಹ ರೇಟಿಂಗ್‌ ಕಡಿತಗೊಳಿಸಿದೆ. ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌, ಅದಾನಿ ಗ್ರೀನ್‌ ಎನರ್ಜಿ ರಿಸ್ಟ್ರಿಕ್ಟೆಟ್‌ ಗ್ರೂಪ್‌, ಅದಾನಿ ಟ್ರಾನ್ಸ್‌ಮಿಶನ್‌ ಸ್ಟೆಪ್‌ ಒನ್‌ ಲಿಮಿಟೆಡ್‌ ಮತ್ತು ಅದಾನಿ ಎಲೆಕ್ಟ್ರಿಸಿಟಿ ಮುಂಬೈ ಲಿಮಿಟೆಡ್‌ ಕಂಪನಿಗಳ ರೇಟಿಂಗ್‌ಗಳನ್ನು ಸ್ಥಿರದಿಂದ ನೆಗೆಟಿವ್‌ಗೆ ಇಳಿಕೆ ಮಾಡಿದೆ. ಈ ಇಳಿಕೆಯು ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳ ಮೌಲ್ಯದ ಇಳಿಕೆಯನ್ನು ಆಧರಿಸಿದೆ ಎಂದು ಮೂಡೀಸ್‌ ಪ್ರಕಟಣೆ ತಿಳಿಸಿದೆ.

Latest Videos
Follow Us:
Download App:
  • android
  • ios