ಹೂಡಿಕೆದಾರರಿಗೆ ಶುಭಸುದ್ದಿ; ಈ ತಿಂಗಳ ಕೊನೆಯಲ್ಲಿ ಪಿಪಿಎಫ್ ಬಡ್ಡಿದರ ಏರಿಕೆ ಸಾಧ್ಯತೆ
ಪಿಪಿಎಫ್, ಎನ್ ಎಸ್ ಸಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಈ ತಿಂಗಳ ಕೊನೆಯಲ್ಲಿ ಪರಿಷ್ಕರಣೆಯಾಗಲಿದೆ. ಅಕ್ಟೋಬರ್ -ಡಿಸೆಂಬರ್ ಅವಧಿಯ ಬಡ್ಡಿದರವನ್ನು ಸೆ29 ಅಥವಾ 30ರಂದು ಘೋಷಣೆ ಮಾಡಲಾಗುತ್ತದೆ. 2020ರ ಏಪ್ರಿಲ್-ಜೂನ್ ತ್ರೈಮಾಸಿಕದಿಂದ ಯಾವುದೇ ಬದಲಾವಣೆ ಕಾಣದ ಪಿಪಿಎಫ್ ಬಡ್ಡಿದರದಲ್ಲಿ ಈ ಬಾರಿಯಾದರೂ ಏರಿಕೆಯಾಗಬಹುದು ಎಂಬ ನಿರೀಕ್ಷೆಯಿದೆ.

Business Desk:ಕಳೆದ ತಿಂಗಳು ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಈ ನಡುವೆ ದೇಶದಲ್ಲಿ ಹಣದುಬ್ಬರ ದರ ನಿಗದಿತ ಮಟ್ಟಕ್ಕಿಂತ ಹೆಚ್ಚೇ ಇದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಆರ್ ಬಿಐ ರೆಪೋ ದರದಲ್ಲಿ ಭಾರೀ ಹೆಚ್ಚಳ ಮಾಡಿದ ಕಾರಣ ಬ್ಯಾಂಕ್ ಠೇವಣಿಗಳು, ಪಿಪಿಎಫ್ , ಎನ್ ಎಸ್ ಸಿ ಹಾಗೂ ಕೆವಿಪಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚೇ ಇದೆ. ಹೀಗಿರುವಾಗ ಪಿಪಿಎಫ್, ಎನ್ ಎಸ್ ಸಿ ಹಾಗೂ ಕೆವಿಪಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಈ ತಿಂಗಳ ಕೊನೆಯಲ್ಲಿ ಅಂದರೆ ಸೆಪ್ಟೆಂಬರ್ 29 ಅಥವಾ 30ರಂದು ಪರಿಷ್ಕರಿಸುವ ಸಾಧ್ಯತೆಯಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ. ಈ ಹಿಂದೆ 2023ರ ಜುಲೈ-ಸೆಪ್ಟೆಂಬರ್ ಅವಧಿಗೆ ಬಡ್ಡಿದರ ಏರಿಕೆ ಮಾಡಲಾಗಿತ್ತು. ಅಂದರೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೊನೆಯದಾಗಿ ಜೂನ್ 30ರಂದು ಪರಿಷ್ಕರಿಸಲಾಗಿತ್ತು. ಹೀಗಾಗಿ ಈ ತಿಂಗಳ ಕೊನೆಯಲ್ಲಿ ಅಕ್ಟೋಬರ್ -ಡಿಸೆಂಬರ್ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ.
ಒಂದು ವರ್ಷ ಹಾಗೂ 2 ವರ್ಷಗಳ ಅವಧಿಯ ಅಂಚೆ ಕಚೇರಿ ಟೈಮ್ ಡೆಫಾಸಿಟ್ ಬಡ್ಡಿದರದಲ್ಲಿ ಸರ್ಕಾರ 10 ಬೇಸಿಸ್ ಪಾಯಿಂಟ್ಸ್ ಏರಿಕೆ ಮಾಡಿತ್ತು. ಇದರಿಂದ ಈ ಎರಡೂ ಅವಧಿಯ ಟೈಮ್ ಡೆಫಾಸಿಟ್ ಬಡ್ಡಿದರ ಕ್ರಮವಾಗಿ ಶೇ.6.9 ಹಾಗೂ ಶೇ.7ಕ್ಕೆ ಏರಿಕೆಯಾಗಿತ್ತು. ಇನ್ನು ಐದು ವರ್ಷಗಳ ಅವಧಿಯ ರಿಕರಿಂಗ್ ಡೆಫಾಸಿಟ್ (ಆರ್ ಡಿ) ಬಡ್ಡಿದರವನ್ನು 30 ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡಲಾಗಿತ್ತು. ಇದರಿಂದ ಆರ್ ಡಿ ಬಡ್ಡಿದರ ಶೇ.6.5ಕ್ಕೆ ಹೆಚ್ಚಳವಾಗಿತ್ತು. ಆದರೆ, ಇತರ ಯೋಜನೆಗಳ ಬಡ್ಡಿದರದಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡಿಲ್ಲ.
ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಸೆ.30 ಅಂತಿಮ ಗಡುವು, ತಪ್ಪಿದ್ರೆ ಖಾತೆ ನಿಷ್ಕ್ರಿಯ
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ನಿರಂತರ 9 ತ್ರೈಮಾಸಿಕದ ತನಕ ಬದಲಾಗಿರಲಿಲ್ಲ. ಅಂದರೆ 2020-21ನೇ ಸಾಲಿನ ದ್ವಿತೀಯ ತ್ರೈಮಾಸಿಕದಿಂದ ಹಿಡಿದು 2022-23ನೇ ಸಾಲಿನ ದ್ವಿತೀಯ ತ್ರೈಮಾಸಿಕದ ತನಕ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಏನಿದು ಸಣ್ಣ ಉಳಿತಾಯ ಯೋಜನೆಗಳು?
ನಾಗರಿಕರಲ್ಲಿ ನಿಯಮಿತ ಉಳಿತಾಯದ ಗುಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳನ್ನು ನಿರ್ವಹಣೆ ಮಾಡುತ್ತಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಮೂರು ವರ್ಗಗಳಿವೆ-ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತೆ ಯೋಜನೆಗಳು ಹಾಗೂ ಮಾಸಿಕ ಆದಾಯ ಯೋಜನೆ. ಉಳಿತಾಯ ಠೇವಣಿಯಲ್ಲಿ 1-3 ವರ್ಷಗಳ ಅವಧಿಯ ಟೈಮ್ ಡೆಫಾಸಿಟ್ ಹಾಗೂ 5 ವರ್ಷಗಳ ಅವಧಿಯ ರಿಕರಿಂಗ್ ಡೆಫಾಸಿಟ್ ಸೇರಿವೆ. ಇದರಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಹಾಗೂ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಕೂಡ ಸೇರಿವೆ. ಸಾಮಾಜಿಕ ಭದ್ರತೆ ಯೋಜನೆಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಖಾತೆ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿವೆ. ಇನ್ನು ಮಾಸಿಕ ಆದಾಯ ಯೋಜನೆಯಲ್ಲಿ ಮಾಸಿಕ ಆದಾಯ ಖಾತೆ ಸೇರಿದೆ.
ಅಂಚೆ ಕಚೇರಿ ಉಳಿತಾಯ ಯೋಜನೆ ಹೂಡಿಕೆ ನಿಯಮಗಳಲ್ಲಿ ಬದಲಾವಣೆ;ಕೆವೈಸಿ ಜೊತೆಗೆ ಆದಾಯದ ದಾಖಲೆಯೂ ಅಗತ್ಯ
ಸಣ್ಣ ಉಳಿತಾಯ ಯೋಜನೆಗೆ ಆಧಾರ್ ಲಿಂಕ್ ಮಾಡಲು ಸೆ.31 ಗಡುವು
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ), ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್) ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 31 ಅಂತಿಮ ಗಡುವಾಗಿದೆ. ಒಂದು ವೇಳೆ ಈ ದಿನಾಂಕದೊಳಗೆ ಆಧಾರ್ ಲಿಂಕ್ ಮಾಡದಿದ್ದರೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳು ನಿಷ್ಕ್ರಿಯಗೊಳ್ಳಲಿವೆ. ಈ ಸಂಬಂಧ 2023ರ ಮಾರ್ಚ್ 31ರಂದು ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿತ್ತು.ಪಿಪಿಎಫ್, ಎನ್ ಎಸ್ ಸಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆ ತೆರೆಯಲು ಆಧಾರ್ ಸಂಖ್ಯೆ ಕಡ್ಡಾಯ ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.