ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.), ರಿಲಯನ್ಸ್ ಪವರ್ ಹಾಗೂ ಇತರ 10 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.
ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.), ರಿಲಯನ್ಸ್ ಪವರ್ ಹಾಗೂ ಇತರ 10 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.
ಟೆಂಡರ್ ಪಡೆಯಲು 68 ಕೋಟಿ ರು. ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಚಾರ್ಜ್‌ಶೀಟ್ ದಾಖಲಾಗಿದೆ.
ರಿಲಯನ್ಸ್ ಪವರ್‌ನ ಮಾಜಿ ಸಿಎಫ್‌ಒ ಅಶೋಕ್ ಕುಮಾರ್ ಪಾಲ್, ರಿಲಯನ್ಸ್ ಎನ್‌ಯು ಬಿಇಎಸ್ಎಸ್ ಲಿಮಿಟೆಡ್ ಮತ್ತು ರೋಸಾ ಪವರ್ ಸಪ್ಲೈ ಕಂಪನಿ ಲಿ.(ರಿಲಯನ್ಸ್ ಪವರ್‌ನ ಸಬ್ಸಿಡರಿಗಳು), ರಿಲಯನ್ಸ್ ಗ್ರೂಪ್‌ನ ಎಕ್ಸಿಕ್ಯುಟಿವ್ ಪುನೀತ್ ನರೇಂದ್ರ ಗಾರ್ಗ್, ಒಡಿಶಾ ಮೂಲದ ನಕಲಿ ಕಂಪನಿ ಬಿಸ್ವಾಲ್ ಟ್ರೇಡ್‌ಲಿಂಕ್ ಪ್ರೈ.ಲಿ, ಅದರ ಎಂಡಿ ಪಾರ್ಥಸಾರಥಿ ಬಿಸ್ವಾಲ್, ಟ್ರೇಡ್ ಫೈನಾನ್ಸಿಂಗ್ ಕನ್ಸಲ್ಟೆಂಟ್ ಅಮರ್‌ನಾಥ್ ದತ್ತಾ, ಬಿಯೋಥೇನ್ ಕೆಮಿಕಲ್ಸ್ ಪ್ರೈ.ಲಿ, ರವಿಂದರ್ ಪಾಲ್ ಸಿಂಗ್ ಛಡ್ಡಾ ಮತ್ತು ಮನೋಜ್ ಬೈಯ್ಯಾಸಾಹೇಬ್, ಪೊಂಗ್ಡೆ ಅವರನ್ನು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ.
ರಿಲಯನ್ಸ್ ಪವರ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಎನ್‌ಯು ಬಿಇಎಸ್ಎಸ್ ಲಿಮಿಟೆಡ್ ಕಂಪನಿಯು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ(ಎಸ್‌ಇಸಿಐ)ದಿಂದ ಟೆಂಡರ್ ಪಡೆಯಲು 68.2 ಕೋಟಿ ರು. ಮೌಲ್ಯದ ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ ಆರೋಪ ಎದುರಿಸುತ್ತಿದೆ. ಈ ಕಳ್ಳಾಟ ಬಯಲಾಗುತ್ತಿದ್ದಂತೆ ರಿಲಯನ್ಸ್ ಗ್ರೂಪ್ ಒಂದೇ ದಿನದಲ್ಲಿ ಐಡಿಬಿಐ ಬ್ಯಾಂಕ್ ಮೂಲಕ ಬ್ಯಾಂಕ್ ಗ್ಯಾರಂಟಿ ಸಲ್ಲಿಸಿತ್ತು.
ಆದರೆ, ಎಸ್‌ಇಸಿಐ ಆ ಬ್ಯಾಂಕ್ ಗ್ಯಾರಂಟಿ ಸ್ವೀಕರಿಸಲು ನಿರಾಕರಿಸಿತ್ತು. ರಿಲಯನ್ಸ್ ಎನ್‌ಯು ಬಿಇಎಸ್ಎಸ್ ಲಿಮಿಟೆಡ್ ಎಲ್-2 ಬಿಡ್ಡರ್ ಆಗಿ ಹೊರಹೊಮ್ಮಿದ ಕಾರಣ ಈ ಟೆಂಡರ್ ಅನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಎಸ್‌ಬಿಐ ಕೋಲ್ಕತಾ ಬ್ಯಾಂಕ್‌ನಿಂದ ವಿದೇಶಿ ಬ್ಯಾಂಕ್ ಗ್ಯಾರಂಟಿ ನೀಡಲೂ ಮುಂದೆ ಬಂದಿದ್ದರು ಎಂದು ಆರೋಪಿಸಲಾಗಿದೆ. ಆ ಬಳಿಕ ಬಿಸ್ವಾಲ್ ಕಂಪನಿ ವಿರುದ್ಧ ಅನಿಲ್ ಅಂಬಾನಿ ಸಂಸ್ಥೆ ಆರೋಪ ಮಾಡಿತ್ತು.
ಪರೀಕ್ಷಾ ಪೇ ಚರ್ಚಾದ 9 ನೇ ಆವೃತ್ತಿ, ನೋಂದಣಿ ಆರಂಭ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ವಾರ್ಷಿಕ ಪರೀಕ್ಷಾ ಪೇ ಚರ್ಚಾದ ಒಂಬತ್ತನೇ ಆವೃತ್ತಿಯು ಜನವರಿ 2026 ರಲ್ಲಿ ನಡೆಯಲಿದ್ದು, ನೋಂದಣಿಗಳು ಆರಂಭವಾಗಿವೆ, ಜ.11ರವರೆಗೆ ನೋಂದಣಿ ಮಾಡಬಹುದಾಗಿದೆ.
ಭಾಗವಹಿಸುವವರ ಆಯ್ಕೆಗಾಗಿ, ಜ.11 ರವರೆಗೆ MyGov ಪೋರ್ಟಲ್‌ನಲ್ಲಿ ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುವ ಆನ್‌ಲೈನ್ ಸ್ಪರ್ಧೆ ಆಯೋಜಿಸಲಾಗುತ್ತಿದೆ. 6ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಸರ್ಕಾರ ಹೇಳಿದೆ.ಈ ವರ್ಷದ ಫೆ.10 ರಂದು ಪರೀಕ್ಷಾ ಪೆ ಚರ್ಚಾದ 8ನೇ ಆವೃತ್ತಿಯನ್ನು ಪ್ರಸಾರವಾಗಿತ್ತು.
ಇಂಡಿಯಾ ಬ್ಲಾಕ್ ಲೈಫ್ ಸಪೋರ್ಟ್‌ನಲ್ಲಿದೆ: ಒಮರ್ ಅಬ್ದುಲ್ಲಾ
ನವದೆಹಲಿ: ‘ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ ಬ್ಲಾಕ್’ ಲೈಫ್ ಸಪೋರ್ಟ್‌ನಲ್ಲಿದೆ. ಆಂತರಿಕ ಕಚ್ಚಾಟಗಳು ಹಾಗೂ ಚುನಾವಣೆಗಳಲ್ಲಿ ಬಿಜೆಪಿಗೆ ಸಿಗುತ್ತಿರುವ ಸಾಲು ಸಾಲು ಗೆಲುವುಗಳಿಂದಾಗಿ ಒಕ್ಕೂಟವು ಐಸಿಯುಗೆ ತೆರಳುವ ಅಪಾಯವನ್ನೂ ಎದುರಿಸುತ್ತಿದೆ’ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕುಟುಕಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ನಾಯಕತ್ವ ಶೃಂಗದಲ್ಲಿ ಮಾತನಾಡಿದ ಅವರು, ‘ನಾವು (ಇಂಡಿಯಾ ಒಕ್ಕೂಟ) ಒಂದು ರೀತಿಯಲ್ಲಿ ಲೈಫ್ ಸಪೋರ್ಟ್‌ನಲ್ಲಿದ್ದೇವೆ. ಒಮ್ಮೊಮ್ಮೆ ಕೆಲವರು ನಮಗೆ ಸಣ್ಣ ಶಾಕ್ ನೀಡುತ್ತಾರೆ. ಆಗ ನಾವು ಮತ್ತೆ ಎದ್ದು ಕೂರುತ್ತೇವೆ. ಆ ಬಳಿಕ ದುರಾದೃಷ್ಟಕ್ಕೆ ಬಿಹಾರ ಚುನಾವಣೆಯಂಥ ಫಲಿತಾಂಶಗಳು ನಮ್ಮನ್ನು ಮತ್ತೆ ಕುಸಿದು ಬೀಳುವಂತೆ ಮಾಡುತ್ತದೆ. ಆಗ ಯಾರಾದರೂ ಒಬ್ಬರು ನಮ್ಮನ್ನು ಐಸಿಯುಗೆ ಕರೆದೊಯ್ಯಬೇಕಾಗುತ್ತದೆ’ ಎಂದರು.ನಿತೀಶ್ ತಳ್ಳಿದ್ದೇ ನಾವು:
ಇದೇ ವೇಳೆ, ‘ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ತಳ್ಳಿದವರು ನಾವೇ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಇಂಡಿಯಾ ಬ್ಲಾಕ್ ಮೈತ್ರಿಕೂಟವು ಒಗ್ಗಟ್ಟಿನ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಬಿಜೆಪಿ ಚುನಾವಣೆಯನ್ನು ಶಿಸ್ತುಬದ್ಧ ವಿಧಾನದ ಮೂಲಕ ಎದುರಿಸುತ್ತದೆ. ಅವರ ಜತೆಗೆ ಸ್ಪರ್ಧಿಸಲು ಇಂಡಿಯಾ ಬ್ಲಾಕ್‌ಗೆ ಸಾಧ್ಯವಾಗುತ್ತಿಲ್ಲ. ಚುನಾವಣೆಯೇ ತನ್ನ ಜೀವನ ಅನ್ನುವ ರೀತಿ ಬಿಜೆಪಿ ಹೋರಾಡುತ್ತದೆ. ಆದರೆ, ನಾವು ಕೆಲವು ಬಾರಿ ಚುನಾವಣೆಯನ್ನು ಲಘುವಾಗಿ ತೆಗೆದುಕೊಂಡು ಬಿಡುತ್ತೇವೆ’ ಎಂದರು.


