'ಬಿಎಲ್‌ಎಸ್‌ ಇಂಟರ್‌ನ್ಯಾಷನಲ್ ಸರ್ವಿಸಸ್ ಲಿಮಿಟೆಡ್' 2026ನೇ ಆರ್ಥಿಕ ವರ್ಷದಲ್ಲಿ ಶೇ. 36.7ರಷ್ಟು ಆದಾಯ ಏರಿಕೆ ಮತ್ತು ಶೇ. 34.1ರಷ್ಟು ನಿವ್ವಳ ಲಾಭದೊಂದಿಗೆ ದಾಖಲೆಯ ಸಾಧನೆ ಮಾಡಿದೆ. ವೀಸಾ ಮತ್ತು ಡಿಜಿಟಲ್ ಸೇವೆಗಳ ವಿಭಾಗದಲ್ಲಿನ ಬೃಹತ್ ಬೆಳವಣಿಗೆಯು ಈ ಯಶಸ್ಸಿಗೆ ಕಾರಣವಾಗಿದ್ದು, ಕಂಪನಿಯು ಷೇರುದಾರರಿಗೆ ಲಾಭಾಂಶವನ್ನೂ ಘೋಷಿಸಿದೆ.

ಬೆಂಗಳೂರು: ವಿಶ್ವದಾದ್ಯಂತ ಸರ್ಕಾರಗಳು ಮತ್ತು ನಾಗರಿಕರಿಗೆ ವೀಸಾ, ಪಾಸ್‌ಪೋರ್ಟ್ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ಭಾರತದ ಪ್ರತಿಷ್ಠಿತ 'ಬಿಎಲ್‌ಎಸ್‌ ಇಂಟರ್‌ನ್ಯಾಷನಲ್ ಸರ್ವಿಸಸ್ ಲಿಮಿಟೆಡ್' 2026ನೇ ಆರ್ಥಿಕ ವರ್ಷದ ವಾರ್ಷಿಕ ಮತ್ತು ಮಾರ್ಚ್ 31ಕ್ಕೆ ಅಂತ್ಯಗೊಂಡ 4ನೇ ತ್ರೈಮಾಸಿಕದ ಆರ್ಥಿಕ ವರದಿಯನ್ನು ಪ್ರಕಟಿಸಿದೆ. ಎಲ್ಲಾ ವಿಭಾಗಗಳಲ್ಲೂ ಕಂಪನಿಯು ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದು, ಭರ್ಜರಿ ಲಾಭ ಗಳಿಸಿದೆ.

Add Asianetnews Kannada as a Preferred SourcegooglePreferred

2025ನೇ ಆರ್ಥಿಕ ವರ್ಷದಲ್ಲಿ 2,193.3 ಕೋಟಿ ರೂ. ಇದ್ದ ಆದಾಯ, 2026ನೇ ವರ್ಷದಲ್ಲಿ ಶೇ. 36.7 ರಷ್ಟು ಏರಿಕೆ ಕಂಡು 2,998.2 ಕೋಟಿ ರೂ.ಗೆ ತಲುಪಿದೆ. ಕಾರ್ಯಾಚರಣೆ ಲಾಭ ಶೇ. 30.1ರಷ್ಟು ಹೆಚ್ಚಾಗಿದ್ದು, 818.9 ಕೋಟಿ ರೂ.ಗೆ ಮುಟ್ಟಿದೆ. ಇದೇ ವೇಳೆ ನಿವ್ವಳ ಲಾಭ ಕಳೆದ ವರ್ಷ ಇದ್ದ 539.6 ಕೋಟಿ ರೂ.ನಿಂದ ಈ ಬಾರಿ ಶೇ. 34.1ರಷ್ಟು ಏರಿಕೆಯಾಗಿ 723.8 ಕೋಟಿ ರೂ.ಗೆ ತಲುಪಿದೆ.

ಉತ್ತಮ ಲಾಭಾಂಶದ ಹಿನ್ನೆಲೆಯಲ್ಲಿ ಕಂಪನಿಯ ಆಡಳಿತ ಮಂಡಳಿಯು, ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 0.5 ರೂ. ಅಂತಿಮ ಲಾಭಾಂಶವನ್ನು ನೀಡಲು ಶಿಫಾರಸು ಮಾಡಿದೆ. ಈಗಾಗಲೇ ನೀಡಲಾಗಿರುವ 2.0 ರೂ. ಲಾಭಾಂಶ ಸೇರಿದಂತೆ, ಈ ವರ್ಷ ಕಂಪನಿಯು ಒಟ್ಟು ಅಂದಾಜು 103 ಕೋಟಿ ರೂ.ಗಳನ್ನು ಡಿವಿಡೆಂಡ್ ರೂಪದಲ್ಲಿ ಪಾವತಿಸುತ್ತಿದೆ.

ಕಂಪನಿಯ ಈ ದಾಖಲೆಯ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಜಂಟಿ ವ್ಯವಸ್ಥಾಪಕ ನಿರ್ದೇಶಕ (ಜೆಎಂಡಿ) ಶಿಖರ್ ಅಗರ್‌ವಾಲ್, "2026ರ ಆರ್ಥಿಕ ವರ್ಷದಲ್ಲಿ ಬಿಎಲ್‌ಎಸ್‌ ಇಂಟರ್‌ನ್ಯಾಷನಲ್ ತನ್ನ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆ ಮಾಡಿದೆ. ವೀಸಾ ಸೇವೆಗಳ ನಿರ್ವಹಣೆಯನ್ನು ನಾವೇ ವಹಿಸಿಕೊಂಡಿರುವುದರಿಂದ ನಮ್ಮ ಲಾಭಾಂಶ ಶೇ. 40.1ರಷ್ಟು ಏರಿಕೆಯಾಗಿದೆ. ಚೀನಾ, ಸ್ಲೋವಾಕಿಯಾ ಮತ್ತು ಸೈಪ್ರಸ್‌ನಲ್ಲಿ ವೀಸಾ ಕೇಂದ್ರಗಳನ್ನು ತೆರೆಯಲು ನಮಗೆ ಹೊಸ ಒಪ್ಪಂದಗಳು ಸಿಕ್ಕಿವೆ. ಡಿಜಿಟಲ್ ಸೇವೆಗಳ ವಿಭಾಗವಂತೂ ಶೇ. 114ರಷ್ಟು ಬೃಹತ್ ಏರಿಕೆ ಕಂಡಿದೆ. ಭವಿಷ್ಯದಲ್ಲೂ ಇದೇ ರೀತಿಯ ಸುಸ್ಥಿರ ಬೆಳವಣಿಗೆ ಸಾಧಿಸುವುದು ನಮ್ಮ ಗುರಿಯಾಗಿದೆ," ಎಂದು ತಿಳಿಸಿದರು.

ಯಾವ ವಿಭಾಗದಿಂದ ಎಷ್ಟು ಲಾಭ?

ವೀಸಾ ಮತ್ತು ಕಾನ್ಸುಲರ್ ವಿಭಾಗದ ಆದಾಯವು ಶೇ. 11.3 ರಷ್ಟು ಹೆಚ್ಚಾಗಿ 1,840.3 ಕೋಟಿ ರೂ.ಗೆ ತಲುಪಿದೆ. ಈ ವರ್ಷ ಕಂಪನಿಯು ಬರೋಬ್ಬರಿ 44.1 ಲಕ್ಷ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಿದೆ. ಕಳೆದ ವರ್ಷ ಈ ಪ್ರಮಾಣ 37.5 ಲಕ್ಷ ಇತ್ತು.

ಡಿಜಿಟಲ್ ಬಿಸಿನೆಸ್ ಕಂಪನಿಯಲ್ಲಿ ಅತಿ ಹೆಚ್ಚು ಬೆಳವಣಿಗೆ ಕಂಡ ವಿಭಾಗವಾಗಿದೆ. ಈ ವಿಭಾಗದ ಆದಾಯವು ಶೇ. 114.4 ರಷ್ಟು ಭಾರೀ ಏರಿಕೆ ಕಂಡು 1,157.9 ಕೋಟಿ ರೂ.ಗೆ ತಲುಪಿದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕಂಪನಿಯು 1.11 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ವಹಿವಾಟು (ಜಿಟಿವಿ) ನಡೆಸಿದೆ.

4ನೇ ತ್ರೈಮಾಸಿಕದಲ್ಲಿ 186.9 ಕೋಟಿ ರೂ. ನಿವ್ವಳ ಲಾಭ

4ನೇ ತ್ರೈಮಾಸಿಕದದಲ್ಲಿ ಅಂದರೆ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಕಂಪನಿಯು 814.6 ಕೋಟಿ ರೂ. ಆದಾಯ ಹಾಗೂ 186.9 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಈ ತ್ರೈಮಾಸಿಕದಲ್ಲಿ ಕಜಕಿಸ್ತಾನ್, ಲೆಬನಾನ್ ಮತ್ತು ಕೀನ್ಯಾದಲ್ಲಿ ಹೊಸ ವೀಸಾ ಸೇವೆಗಳನ್ನು ಆರಂಭಿಸಲಾಗಿದೆ. ಜೊತೆಗೆ, ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವಾಯ್ಸ್ ಬಾಟ್ ಅನ್ನು ಪರಿಚಯಿಸಲಾಗಿದೆ.

2005ರಲ್ಲಿ ಆರಂಭವಾದ ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ ಕಂಪನಿಯು ಪ್ರಪಂಚದ 46 ಕ್ಕೂ ಹೆಚ್ಚು ದೇಶಗಳ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದೆ. ಜಾಗತಿಕವಾಗಿ 70ಕ್ಕೂ ಹೆಚ್ಚು ದೇಶಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನು ಹೊಂದಿರುವ, ಈ ಕ್ಷೇತ್ರದಲ್ಲಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಏಕೈಕ ಕಂಪನಿ ಇದಾಗಿದೆ. ಫೋರ್ಬ್ಸ್ ಏಷ್ಯಾ ನಿಯತಕಾಲಿಕೆಯಿಂದ "ಬೆಸ್ಟ್ ಅಂಡರ್ ಎ ಬಿಲಿಯನ್" ಕಂಪನಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.