ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಹಣವು ಜೂನ್ 20, 2026 ರಂದು ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಿಂದ 9.44 ಕೋಟಿಗೂ ಅಧಿಕ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಿದ್ದಾರೆ.

ಬೆಂಗಳೂರು (ಜೂ.17): ದೇಶದ ಕೋಟ್ಯಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯೊಂದಿಗೆ ಜೋಡಿಸಲ್ಪಟ್ಟಿದ್ದಾರೆ. ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ ಒಟ್ಟು 6 ಸಾವಿರ ರೂಪಾಯಿಗಳನ್ನು ತಲಾ 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕಳೆದ ಕೆಲವು ದಿನಗಳಿಂದ 23ನೇ ಕಂತಿನ ಹಣ ಯಾವಾಗ ಬರಬಹುದು ಎಂದು ಕಾಯುತ್ತಿದ್ದ ರೈತರಿಗೆ ಈಗ ದೊಡ್ಡ ಅಪ್‌ಡೇಟ್ ಸಿಕ್ಕಿದೆ. ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ಅನ್ನದಾತರಿಗೆ ಇನ್ನು ಕೇವಲ ಮೂರೇ ದಿನಗಳಲ್ಲಿ ಪಿಎಂ ಕಿಸಾನ್ ಹಣ ಸಿಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ರೈತರ ಖಾತೆ ಸೇರಿವೆ 22 ಕಂತುಗಳು

  • ಅರ್ಹ ರೈತರಿಗೆ ಈ ಬಾರಿ ಯೋಜನೆಯ 23ನೇ ಕಂತಿನ ಹಣವನ್ನು ವಿತರಿಸಲಾಗುತ್ತಿದೆ.
  • ಇದಕ್ಕೂ ಮುನ್ನ ರೈತರ ಖಾತೆಗಳಿಗೆ ಯಶಸ್ವಿಯಾಗಿ ಒಟ್ಟು 22 ಕಂತುಗಳನ್ನು ಜಮಾ ಮಾಡಲಾಗಿದೆ.
  • ಕಳೆದ 2026ರ ಮಾರ್ಚ್ 13 ರಂದು ಅಸ್ಸಾಂನ ಗುವಾಹಟಿಯಿಂದ 22ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಣ ಬಿಡುಗಡೆ

ಪಿಎಂ ಕಿಸಾನ್ ಯೋಜನೆಯ ಕಂತನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ವಿತರಿಸಲಿದ್ದಾರೆ. ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಬಳಿಕ, ಪಿಎಂ ಮೋದಿ ಅವರು ಡಿಬಿಟಿ (DBT - ನೇರ ನಗದು ವರ್ಗಾವಣೆ) ವ್ಯವಸ್ಥೆಯ ಮೂಲಕ ನೇರವಾಗಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲಿದ್ದಾರೆ.

23ನೇ ಕಂತು ಯಾವಾಗ? ಎಲ್ಲಿಂದ ಬಿಡುಗಡೆ?

ದಿನಾಂಕ: ಜೂನ್ 20, 2026 (ಶನಿವಾರ) ರಂದು 23ನೇ ಕಂತು ಬಿಡುಗಡೆಯಾಗಲಿದೆ

ಸ್ಥಳ: ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಿಂದ ಈ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ ನೀಡಲಾಗಿದೆ.

ಸಮಯ: ಜೂನ್ 20 ರಂದು ಮಧ್ಯಾಹ್ನ 3 ಗಂಟೆ 45 ನಿಮಿಷಕ್ಕೆ ಸರಿಯಾಗಿ ರೈತರ ಖಾತೆಗೆ ಹಣ ಜಮೆಯಾಗಲಿದೆ.

ಒಟ್ಟು ಫಲಾನುಭವಿಗಳು: ದೇಶದ 9.44 ಕೋಟಿಗೂ ಅಧಿಕ ಅರ್ಹ ರೈತರ ಖಾತೆಗಳಿಗೆ ಒಟ್ಟು 18,880 ಕೋಟಿಗೂ ಅಧಿಕ ಹಣ ನೇರವಾಗಿ ವರ್ಗಾವಣೆಯಾಗಲಿದೆ.

ನಿಮ್ಮ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ 2 ಸಾವಿರ ರೂಪಾಯಿ ಸಿಗುತ್ತದೆ. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿರುವ ರೈತರು ಮನೆಯಲ್ಲೇ ಕುಳಿತು ತಮ್ಮ ಸ್ಟೇಟಸ್ ಅನ್ನು ಹೀಗೆ ಪರಿಶೀಲಿಸಬಹುದು:

  • ಮೊದಲು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ.
  • ಅಲ್ಲಿ 'ಫಾರ್ಮರ್ಸ್ ಕಾರ್ನರ್' (Farmers Corner) ಆಯ್ಕೆಯನ್ನು ಆರಿಸಿ.
  • ನಂತರ 'ಬೆನಿಫಿಷಿಯರಿ ಲಿಸ್ಟ್' (Beneficiary List - ಫಲಾನುಭವಿಗಳ ಪಟ್ಟಿ) ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ನಿಮ್ಮ ಅಗತ್ಯ ವಿವರಗಳನ್ನು ನಮೂದಿಸಿ.
  • ಬಳಿಕ “Get Data” ಮೇಲೆ ಕ್ಲಿಕ್ ಮಾಡಿ ತಕ್ಷಣವೇ ನಿಮ್ಮ ಪೇಮೆಂಟ್ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದು.

ಈ ಕೆಲಸ ಕಡ್ಡಾಯ; ಇಲ್ಲದಿದ್ದರೆ ಹಣ ಬರಲ್ಲ!

ರೈತರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೆ ಮಾತ್ರ ಯಾವುದೇ ಅಡಚಣೆಯಿಲ್ಲದೆ ಹಣ ಖಾತೆಗೆ ಬರುತ್ತದೆ. ಇದರೊಂದಿಗೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯವಾಗಿದೆ. ಅಲ್ಲದೆ, ಸರ್ಕಾರವು 'ಅಗ್ರಿಸ್ಟಾಕ್' (AgriStack) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದ್ದು, ಇದನ್ನು ಮಾಡಿದರೆ ಮಾತ್ರ ಖಾತೆಗೆ ಹಣ ಬರಲಿದೆ.

ಸಹಾಯವಾಣಿ ಸಂಖ್ಯೆ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಸಮಸ್ಯೆಗಳಿದ್ದಲ್ಲಿ ರೈತರು ಅಧಿಕೃತ ಸಹಾಯವಾಣಿ ಸಂಖ್ಯೆ 1800-115-5525 ಕ್ಕೆ ಸಂಪರ್ಕಿಸಬಹುದು. ಇಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ.