ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಸೆ.30 ಅಂತಿಮ ಗಡುವು, ತಪ್ಪಿದ್ರೆ ಖಾತೆ ನಿಷ್ಕ್ರಿಯ
ಪಿಪಿಎಫ್, ಎನ್ ಎಸ್ ಸಿ ಅಥವಾ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 30 ಅಂತಿಮ ಗಡುವು. ಒಂದು ವೇಳೆ ಈ ಗಡುವಿನೊಳಗೆ ಲಿಂಕ್ ಮಾಡದಿದ್ರೆ ಖಾತೆ ನಿಷ್ಕ್ರಿಯಗೊಳ್ಳಲಿದೆ.
ನವದೆಹಲಿ (ಸೆ.5): ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ), ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್) ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 31 ಅಂತಿಮ ಗಡುವಾಗಿದೆ. ಒಂದು ವೇಳೆ ಈ ದಿನಾಂಕದೊಳಗೆ ಆಧಾರ್ ಲಿಂಕ್ ಮಾಡದಿದ್ದರೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳು ನಿಷ್ಕ್ರಿಯಗೊಳ್ಳಲಿವೆ. ಈ ಸಂಬಂಧ 2023ರ ಮಾರ್ಚ್ 31ರಂದು ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿತ್ತು.ಪಿಪಿಎಫ್, ಎನ್ ಎಸ್ ಸಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆ ತೆರೆಯಲು ಆಧಾರ್ ಸಂಖ್ಯೆ ಕಡ್ಡಾಯ ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಹಾಗೆಯೇ ಈಗಾಗಲೇ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿರೋರು ಆಧಾರ್ ಸಂಖ್ಯೆ ನೀಡುವಂತೆ ತಿಳಿಸಿತ್ತು. ಈಗಾಗಲೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಖಾತೆ ಹೊಂದಿದ್ದು, ಆಧಾರ್ ಸಂಖ್ಯೆ ಒದಗಿಸಲು ವಿಫಲರಾಗಿರೋರ ಖಾತೆಯನ್ನು 2023ರ ಅಕ್ಟೋಬರ್ 1ರಿಂದ ಫ್ರೀಜ್ ಮಾಡಲಾಗುತ್ತದೆ ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಆಧಾರ್ ಲಿಂಕ್ ಮಾಡದಿದ್ರೆ ಖಾತೆ ನಿಷ್ಕ್ರಿಯ
ಪಿಪಿಎಫ್, ಎನ್ ಎಸ್ ಸಿ, ಕಿಸಾನ್ ವಿಕಾಸ್ ಪತ್ರ, ಎಸ್ ಸಿಎಸ್ ಎಸ್ ಸೇರಿದಂತೆ ಅಂಚೆ ಕಚೇರಿ ಹಾಗೂ ಬ್ಯಾಂಕ್ ಗಳಲ್ಲಿರುವ ಸಣ್ಣ ಉಳಿತಾಯ ಯೋಜನೆಗಳ ಖಾತೆಗೆ ಆಧಾರ್ ಲಿಂಕ್ ಮಾಡೋದು ಕಡ್ಡಾಯ. ಸಣ್ಣ ಉಳಿತಾಯ ಯೋಜನೆ ಖಾತೆ ತೆರೆಯುವಾಗ ಆಧಾರ್ ಸಂಖ್ಯೆ ಸಲ್ಲಿಕೆ ಮಾಡದಿದ್ರೆ ಅಂಥವರು 2023ರ ಸೆಪ್ಟೆಂಬರ್ 30ರೊಳಗೆ ಆಧಾರ್ ಸಂಖ್ಯೆ ಸಲ್ಲಿಕೆ ಮಾಡಬೇಕು. . ಆಧಾರ್ ಸಂಖ್ಯೆ ಇಲ್ಲದ ಸಂದರ್ಭದಲ್ಲಿಆಧಾರ್ ನೋಂದಣಿ ಸಂಖ್ಯೆಯನ್ನು ಕೂಡ ನೀಡಬಹುದಾಗಿದೆ. ಆಧಾರ್ ಸಂಖ್ಯೆ ಒದಗಿಸಲು ವಿಫಲರಾಗಿರೋರ ಖಾತೆಯನ್ನು 2023ರ ಅಕ್ಟೋಬರ್ 1ರಿಂದ ಫ್ರೀಜ್ ಮಾಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಆಧಾರ್ ಸಂಖ್ಯೆ ಇಲ್ಲದೆ ನೀವು ಯಾವುದೇ ಸಣ್ಣ ಉಳಿತಾಯ ಯೋಜನೆ ಖಾತೆ ತೆರೆಯಲು ಬಯಸಿದ್ರೆ ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ಸಂಖ್ಯೆ ಸಲ್ಲಿಕೆ ಮಾಡಬೇಕು. ಆರು ತಿಂಗಳು ಕಳೆದ ಬಳಿಕವೂ ಆಧಾರ್ ಸಂಖ್ಯೆ ಸಲ್ಲಿಕೆ ಮಾಡದಿದ್ರೆ ಅಂಥವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
EPF ಖಾತೆ ಮಾಹಿತಿ ಅಪ್ಡೇಟ್ ಮಾಡಲು ಹೊಸ ನಿಯಮ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
ಸಣ್ಣ ಉಳಿತಾಯ ಯೋಜನೆ ಖಾತೆ ನಿಷ್ಕ್ರಿಯಗೊಂಡ್ರೆ ಏನಾಗುತ್ತೆ?
ಸೆ.30ರೊಳಗೆ ನೀವು ಸಂಬಂಧಪಟ್ಟ ಅಂಚೆ ಕಚೇರಿ ಅಥವಾ ಬ್ಯಾಂಕ್ ಗೆ ಆಧಾರ್ ಸಂಖ್ಯೆ ಸಲ್ಲಿಕೆ ಮಾಡದಿದ್ರೆ ಪಿಪಿಎಫ್, ಎನ್ ಎಸ್ ಸಿ ಅಥವಾ ಎಸ್ ಸಿಎಸ್ ಎಸ್ ಸೇರಿದಂತೆ ಸಣ್ಣ ಉಳಿತಾಯ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ. ಒಂದು ವೇಳೆ ನಿಮ್ಮ ಖಾತೆ ನಿಷ್ಕ್ರಿಗೊಂಡರೆ ನಿಮಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಪ್ರಯೋಜನಗಳು ಸಿಗೋದಿಲ್ಲ. ಅಲ್ಲದೆ, ಈ ಉಳಿತಾಯ ಯೋಜನೆಗಳ ಮೇಲೆ ಸಾಲ ತೆಗೆಯಲು ಹಾಗೂ ಅವಧಿಪೂರ್ಣ ವಿತ್ ಡ್ರಾ ಮಾಡಲು ಕೂಡ ಸಾಧ್ಯವಾಗೋದಿಲ್ಲ. ಬಾಕಿಯಿರುವ ಬಡ್ಡಿ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗೋದಿಲ್ಲ. ಇನ್ನು ಸಣ್ಣ ಉಳಿತಾಯ ಯೋಜನೆ ಮೆಚ್ಯುರಿಟಿ ಆಗಿದ್ದರೂ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗೋದಿಲ್ಲ.
ನಿಮ್ಮಆಧಾರ್ ಕಾರ್ಡ್ ಎಲ್ಲೆಲ್ಲ ಬಳಕೆಯಾಗಿದೆ? ದುರ್ಬಳಕೆ ಆಗಿದೆಯಾ? ತಿಳಿಯಲು ಹೀಗೆ ಮಾಡಿ
ಆಧಾರ್ ಲಿಂಕ್ ಮಾಡೋದು ಹೇಗೆ?
ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಅನೇಕ ವಿಧಾನಗಳಿವೆ. ಖಾತೆದಾರರು ಸಂಬಂಧಪಟ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ಲಿಂಕ್ ಮಾಡಬಹುದು. ಇನ್ನೂ ಕೆಲವು ಬ್ಯಾಂಕ್ ಗಳು ಆನ್ ಲೈನ್ ಮೂಲಕ ಆಧಾರ್ ಹಾಗೂ ಖಾತೆಗಳನ್ನು ಲಿಂಕ್ ಮಾಡುವ ಅವಕಾಶ ನೀಡಿವೆ. ಅದನ್ನು ಕೂಡ ಬಳಸಿ ಮಾಡಬಹುದು.