ನವದೆಹಲಿ(ಫೆ.20): ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ಇಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಟ್ ಏರ್‌ವೇಸ್ ವಿಮಾನ ಸಂಸ್ಥೆ ತನ್ನ ಬಹುಪಾಲು ಷೇರುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇವಲ 1 ರೂಪಾಯಿಗೆ ಮಾರಾಟ ಮಾಡಲಿದೆ. ಫೆ.21 ರಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. 

ಕಳೆದ 10 ವರ್ಷಗಳಿಂದ ಜೆಟ್ ಏರ್‌ವೇಸ್ ದೇಶದ ಟಾಪ್ 3 ವಿಮಾನ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಈಗ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್‌ವೇಸ್‌ನ್ನು ಮೇಲೆತ್ತಲು ಎಸ್‌ಬಿಐ ಸೇರಿದಂತೆ ಇತರ ಲೆಂಡರ್‌ಗಳು ಜೆಟ್ ಏರ್‌ವೇಸ್‌ನ ಶೇ.50.01 ರಷ್ಟು ಷೇರುಗಳನ್ನು ಕೇವಲ 1 ರೂ.ಗೆ ಖರೀದಿಸಲಿವೆ.

ಇದರಿಂದ 114 ಮಿಲಿಯನ್ ಹೊಸ ಷೇರುಗಳನ್ನು ಪರಿಚಯಿಸಲು ಸಂಸ್ಥೆ ಮುಂದಾಗಿವೆ. ನೆಗೆಟಿವ್ ನೆಟ್ ವರ್ತ್ ಇರುವ ಸಂಸ್ಥೆಗಳು ಚೇತರಿಸಿಕೊಳ್ಳುವುದಕ್ಕೆ ಈ ರೀತಿಯ ಪ್ರಕ್ರಿಯೆ ಸಹಕಾರಿಯಾಗಲಿದ್ದು, ಇದನ್ನು ಬ್ಯಾಲ್-ಲೆಡ್ ಪ್ರಾವಿಷನಲ್ ರೆಸಲ್ಯೂಶನ್ ಪ್ಲಾನ್ ಅಥವಾ ಬಿಎಲ್‌ಪಿಆರ್‌ಪಿ ಎನ್ನಲಾಗುತ್ತದೆ. ಈ ಮೂಲಕ ಜೆಟ್‌ ಏರ್‌ವೇಸ್‌ಗೆ ಹೂಡಿಕೆದಾರರಿಂದ ಇಕ್ವಿಟಿ ಲಭ್ಯವಾಗಲಿದೆ.