ಮೊದಲ ಸಲ ಹೂಡಿಕೆ ಮಾಡುವವರಿಗೆ 8 ಸಲಹೆಗಳು ಇಲ್ಲಿವೆ
ಹೂಡಿಕೆ ಮಾಡುವ ಆಸಕ್ತಿ ಬಹುತೇಕರಿಗೆ ಇರುತ್ತದೆ. ಅದರೊಂದಿಗೆ ಸಣ್ಣ ಭಯ ಕೂಡ ಇರುತ್ತದೆ. ಆಸೆ, ಆತಂಕಗಳ ಜೊತೆಯೇ ಮೊದಲ ಬಾರಿಗೆ ಹೂಡಿಕೆ ಮಾಡಲು ಮುಂದಾಗುವವರಿಗೆ ಫ್ರಾಂಕ್ಲಿನ್ ಟೆಂಪ್ಲಟನ್ ಸಂಸ್ಥೆಯ ಕಂಟೆಂಟ್ ಡೆವಲಪ್ ಮೆಂಟ್ ಹೆಡ್ ಸತೀಶ್ ಪ್ರಭು ಬರೆದ ಮಾಹಿತಿಪೂರ್ಣ ಲೇಖನ ಇಲ್ಲಿದೆ.
- ಸತೀಶ್ ಪ್ರಭು, ಮುಖ್ಯಸ್ಥ,
ಕಂಟೆಂಟ್ ಡೆವಲಪ್ ಮೆಂಟ್- ಇಂಡಿಯಾ, ಫ್ರಾಂಕ್ಲಿನ್ ಟೆಂಪ್ಲಟನ್
ಆನ್‌ಲೈನ್ ಮಳಿಗೆಯೊಂದರ ಖ್ಯಾತಿವೆತ್ತ ಮಾಲೀಕರಿಗೆ ಪ್ರಶ್ನೆಯೊಂದು ಎದುರಾಯಿತು. ‘ಮುಂದಿನ 10 ವರ್ಷಗಳಲ್ಲಿ ಏನೇನು ಬದಲಾವಣೆ ಆಗಬಹುದು?’
ಈ ಪ್ರಶ್ನೆಗೆ ಆತನ ಉತ್ತರ ತುಂಬಾ ಸರಳವಾಗಿತ್ತು. ‘ನನ್ನ ಗಮನ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನುವುದರ ಮೇಲೆ ಇಲ್ಲ. ಅದರ ಬದಲಾಗಿ ಮುಂದಿನ 10 ವರ್ಷಗಳಲ್ಲಿ ಏನೇನು ಬದಲಾಗುವುದಿಲ್ಲ ಎಂಬುದರ ಕಡೆಗೆ ಇದೆ. ನನ್ನ ವ್ಯಾಪಾರದಲ್ಲಿ 3 ವಿಷಯಗಳು ಯಾವತ್ತೂ ಬದಲಾಗುವುದಿಲ್ಲ. ಒಂದು ಅತಿ ವೇಗದ ಡೆಲಿವರಿ, ಇನ್ನೊಂದು ಸ್ಪರ್ಧಾತ್ಮಕ ದರಗಳು, ಮತ್ತೊಂದು ವೈವಿಧ್ಯಮಯ ಉತ್ಪನ್ನಗಳು’ ಎಂದ ಆತ. ಅದೇ ಥರ ಹೂಡಿಕೆ ವಿಚಾರಕ್ಕೆ ಬಂದರೆ ಈ ಹಿಂದೆ ಬದಲಾಗದ, ಭವಿಷ್ಯದಲ್ಲಿ ಬದಲಾವಣೆಯಾಗದ ಕೆಲವು ಪ್ರಾಥಮಿಕ ತತ್ವಗಳಿವೆ. ಈಗ ನಾವು ಮೊದಲ ಸಲ ಹೂಡಿಕೆ ಮಾಡುವವರಿಗೆ ನೀಡಬಹುದಾದ ಆ 8 ಸಲಹೆಗಳನ್ನು ನೋಡೋಣ:
ಕಿರು ಅವಧಿ Vs ದೀರ್ಘಾವಧಿ ಹೂಡಿಕೆ: ಇವೆರಡರಲ್ಲಿ ಯಾವುದು ಉತ್ತಮ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
1. ಎಮರ್ಜೆನ್ಸಿ ಫಂಡ್: ಮೊದಲನೆಯದಾಗಿ ಮತ್ತು ಮುಖ್ಯವಾಗಿ, ಅನಿರೀಕ್ಷಿತ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ನಿಮ್ಮ 6 ತಿಂಗಳ ವೆಚ್ಚಗಳನ್ನು ಉಳಿತಾಯ ಖಾತೆಗಳು, ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳು ಮತ್ತು ಬ್ಯಾಂಕ್ ಠೇವಣಿಗಳಲ್ಲಿ ನಿರ್ವಹಣೆ ಮಾಡಿ.
2. ಬೇಗ ಶುರು ಮಾಡಿ: ನೀವು ವೃತ್ತಿ ಜೀವನದಲ್ಲಿ ಎಷ್ಟು ಬೇಗ ಹೂಡಿಕೆ ಮಾಡಲು ಆರಂಭಿಸುತ್ತೀರೋ ಅಷ್ಟು ಒಳ್ಳೆಯದು. ಒಟ್ಟುಗೂಡಿಸುವ ಗುಣದಿಂದಾಗಿ ದೀರ್ಘ ಕಾಲದಲ್ಲಿ ನಿಮ್ಮ ಸಂಪತ್ತು ಸೃಷ್ಟಿ ಸಾಧ್ಯತೆ ಉತ್ತಮವಾಗಿರುತ್ತದೆ. ಸಂಪತ್ತು ಸೃಷ್ಟಿಯು ಎಷ್ಟು ಹೂಡಿಕೆ ಎನ್ನುವುದಕ್ಕಿಂತ ಹೆಚ್ಚಾಗಿ ಎಷ್ಟು ದೀರ್ಘ ಕಾಲ ನೀವು ಹೂಡಿಕೆ ಮಾಡುತ್ತೀರಿ ಅನ್ನುವುದರ ಆಧಾರದ ಮೇಲೆ ನಿಂತಿರುತ್ತದೆ. 2023ರ ಜನವರಿಯಲ್ಲಿ ಆರಂಭವಾಗುವ ಮ್ಯೂಚುವಲ್ ಫಂಡ್‌ನ ಎಸ್‌ಐಪಿ ಮೂಲಕ ಹೂಡಿಕೆ ಆರಂಭಿಸುವುದು ಉತ್ತಮ ಆರಂಭವಾಗಲಿದೆ.
3. ಪ್ರತೀ ವರ್ಷ ಒಂದು ಹೆಜ್ಜೆ ಎತ್ತರಿಸಿಕೊಳ್ಳಿ: ನೀವು ಪ್ರತೀ ತಿಂಗಳು ರೂ.10,000ದ ಎಸ್‌ಐಪಿಯೊಂದಿಗೆ ಆರಂಭಿಸಿದರೆ ಹೆಚ್ಚುತ್ತಿರುವ ಆದಾಯದೊಂದಿಗೆ ಪ್ರತೀ ವರ್ಷ ನಿಮ್ಮ ಎಸ್‌ಐಪಿಯನ್ನು ಒಂದು ಹೆಜ್ಜೆ ಎತ್ತರಿಸುವುದನ್ನು ಕಲಿತುಕೊಳ್ಳಿ. ನಿಮ್ಮ ಎಸ್‌ಐಪಿಯಲ್ಲಿ ಶೇ.5-10ರಷ್ಟು ಏರಿಕೆ ಮಾಡುವುದರಿಂದ ದೀರ್ಘ ಕಾಲದಲ್ಲಿ ನಿಮ್ಮ ಸಂಪತ್ತು ಸೃಷ್ಟಿಯು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
4. ವರ್ಷ ಪೂರ್ತಿ ತೆರಿಗೆ ಯೋಜನೆ: ನೀವು ವರ್ಷಪೂರ್ತಿ ಹೂಡಿಕೆ ಮಾಡುವವರ ಬದಲಾಗಿ ಆರ್ಥಿಕ ವರ್ಷದ ಕೊನೆಯಲ್ಲಿ ತೆರಿಗೆ ಉಳಿಸುವ ಸಲುವಾಗಿ ಹೂಡಿಕೆ ಮಾಡುವ ಜನರನ್ನು ನೋಡಿರಬಹುದು. ಮ್ಯೂಚುವಲ್ ಫಂಡ್‌ಗಳು ಒದಗಿಸುವ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್(ಈಎಲ್‌ಎಸ್‌ಎಸ್)ಗಳು ಪ್ರತೀ ವರ್ಷ ರೂ.1. ಲಕ್ಷದಷ್ಟರವರೆಗಿನ ಹೂಡಿಕೆಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಹೂಡಿಕೆಯನ್ನು ಏಪ್ರಿಲ್ 2023ರಿಂದ ಪ್ರತೀ ತಿಂಗಳಿಗೆ ರೂ.12,500ರಂತೆ ಎಸ್‌ಐಪಿ ಆಗಿ ವಿಭಜಿಸಲೂಬಹುದು. ಒಂದು ವೇಳೆ ನೀವು ಶೇ.30ರ ಅತಿ ಹೆಚ್ಚು ತೆರಿಗೆ ಆವರಣದಲ್ಲಿ ಇದ್ದರೆ, ತೆರಿಗೆ ಉಳಿತಾಯ ರೂ.45,000ದಷ್ಟು ಶ್ರೇಣಿಯಲ್ಲಿ ಇರುತ್ತದೆ.
5. ಹೂಡಿಕೆಯಿಂದ ಭಾವನೆಗಳನ್ನು ದೂರವಿಡಿ: ಹಲವಾರು ಹೂಡಿಕೆದಾರರು ಸಂಪತ್ತು ಸೃಷ್ಟಿಯಲ್ಲಿ ವಿಫಲರಾಗುವುದಕ್ಕೆ ಬಹುಮುಖ್ಯ ಕಾರಣ ಅವರು ದುರಾಸೆ ಮತ್ತು ಭಯದಂತಹ ಭಾವನೆಗಳಿಗೆ ಈಡಾಗುವುದು. ಅವರು ಈಕ್ವಿಟಿಗಳು ಬಿದ್ದಾಗ ಮಾರುತ್ತಾರೆ ಮತ್ತು ಏರಿದಾಗ ಖರೀದಿಸುತ್ತಾರೆ. ಆದಾಗ್ಯೂ ನೀವು ಹೂಡಿಕೆದಾರರಾಗಿ ಯಶಸ್ಸು ಪಡೆಯಬೇಕೆಂದರೆ ಮಾರುಕಟ್ಟೆ ಚಕ್ರಗಳಲ್ಲಿ ಸಮಚಿತ್ತರಾಗಿರುವುದು ಮತ್ತು ದೀರ್ಘಾವಧಿಗೆ ಹೂಡಿಕೆ ಮಾಡುವುದು ಮುಖ್ಯ.
6. ಗುರಿಗಳಿಗೆ ಅನುಗುಣವಾಗಿ ಹೂಡಿಕೆ ಮಾಡಿ: ಗುರಿಯನ್ನು ಇಟ್ಟುಕೊಳ್ಳಿ ಮತ್ತು ಆ ಗುರಿಗೆ ತಕ್ಕಂತೆ ಹೂಡಿಕೆ ಮಾಡಿ. 5 ವರ್ಷಗಳಂತಹ ಕಡಿಮೆ ಅವಧಿಯ ಗುರಿಯನ್ನು ತಲುಪಲು ಕಡಿಮೆ ಅವಧಿಯ ಹೂಡಿಕೆಗಳಾದ ಸಾಲ ಮತ್ತು ಹೈಬ್ರಿಡ್ ಫಂಡ್‌ಗಳು ಸಾಕಾಗುತ್ತವೆ, ಆದರೆ 5 ವರ್ಷಗಳಿಗಿಂತ ಹೆಚ್ಚಿನ ದೀರ್ಘಾವಧಿಯ ಗುರಿಗಳನ್ನು ತಲುಪಲು ಈಕ್ವಿಟಿ ಫಂಡ್‌ಗಳು ಪ್ರಮುಖವಾಗುತ್ತವೆ.
7. ವೈವಿಧ್ಯಮಯತೆ: ವ್ಯಕ್ತಿ ಕಡ್ಡಾಯವಾಗಿ ಈಕ್ವಿಟಿ, ಸಾಲ, ಬಂಗಾರ, ರಿಯಲ್ ಎಸ್ಟೇಟ್, ಜಾಗತಿಕ ಸ್ವತ್ತುಗಳಂತಹ ಸಂಪತ್ತುಗಳ ಮೇಲೆ ಹೂಡಿಕೆ ಮಾಡುವುದರಿಂದ ರಿಸ್ಕ್ ಹಲವು ಹೂಡಿಕೆಗಳ ಮೇಲೆ ಹಂಚಿಕೆಯಾಗುತ್ತದೆ. ಅದು ಹೇಗೆಂದರೆ ಎಲ್ಲಾ ಸ್ವತ್ತುಗಳು ಏಕಕಾಲದಲ್ಲಿ ಎಲ್ಲವೂ ಬೀಳುವುದಿಲ್ಲ ಅಥವಾ ಏರಿಕೆಯಾಗುವುದಿಲ್ಲ. ಆದಾಗ್ಯೂ ಹೀಗೆ ಹಂಚುವುದು ನಿಮ್ಮ ಅಪಾಯ ಎದುರಿಸುವ ಸಾಮರ್ಥ್ಯ ಮತ್ತು ಗುರಿಯ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ. ಮ್ಯೂಚುವಲ್ ಫಂಡ್‌ಗಳು ಸಮತೋಲಿತ ಪ್ರಯೋಜನಕಾರಿ ಫಂಡ್‌ಗಳು(ಬ್ಯಾಲೆನ್ಸ್‌ಡ್ ಅಡ್ವಾಂಟೇಜ್ ಫಂಡ್‌ಗಳು) ಮತ್ತು ಹೈಬ್ರಿಡ್ ಫಂಡ್‌ಗಳಂತಹ ವಿಭಾಗಗಳ ಮೂಲಕ ಸಿದ್ಧ ಮಾದರಿಯ ಸ್ವತ್ತು ಹಂಚಿಕೆಯನ್ನು ಒದಗಿಸುತ್ತವೆ.
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ ಕೇವಲ7ರೂ. ಹೂಡಿಕೆ ಮಾಡಿದ್ರೆ ತಿಂಗಳಿಗೆ 5000ರೂ. ಪಿಂಚಣಿ ಖಚಿತ
8. ನಿಮಗೆ ಇನ್ಶೂರ್ ಮಾಡಿಕೊಳ್ಳಿ: ಕೊನೆಯದು, ಆದರೆ ಮಹತ್ವದ್ದು. ದತ್ತಿ ಯೋಜನೆಗಳು ಮತ್ತು ಮನಿ-ಬ್ಯಾಕ್ ಪಾಲಿಸಿಗಳಂತಹ ಆಮಿಷಗಳಿಂದ ದೂರವುಳಿದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಟರ್ಮ್ ಲೈಫ್ ಇನ್ಶೂರೆನ್ಸ್ ಅನ್ನು ಖರೀದಿಸಿ. ಮೆಡಿಕ್ಲೇಮ್ ಪಾಲಿಸಿಗಳ ಮೂಲಕ ನಿಮ್ಮ ಕುಟುಂಬದ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳಿ. ನಿಮ್ಮ ವಯಸ್ಸು ಕಡಿಮೆ ಇದ್ದಷ್ಟೂ, ಪ್ರೀಮಿಯಂ ಕಡಿಮೆ ಇರುತ್ತದೆ.
ಕಡೆಯದಾಗಿ ಹೇಳುವುದಾದರೆ, ಮೋರ್ಗನ್ ಹೌಸ್‌ಲಾಪ್ಟ್ಲಿಯ ಈ ಮಾತು ಸಂಪತ್ತು ಸೃಷ್ಟಿಗೆ ದಾರಿ ದೀಪದಂತೆ ಇದೆ, ‘ಹೂಡಿಕೆ ಮಾಡುವುದು ಎನ್ನುವುದು ಆರ್ಥಿಕತೆ ಕುರಿತಾದದ್ದು ಅಲ್ಲ, ಅದು ಹಣದೊಂದಿಗಿನ ಜನರ ನಡವಳಿಕೆ ಕುರಿತಾದದ್ದು’.