ಸಾಲದ ಮೇಲೆ ಬ್ಯಾಂಕ್ ದಂಡ ರೂಪದಲ್ಲಿ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ; ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ RBI

ಗ್ರಾಹಕರು ಸಾಲ ಒಪ್ಪಂದದ ನಿಯಮಗಳು ಹಾಗೂ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಬ್ಯಾಂಕ್ ಗಳು ದಂಡ ವಿಧಿಸುವಾಗ ಅದನ್ನು ಶುಲ್ಕ ಎಂದು ಪರಿಗಣಿಸಬೇಕೇ ಹೊರತು ಬಡ್ಡಿ ರೂಪದಲ್ಲಿ ಜಾರಿಗೊಳಿಸಬಾರದು ಎಂದು ಆರ್ ಬಿಐ ಹೊಸ ಸುತ್ತೋಲೆಯಲ್ಲಿ ತಿಳಿಸಿದೆ. 
 

No further interest on penal charges RBI issues new guidelines for loans anu

ನವದೆಹಲಿ (ಆ.18): ಸಾಲ ಖಾತೆಗಳ ಮೇಲೆ ಬ್ಯಾಂಕ್ ಗಳು ದಂಡ ವಿಧಿಸುವ ಪ್ರಕ್ರಿಯೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇಂದು (ಆ.18) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಲಗಾರರು ಸಾಲ ಪಡೆಯುವ ಸಂದರ್ಭದಲ್ಲಿನ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಹಲವು ಬ್ಯಾಂಕ್ ಗಳು ನಿಗದಿತ ಬಡ್ಡಿದರದ ಮೇಲೆ ದಂಡದ ರೂಪದಲ್ಲಿ ಹೆಚ್ಚಿನ ಬಡ್ಡಿ (ಪೆನಲ್ ರೇಟ್ ಆಫ್ ಇಂಟರೆಸ್ಟ್) ವಿಧಿಸೋದನ್ನು ಗಮನಿಸಿರುವ ಆರ್ ಬಿಐ, ಇದರ ತಡೆಗೆ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾರ್ಗಸೂಚಿಗಳು 2024ರ ಜನವರಿ 1ರಿಂದ ಜಾರಿಗೆ ಬರಲಿವೆ. ಇದರ ಅನ್ವಯ ಸಾಲ ಒಪ್ಪಂದದಲ್ಲಿನ ನಿಯಮಗಳು ಹಾಗೂ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಬ್ಯಾಂಕ್ ಗಳು ದಂಡ ವಿಧಿಸುವಾಗ ಅದನ್ನು 'ದಂಡ ಶುಲ್ಕ' ಎಂದು ಪರಿಗಣಿಸಬೇಕೇ ಹೊರತು 'ದಂಡ ಬಡ್ಡಿ'ಯ ರೂಪದಲ್ಲಿ ವಿಧಿಸುವಂತಿಲ್ಲ. ಅಂದರೆ ಸಾಲದ ಬಡ್ಡಿದರಕ್ಕೆ ಈ ದಂಡ ಬಡ್ಡಿಯನ್ನು ಸೇರಿಸಿ ಸಾಲಗಾರರ ಮೇಲೆ ಹೆಚ್ಚಿನ ಹೊರೆ ವಿಧಿಸುವಂತಿಲ್ಲ ಎಂದು ಆರ್ ಬಿಐ ಈ ಮೂಲಕ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

ಸಾಲದ ಬಡ್ಡಿದರದ ಮೇಲೆ ಯಾವುದೇ ಹೆಚ್ಚುವರಿ ಮೊತ್ತವನ್ನು ವಿಧಿಸದೆ ಈ ಮಾರ್ಗಸೂಚಿಗಳನ್ನು ಕಾಗದ ಹಾಗೂ ಅನುಷ್ಠಾನ ಎರಡರಲ್ಲೂ ಪಾಲನೆ ಮಾಡುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚಿಸಿದೆ. ಸಾಲಗಳ ಮೇಲೆ ವಿಧಿಸುವ  ದಂಡ ಶುಲ್ಕ ಅಥವಾ ಅದೇ ಮಾದರಿಯ ಶುಲ್ಕಗಳಿಗೆ ಸಂಬಂಧಿಸಿ ಬ್ಯಾಂಕ್ ಗಳು ಒಂದು ಮಂಡಳಿಯಿಂದ ಅನುಮೋದಿತಗೊಂಡಿರುವ ನೀತಿಗಳನ್ನು ರೂಪಿಸಿಕೊಂಡು ಅದನ್ನು ಪಾಲಿಸುವಂತೆ ಕೂಡ ಆರ್ ಬಿಐ ಸಲಹೆ ನೀಡಿದೆ. 

RBI ರೆಪೋ ದರ ಏರಿಕೆ ಮಾಡದಿದ್ರೂ ಸಾಲದ ಬಡ್ಡಿದರ ಹೆಚ್ಚಿಸಿವೆ ಈ ಬ್ಯಾಂಕ್ ಗಳು; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ಪ್ರಸ್ತುತ ಬ್ಯಾಂಕ್ ಗಳು ಸಾಲಗಾರರು ಇಎಂಐ ಅನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪಾವತಿಸಲು ವಿಫಲರಾದ ಸಂದರ್ಭದಲ್ಲಿ ದಂಡ ಬಡ್ಡಿ ವಿಧಿಸುತ್ತವೆ. ಸಾಮಾನ್ಯವಾಗಿ ಶೇ.2ರಷ್ಟು ದಂಡ ಬಡ್ಡಿ ವಿಧಿಸಲಾಗುತ್ತದೆ. ಅಂದರೆ ಈ ದಂಡ ಬಡ್ಡಿಯನ್ನು ಸಾಲದ ಮೇಲಿನಬಡ್ಡಿಗೆ ಸೇರಿಸಲಾಗುತ್ತದೆ. ಉದಾಹರಣೆಗೆ ನಿಮ್ಮ ಸಾಲದ ಬಡ್ಡಿ ತಿಂಗಳಿಗೆ ಶೇ.10ರಷ್ಟಿದ್ದರೆ ಅದರ ಮೇಲೆ ಈ ಹೆಚ್ಚುವರಿ ಶೇ.2ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಆಗ ನಿಮ್ಮ ಸಾಲದ ಒಟ್ಟು ಬಡ್ಡಿದರ ಶೇ.12ರಷ್ಟು ಆಗುತ್ತದೆ. ಇದು ಸಾಲಗಾರರ ಮೇಲಿನ ಬಡ್ಡಿ ಹೊರೆಯನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಆರ್ ಬಿಐ ದಂಡ ಬಡ್ಡಿ ಬದಲು ದಂಡ ಶುಲ್ಕ ವಿಧಿಸುವಂತೆ ಸೂಚಿಸಿದೆ.

ದಂಡ ಶುಲ್ಕಗಳಿಗೆ ಸಂಬಂಧಿಸಿ ಆರ್ ಬಿಐ ಈ ವರ್ಷದ ಏಪ್ರಿಲ್ ನಲ್ಲಿ ದಂಡ ಶುಲ್ಕಗಳ ಕರಡು ಪ್ರತಿ ರಚಿಸಿತ್ತು. ಇನ್ನು ಆರ್ ಬಿಐ ಹೊಸ ಮಾರ್ಗಸೂಚಿಗಳ ಅನ್ವಯ ವೈಯಕ್ತಿಕ ಸಾಲಗಾರರಿಗೆ ಉದ್ಯಮ ಹೊರತುಪಡಿಸಿ ಇತರ ಉದ್ದೇಶಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ದಂಡ ಶುಲ್ಕ ಸಂಸ್ಥೆಗಳಿಗೆ ವಿಧಿಸುವ ದಂಡ ಶುಲ್ಕಕ್ಕಿಂತ ಜಾಸ್ತಿ ಇರಬಾರದು ಎಂದು ಹೇಳಿದೆ. 

ಅವಧಿಗೂ ಮುನ್ನ ಗೃಹಸಾಲ ಮರುಪಾವತಿಸೋ ಗ್ರಾಹಕರಿಗೆ ಬ್ಯಾಂಕ್ ದಂಡ ವಿಧಿಸಬಹುದಾ? RBI ಏನ್ ಹೇಳಿದೆ?

ದಂಡ ಶುಲ್ಕದ ಮೊತ್ತ ನ್ಯಾಯಸಮ್ಮತವಾಗಿರಬೇಕು ಹಾಗೂ ಸಾಲ ಒಪ್ಪಂದದ ನಿಯಮಗಳು ಹಾಗೂ ಷರತ್ತುಗಳಿಗೆ ತಕ್ಕದಾಗಿರಬೇಕು. ಇನ್ನು ಈ ಸಂಬಂಧ ಯಾವುದೇ ನಿರ್ದಿಷ್ಟ ಅಥವಾ ಉತ್ಪನ್ನ ವಿಭಾಗಕ್ಕೆ ಸಂಬಂಧಿಸಿ ತಾರತಮ್ಯ ಮಾಡಬಾರದು ಎಂದು ಆರ್ ಬಿಐ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ಇನ್ನು ದಂಡ ಶುಲ್ಕ ಯಾಕೆ ವಿಧಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಬ್ಯಾಂಕ್ ಗಳು ಗ್ರಾಹಕರಿಗೆ ಸಾಲದ ಒಪ್ಪಂದಲ್ಲೇ ತಿಳಿಸಬೇಕು. ಇನ್ನು ಅತ್ಯಂತ ಪ್ರಮುಖವಾದ ನಿಯಮಗಳು ಹಾಗೂ ಷರತ್ತುಗಳು/ ಕೀ ಫ್ಯಾಕ್ಟ್ ಸ್ಟೇಟ್ಮೆಂಟ್ ಗಳನ್ನು ಬ್ಯಾಂಕ್ ವೆಬ್ ಸೈಟ್ ನಲ್ಲಿ ಬಡ್ಡಿದರ ಹಾಗೂ ಸೇವಾ ಶುಲ್ಕಗಳ ಅಡಿಯಲ್ಲಿ ನಮೂದಿಸಬೇಕು.

ಇನ್ನು ಆರ್ ಬಿಐ ಪ್ರಕಾರ ಇಂಥ ಶುಲ್ಕಗಳನ್ನು ವಿಧಿಸೋದು ಗ್ರಾಹಕರಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಅಗತ್ಯವಾಗಿದೆ. ಆದರೆ, ಈ ಶುಲ್ಕಗಳನ್ನು ಆದಾಯ ಹೆಚ್ಚಳದ ಸಾಧನವಾಗಿ ಬಳಸಬಾರದು ಎಂದು ಆರ್ ಬಿಐ ತಿಳಿಸಿದೆ. ಆರ್ ಬಿಐ ಹೊಸ ಮಾರ್ಗಸೂಚಿಗಳು ಎಲ್ಲ ವಾಣಿಜ್ಯ ಬ್ಯಾಂಕ್ ಗಳು, ಸಣ್ಣ ಹಣಕಾಸಿನ ಬ್ಯಾಂಕ್ ಗಳು (ಪೇಮೆಂಟ್ ಬ್ಯಾಂಕ್ ಗಳನ್ನು ಹೊರತುಪಡಿಸಿ), ಗೃಹ ಹಣಕಾಸು ಕಂಪನಿಗಳು ಹಾಗೂ ಎಸ್ ಐಡಿಬಿಐ, ಎಕ್ಸಿಂ ಬ್ಯಾಂಕ್ಸ್ ಮುಂತಾದ  ಇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಎನ್ ಬಿಎಫ್ ಸಿಗಳಿಗೆ ಅನ್ವಯಿಸುತ್ತದೆ. 

Latest Videos
Follow Us:
Download App:
  • android
  • ios