ಪ್ರಧಾನಿ ಮೋದಿ ಇಟಲಿ ಪ್ರಧಾನಿ ಮೆಲೋನಿಗೆ ಮೆಲೊಡಿ ಚಾಕೊಲೇಟ್ ನೀಡಿದ ವಿಡಿಯೋ ವೈರಲ್ ಆದ ಬಳಿಕ, ಹೂಡಿಕೆದಾರರು ತಪ್ಪಾಗಿ 'ಪಾರ್ಲೆ ಇಂಡಸ್ಟ್ರೀಸ್' ಷೇರುಗಳನ್ನು ಖರೀದಿಸಿದರು. ಇದರಿಂದ ಷೇರು ಬೆಲೆ ಶೇ. 5ರಷ್ಟು ಏರಿಕೆಯಾಗಿದೆ.

ಬೆಂಗಳೂರು (ಮೇ.20): ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುವ ಟ್ರೆಂಡ್‌ಗಳು ಷೇರು ಮಾರುಕಟ್ಟೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ಈಗ ಮತ್ತೊಂದು ವಿಲಕ್ಷಣ ಉದಾಹರಣೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರವಾಸದ ವೇಳೆ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ 'ಮೆಲೊಡಿ' (Melody) ಚಾಕೊಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಇತ್ತ ಷೇರು ಮಾರುಕಟ್ಟೆಯಲ್ಲಿ 'ಪಾರ್ಲೆ ಇಂಡಸ್ಟ್ರೀಸ್' (Parle Industries) ಕಂಪನಿಯ ಷೇರುಗಳು ದಿಢೀರ್ ಶೇಕಡಾ 5 ರಷ್ಟು ಏರಿಕೆ ಕಂಡಿವೆ! ಆದರೆ, ಈ ಭರ್ಜರಿ ಏರಿಕೆಯ ಹಿಂದೆ ಚಿಲ್ಲರೆ ಹೂಡಿಕೆದಾರರ (Retail Investors) ಯಡವಟ್ಟು ಮತ್ತು ಗೊಂದಲ ಅಡಗಿದೆ.

Add Asianetnews Kannada as a Preferred SourcegooglePreferred

ಮಂಗಳವಾರದ ವಹಿವಾಟಿನಲ್ಲಿ ಪಾರ್ಲೆ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ಇಂಟ್ರಾಡೇನಲ್ಲಿ ಶೇ. 5 ರಷ್ಟು ಜಿಗಿದು 5.25 ರೂಪಾಯಿಗೆ ತಲುಪಿದ್ದವು. ಕಳೆದ ಒಂದು ವಾರದಲ್ಲೂ ಈ ಪೆನ್ನಿ ಸ್ಟಾಕ್ ಬರೋಬ್ಬರಿ ಶೇ. 7 ರಷ್ಟು ಲಾಭ ತಂದುಕೊಟ್ಟಿದೆ.

ಅಸಲಿ ಟ್ವಿಸ್ಟ್ ಏನಂದ್ರೆ ಮೆಲೊಡಿ ಚಾಕೋಲೆಟ್‌ ಮಾಡೋದು ಈ ಕಂಪನಿಯಲ್ಲ!

ಇಲ್ಲಿ ಹೂಡಿಕೆದಾರರು ಗಮನಿಸಲೇಬೇಕಾದ ವಿಚಾರ ಏನೆಂದರೆ, ಶೇರು ಮಾರುಕಟ್ಟೆಯಲ್ಲಿ ಶೇ. 5 ರಷ್ಟು ಲಾಭ ಗಳಿಸಿರುವ ಈ 'ಪಾರ್ಲೆ ಇಂಡಸ್ಟ್ರೀಸ್' ಕಂಪನಿಗೂ ಮತ್ತು ನಾವು ತಿನ್ನುವ 'ಮೆಲೊಡಿ' ಚಾಕೋಲೆಟ್‌ಗೂ ಯಾವುದೇ ಬ್ಯುಸಿನೆಸ್ ಸಂಬಂಧವೇ ಇಲ್ಲ.

ನಿಜವಾಗಿ 'ಮೆಲೊಡಿ' ಚಾಕೊಲೇಟ್ ಅನ್ನು ತಯಾರಿಸುವುದು ಭಾರತದ ಖ್ಯಾತ ಎಫ್‌ಎಂಸಿಜಿ (FMCG) ದೈತ್ಯ ಸಂಸ್ಥೆಯಾದ 'ಪಾರ್ಲೆ ಪ್ರಾಡಕ್ಟ್ಸ್' (Parle Products). ಇತಿಹಾಸ ಪ್ರಸಿದ್ಧ ಪಾರ್ಲೆ-ಜಿ (Parle-G), ಮೊನಾಕೊ, ಕ್ರಾಕ್‌ಜಾಕ್, ಮ್ಯಾಂಗೋ ಬೈಟ್ ಮತ್ತು ಪಾಪಿನ್ಸ್‌ನಂತಹ ಬ್ರ್ಯಾಂಡ್‌ಗಳನ್ನು ಉತ್ಪಾದಿಸುವ 'ಪಾರ್ಲೆ ಪ್ರಾಡಕ್ಟ್ಸ್' ಒಂದು ಖಾಸಗಿ ಲಿಮಿಟೆಡ್ ಕಂಪನಿಯಾಗಿದ್ದು (Privately Held Company), ಇದು ಷೇರು ಮಾರುಕಟ್ಟೆಯಲ್ಲಿ ಈವರೆಗೂ ಲಿಸ್ಟ್ ಆಗಿಯೇ ಇಲ್ಲ.

ಆದರೆ, ಬಿಎಸ್‌ಇ (BSE) ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 'ಪಾರ್ಲೆ ಇಂಡಸ್ಟ್ರೀಸ್' ಸಂಪೂರ್ಣವಾಗಿ ಬೇರೆಯದೇ ಆದ ಒಂದು ಕಂಪನಿಯಾಗಿದೆ. ಕೇವಲ ಹೆಸರಿನಲ್ಲಿ 'ಪಾರ್ಲೆ' ಎಂದಿರುವುದನ್ನು ನೋಡಿ ಗೊಂದಲಕ್ಕೊಳಗಾದ ಚಿಲ್ಲರೆ ಹೂಡಿಕೆದಾರರು ಮತ್ತು ಟ್ರೇಡರ್‌ಗಳು, ವೈರಲ್ ಟ್ರೆಂಡ್ ಬೆನ್ನತ್ತಿ ಈ ಕಂಪನಿಯ ಷೇರುಗಳನ್ನು ಖರೀದಿಸಲು ಮುಗಿಬಿದ್ದಿದ್ದೇ ಷೇರು ಬೆಲೆ ಏರಿಕೆಗೆ ಅಸಲಿ ಕಾರಣವಾಗಿದೆ.

'ಪಾರ್ಲೆ' ಷೇರು ರ‍್ಯಾಲಿ ಆರಂಭವಾಗಿದ್ದು ಹೇಗೆ?

ಇಟಲಿಯಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ನಡುವಿನ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಅದರಲ್ಲಿ ಪ್ರಧಾನಿ ಮೋದಿ ಅವರು ಮೆಲೋನಿ ಅವರಿಗೆ ಮೆಲೊಡಿ ಚಾಕೊಲೇಟ್ ಪ್ಯಾಕೆಟ್ ನೀಡುತ್ತಿರುವುದು ಕಂಡುಬಂದಿತ್ತು. ಇಂಟರ್ನೆಟ್‌ನಲ್ಲಿ ಈ ಇಬ್ಬರು ನಾಯಕರ ಹೆಸರನ್ನು ಸೇರಿಸಿ ಸೃಷ್ಟಿಸಲಾಗಿರುವ ಪ್ರಸಿದ್ಧ “#Melodi” ಟ್ರೆಂಡ್‌ಗೆ ಪೂರಕವಾಗಿ ಮೋದಿ ಈ ಗಿಫ್ಟ್ ನೀಡಿದ್ದಾರೆ ಎಂದು ನೆಟ್ಟಿಗರು ಚರ್ಚೆ ಆರಂಭಿಸಿದ್ದರು.

ಬಳಿಕ ಪ್ರಧಾನಿ ಮೆಲೋನಿ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡು, "ಉಡುಗೊರೆಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದರು. ಆ ವಿಡಿಯೋದಲ್ಲಿ ಮೆಲೋನಿ ಅವರು ನಗುತ್ತಾ, "ಅವರು ನನಗೊಂದು ತುಂಬಾ ತುಂಬಾ ಒಳ್ಳೆಯ ಟಾಫಿ ಗಿಫ್ಟ್ ಕೊಟ್ಟಿದ್ದಾರೆ" ಎಂದು ಹೇಳುವುದು ಮತ್ತು ಇಬ್ಬರೂ ನಗುವುದು ದಾಖಲಾಗಿತ್ತು. ಲಕ್ಷಾಂತರ ವೀಕ್ಷಣೆ ಹಾಗೂ ಕಮೆಂಟ್‌ಗಳನ್ನು ಪಡೆದ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಪಾರ್ಲೆ ಇಂಡಸ್ಟ್ರೀಸ್ ಷೇರುಗಳ ಖರೀದಿ ಪ್ರಕ್ರಿಯೆ ಜೋರಾಗಿತ್ತು.

ಸೋಶಿಯಲ್ ಮೀಡಿಯಾ ಟ್ರೆಂಡ್ ಮತ್ತು ದಲಾಲ್ ಸ್ಟ್ರೀಟ್ ಆತಂಕ

ಸೋಶಿಯಲ್‌ ಮೀಡಿಯಾ ಟ್ರೆಂಡ್‌ಗಳು ಮತ್ತು ಕಂಪನಿಗಳ ಹೆಸರಿನ ಗೊಂದಲದಿಂದಾಗಿ ಷೇರುಗಳ ಬೆಲೆ ದಿಢೀರ್ ಏರಿಳಿತ ಕಾಣುತ್ತಿರುವುದು ಇತ್ತೀಚಿನ ದಿನಗಳಲ್ಲಿ ದಲಾಲ್ ಸ್ಟ್ರೀಟ್‌ನಲ್ಲಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಸಣ್ಣ ಮೌಲ್ಯದ ಪೆನ್ನಿ ಸ್ಟಾಕ್‌ಗಳು ಇಂತಹ ವೈರಲ್ ವಿಷಯಗಳಿಗೆ ಬೇಗನೆ ಸಿಲುಕಿಕೊಳ್ಳುತ್ತವೆ. ಮಂಗಳವಾರ ಪಾರ್ಲೆ ಇಂಡಸ್ಟ್ರೀಸ್ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿದೆಯಾದರೂ, ದೀರ್ಘಾವಧಿಯಲ್ಲಿ ಈ ಷೇರು ತೀವ್ರ ಹಿನ್ನಡೆಯಲ್ಲೇ ಮುಂದುವರಿದಿದೆ. ಕಂಪನಿಯ ಇತಿಹಾಸವನ್ನು ಗಮನಿಸಿದರೆ ಈ ಷೇರು, ಕಳೆದ ಮೂರು ತಿಂಗಳಲ್ಲಿ ಸುಮಾರು ಶೇ. 41 ರಷ್ಟು ಕುಸಿದಿದೆ, ಕಳೆದ ಆರು ತಿಂಗಳಲ್ಲಿ ಶೇ. 46 ರಷ್ಟು ಇಳಿಕೆಯಾಗಿದೆ ಹಾಗೂ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ ಶೇ. 68 ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ.