10,000 ಕೋಟಿ ರೂ. ಮೌಲ್ಯದ 2000ರೂ. ನೋಟು ಹಿಂತಿರುಗಲು ಬಾಕಿ: ಆರ್ ಬಿಐ ಗವರ್ನರ್
2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ಆರ್ ಬಿಐಯ 19 ವಿತರಣಾ ಕಚೇರಿಗಳಲ್ಲಿ ಮಾತ್ರ ಅನುಮತಿ ನೀಡಲಾಗಿದೆ. ಆದರೆ, ಕೇವಲ 10,000 ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರ ಜನರ ಬಳಿ ಉಳಿದಿದ್ದು, ಶೀಘ್ರದಲ್ಲಿ ಹಿಂತಿರುಗಲಿವೆ ಎಂದು ಆರ್ ಬಿಐ ಗವರ್ನರ್ ಮಾಹಿತಿ ನೀಡಿದ್ದಾರೆ.
ಮುಂಬೈ (ಅ.21): 2,000 ರೂ. ಮುಖಬೆಲೆಯ ನೋಟುಗಳು ಹಿಂತಿರುಗುತ್ತಿದ್ದು, ಕೇವಲ 10,000 ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರ ಜನರ ಬಳಿ ಉಳಿದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಅಲ್ಲದೆ, ಬಾಕಿ ಉಳಿದಿರುವ 2,000ರೂ. ನೋಟುಗಳು ಶೀಘ್ರ ಹಿಂತಿರುಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ತಿಂಗಳ ಪ್ರಾರಂಭದಲ್ಲಿ ವಿತ್ ಡ್ರಾ ಮಾಡಿದ 2000ರೂ. ಮುಖಬೆಲೆಯ ಶೇ.87ರಷ್ಟು ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿಯಿಡುವ ಮೂಲಕ ಹಿಂತಿರುಗಿಸಲಾಗಿದೆ. ಉಳಿದ ಹಣವನ್ನು ಕೌಂಟರ್ ಗಳ ಮೂಲಕ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ, ಆ ಬಳಿಕ ಈ ಗಡುವನ್ನು ಅಕ್ಟೋಬರ್ 7ರ ತನಕ ವಿಸ್ತರಿಸಲಾಗಿತ್ತು. ಈ ಅಂತಿಮ ಗಡುವಿನ ಬಳಿಕ ಈ ನೋಟುಗಳನ್ನು ಆರ್ ಬಿಐಯ 19 ವಿತರಣ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಲ್ಲದೆ, ಸಮೀಪದ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.
2,000ರೂ. ನೋಟು ವಿನಿಮಯ ಹೇಗೆ?
2,000ರೂ. ನೋಟುಗಳನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಒಮ್ಮೆಗೆ 20,000ರೂ. ತನಕ ವಿನಿಮಯ ಮಾಡಬಹುದು. ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಕೋರಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ.ದೇಶದೊಳಗಿನ ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು ಭಾರತೀಯ ಅಂಚೆ ಮೂಲಕ 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಯಾವುದಕ್ಕೆ ಬೇಕಾದರೂ ಕಳುಹಿಸಬಹುದು ಹಾಗೂ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಬಹುದು. ಈ ರೀತಿಯ ವಿನಿಮಯ ಅಥವಾ ಕ್ರೆಡಿಟ್ ಆರ್ ಬಿಐ ಅಥವಾ ಸರ್ಕಾರದ ಸಂಬಂಧಪಟ್ಟ ನಿಯಮಗಳಿಗೊಳಪಡುತ್ತವೆ. ಹಾಗೆಯೇ ಈ ಸಮಯದಲ್ಲಿ ಅರ್ಹ ಗುರುತು ದಾಖಲೆಗಳನ್ನು ಒದಗಿಸೋದು ಅಗತ್ಯ.
ಈ ತಿಂಗಳಲ್ಲಿ ಉಳಿದಿರೋದೆ 12 ದಿನ, ಅದರಲ್ಲಿ 10 ದಿನ ಬ್ಯಾಂಕುಗಳಿಗೆ ರಜೆ!
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದು ಆಗ ವರದಿಯಾಗಿತ್ತು. ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ತೀರ್ಮಾನವನ್ನು ಕೈಗೊಂಡಿರೋದಾಗಿ ಆರ್ ಬಿಐ ತಿಳಿಸಿತ್ತು. ಮಾರ್ಚ್ 31ರ ವೇಳೆಗೆ ಮಾರುಕಟ್ಟೆಯಲ್ಲಿ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳಿದ್ದವು.
ಮೊದಲ ಸಲ ಹೂಡಿಕೆ ಮಾಡುವವರಿಗೆ 8 ಸಲಹೆಗಳು ಇಲ್ಲಿವೆ
2000 ರೂಪಾಯಿ ನೋಟು ಹಿಂಪಡೆದ ಬೆನ್ನಲ್ಲೇ 500 ರೂಪಾಯಿ ಹಾಗೂ 1000 ರೂಪಾಯಿ ನೋಟು ರದ್ದಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಸುದ್ದಿ ನಕಲಿ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ. 500 ರೂಪಾಯಿ ನೋಟುಗಳು ರದ್ದಾಗಲಿವೆ ಹಾಗೂ 1000 ರೂಪಾಯಿ ನೋಟುಗಳು ಮರುಜಾರಿಯಾಗಲಿವೆ ಎಂಬುದು ಕೇವಲ ಊಹಾಪೋಹ. ಅಂಥ ಚಿಂತನೆಯನ್ನು ಆರ್‌ಬಿಐ ನಡೆಸಿಲ್ಲ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ.