ಹೊಸ ವ್ಯವಹಾರವನ್ನು ಪ್ರಾರಂಭಿಸುವಾಗ, ಮಾರುಕಟ್ಟೆ ಸಂಶೋಧನೆ, ಹಣಕಾಸಿನ ಶಿಸ್ತು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಸರಿಯಾದ ಯೋಜನೆ ಮತ್ತು ಆರ್ಥಿಕ ನಿರ್ವಹಣೆಯು ಉದ್ಯಮವನ್ನು ನಷ್ಟದಿಂದ ಪಾರುಮಾಡಿ ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ಭದ್ರ ಬುನಾದಿಗೆ ಬೇಕು ಸರಿಯಾದ ಮಾರ್ಗದರ್ಶನ

ನೀವು ಸ್ವಂತ ಉದ್ಯೋಗ ಅಥವಾ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಕನಸು ಕಾಣುತ್ತಿದ್ದರೆ, ಕೇವಲ ಬಂಡವಾಳವಿದ್ದರೆ ಸಾಲದು. ವ್ಯವಹಾರದ ಆರಂಭಿಕ ಹಂತದಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಸ್ಪಷ್ಟತೆ ಇರುವುದು ಬಹಳ ಮುಖ್ಯ. ಸರಿಯಾದ ಯೋಜನೆ, ಹಣಕಾಸಿನ ಶಿಸ್ತು ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇದ್ದರೆ, ನಿಮ್ಮ ಉದ್ಯಮವು ಯಾವುದೇ ತೊಂದರೆ ಇಲ್ಲದೆ, ನಷ್ಟವಿಲ್ಲದೆ ಯಶಸ್ಸಿನಂತೆ ಸಾಗುತ್ತದೆ.

ಹೊಸ ಉದ್ಯಮಕ್ಕೆ ಕೈ ಹಾಕುವ ಮೊದಲು ಹೀಗೆ ಮಾಡಿ

ಯಾವುದೇ ಹೊಸ ಉದ್ಯಮಕ್ಕೆ ಕೈ ಹಾಕುವ ಮೊದಲು ಆ ಕ್ಷೇತ್ರದ ಬಗ್ಗೆ ಸಂಪೂರ್ಣ ಸಂಶೋಧನೆ ನಡೆಸುವುದು ಅತೀ ಅಗತ್ಯ. ನಿಮ್ಮ ಬ್ಯುಸಿನೆಸ್ ಅಂದರೆ ನೀವು ತಯಾರಿಸುವ, ಮಾರಾಟ ಮಾಡುವ ವಸ್ತುಗಳು ಮಾರಾಟ ಮಾಡಲು ಏರಿಯಾದಲ್ಲಿ ಬ್ಯುಸಿನೆಸ್ ನಡೆಯುತ್ತಾ, ಜನರು ಕೊಂಡುಕೊಳ್ತಾರಾ? ಎಂಬ ಬಗ್ಗೆ ಸಂಶೋಧನೆ ನಡೆಸಿ. ನೀವು ತಯಾರಿಸುವ ಅಥವಾ ನಿಮ್ಮ ಸೇವೆ ಪಡೆಯಲು ಜನರು ಹಣ ನೀಡಲು ಸಿದ್ಧರಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ. ನೀವು ಈಗ ಪ್ರಾರಂಭಿಸಲು ಉದ್ದೇಶಿರುವ ವ್ಯವಹಾರ ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಸ್ಪರ್ಧಿಗಳನ್ನು ಗಮನಿಸಬೇಕು. ಅವರಿಗಿಂತ ನಿಮ್ಮ ವ್ಯವಹಾರ ಹೇಗೆ ಭಿನ್ನ ಮತ್ತು ಶ್ರೇಷ್ಠ ಎಂಬುದನ್ನು ನಿರ್ಧರಿಸಿ. ಈ ಮುನ್ನೆಚ್ಚರಿಕೆಗಳು ಭವಿಷ್ಯದ ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತವೆ.

ವ್ಯವಹಾರಕ್ಕೆ ಕೈಹಾಕಿದಾಗ ಹಣಕಾಸಿನ ಶಿಸ್ತು ಬಹಳ ಮುಖ್ಯ

ಅನೇಕ ಸ್ಟಾರ್ಟ್‌ಅಪ್‌ಗಳು ಅರ್ಧಕ್ಕೆ ನಿಲ್ಲಲು ಪ್ರಮುಖ ಕಾರಣ ಅವೈಜ್ಞಾನಿಕ ಹಣಕಾಸು ನಿರ್ವಹಣೆ. ವ್ಯವಹಾರ ಆರಂಭಿಸುವಾಗಲೇ ಆದಾಯ ಮತ್ತು ವೆಚ್ಚದ ಬಗ್ಗೆ ನಿಖರವಾದ ಅಂದಾಜು ಇಟ್ಟುಕೊಳ್ಳಬೇಕು. ವ್ಯವಹಾರ ಪ್ರಾರಂಭಿಸಿದ ದಿನದಿಂದಲೇ ಲಾಭ ಸಿಗುವುದಿಲ್ಲ. ಹೀಗಾಗಿ ಕನಿಷ್ಠ ಮುಂದಿನ ಆರು ತಿಂಗಳ ಖರ್ಚನ್ನು ನಿಭಾಯಿಸುವುದಕ್ಕೆ (Running Cost) ಮೊದಲೇ ಹಣ ಮೀಸಲಿಡುವುದು ಜಾಣತನ. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ವೈಯಕ್ತಿಕ ಖರ್ಚು ಮತ್ತು ವ್ಯವಹಾರದ ಹಣಕಾಸನ್ನು ಬೇರೆ ಬೇರೆಯಾಗಿ ಇರಿಸಿಕೊಳ್ಳಿ. ಇದರಿಂದ ನಿಮ್ಮ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಇರುತ್ತದೆ.

ವ್ಯವಹಾರ ಪ್ರಾರಂಭಿಸುವ ಮುನ್ನ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿದಿರಲಿ

ಹೊಸ ಉದ್ಯಮಿಗಳನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿವೆ. 'ಸ್ಟಾರ್ಟ್‌ಅಪ್ ಇಂಡಿಯಾ' ಅಡಿಯಲ್ಲಿ ತೆರಿಗೆ ವಿನಾಯಿತಿ ಮತ್ತು ಸುಲಭ ನಿಯಮಗಳ ಲಾಭ ಪಡೆಯಬಹುದು. ಬಂಡವಾಳದ ಕೊರತೆ ಇದ್ದರೆ 'ಮುದ್ರಾ ಯೋಜನೆ'ಯಡಿ ಶೂನ್ಯ ಭದ್ರತೆಯ ಸಾಲ ಪಡೆಯಲು ಅವಕಾಶವಿದೆ. ಅಲ್ಲದೆ, CGTMSE ನಂತಹ ಯೋಜನೆಗಳು ಸಣ್ಣ ಉದ್ಯಮಗಳಿಗೆ ಗ್ಯಾರಂಟಿ ರಹಿತ ಸಾಲ ಪಡೆಯಲು ನೆರವಾಗುತ್ತವೆ. ಇಂತಹ ಯೋಜನೆಗಳ ಸರಿಯಾದ ಮಾಹಿತಿ ಪಡೆದು ಉದ್ಯಮ ಆರಂಭಿಸಿದರೆ ಆರ್ಥಿಕ ಹೊರೆ ತಗ್ಗಿಸಬಹುದು.