ನವದೆಹಲಿ[ಡಿ.02]: ದೇಶದಲ್ಲಿ ಆರ್ಥಿಕ ಹಿಂಜರಿತ ಇಲ್ಲ ಎಂದು ಹೇಳಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಕಿಡಿಕಾರಿದ್ದಾರೆ. ಆಕೆಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರಿಗೂ ಆರ್ಥಿಕ ಹಿಂಜರಿತದ ಬಗ್ಗೆ ಗೊತ್ತಿಲ್ಲ. ಸತ್ಯ ಹೇಳಲು ಅವರ ಸಲಹೆಗಾರರೂ ಹಿಂಜರಿಯುತ್ತಿದ್ದಾರೆ. ದೇಶ ಅದ್ಭುತವಾಗಿ ಪ್ರಗತಿ ಹೊಂದುತ್ತಿದೆ ಎಂದು ಅವರಿಗೆ ಹೇಳಲಾಗುತ್ತಿದೆ. ದೇಶದಲ್ಲಿ ಈಗಿನ ಸಮಸ್ಯೆಗೆ ಬೇಡಿಕೆ ಕುಸಿತ ಕಾರಣ. ಪೂರೈಕೆಯಲ್ಲ. ಆದರೆ ನಿರ್ಮಲಾ ಮಾಡಿದ್ದೇನು? ಕಾರ್ಪೋರೆಟ್‌ ಕಂಪನಿಗಳ ತೆರಿಗೆ ಕಡಿತ ಮಾಡಿದರು. ಆ ಕಂಪನಿಗಳ ಬಳಿ ಪೂರೈಸುವಷ್ಟುಉತ್ಪನ್ನ ಇದೆ. ಹೀಗಾಗಿ ತೆರಿಗೆ ಕಡಿತವನ್ನು ಅವು ಬಳಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ.

ಆರ್ಥಿಕತೆ ಕುಸಿತ ಕಾಣುತ್ತಿದ್ದರೂ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಸಮರ್ಥಿಸಿಕೊಂಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಅರ್ಥಶಾಸ್ತ್ರದ ಬಗ್ಗೆ ತಿಳುವಳಿಕೆಯೇ ಇಲ್ಲ ಎಂದು ಸ್ವತಃ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಈ ಮೂಲಕ ಮೋದಿ ಸರ್ಕಾರದ ಆರ್ಥಿಕ ನೀತಿಯ ಬಗ್ಗೆ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅರ್ಥಶಾಸ್ತ್ರದ ಬಗ್ಗೆ ಏನನ್ನೂ ತಿಳಿದುಕೊಂಡಿಲ್ಲ. ಮೊನ್ನೆಯಷ್ಟೇ ನಡೆದ ಸುದ್ದಿಗೋಷ್ಠಿಯಲ್ಲೇ ಇದು ಬಹಿರಂಗವಾಗಿದೆ ಎಂದು ಹೇಳಿರುವ ಸುಬ್ರಮಣಿಯನ್‌ ಸ್ವಾಮಿ, ಇಂದು ದೇಶದ ಆರ್ಥಿಕತೆಯಲ್ಲಿ ಏನು ಸಮಸ್ಯೆ ಎದುರಾಗಿದೆ ಎನ್ನುವ ಬಗ್ಗೆ ಆರ್ಥಿಕ ತಜ್ಞರು ಗೊತ್ತು ಮಾಡಬೇಕಿದೆ. ಆದರೆ ವಿತ್ತ ಸಚಿವರು ಕಾರ್ಪೊರೇಟ್‌ ತೆರಿಗೆಗೆ ಕಡಿವಾಣ ಹಾಕಿ ಬಡವರ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಅರುಣ್‌ ಜೇಟ್ಲಿ ಅವರು ವಿತ್ತ ಸಚಿವರಾಗಿದ್ದಾಗಲೂ ಸುಬ್ರಮಣಿಯನ್‌ ಸ್ವಾಮಿ ಅವರು ಮೋದಿ ಸರ್ಕಾರದ ಆರ್ಥಿಕ ನೀತಿಯ ಬಗ್ಗೆ ಅಪಸ್ವರ ಎತ್ತಿದ್ದರು.