ಮುಂಬೈ(ಅ.12): ಒಂದು ಕಡೆ ಆರ್ಥಿಕ ಕುಸಿತ ಇಡೀ ದೇಶವನ್ನು ಚಿಂತೆಗೀಡು ಮಾಡಿದ್ದರೆ, ಮತ್ತೊಂದು ಕಡೆ ಕೇಂದ್ರ ಸರ್ಕಾರದ ಕೆಲ ಸಚಿವರು ಆರ್ಥಿಕ ಸ್ಥಿತಿಗತಿ ಕುರಿತು ಅಸಂಬದ್ಧ ಹೇಳಿಕೆ ನೀಡುತ್ತಾ ಪ್ರಧಾನಿ ಮೋದಿಗೆ ಮುಜುಗರ ತಂದಿಡುತ್ತಿದ್ದಾರೆ.

ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪಿದೆ ಎಂದು ಕೆಲವರು ಗುಲ್ಲೆಬ್ಬಿಸುತ್ತಿದ್ದು, ಆರ್ಥಿಕ ಸ್ಥಿತಿಗತಿ ಚೆನ್ನಾಗಿದೆ ಎಂಬುದಕ್ಕೆ ಬಾಲಿವುಡ್ ಗಳಿಸುತ್ತಿರುವ ಗಳಿಕೆಯೇ ಸಾಕ್ಷಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಕಳೆದ ಅಕ್ಟೋಬರ್ 2ರಂದು ಗಾಂಧಿ ಜಯಂತಿ ನಿಮಿತ್ತ ರಾಷ್ಟ್ರೀಯ ರಜಾದಿನದಂದು, ಬಾಲಿವುಡ್’ನ 3 ಚಿತ್ರಗಳು 120 ಕೋಟಿ ರೂ. ಬಾಚಿವೆ. ದೇಶದ ಅರ್ಥ ವ್ಯವಸ್ಥೆ ಸರಿ ದಾರಿಯಲ್ಲಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ರವಿಶಂಕರ್ ಪ್ರಸಾದ್ ನುಡಿದಿದ್ದಾರೆ.

ಮುಂಬೈನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ರವಿಶಂಕರ್ ಪ್ರಸಾದ್, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ದೇಶದ ಅರ್ಥ ವ್ಯವಸ್ಥೆಯನ್ನು ಬಾಲಿವುಡ್ ಚಿತ್ರ ಗಳಿಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ.

ಇನ್ನು ರವಿಶಂಕರ್ ಪ್ರಸಾದ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಆರ್ಥಿಕ ಸ್ಥಿತಿ ಹಳಿ ತಪ್ಪಿರುವ ನಡುವೆ ಕೇಂದ್ರ ಸಚಿವರು ಅಸಂಬದ್ಧ ಹೇಳಿಕೆ ನೀಡುತ್ತಿರುವುದು ಅವರ ಸೊಕ್ಕನ್ನು ತೋರಿಸುತ್ತದೆ ಎಂದು ಪ್ರತಿಪಕ್ಷಗಳು ಹರಿಹಾಯ್ದಿವೆ.

ಜನ ಓಲಾ, ಉಬರ್’ಗಳಲ್ಲಿ ಹೆಚ್ಚಾಗಿ ಓಡಾಡುವುದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.