ಶೀಘ್ರದಲ್ಲಿ ಕೊನೆಯಾಗಲಿದೆ ಎಲ್ಐಸಿಯ ಈ ಪಾಲಿಸಿ; ಯಾವ ಪಾಲಿಸಿ, ವಿಶೇಷತೆಯೇನು? ಇಲ್ಲಿದೆ ಮಾಹಿತಿ
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಶೀಘ್ರದಲ್ಲೇ ವಿಶೇಷ ಪಾಲಿಸಿಗಳಲ್ಲಿ ಒಂದಾದ ಎಲ್ಐಸಿ ಧನ್ ವರ್ಷ ಯೋಜನೆಯನ್ನು ಸ್ಥಗಿತಗೊಳಿಸುತ್ತಿದೆ. ಈ ಪಾಲಿಸಿ 2023ರ ಮಾರ್ಚ್ 31ರ ತನಕ ಲಭ್ಯವಿರಲಿದೆ. ಆ ಬಳಿಕ ಅಂತ್ಯವಾಗಲಿದೆ. ಹಾಗಾದ್ರೆ ಎಲ್ಐಸಿ ಧನ್ ವರ್ಷ ಯೋಜನೆಯ ವಿಶೇಷತೆಯೇನು? ಇಲ್ಲಿದೆ ಮಾಹಿತಿ.
ನವದೆಹಲಿ (ಫೆ.15): ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ದೇಶದ ವಿಮಾ ಕ್ಷೇತ್ರದ ಅತ್ಯಂತ ಹಳೆಯ ಹಾಗೂ ಬೃಹತ್ ಕಂಪನಿಯಾಗಿದೆ. ಇದು ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಪಾಲಿಸಿಗಳನ್ನು ರೂಪಿಸುತ್ತದೆ. ಹೀಗಾಗಿ ಆದಾಯ, ವಯಸ್ಸನ್ನು ಆಧರಿಸಿ ಎಲ್ಲ ವರ್ಗದ ಜನರು ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಇನ್ನು ಎಲ್ಐಸಿಯಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಕಾರಣ ಭಾರತದ ಮಧ್ಯಮ ವರ್ಗದ ಜನರಿಗೆ ಎಲ್ಐಸಿ ಪಾಲಿಸಿಗಳು ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿವೆ. ಕಂಪನಿ ಶೀಘ್ರದಲ್ಲೇ ವಿಶೇಷ ಪಾಲಿಸಿಗಳಲ್ಲಿ ಒಂದಾದ ಎಲ್ಐಸಿ ಧನ್ ವರ್ಷ ಯೋಜನೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಇತ್ತೀಚೆಗೆ ಎಲ್ಐಸಿ ಚೇರ್ಮನ್ ಎಂ.ಆರ್. ಕುಮಾರ್ ತಿಳಿಸಿದ್ದಾರೆ. ಈ ಪಾಲಿಸಿ 2023ರ ಮಾರ್ಚ್ 31ರ ತನಕ ಲಭ್ಯವಿರಲಿದೆ. ಆ ಬಳಿಕ ಅಂತ್ಯವಾಗಲಿದೆ. ಹೀಗಾಗಿ ಎಲ್ಐಸಿ ಧನ್ ವರ್ಷ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಬಯಸುವವರು ಆದಷ್ಟು ಶೀಘ್ರದಲ್ಲಿ ಮಾಡಿ ಮುಗಿಸೋದು ಉತ್ತಮ. ಹಾಗಾದ್ರೆ ಎಲ್ಐಸಿ ಧನ್ ವರ್ಷ ಯೋಜನೆಯ ವಿಶೇಷತೆಯೇನು? ಇದರಲ್ಲಿ ಯಾರು ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ.
ಎಲ್ಐಸಿ ಧನ್ ವರ್ಷ ಪಾಲಿಸಿ ಷೇರುಪೇಟೆಗೆ ಜೋಡಣೆಯಾಗದ, ವೈಯಕ್ತಿಕ, ಉಳಿತಾಯ ಹಾಗೂ ಸಿಂಗಲ್ ಪ್ರೀಮಿಯಂ ವಿಮಾ ಯೋಜನೆಯಾಗಿದೆ. ಇದು ಉಳಿತಾಯ ಹಾಗೂ ಭದ್ರತೆ ಎರಡನ್ನೂ ಒದಗಿಸುತ್ತದೆ. ಇನ್ನು ಪಾಲಿಸಿದಾರರು ಮರಣ ಹೊಂದಿದ ಸಂದರ್ಭದಲ್ಲಿ ಡೆತ್ ಬೆನಿಫಿಟ್ ಸೌಲಭ್ಯವನ್ನು ಕೂಡ ಈ ಯೋಜನೆ ಒದಗಿಸುತ್ತದೆ. ಹಾಗೆಯೇ ಈ ಪ್ಲ್ಯಾನ್ ನಲ್ಲಿ ಪ್ರೀಮಿಯಂಗಳನ್ನು ಆಗಾಗ ಭರ್ತಿ ಮಾಡಬೇಕಾದ ಅಗತ್ಯವೂ ಇಲ್ಲ. ಇನ್ನು ಈ ಯೋಜನೆಯಲ್ಲಿ ಎರಡು ಹೂಡಿಕೆ ಆಯ್ಕೆಗಳು ಲಭ್ಯವಿವೆ. ಒಂದು ಆಯ್ಕೆಯು ವಿಮಾ ಮೊತ್ತದ 10 ಪಟ್ಟು ಮತ್ತು ಇನ್ನೊಂದು ಆಯ್ಕೆಯು ವಿಮಾ ಮೊತ್ತದ 1.25 ಪಟ್ಟು ಹಣವನ್ನು ಮೆಚ್ಯುರಿಟಿ ಬಳಿಕ ಒದಗಿಸುತ್ತವೆ. ಪಾಲಿಸಿದಾರ 10 ಅಥವಾ 15 ವರ್ಷಗಳ ಅವಧಿಗೆ ಪಾಲಿಸಿಯನ್ನು ಆಯ್ಕೆ ಮಾಡಬಹುದು.
ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ; ಮಾ.17ರಿಂದ ಶುಲ್ಕಗಳಲ್ಲಿ ಬದಲಾವಣೆ
ವಯೋಮಿತಿ
10 ವರ್ಷಗಳ ಅವಧಿಯ ಈ ಪಾಲಿಸಿಗೆ ಚಂದಾದಾರರಾಗಲು ಕನಿಷ್ಠ ವಯೋಮಿತಿ 8 ವರ್ಷಗಳು. ಹಾಗೆಯೇ 15 ವರ್ಷಗಳ ಅವಧಿಯ ಪಾಲಿಸಿಗೆ ಚಂದಾದಾರರಾಗಲು ಕನಿಷ್ಠ ವಯಸ್ಸು 3ವರ್ಷ. ಇನ್ನು ಈ ಪಾಲಿಸಿ ಆಯ್ಕೆ ಮಾಡಿಕೊಳ್ಳಲು ವಯಸ್ಸಿನ ಗರಿಷ್ಠ ಮಿತಿ ಅವಧಿ ಹಾಗೂ ಡೆತ್ ಕ್ಲೈಮ್ ಆಧರಿಸಿ 35ರಿಂದ 60 ವರ್ಷಗಳ ತನಕ ನಿಗದಿಪಡಿಸಲಾಗಿದೆ. ಅಂದರೆ ಗರಿಷ್ಠ ವಯೋಮಿತಿ 60 ವರ್ಷಗಳು.
ಈ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೂಲ ಮೊತ್ತ 1,25,000 ರೂ. ಗರಿಷ್ಠ ಮೂಲ ಮೊತ್ತಕ್ಕೆ ಯಾವುದೇ ಮಿತಿ ವಿಧಿಸಿಲ್ಲ. ಪಾಲಿಸಿ ಕನಿಷ್ಠ ಮೆಚ್ಯೂರಿಟಿ ವಯಸ್ಸು 18 ವರ್ಷಗಳು.
ಧನ್ ವರ್ಷ ಪಾಲಿಸಿಯು ವೈದ್ಯಕೀಯ ಮತ್ತು ವೈದ್ಯಕೀಯೇತರ ಎರಡು ಆಯ್ಕೆಗಳಲ್ಲಿ ಲಭ್ಯವಿದ್ದು, ಪಾಲಿಸಿದಾರರು ತಮ್ಮ ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆಯ ಆಧಾರದಲ್ಲಿ ಪಾಲಿಸಿಯ ಪ್ರಯೋಜನಗಳು ಕೂಡ ಬದಲಾಗುತ್ತವೆ.
90ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಖರೀದಿಸಿದ ಚಾಯ್ ವಾಲಾ; ಈತನ ಕಥೆ ಕೆಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ!
ಸಾಲ ಸೌಲಭ್ಯ
ಪಾಲಿಸಿ ಅವಧಿ ಆರಂಭಗೊಂಡ ಮೂರು ತಿಂಗಳು ಅಥವಾ ಫ್ರೀ ಲುಕ್ ಅವಧಿಯ ಮುಕ್ತಾಯ ಈ ಎರಡರಲ್ಲಿ ಯಾವುದು ಮೊದಲು ಬರಲಿದೆಯೋ ಆ ದಿನಾಂಕದ ಬಳಿಕ ಸಾಲ ಸೌಲಭ್ಯ ದೊರೆಯುತ್ತದೆ.
ಮಕ್ಕಳ ಭವಿಷ್ಯಕ್ಕೆ ಹೂಡಿಕೆ ಮಾಡಲು ಬಯಸೋರು ಅಥವಾ ನಿವೃತ್ತಿ ಬದುಕಿಗೆ ಉಳಿತಾಯ ಮಾಡಲು ಇಚ್ಛಿಸುವವರು ಧನ್ ವರ್ಷ ಪಾಲಿಸಿ ಖರೀದಿಸಬಹುದು. ಈ ಪಾಲಿಸಿಯನ್ನು ಹತ್ತಿರದ ಎಲ್ ಐಸಿ ಕಚೇರಿಗೆ ನೇರವಾಗಿ ಭೇಟಿ ನೀಡಿ ಖರೀದಿಸಬಹುದು. ಇಲ್ಲವೇ ಎಲ್ ಐಸಿ ಏಜೆಂಟ್ ರ ಮೂಲಕ ಕೂಡ ಈ ಪಾಲಿಸಿ ಮಾಡಿಸಬಹುದು. ಇನ್ನು ಆನ್ ಲೈನ್ ನಲ್ಲಿ ಕೂಡ ಪಾಲಿಸಿ ಖರೀದಿಸುವ ಆಯ್ಕೆ ಲಭ್ಯವಿದೆ.