ಪ್ರಧಾನಿ ಕಚೇರಿಯಿಂದ ತುರ್ತು ಸಭೆ| ಜೆಟ್ ಏರ್‌ವೇಸ್ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನ| ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆ| ಜೆಟ್ ಏರ್‌ವೇಸ್ ಸಂಸ್ಥೆಯ ಷೇರು ಖರೀದಿಸಲು 5 ಕಂಪನಿಗಳು ಆಸಕ್ತಿ| ಜೆಟ್ ಏರ್‌ವೇಸ್ನಿಂದ 10 ವಿಮಾನಗಳು ಮಾತ್ರ ಹಾರಾಟ|
ನವದೆಹಲಿ(ಏ.12): ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಪರಿಹರಿಸಲು ಪ್ರಧಾನಿ ಕಚೇರಿ ತುರ್ತು ಸಭೆ ಕರೆದಿದೆ.
ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಸಭೆ ಕರೆದು ಪರಿಸ್ಥಿತಿ ಪರೀಶಿಲಿಸುವಂತೆ ಮನವಿ ಮಾಡಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.
ಈ ಮಧ್ಯೆ ನಷ್ಟದ ಸುಳಿಯಲ್ಲಿರುವ ಜೆಟ್ ಏರ್‌ವೇಸ್ ಸಂಸ್ಥೆಯ ಷೇರು ಖರೀದಿಸಲು ಅಂತಿಮವಾಗಿ 5 ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.
ಅಬುಧಾಬಿ ಮೂಲದ ಎತಿಯಾದ್ ಏರ್ ವೇಸ್, ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಖಾಸಗಿ ಹೂಡಿಕೆ ಕಂಪನಿ ಟಿಪಿಜಿ ಕ್ಯಾಪಿಟಲ್, ನ್ಯಾಷನಲ್ ಇನ್ವೆಸ್ಟ್ ಮೆಂಟ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಫಂಡ್ (ಎನ್‌ಐಐಎಫ್), ಇಂಡಿಗೊ ಪಾಲುದಾರ ಮತ್ತು ಥಿಂಕ್ ಈಕ್ವಿಟಿ ರೆಡಿಕ್ಲಿಫ್ ಕ್ಯಾಪಿಟಲ್ ಕಂಪನಿಗಳು ಷೇರು ಖರೀದಿಗೆ ಆಸಕ್ತಿ ತೋರಿಸಿವೆ ಎನ್ನಲಾಗಿದೆ.
ಈಗಾಗಲೇ ತನ್ನೆಲ್ಲ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿನ ಹಾರಾಟವನ್ನು ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್ , ಕೇವಲ 10 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ.
