ಸಾಲದ ಬಡ್ಡಿದರ ಏರಿಕೆ ಮಾಡಿದ SBI;ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ
ಆರ್ ಬಿಐ ಇತ್ತೀಚೆಗೆ ರೆಪೋ ದರವನ್ನು ಮತ್ತೊಮ್ಮೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಬಡ್ಡಿದರ ಹೆಚ್ಚಳಕ್ಕೆ ಮುಂದಾಗಿವೆ. ಇದರಿಂದ ಸಾಲದ ಇಎಂಐ ಮೊತ್ತದಲ್ಲಿ ಹೆಚ್ಚಳವಾಗಿ ಸಾಲಗಾರರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಈ ಬಾರಿ ಎಸ್ ಬಿಐ ಎಂಸಿಎಲ್ ಆರ್ ಅನ್ನು 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ.
ನವದೆಹಲಿ (ಫೆ.16): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಒಂದು ವರ್ಷ ಅವಧಿಯ ಸಾಲಗಳ ಮೇಲಿನ ಕನಿಷ್ಠ ಬಡ್ಡಿದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು (ಎಂಸಿಎಲ್ ಆರ್) 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಇದ್ರಿಂದ ಅಲ್ಪಾವಧಿ ಸಾಲದ ಎಂಸಿಎಲ್ಆರ್ ಶೇ.7.85ರಿಂದ ಶೇ. 7.95ಕ್ಕೆ ಏರಿಕೆಯಾಗಿದೆ. ಇನ್ನು ಒಂದು ತಿಂಗಳ ಅವಧಿಯ ಸಾಲದ ಮೇಲಿನ ಬಡ್ಡಿದರ 10 ಬೇಸಿಸ್ ಪಾಯಿಂಟ್ಸ್ ಏರಿಕೆಯಾಗಿ ಶೇ.8ರಿಂದ ಶೇ.8.10ಕ್ಕೆ ಹೆಚ್ಚಳವಾಗಿದೆ ಎಂದು ಎಸ್ ಬಿಐ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಫೆ.8ರಂದು ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇ. 6.5 ಕ್ಕೆ ಹೆಚ್ಚಿಸಿದೆ. 2022ರ ಮೇ ತಿಂಗಳಿನಿಂದ ಆರ್ ಬಿಐ ರೆಪೋ ದರವನ್ನು ಶೇ.2.50ರಷ್ಟು ಹೆಚ್ಚಳ ಮಾಡಿದೆ. ಈ ಏರಿಕೆಯನ್ನು ಬ್ಯಾಂಕ್ ಗಳು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಿವೆ. ಪರಿಣಾಮ ಗೃಹ, ವಾಹನ, ವೈಯಕ್ತಿಕ ಸಾಲಗಳ ಬಡ್ಡಿದರ ಹಾಗೂ ಇಎಂಐಯಲ್ಲಿ ಹೆಚ್ಚಳವಾಗಿದೆ. ಎಸ್ ಬಿಐ ಎಂಸಿಎಲ್ ಆರ್ ಏರಿಕೆ ಮಾಡಿರೋದ್ರಿಂದ ವಿವಿಧ ಸಾಲಗಳ ಇಎಂಐ ಮೊತ್ತ ಹೆಚ್ಚಲಿದೆ. ಆದರೆ, ಎಂಸಿಎಲ್ ಆರ್ ಫ್ಲೋಟಿಂಗ್ ಬಡ್ಡಿದರದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಫಿಕ್ಸೆಡ್ ಅಥವಾ ಸ್ಥಿರ ಬಡ್ಡಿದರದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಕಳೆದ ತಿಂಗಳು ಕೂಡ ಎಸ್ ಬಿಐ ಎಂಸಿಎಲ್ಆರ್ ಅನ್ನು 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು.
ಒಂದು ತಿಂಗಳ ಅವಧಿಯ ಸಾಲದ ಮೇಲಿನ ಬಡ್ಡಿದರ 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳಗೊಂಡಿದ್ದು, ಶೇ.8ರಿಂದ ಶೇ.8.10ಕ್ಕೆ ಏರಿಕೆಯಾಗಲಿದೆ. ಇನ್ನು ಮೂರು ತಿಂಗಳ ಅವಧಿಯ ಎಂಸಿಎಲ್ ಆರ್ ಜನವರಿಯಲ್ಲಿ ಶೇ.8ರಿಂದ ಶೇ.8.10ಕ್ಕೆ ಏರಿಕೆಯಾಗಲಿದೆ. ಇನ್ನು ಆರು ತಿಂಗಳ ಅವಧಿಯ ಎಂಸಿಎಲ್ ಆರ್ ಈ ಹಿಂದಿನ ಶೇ.8.30ರಿಂದ ಶೇ. 8.40ಕ್ಕೆ ಹೆಚ್ಚಳವಾಗಲಿದೆ. ಒಂದು ವರ್ಷ ಅವಧಿಯ ಸಾಲದ ಮೇಲಿನ ಬಡ್ಡಿದರ ಶೇ.8.40ರಿಂದ ಶೇ.8.50ಕ್ಕೆ ಏರಿಕೆಯಾಗಲಿದೆ. ಇನ್ನು ಎರಡು ವರ್ಷಗಳ ಅವಧಿಯ ಸಾಲದ ಮೇಲಿನ ಎಂಸಿಎಲ್ಆರ್ ಶೇ.8.50ರಿಂದ ಶೇ.8.60ಕ್ಕೆ ಹೆಚ್ಚಳವಾಗಲಿದೆ. ಹಾಗೆಯೇ ಮೂರು ವರ್ಷಗಳ ಅವಧಿಯ ಸಾಲಗಳ ಮೇಲಿನ ಬಡ್ಡಿದರ ಶೇ.8.60ರಿಂದ ಶೇ.8.70ಕ್ಕೆ ಏರಿಕೆಯಾಗಲಿದೆ.
ಶೀಘ್ರದಲ್ಲಿ ಕೊನೆಯಾಗಲಿದೆ ಎಲ್ಐಸಿಯ ಈ ಪಾಲಿಸಿ; ಯಾವ ಪಾಲಿಸಿ, ವಿಶೇಷತೆಯೇನು? ಇಲ್ಲಿದೆ ಮಾಹಿತಿ
ಎಂಸಿಎಲ್ ಆರ್ ಅಂದ್ರೇನು?
ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಎಂದರೆ ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುವ ಕನಿಷ್ಠ ಬಡ್ಡಿದರ. ವಿವಿಧ ಮಾದರಿಯ ಸಾಲಗಳ ಬಡ್ಡಿ ದರಗಳನ್ನು ನಿರ್ಧರಿಸಲು 2016 ರಲ್ಲಿ ಆರ್ ಬಿಐ ಎಂಸಿಎಲ್ ಆರ್ ಪರಿಚಯಿಸಿತು. ಸರಳವಾಗಿ ಹೇಳಬೇಕೆಂದ್ರೆ ಎಂಸಿಎಲ್ ಆರ್ ಅನ್ನೋದು ಬ್ಯಾಂಕ್ ಗಳು ಸಾಲ ನೀಡಲು ಅನುಸರಿಸುವ ಬಡ್ಡಿಯ ಮಾನದಂಡ. ಈ ವಿಧಾನದಲ್ಲಿ ಸಾಲದ ಮೇಲಿನ ಬಡ್ಡಿ ನಿಗದಿಗೆ ಕನಿಷ್ಠ ದರವನ್ನು ಅನುಸರಿಸಲಾಗುತ್ತದೆ. ಇದಕ್ಕಿಂತ ಕಡಿಮೆ ದರದಲ್ಲಿ ಬ್ಯಾಂಕ್ ಗಳು ಸಾಲ ನೀಡುವುದಿಲ್ಲ.
ಈ ಸ್ಥಿರ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ರಿಸ್ಕ್ ಕಡಿಮೆ,ರಿಟರ್ನ್ಸ್ ಅಧಿಕ!
ಯಾರ ಮೇಲೆ ಪರಿಣಾಮ ಬೀರಲಿದೆ?
ಎಂಸಿಎಲ್ ಆರ್ ಹೆಚ್ಚಳದಿಂದ ಸಾಲ ಪಡೆದವರ ಇಎಂಐ ಮೊತ್ತದಲ್ಲಿ ಹೆಚ್ಚಳವಾಗಲಿದೆ. ಇದರಿಂದ ಸಾಲಗಾರರ ಮೇಲಿನ ಹೊರೆ ಹೆಚ್ಚಲಿದೆ. ಆರ್ ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿದರದಲ್ಲಿ ಏರಿಕೆ ಮಾಡಿವೆ. ಇದ್ರಿಂದ ಸಾಲಗಾರರ ಇಎಂಐ ಮೊತ್ತದಲ್ಲಿ ಹೆಚ್ಚಳವಾಗಿದೆ.