ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕಾರ್ಪೊರೇಟ್ ಕಾರ್ಯನಿರ್ವಾಹಕರ ಪಟ್ಟಿಯಲ್ಲಿ ಕನ್ನಡತಿಯೊಬ್ಬರು ಮೊದಲ ಸ್ಥಾನ ಪಡೆದಿದ್ದಾರೆ. 2025–26ನೇ ಹಣಕಾಸು ವರ್ಷದಲ್ಲಿ ₹87.50 ಕೋಟಿ ಸಂಭಾವನೆ ಪಡೆದಿದ್ದು, ಇದರಲ್ಲಿ ₹13.87 ಕೋಟಿ ವೇತನ ಮತ್ತು ₹73.63 ಕೋಟಿ ಎಕ್ಸ್‌ಗ್ರೇಷಿಯಾ ಅಥವಾ ಬೋನಸ್ ಸೇರಿವೆ.

ಕಾರ್ಪೊರೇಟ್ ವಲಯದಲ್ಲಿ ಮಹಿಳೆಯರು ಇಂದು ಕೇವಲ ನಾಯಕತ್ವದ ಸ್ಥಾನಗಳನ್ನು ಅಲಂಕರಿಸುವುದು ಮಾತ್ರವಲ್ಲದೆ, ವಾರ್ಷಿಕ ಸಂಭಾವನೆಯಲ್ಲೂ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. 2025-26ನೇ ಆರ್ಥಿಕ ವರ್ಷದ (FY26) ಕಂಪನಿಗಳ ಅಧಿಕೃತ ವರದಿ ಮತ್ತು 'ವಿಸ್ಜ್ಲಿನ್' ಕಾರ್ಯನಿರ್ವಾಹಕ ವೇತನ ಶ್ರೇಯಾಂಕಗಳ ಪ್ರಕಾರ, ಕನ್ನಡದ ಕುವರಿ, ತಮಿಳುನಾಡು ಸೊಸೆ ವಾರ್ಷಿಕ ಬರೋಬ್ಬರಿ ₹87.50 ಕೋಟಿ ವೇತನ ಪಡೆಯುವ ಮೂಲಕ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕಾರ್ಯನಿರ್ವಾಹಕರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವಿಶೇಷವೆಂದರೆ, ಇವರು ಮೂಲತಃ ಕರ್ನಾಟಕದ ಕೊಡಗಿನವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅವರೇ ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕಾವೇರಿ ಕಲಾನಿಧಿ (ಕಾವೇರಿ ಮಾರನ್).

FY26ರಲ್ಲಿ ಅತಿ ಹೆಚ್ಚು ವೇತನ ಪಡೆಯುವ ಭಾರತದ ಟಾಪ್ 10 ಮಹಿಳಾ ಕಾರ್ಯನಿರ್ವಾಹಕರು:

  1. ಕಾವೇರಿ ಕಲಾನಿಧಿ ಮಾರನ್- ಕಾರ್ಯನಿರ್ವಾಹಕ ನಿರ್ದೇಶಕಿ, ಸನ್ ಟಿವಿ ನೆಟ್‌ವರ್ಕ್ ₹87.50 ಕೋಟಿ
  2. ನಿಲಿಮಾ ಪ್ರಸಾದ್ ದಿವಿ- ಪೂರ್ಣಾವಧಿ ನಿರ್ದೇಶಕಿ, ದಿವಿಸ್ ಲ್ಯಾಬೋರೇಟರೀಸ್ ₹34.78 ಕೋಟಿ
  3. ವಿನಿತಾ ಸಿಂಘಾನಿಯಾ- ಅಧ್ಯಕ್ಷೆ ಮತ್ತು ಎಂಡಿ, ಜೆಕೆ ಲಕ್ಷ್ಮಿ ಸಿಮೆಂಟ್ ₹28.68 ಕೋಟಿ
  4. ವಿನಿತಾ ಗುಪ್ತಾ- ಸಿಇಒ ಮತ್ತು ಎಂಡಿ, ಲುಪಿನ್ ₹26.69 ಕೋಟಿ
  5. ವಿನತಿ ಸರಾಫ್ ಮುತ್ರೇಜಾ- ಎಂಡಿ ಮತ್ತು ಸಿಇಒ, ವಿನತಿ ಆರ್ಗಾನಿಕ್ಸ್ ₹21.06 ಕೋಟಿ
  6. ಆರತಿ ಸುಬ್ರಮಣಿಯನ್- ಉನ್ನತ ಕಾರ್ಯನಿರ್ವಾಹಕರು ₹18.34 ಕೋಟಿ
  7. ಪ್ರಿಯಾ ನಾಯರ್- ಎಂಡಿ ಮತ್ತು ಸಿಇಒ, ಹಿಂದೂಸ್ತಾನ್ ಯೂನಿಲಿವರ್ ₹18.19 ಕೋಟಿ
  8. ಫಲ್ಗುಣಿ ನಾಯರ್- ಕಾರ್ಯನಿರ್ವಾಹಕ ಅಧ್ಯಕ್ಷೆ ಮತ್ತು ಸಿಇಒ, ನೈಕಾ ₹16.48 ಕೋಟಿ
  9. ಪ್ರಭಾ ನರಸಿಂಹನ್- ಎಂಡಿ ಮತ್ತು ಸಿಇಒ, ಕೋಲ್ಗೇಟ್-ಪಾಮೋಲಿವ್ ಇಂಡಿಯಾ ₹12.91 ಕೋಟಿ
  10. ಭುವನೇಶ್ವರಿ ನಾರಾ- ಕಾರ್ಯನಿರ್ವಾಹಕ ನಿರ್ದೇಶಕಿ, ಹೆರಿಟೇಜ್ ಫುಡ್ಸ್ ₹9.60 ಕೋಟಿ

ಕೊಡಗಿನ ಕೈಕೇರಿಯಿಂದ ಸನ್ ಸಾಮ್ರಾಜ್ಯದವರೆಗೆ ಕಾವೇರಿ ಅವರ ಪಯಣ

ಕಾವೇರಿ ಕಲಾನಿಧಿ ಅವರು ಮೂಲತಃ ಕರ್ನಾಟಕದ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮದವರು. ದಿವಂಗತ ಜಮ್ಮಡ ಎ. ಬೆಳ್ಳಿಯಪ್ಪ ಮತ್ತು ನೀನಾ ದಂಪತಿಯ ಪುತ್ರಿಯಾದ ಇವರು, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ವ್ಯಾಸಂಗ ಪೂರ್ಣಗೊಳಿಸಿದರು. 1991ರಲ್ಲಿ ಸನ್ ಗ್ರೂಪ್ ಸಂಸ್ಥಾಪಕ ಕಲಾನಿಧಿ ಮಾರನ್ ಅವರೊಂದಿಗೆ ಇವರ ಪ್ರೇಮ ವಿವಾಹ ನೆರವೇರಿತು. ಕಲಾನಿಧಿ ಅವರ ಕುಟುಂಬದಲ್ಲಿ ನಡೆದ ಮೊದಲ ಪ್ರೇಮ ವಿವಾಹ ಇದಾಗಿತ್ತು ಎಂಬುದು ವಿಶೇಷ.

ಅಮೆರಿಕದ ಸ್ಕ್ರಾಂಟನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದು ಭಾರತಕ್ಕೆ ಮರಳಿದ್ದ ಕಲಾನಿಧಿ ಮಾರನ್, ದಕ್ಷಿಣ ಭಾರತದಲ್ಲಿ ಟಿವಿ ಚಾನೆಲ್‌ಗಳ ಕ್ರಾಂತಿ ಮಾಡುವ ಕನಸು ಕಂಡಿದ್ದರು. 1993ರಲ್ಲಿ ಕೇವಲ ಒಂದು ತಮಿಳು ಚಾನೆಲ್ ಆಗಿ 'ಸನ್ ಟಿವಿ' ಆರಂಭವಾದ ದಿನದಿಂದಲೂ ಕಾವೇರಿ ಅವರು ಪತಿಯ ಹೆಗಲಿಗೆ ಹೆಗಲು ಕೊಟ್ಟು ದುಡಿದರು. ಇಂದು ಈ ಸಂಸ್ಥೆಯು ತಮಿಳು, ಕನ್ನಡ (ಉದಯ ಟಿವಿ), ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಹಾಗೂ 2024ರಲ್ಲಿ ಆರಂಭವಾದ 'ಸನ್ ನಿಯೋ' ಹಿಂದಿ ಚಾನೆಲ್ ಸೇರಿದಂತೆ 30ಕ್ಕೂ ಹೆಚ್ಚು ವಾಹಿನಿಗಳ ಬೃಹತ್ ಜಾಲವಾಗಿ ಬೆಳೆದಿದೆ.

ತೆರೆಮರೆಯಲ್ಲೇ ನಿಂತು ಸಾಮ್ರಾಜ್ಯ ಕಟ್ಟಿದ ಚಾಣಾಕ್ಷೆ

ಕಲಾನಿಧಿ ಮಾರನ್ ಅವರು ಕಂಪನಿಯ ವ್ಯಾಪಾರ ವಿಸ್ತರಣೆಯತ್ತ ಗಮನಹರಿಸಿದರೆ, ಕಾವೇರಿ ಅವರು ಇಡೀ ನೆಟ್‌ವರ್ಕ್‌ನ ಕಂಟೆಂಟ್ (ಕಾರ್ಯಕ್ರಮಗಳ ಗುಣಮಟ್ಟ), ಪ್ರೋಗ್ರಾಮಿಂಗ್ ತಂತ್ರಗಾರಿಕೆ ಮತ್ತು ಸಾಗರೋತ್ತರ ವಿಸ್ತರಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ತಮಿಳುನಾಡಿನಲ್ಲಿ ಸನ್ ಟಿವಿ ಸುಮಾರು ಶೇ. 40ರಷ್ಟು ವೀಕ್ಷಕರ ಪಾಲನ್ನು ಉಳಿಸಿಕೊಳ್ಳುವಲ್ಲಿ ಹಾಗೂ 'ಸನ್ ಎನ್‌ಎಕ್ಸ್‌ಟಿ' ಡಿಜಿಟಲ್ ವೇದಿಕೆ ಮತ್ತು 'ಸನ್ ಪಿಕ್ಚರ್ಸ್' ಚಲನಚಿತ್ರ ನಿರ್ಮಾಣ ಸಂಸ್ಥೆಯ ಯಶಸ್ಸಿನಲ್ಲಿ ಕಾವೇರಿ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. 2005ರಿಂದ ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ಇವರನ್ನು ಅಕ್ಟೋಬರ್ 2026ರಲ್ಲಿ ಮತ್ತೆ ಐದು ವರ್ಷಗಳ ಅವಧಿಗೆ ಮರುನೇಮಕ ಮಾಡಲಾಗಿದೆ. ತಮ್ಮ ಪತಿ ಕಲಾನಿಧಿ ಮಾರನ್ ಅವರಂತೆಯೇ ಇವರೂ ಸಹ ₹87.50 ಕೋಟಿ ವಾರ್ಷಿಕ ಪ್ಯಾಕೇಜ್ (ಮೂಲ ವೇತನ ಹಾಗೂ ಬೋನಸ್ ಸೇರಿ) ಪಡೆಯುತ್ತಿದ್ದಾರೆ.

ಮಗಳು ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ವಿವಾಹ ಸಂಭ್ರಮ

ದೊಡ್ಡ ಉದ್ಯಮ ಸಾಮ್ರಾಜ್ಯದ ಒಡೆಯರಾಗಿದ್ದರೂ ಕಲಾನಿಧಿ ಮತ್ತು ಕಾವೇರಿ ದಂಪತಿ ಪ್ರಚಾರದಿಂದ ದೂರವಿದ್ದು ಸರಳ ಜೀವನ ನಡೆಸುತ್ತಾರೆ. ಈ ದಂಪತಿಯ ಏಕೈಕ ಪುತ್ರಿ ಕಾವ್ಯಾ ಕಲಾನಿಧಿ ಮಾರನ್ ಕೂಡ ಸನ್ ಟಿವಿ ನೆಟ್‌ವರ್ಕ್‌ನ ನಿರ್ದೇಶಕಿಯಾಗಿದ್ದು, ಐಪಿಎಲ್‌ನ 'ಸನ್‌ರೈಸರ್ಸ್ ಹೈದರಾಬಾದ್', ದಕ್ಷಿಣ ಆಫ್ರಿಕಾದ 'ಸನ್‌ರೈಸರ್ಸ್ ಈಸ್ಟರ್ನ್ ಕೇಪ್' ಹಾಗೂ ಇಂಗ್ಲೆಂಡ್‌ನ 'ಸನ್‌ರೈಸರ್ಸ್ ಲೀಡ್ಸ್' ಕ್ರಿಕೆಟ್ ತಂಡಗಳ ಮುಖ್ಯಸ್ಥೆಯಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಇದೀಗ ಕಾವ್ಯಾ ಮಾರನ್ ಅವರು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ನವೆಂಬರ್ 11 ರಂದು ಗ್ರೀಸ್‌ನಲ್ಲಿ ನಡೆದ ಅದ್ಧೂರಿ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಂದು (ನವೆಂಬರ್ 21, 2026) ಚೆನ್ನೈನಲ್ಲಿ ಇವರ ಅದ್ಧೂರಿ ವಿವಾಹ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಶುಭ ಸಮಾರಂಭಕ್ಕೆ ತಮಿಳುನಾಡು ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಸೇರಿದಂತೆ ದೇಶದ ಗಣ್ಯಾತಿಗಣ್ಯರನ್ನು ಮಾರನ್ ದಂಪತಿ ಆಹ್ವಾನಿಸಿದ್ದಾರೆ.