Asianet Suvarna News Asianet Suvarna News

ಅಂಚೆ ಕಚೇರಿ ಉಳಿತಾಯ ಯೋಜನೆ ಹೂಡಿಕೆ ನಿಯಮಗಳಲ್ಲಿ ಬದಲಾವಣೆ;ಕೆವೈಸಿ ಜೊತೆಗೆ ಆದಾಯದ ದಾಖಲೆಯೂ ಅಗತ್ಯ

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಆದರೆ, ಯೋಜನೆಗಳಿಗೆ ಸಂಬಂಧಿಸಿದ ಹೂಡಿಕೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸಣ್ಣ ಉಳಿತಾಯ ಯೋಜನೆಗಳ ಖಾತೆ ತೆರೆಯಲು ಈಗ ಕೆವೈಸಿ ಜೊತೆಗೆ ಆದಾಯ ದೃಢೀಕರಣ ದಾಖಲೆ ಕೂಡ ಅಗತ್ಯ.

Post Office Saving Schemes New investment rules KYC requirements unveiled check details anu
Author
First Published May 28, 2023, 3:38 PM IST

Business Desk:ತಿಂಗಳ ಆದಾಯದಲ್ಲಿ ಒಂದಿಷ್ಟು ಉಳಿತಾಯ ಮಾಡಬೇಕು ಎಂಬ ಯೋಚನೆ ಮನಸ್ಸಿನಲ್ಲಿ ಬಂದ ತಕ್ಷಣ ಎಲ್ಲಿ, ಯಾವ ಯೋಜನೆಯಲ್ಲಿ ಹೂಡಿಕೆ ಮಾಡೋದು ಎಂಬ ಪ್ರಶ್ನೆಯೂ ಕಾಡುತ್ತದೆ. ಹೂಡಿಕೆ ಅಥವಾ ಉಳಿತಾಯ ಮಾಡುವಾಗ ಪ್ರತಿಯೊಬ್ಬರೂ ಎರಡು ವಿಚಾರಗಳನ್ನು ಗಮನಿಸುತ್ತಾರೆ. ಒಂದು ಸುರಕ್ಷತೆ, ಇನ್ನೊಂದು ಉತ್ತಮ ರಿಟರ್ನ್. ಈ ಎರಡೂ ವಿಚಾರಗಳಲ್ಲಿ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳು ಬೆಸ್ಟ್. ಅಂಚೆ ಕಚೇರಿಯ ಉಳಿತಾಯ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬೆಂಬಲವಿರುವ ಕಾರಣ ಇಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಇನ್ನು ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಬಡ್ಡಿದರ ಕೂಡ ಸಿಗುತ್ತಿದೆ. ಹೀಗಾಗಿ ಉತ್ತಮ ರಿಟರ್ನ್ಸ್ ಗ್ಯಾರಂಟಿ. ಆದರೆ, ಇತ್ತೀಚಿನ ದಿನಗಳಲ್ಲಿನ ಕೆಲವು ಬೆಳವಣಿಗೆಗಳ ಕಾರಣದಿಂದ ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿರುವ ಹೂಡಿಕೆದಾರರಿಗೆ ಕೆವೈಸಿ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿ ಅಂಚೆ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ. ಹಾಗಾದ್ರೆ ಏನೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ? ಇಲ್ಲಿದೆ ಮಾಹಿತಿ.

ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಹೂಡಿಕೆ ಮಾಡುವ ಹೂಡಿಕೆದಾರರು ಕೆವೈಸಿ ದಾಖಲೆಗಳ ಜೊತೆಗೆ ಆದಾಯ ದೃಢೀಕರಣ ದಾಖಲೆಯನ್ನು ನೀಡಬೇಕು. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ನಿರ್ದಿಷ್ಟ ವರ್ಗದ ಹೂಡಿಕೆದಾರರಿಂದ ಆದಾಯ ದೃಢೀಕರಣ ದಾಖಲೆ ಸಂಗ್ರಹಿಸುವಂತೆ ಅಂಚೆ ಇಲಾಖೆ ಎಲ್ಲ ಅಂಚೆ ಕಚೇರಿಗಳಿಗೆ ನಿರ್ದೇಶನ ನೀಡಿದೆ. ಈ ತಿದ್ದುಪಡಿಯ ಹಿಂದಿನ ಗುರಿ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ತಡೆಯುವುದು ಹಾಗೂ ಅಕ್ರಮ ಹಣ ದಂಧೆಗೆ ಕಡಿವಾಣ  ಹಾಕುವುದು. ಹೀಗಾಗಿ ಈಗ ಹೂಡಿಕೆದಾರರು ಆಧಾರ್ ಹಾಗೂ ಪ್ಯಾನ್ ಮಾಹಿತಿಯ ಜೊತೆಗೆ ಆದಾಯದ ಪುರಾವೆ ನೀಡುವುದು ಕೂಡ ಕಡ್ಡಾಯವಾಗಿದೆ.

Post Office RD:ಅಧಿಕ ರಿಟರ್ನ್ ಗಳಿಸಲು ಈ ಖಾತೆಯಲ್ಲಿ ತಿಂಗಳಿಗೆ ಎಷ್ಟು ಹೂಡಿಕೆ ಮಾಡ್ಬೇಕು?

ಇನ್ನು ಈ ಸುತ್ತೋಲೆಯಲ್ಲಿ ಹೂಡಿಕೆದಾರರನ್ನು ರಿಸ್ಕ್ ಆಧಾರದಲ್ಲಿ ಮೂರು ವಿಭಿನ್ನ ವರ್ಗಗಳಲ್ಲಿ ವಿಂಗಡಿಸಲಾಗಿದೆ. ಈ ವರ್ಗಗಳ ಆಧಾರದಲ್ಲಿ ಅವರಿಗೆ ನಿಯಮಗಳು ಹಾಗೂ ನಿಬಂಧನೆಗಳನ್ನು ರೂಪಿಸಲಾಗಿದೆ. ಅಂಚೆ ಕಚೇರಿಯ ಯಾವುದೇ ಯೋಜನೆಯಲ್ಲಿ 50,000ರೂ. ಮೊತ್ತ ಮೀರದಂತೆ ಖಾತೆ ತೆರೆಯುವ  ಹಾಗೂ ಆ ಖಾತೆಯಲ್ಲಿ 50,000ರೂ.  ಮೀರದಂತೆ ಬ್ಯಾಲೆನ್ಸ್ ನಿರ್ವಹಣೆ ಮಾಡುವ ಹೂಡಿಕೆದಾರರನ್ನು ಕಡಿಮೆ ಅಪಾಯದ ಹೂಡಿಕೆದಾರರು ಎಂದು ಪರಿಗಣಿಸಲಾಗುತ್ತದೆ.

ಇನ್ನು ಅಂಚೆ ಕಚೇರಿಯ ಯಾವುದೇ ಯೋಜನೆಯ ಖಾತೆ ತೆರೆದು ಅದರಲ್ಲಿ 50,000ರೂ. ಮೀರಿದ ಆದರೆ, 10ಲಕ್ಷ ರೂ.ಗಿಂತ ಕಡಿಮೆ ಹಣ ಹೊಂದಿರುವ ಗ್ರಾಹಕರನ್ನು ಮಧ್ಯಮ ಅಪಾಯದ ಹೂಡಿಕೆದಾರರು ಎಂದು ಪರಿಗಣಿಸಲಾಗುತ್ತದೆ. ಇನ್ನು ಎಲ್ಲ ಯೋಜನೆಗಳಲ್ಲಿನ ಒಟ್ಟು ಬ್ಯಾಲೆನ್ಸ್  10ಲಕ್ಷ ರೂ.ಗಿಂತ ಕಡಿಮೆಯಿದ್ದು, 50,000ರೂ. ಮೀರಿದ್ದರೆ ಆಗ ಅದನ್ನು ಕೂಡ ಮಧ್ಯಮ ಅಪಾಯದ ಹೂಡಿಕೆ ಎಂದು ಕರೆಯಲಾಗುತ್ತದೆ. ಇನ್ನು ಈ ಯೋಜನೆಗಳಲ್ಲಿನ ಹೂಡಿಕೆ ಒಮ್ಮೆ 10ಲಕ್ಷ ರೂ. ಗಡಿ ದಾಟಿದ ಬಳಿಕ ಅದನ್ನು ಅತ್ಯಂತ ಅಪಾಯದ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.

SBI Vs Post Office: ಯಾವ ಎಫ್ ಡಿಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ಸ್ ಸಿಗುತ್ತೆ?

ಇ-ಪಾಸ್ ಬುಕ್ ಸೌಲಭ್ಯ
ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಕೇಂದ್ರ ಸರ್ಕಾರ 2022ರಲ್ಲಿ ಎಲೆಕ್ಟ್ರಾನಿಕ್ ಪಾಸ್ ಬುಕ್ ಸೌಲಭ್ಯ ಪರಿಚಯಿಸಿತು. ಇ-ಪಾಸ್ ಪುಸ್ತಕದ ಮೂಲಕ ಖಾತೆ ಬ್ಯಾಲೆನ್ಸ್ ಚೆಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1: ಅಧಿಕೃತ ವೆಬ್ ಸೈಟ್ www.indiapost.gov.in ಭೇಟಿ ನೀಡಿ.
ಹಂತ 2: ಅಂಚೆ ಕಚೇರಿ ಉಳಿತಾಯ ಯೋಜನೆ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಇ-ಪಾಸ್ ಬುಕ್ ಆಯ್ಕೆ ಆರಿಸಿ.
ಹಂತ 4: ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ.
ಹಂತ 5: ನಿಮ್ಮ ಖಾತೆ ಬ್ಯಾಲೆನ್ಸ್ ಚೆಕ್ ಮಾಡಿ.

Follow Us:
Download App:
  • android
  • ios