ನವೆದಹಲಿ(ಮಾ.25): ಜೆಟ್ ಏರ್‌ವೇಸ್ ವಿಮಾನ ಸಂಸ್ಥೆಯ ಸಂಸ್ಥಾಪಕ ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ಮಂಡಳಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. 25 ವರ್ಷಗಳ ಹಿಂದೆ ವಿಮಾನಯಾನದಲ್ಲಿ ಕ್ರಾಂತಿ ಮಾಡಿದ್ದ ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ಇದೀಗ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ನರೇಶ್ ಗೋಯಲ್ ರಾಜಿನಾಮೆ ಅದಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. ಸದ್ಯ ಲಂಡನ್‌ನಲ್ಲಿರುವ ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ತಮ್ಮ 23,000 ಸಿಬ್ಬಂದಿ ಜೊತೆ ವಿದಾಯದ ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ: ಓಲಾ ಅಮಾನತು ಆದೇಶ ಹಿಂಪಡೆಯಲು ನಿರ್ಧಾರ: ಮತ್ತೆ ಶುರುವಾಯ್ತು ಸಂಚಾರ!

ನಷ್ಟಕ್ಕೆ ಸಿಲುಕಿದ್ದ ಜೆಟ್‌ಎರ್‌ವೇಸ್ ವಿಮಾನಯಾನ ಸಂಸ್ಥೆಯನ್ನು ಮೇಲಕ್ಕೆತ್ತಲು ಇತ್ತೀಚೆಗೆ ನರೇಶ್ ಗೋಯಲ್ ಹೆಚ್ಚು ಶ್ರಮಪಟ್ಟಿದ್ದರು. ಆದರೆ ಯಾವುದೂ ಕೈಗೂಡಿರಲಿಲ್ಲ.  ಜೆಟ್ ಏರ್‌ವೇಸ್ ಸಂಸ್ಥೆಯ ಹೆಚ್ಚಿನ ವಿಮಾನಗಳು ಹಾರಾಟ ನಡೆಸುತ್ತಿಲ್ಲ. ನರೇಶ್ ಗೋಯಲ್ ಬೋರ್ಡ್ ಸದಸ್ಯತ್ವದಿಂದ ಕೆಳಗಿಳಿದರೆ ಮಾತ್ರ ಸಾಲ ನೀಡಲು ಸಾಧ್ಯ ಎಂದು ಈಗಾಗಲೇ ಬ್ಯಾಂಕ್ ಕೂಡ ಹೇಳಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ  ನರೇಶ್ ಗೋಯಲ್ ಹಾಗೂ ಪತ್ನಿ ಅನಿತಾ ಗೋಯಲ್ ಸಂಸ್ಥೆಗೆ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ. 

ಇದನ್ನೂ ಓದಿ: ಮುಖೇಶ್ ಸಾಮ್ರಾಜ್ಯ ವಿಸ್ತರಣೆ: ಒಂದೇ ತಿಂಗಳಲ್ಲಿ ಜಿಯೋಗೆ 93 ಲಕ್ಷ ಗ್ರಾಹಕರು!

 ನರೇಶ್ ಗೋಯಲ್ ಜೆಟ್‌ಎರ್‌ವೇಸ್ ಸಂಸ್ಥೆಯ ಶೇಕಡಾ 51 ರಷ್ಟು ಶೇರು ಹೊಂದಿದ್ದಾರೆ. ಸದ್ಯ ಕಂಪನಿ CEO ವಿನಯ್ ದುಬೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಜೆಟ್ ಏರ್‌ವೇಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾಜಿ ಬೋರ್ಡ್ ಸದಸ್ಯ ಶ್ರೀನಿವಾಸನ್ ವಿಶ್ವನಾಥನ್‌ಗೆ ಬುಲಾವ್ ನೀಡಲಾಗಿದೆ. ಯುನೈಟೆಡ್ ಅರಬ್ ಎಮಿರೈಟ್ಸ್ ಮೂಲದ ಎಥಿಹಾಡ್ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಸಂಸ್ಥೆಯ ಶೇಕಡಾ 24 ರಷ್ಟು ಶೇರು ಹೊಂದಿದೆ.  ನಷ್ಟದಲ್ಲಿರುವ ಜೆಟ್ ಏರ್‌ವೇಸ್‌ನಿಂದ ಎಥಿಹಾಡ್ ಕೂಡ ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚಿದೆ.