ಇರಾನ್ ದಾಳಿಯಿಂದ ಭಾರತ ಷೇರುಮಾರುಕಟ್ಟೆ ಭಾರಿ ಕುಸಿತ, ಒಂದು ಗಂಟೆಯಲ್ಲಿ 7.6 ಲಕ್ಷ ಕೋಟಿ ರೂ ನಷ್ಟ, ಭಾರತದ ಷೇರುಮಾರುಕಟ್ಟೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಪಾತಾಳಕ್ಕೆ ಕುಸಿದಿದೆ. 

ನವದೆಹಲಿ (ಮಾ.19) ಇರಾನ್ ನಡೆಸುತ್ತಿರುವ ದಿಕ್ಕಿಲ್ಲದ ದಾಳಿಯಿಂದ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ನಿನ್ನೆಯಿಂದ ಇರಾನ್ ಗಲ್ಫ್ ರಾಷ್ಟ್ರಗಳ ಇಂಧನ ಘಟಕಗಳ ಮೇಲೆ ಇರಾನ್ ದಾಳಿ ನಡೆಸುತ್ತಿದೆ. ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ನಡೆಸಿದ ಇಂಧನ ಘಟಕಗಳ ಮೇಲಿನ ದಾಳಿಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಿದೆ. ಇಂದು ಬೆಳಗ್ಗೆ ಕಚ್ಚಾ ತೈಲ, ಗ್ಯಾಸ್ ಬೆಲೆ ಶೇಕಡಾ 4 ರಿಂದ 5ರಷ್ಟು ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಭಾರತದ ಷೇರುಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ.ಭಾರತದ ಷೇರುಮಾರುಕಟ್ಟೆ ಆರಂಭಗೊಂಡ ಒಂದೇ ಗಂಟೆಯಲ್ಲಿ ಹೂಡಿಕೆದಾರರು 7,60,00,00,00,000 ರೂ ನಷ್ಟ ಅನುಭವಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿಷ್ಠಿತ ಕಂಪನಿಗಳ ಷೇರು ಮೌಲ್ಯ ಕುಸಿತ

ಮಾರ್ಚ್ 19ರ ಬೆಳಗ್ಗೆ ಷೇರುಮಾರುಕಟ್ಟೆ ಆರಂಭಗೊಂಡ ಬೆನಲ್ಲೇ ಸೆನ್ಸೆಕ್ಸ್ (BSE) ಬರೋಬ್ಬರಿ 1700 ಅಂಕ ಕುಸಿತ ಕಂಡಿದೆ. ಇತ್ತ ನಿಫ್ಠಿ 500 ಪಾಯಿಂಟ್ಸ್ ಕುಸಿತ ಕಂಡಿದೆ. ಒಂದೆಡೆ ಯುದ್ಧದಿಂದ ಆಗುತ್ತಿರುವ ಪರಿಣಾಮ ಜೊತೆಗೆ ಭಾರತದಲ್ಲಿ ಬ್ಯಾಂಕಿಂಗ್ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಎದುರಾಗಿರುವ ಸವಾಲು ಷೇರುಮಾರುಕಟ್ಟೆಯನ್ನು ಅಲ್ಲೋಕಲ್ಲೋಲ ಮಾಡಿದೆ. ಆಟೋಮೊಬೈಲ್, ಐಟಿ, ಬ್ಯಾಕಿಂಗ್, ರಿಯಲ್ ಎಸ್ಟೇಟ್, ರಿಯಲನ್ಸ್ ಇಂಡಸ್ಟ್ರೀ, ಇನ್ಫೋಸಿಸ್, ಟಿಸಿಎಸ್, ಐಸಿಐಸಿಐ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಷೇರು ಮೌಲ್ಯ ಕುಸಿತ ಕಂಡಿದೆ.

ಭಾರತದ ಷೇರುಮಾರುಕಟ್ಟೆ ಕುಸಿತ ಕಾರಣ

  • ತೈಲ, ಗ್ಯಾಸ್ ಘಟಕ ಗುರಿಯಾಗಿಸಿ ಇರಾನ್ ಪ್ರತಿದಾಳಿ, ತೀವ್ರಗೊಂಡ ಯುದ್ಧ ಸಂಘರ್ಷ
  • ಹಣದುಬ್ಬರ ನಿಯಂತ್ರಣಕ್ಕೆ ಬಾರದೆ ಫೆಡರಲ್ ರಿಸರ್ವ ಬಡ್ಡಿ ದರದಲ್ಲಿ ಯಥಾ ಸ್ಥಿತಿ
  • ಹೂಡಿಕೆದಾರರಿಂದ ಭಾರತದ ಮಾರುಕಟ್ಟೆಯಿಂದ ಹಣ ವಾಪಸ್
  • ರೂಪಾಯಿ ಮೌಲ್ಯ ಕುಸಿತ
  • ಹೆಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷರ ರಾಜೀನಾಮೆ

ಗಲ್ಫ್ ರಾಷ್ಟ್ರಗಳಲ್ಲಿರುವ ವಿಶ್ವದ ಅತೀ ದೊಡ್ಡ ಗ್ಯಾಸ್ ಘಟಕ, ಇಂಧನ ಘಟಕಗಳ ಮೇಲೆ ಇರಾನ್ ದಾಳಿ ನಡೆಸಿದೆ. ಇದರಿಂದ ತೈಲ,ಗ್ಯಾಸ್ ಘಟಕಗಳು ಕಾರ್ಯಾಚರಣೆ ನಿಲ್ಲಿಸಿದೆ. ಹೀಗಾಗಿ ಇಂದು ಕಚ್ಚಾ ತೈಲ ಬೆಲೆ 112 ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. ಇತ್ತ ಗ್ಯಾಸ್ ಬೆಲೆಯಲ್ಲಿ ಶೇಕಡಾ 5ರಷ್ಟು ಏರಿಕೆಯಾಗಿದೆ. ಇದು ಭಾರತದ ಷೇರುಮಾರುಕಟ್ಟೆ ಮೇಲೆ ತೀವ್ರ ಪರಿಮಾಮ ಬೀರಿದೆ.

ಹಣದಬ್ಬರ ನಿಯಂತ್ರಣಕ್ಕೆ ಬರುತ್ತಿಲ್ಲ.ಒಂದಲ್ಲ ಒಂದು ದೇಶಗಳು ಯುದ್ಧದದಲ್ಲಿ ನಿರತವಾಗಿದೆ. ಇದರ ಹಿಂದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಮೆರಿಕ ದೇಶವಿದೆ. ಇದರ ಪರಿಣಾಮ ಅಮೆರಿಕದ ಫೆಡರಲ್ ರಿಸರ್ವ ಬ್ಯಾಂಕ್ ಬಡ್ಡಿ ದರ ಬದಲಾಯಿಸಿಲ್ಲ. ಇದರ ಪರಿಣಾಮ ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಗಳಿಂದ ಹೂಡಿಕೆ ವಾಪಸ್ ಪಡೆಯುತ್ತಿದ್ದಾರೆ. ಹಣ ವಾಪಸ್ ಪಡೆಯುತ್ತಿದ್ದಂತೆ ಇತ್ತ ಡಾಲರ್ ಎದರು ರೂಪಾಯಿ ಮೌಲ್ಯ 92.6ಕ್ಕೆ ಕುಸಿತ ಕಂಡಿದೆ. ಇದರಿಂದ ಭಾರತ ಆಮದು ಮಾಡಿಕೊಳ್ಳುವ ಎಲ್ಲಾ ವಸ್ತುಗಳು ದುಬಾರಿಯಾಗುವುದು ಮಾತ್ರವಲ್ಲ, ಭಾರತಕ್ಕೆ ತೀವ್ರ ಹೊರೆಯಾಗಲಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ಅತನು ಚಕ್ರವರ್ತಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದರ ಪರಿಮಾಮ ಹೆಚ್‌ಡಿಎಫ್‌ಸಿ ಷೇರುಗಳು ಶೇಕಡಾ 5-8ಕಷ್ಟು ಕುಸಿತ ಕಂಡಿದೆ.