ಈ ಸ್ಥಿರ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ರಿಸ್ಕ್ ಕಡಿಮೆ,ರಿಟರ್ನ್ಸ್ ಅಧಿಕ!
ರೆಪೋ ದರದಲ್ಲಿ ಭಾರೀ ಏರಿಕೆಯಾದ ಬಳಿಕ ಸ್ಥಿರ ಆದಾಯ ಯೋಜನೆಗಳಿಗೆ ಬೇಡಿಕೆ ಹೆಚ್ಚಿದೆ. ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಅನೇಕ ಸ್ಥಿರ ಆದಾಯ ಯೋಜನೆಗಳು ಲಭ್ಯವಿದ್ದು, ಇವುಗಳಲ್ಲಿ ಹೂಡಿಕೆ ಮಾಡಿದ್ರೆ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ಸ್ ಕೂಡ ಸಿಗುತ್ತದೆ. ಹಾಗಾದ್ರೆ ಉತ್ತಮ ಬಡ್ಡಿದರ ಹೊಂದಿರುವ ಸ್ಥಿರ ಠೇವಣಿ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.
Business Desk:ಕಳೆದ ಕೆಲವು ವರ್ಷಗಳಿಂದ ಸ್ಥಿರ ಆದಾಯ ಯೋಜನೆಗಳಲ್ಲಿನ ಹೂಡಿಕೆ ಷೇರು ಮಾರುಕಟ್ಟೆಗಿಂತ ಉತ್ತಮ ಆಯ್ಕೆಯಾಗಿದೆ. ಇದಕ್ಕೆ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರದಲ್ಲಿ ಭಾರೀ ಹೆಚ್ಚಳ ಮಾಡಿರುವುದು. ಇದರಿಂದ ಸ್ಥಿರ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರೋರಿಗೆ ಅಧಿಕ ರಿಟರ್ನ್ಸ್ ಸಿಗುತ್ತಿದೆ. ಬ್ಯಾಂಕ್ ಗಳು ಹಾಗೂ ಸಣ್ಣ ಹಣಕಾಸು ಬ್ಯಾಂಕ್ಗಳ ಸ್ಥಿರ ಠೇವಣಿಗಳು, ಅಂಚೆ ಕಚೇರಿ ಯೋಜನೆಗಳು, ಆರ್ ಬಿಐ ಬಾಂಡ್ ಗಳು ಹಾಗೂ ಮ್ಯೂಚುವಲ್ ಫಂಡ್ಸ್ ಈ ಹಿಂದಿಗಿಂತ ಈಗ ಅಧಿಕ ರಿಟರ್ನ್ಸ್ ನೀಡುತ್ತಿವೆ. ಹೀಗಾಗಿ ಅನೇಕರಿಗೆ ಇವು ಆಕರ್ಷಕ ಹೂಡಿಕೆ ಆಯ್ಕೆಯಾಗಿವೆ. ಕಳೆದ ಒಂದರಿಂದ ಹತ್ತು ತಿಂಗಳುಗಳಲ್ಲಿ ಸರ್ಕಾರಿ ಯೋಜನೆಗಳು ಹಾಗೂ ಮ್ಯೂಚುವಲ್ ಫಂಡ್ಸ್ ರಿಟರ್ನ್ ಗಳಲ್ಲಿ ಏರಿಕೆಯಾಗಿದೆ. ಇದು ಹಣಕಾಸು ಸಲಹೆಗಾರರು ಇವುಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಲು ಕಾರಣವಾಗಿದೆ. ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಿದ್ದು, ಬಹುತೇಕ ಜನರು ಸ್ಥಿರ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ನಿರೀಕ್ಷೆಯಿದೆ. ಹಾಗಾದ್ರೆ ಈಕ್ವಿಟಿ ಮಾರುಕಟ್ಟೆಗೆ ಪೈಪೋಟಿ ನೀಡಬಲ್ಲ ಸ್ಥಿರ ಆದಾಯ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.
ಬ್ಯಾಂಕ್ ಹಾಗೂ ಸಣ್ಣ ಹಣಕಾಸು ಬ್ಯಾಂಕ್ ಸ್ಥಿರ ಠೇವಣಿ
ಬ್ಯಾಂಕ್ ಹಾಗೂ ಸಣ್ಣ ಹಣಕಾಸು ಬ್ಯಾಂಕ್ ಸ್ಥಿರ ಠೇವಣಿಗೆ ಕಾಲಾವಧಿಯನ್ನು ಆಧರಿಸಿ ಶೇ. 3.50ರಿಂದ ಶೇ.9ರ ತನಕದ ಬಡ್ಡಿದರ ನೀಡಲಾಗುತ್ತದೆ. ಆದರೆ, ಕೆಲವು ಬ್ಯಾಂಕ್ ಗಳು ಈ ಖಾತೆಗಳಿಂದ ಹಣ ವಿತ್ ಡ್ರಾ ಮಾಡಲು ಶೇ.0.5 ರಿಂದ ಶೇ.1ರಷ್ಟು ಶುಲ್ಕ ವಿಧಿಸುತ್ತವೆ.
ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ; ಮಾ.17ರಿಂದ ಶುಲ್ಕಗಳಲ್ಲಿ ಬದಲಾವಣೆ
ಕಾರ್ಪೋರೇಟ್ ಸ್ಥಿರ ಠೇವಣಿ
ಈ ಠೇವಣಿಯಲ್ಲಿ ಹೂಡಿಕೆದಾರರು ಕನಿಷ್ಠ ಒಂದರಿಂದ ಮೂರು ತಿಂಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕು. ಇಲ್ಲವಾದ್ರೆ ದಂಡ ವಿಧಿಸಲಾಗುತ್ತದೆ. ಒಂದು ವರ್ಷದಿಂದ ಹತ್ತು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರ ಶೇ.6.9ರಿಂದ ಶೇ.9.05 ರಷ್ಟಿರುತ್ತದೆ.
ಆರ್ ಬಿಐ ಬಾಂಡ್
ಆರ್ ಬಿಐ ಬಾಂಡ್ ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದ್ದು, ಏಳು ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ. ಇನ್ನು ಹೂಡಿಕೆದಾರರು ಶೇ. 7.35ರಷ್ಟು ರಿಟರ್ನ್ಸ್ ಗಳಿಸುತ್ತಾರೆ.
ಅಂಚೆ ಕಚೇರಿ ಯೋಜನೆಗಳು
ಅಂಚೆ ಕಚೇರಿ ಯೋಜನೆ ಇನ್ನೊಂದು ಅಪಾಯರಹಿತ ಹೂಡಿಕೆ ಆಯ್ಕೆಯಾಗಿದೆ. ಆದರೆ, ಹೂಡಿಕೆದಾರರು ಲಾಕ್ ಇನ್ ಅವಧಿ ಮುಗಿಯೋ ಒಳಗೆ ತಮ್ಮ ಹಣವನ್ನು ವಿತ್ ಡ್ರಾ ಮಾಡುವಂತಿಲ್ಲ. ಒಂದು ವೇಳೆ ಅವಧಿಗೂ ಮುನ್ನ ವಿತ್ ಡ್ರಾ ಮಾಡಬೇಕೆಂದ್ರೆ ಅವರು ಶುಲ್ಕ ಪಾವತಿಸಬೇಕು. 2023ನೇ ಸಾಲಿನ ಜನವರಿ-ಮಾರ್ಚ್ ಅವಧಿಗೆ ಅಂಚೆ ಕಚೇರಿಯ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಮೆಚ್ಯೂರಿಟಿ ಬಳಿಕ ಹೂಡಿಕೆದಾರರು ಒಂದು ವರ್ಷದಿಂದ 5 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ.7ರಿಂದ ಶೇ.8ರ ತನಕ ಇದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ
60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗಳಿಗೆ ವಾರ್ಷಿಕ ಶೇ.8 ಬಡ್ಡಿದರ ನೀಡಲಾಗುತ್ತಿದೆ.
HDFC ಗ್ರಾಹಕರಿಗೆ ಶುಭಸುದ್ದಿ; ಇನ್ಮುಂದೆ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಬೇಕಾಗಿಲ್ಲ!
ಸಾರ್ವಜನಿಕ ಭವಿಷ್ಯ ನಿಧಿ
ಪಿಪಿಎಫ್ 15 ವರ್ಷಗಳ ಮೆಚ್ಯೂರಿಟಿ ಅವಧಿ ಹೊಂದಿದೆ. ಇದರಲ್ಲಿ ಭಾರತದ ಯಾವುದೇ ನಾಗರಿಕ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಮಾಡಿದ ಹೂಡಿಕೆ ಮೇಲಿನ ಬಡ್ಡಿಗೆ ತೆರಿಗೆ ಇಲ್ಲ. ಹಾಗೆಯೇ ಭಾಗಶಃ ವಿತ್ ಡ್ರಾ ಮಾಡಲು ಕೂಡ ಅವಕಾಶವಿದೆ. ಪ್ರಸ್ತುತ ವಾರ್ಷಿಕ ಶೇ.7.1ರಷ್ಟು ಬಡ್ಡಿದರ ನೀಡಲಾಗುತ್ತಿದೆ.
ಮಹಿಳಾ ಸಮ್ಮಾನ್ ಉಳಿತಾಯ ಪತ್ರ
ಈ ಯೋಜನೆಯನ್ನು ಇತ್ತೀಚೆಗೆ ಮಂಡನೆಯಾದ 2023ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಈ ಯೋಜನೆ 2023 ಏಪ್ರಿಲ್ ನಿಂದ ಲಭ್ಯವಾಗಲಿದೆ. ಹೂಡಿಕೆದಾರರು ಈ ಯೋಜನೆಯಲ್ಲಿ 2ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಮಹಿಳಾ ಸಮ್ಮಾನ್ ಉಳಿತಾಯ ಪತ್ರದಲ್ಲಿ ಎರಡು ವರ್ಷಗಳ ಅವಧಿಗೆ ಮಹಿಳೆಯರು ಹೂಡಿಕೆ ಮಾಡಬಹುದಾಗಿದ್ದು, ಶೇ.7.5 ಬಡ್ಡಿದರ ನೀಡಲಾಗುವುದು.