ನವದೆಹಲಿ(ಜ.17): ದೇಶದ ಅರ್ಥ ವ್ಯವಸ್ಥೆಗೆ ಹೊಸ ಹುರುಪು ನೀಡಲು ಸಜ್ಜಾಗಿರುವ ಪ್ರಧಾನಿ ಮೋದಿ, ಹಣಕಾಸು ಸಚಿವರನ್ನು ಬದಲಿಸುವ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರಧಾನಿ ಮೋದಿ ಹಳಿ ತಪ್ಪಿರುವ ದೇಶದ ಅರ್ಥ ವ್ಯವಸ್ಥೆಯನ್ನು ಮತ್ತೆ ಚುರುಕುಗೊಳಿಸುವ ಹಾಗೂ ಈ ಮೂಲಕ ಜಿಡಿಪಿ ಬೆಳವಣಿಗೆಗೆ ವೇಗ ನೀಡುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ.

ಜಿಡಿಪಿ ವರದಿ ಮುನ್ನವೇ ರೂಪಾಯಿ ಕುಸಿತ: ಎಲ್ಲಿ ತಪ್ಪಿತು ಮೋದಿ ಕಾಗುಣಿತ?

ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವರನ್ನು ಬದಲಿಸಿ ಇಲಾಖೆಗೆ ಹೊಸ ಹುರುಪು ನೀಡಲು ಮೋದಿ ಮುಂದಾಗಿದ್ದಾರೆ ಎನ್ನಲಾಗಿದ್ದು, ವಿತ್ತ ತಜ್ಞ, ಕನ್ನಡಿಗ ಕೆವಿ ಕಾಮತ್ ಅವರನ್ನು ಕೇಂದ್ರ ಹಣಕಾಸು ಸಚಿವರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸದ್ಯ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷರಾಗಿರುವ ಮಂಗಳೂರು ಮೂಲದ ಕೆವಿ ಕಾಮತ್, ಇದೇ ಆಗಸ್ಟ್‌ನಲ್ಲಿ ಹಣಕಾಸು ಸಚಿವರನ್ನಾಗಿ ನೇಮಿಸಲಾಗುವುದು ಎನ್ನಲಾಗಿದೆ. ಆರ್ಥಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಕೆವಿ ಕಾಮತ್, ಈ ಹಿಂದೆ ಐಸಿಐಸಿಐ ಬ್ಯಾಂಕ್‌ ಹಾಗೂ ಇನ್ಫೋಸಿಸ್‌ನಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ದೇಶದ ಅರ್ಥಮಂತ್ರಿಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ: ಸ್ವಾಮಿ ವ್ಯಂಗ್ಯ!

ಒಂದು ವೇಳೆ ಕೆವಿ ಕಾಮತ್ ಅವರಿಗೆ ಪ್ರಧಾನಿ ಮಣೆ ಹಾಕಿದರೆ, ಮತ್ತೋರ್ವ ಕನ್ನಡಿಗರಿಗೆ ಕೇಂದ್ರ ಸರ್ಕಾರದಲ್ಲಿ ಅತ್ಯಂತ ಮಹತ್ವದ ಹುದ್ದೆ ಲಭಿಸಿದಂತಾಗುತ್ತದೆ. ಸದ್ಯ ವಿತ್ತ ಸಚಿವಾಲಯದ ಹೊಣೆ ಹೊತ್ತಿರುವ ನಿರ್ಮಲಾ ಸೀತಾರಾಮನ್ ಕೂಡ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವುದು ವಿಶೇಷ.

ಕೆವಿ ಕಾಮತ್ ಕುರಿತು:

ಡಿ.2, 1947ರಲ್ಲಿ ಕರ್ನಾಕದ ಮಂಗಳೂರಿನಲ್ಲಿ ಜನಿಸಿದ ಕುಂದಾಪುರ ವಾಮನ ಕಾಮತ್, ತಮ್ಮ ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಇಲ್ಲಿನ ಸೇಂಟ್ ಅಲೋಯ್ಸಿಯಸ್ ಕಾಲೇಜಿಲ್ಲಿ ಪೂರ್ಣಗೊಳಿಸಿದರು. ನಂತರ ಸೂರತ್ಕಲ್' KREC ಕಾಲೇಜಿನಿಂದ ಮೆಕಾನಿಕಲ್ ಇಂಜಿಯರಿಂಗ್ ಪದವಿ ಪಡೆದರು.

ಬಳಿಕ ಅಹಮದಾಬಾದ್‌ನ ಐಐಎಂ ನಿಂದ ಡಿಪ್ಲೋಮಾ ಇನ್ ಮ್ಯಾನೇಜ್‌ಮೆಂಟ್ ಸ್ನಾತಕೋತ್ತರ ಪದವಿ ಪಡೆದ ಕಾಮತ್, ಬ್ಯಾಂಕಿಂಗ್ ಕ್ಷೇತ್ರವೂ ಸೇರಿದಂತೆ ಆರ್ಥಿಕ ಕ್ಷೇತ್ರದಲ್ಲಿ ಅಪಾರ ಹೆಸರು ಗಳಿಸಿದರು.

ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ:

ಬ್ರೆಝಿಲ್, ರಷ್ಯಾ, ಭಾರತ, ಚೀನಾ ಹಾಗೂ ದ.ಆಫ್ರಿಕಾ ಸಹಕಾರ ಒಕ್ಕೂಟದಡಿಯಲ್ಲಿ ಬ್ರಿಕ್ಸ್ ಬ್ಯಾಂಕ್ ಎಂಬ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಇದರ ಮೊದಲ ಅಧ್ಯಕ್ಷರಾಗಿ ಕನ್ನಡಿಗ ಕೆವಿ ಕಾಮತ್ ನೇಮಕಗೊಂಡರು. 2013ರಲ್ಲಿ ದ.ಆಫ್ರಿಕಾದ  ಡರ್ಬನ್‌ನಲ್ಲಿ ನಡೆದ ಐದನೇ ಬ್ರಿಕ್ಸ್ ಸಮಾವೇಶದಲ್ಲಿ ಬ್ರಿಕ್ಸ್ ಬ್ಯಾಂಕ್‌ನ್ನು ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತು. ಇದರ ಮುಖ್ಯ ಕಚೇರಿ ಶಾಂಘೈನಲ್ಲಿದೆ.