ಅವಧಿಗೂ ಮುನ್ನ ಗೃಹಸಾಲ ಮರುಪಾವತಿಸೋ ಗ್ರಾಹಕರಿಗೆ ಬ್ಯಾಂಕ್ ದಂಡ ವಿಧಿಸಬಹುದಾ? RBI ಏನ್ ಹೇಳಿದೆ?
ಗೃಹಸಾಲವನ್ನು ಆದಷ್ಟು ಬೇಗ ತೀರಿಸಬೇಕು ಎಂಬುದು ಬಹುತೇಕರ ಬಯಕೆಯಾಗಿರುತ್ತದೆ. ಆದರೆ, ಗೃಹಸಾಲವನ್ನು ಅವಧಿಗೂ ಮುನ್ನ ಮರುಪಾವತಿಸಿದ್ರೆ ಬ್ಯಾಂಕ್ ದಂಡ ವಿಧಿಸುತ್ತದೆ ಎಂಬ ಭಯ ಬಹುತೇಕರಲ್ಲಿದೆ.
Business Desk:ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂಬ ಕನಸಿಗೆ ಇಂದು ಬ್ಯಾಂಕ್ ಗಳು ಗೃಹಸಾಲದ ಮೂಲಕ ನೀರೆರೆಯುತ್ತಿವೆ. ಇದೇ ಕಾರಣಕ್ಕೆ ಇಂದು ಮನೆ ಖರೀದಿಸೋದು ಹಿಂದಿನಷ್ಟು ಕಷ್ಟದ ಕೆಲಸವಂತೂ ಅಲ್ಲವೇ ಅಲ್ಲ. ಬ್ಯಾಂಕ್ ನಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ಪ್ರತಿ ತಿಂಗಳು ಇಎಂಐ ಮೂಲಕ ಈ ಸಾಲ ತೀರಿಸಬಹುದು. ಇದೇ ಕಾರಣಕ್ಕೆ ಇಂದು ಬಹುತೇಕರು ಮನೆ ಖರೀದಿಸುತ್ತಾರೆ. ಆದರೆ, ಆ ಬಳಿಕ ಇಎಂಐ ಕಟ್ಟುವಾಗ ಅದರ ಕಷ್ಟ ಅರಿವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಆರ್ ಬಿಐ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದ ಕಾರಣದಿಂದ ಗೃಹಸಾಲದ ಮೇಲಿನ ಬಡ್ಡಿದರದಲ್ಲಿ ಕೂಡ ಭಾರೀ ಹೆಚ್ಚಳವಾಗಿದೆ. ಇದೇ ಕಾರಣಕ್ಕೆ ಬಹುತೇಕರು ಆದಷ್ಟು ಬೇಗ ಗೃಹಸಾಲದ ಸುಳಿಯಿಂದ ಹೊರಬರಬೇಕು ಎಂಬ ನಿರ್ಧಾರವನ್ನು ಕೂಡ ಮಾಡಿರುತ್ತಾರೆ. ಅದೆಷ್ಟೇ ಕಷ್ಟವಾಗಲಿ, ಬೇರೆಲ್ಲ ಆಸೆ-ಆಕಾಂಕ್ಷೆಗಳನ್ನು ಸದ್ಯದ ಮಟ್ಟಿಗೆ ಮುಂದೂಡಿ ಗೃಹಸಾಲ ತೀರಿಸಿಕೊಂಡ್ರೆ ಸಾಕು ಎಂಬ ಮನಸ್ಥಿತಿ ಅನೇಕರಲ್ಲಿದೆ. ಆದರೆ, ಅವಧಿಗೂ ಮುನ್ನವೇ ಗೃಹಸಾಲ ತೀರಿಸಿದ್ರೆ ಬ್ಯಾಂಕ್ ಗಳು ಅದಕ್ಕೆ ಶುಲ್ಕ ವಿಧಿಸುತ್ತವೆ ಎಂಬ ಚಿಂತೆ ಕೂಡ ಅನೇಕರಿಗಿದೆ. ಹಾಗಾದ್ರೆ ಎಲ್ಲ ವಿಧದ ಗೃಹಸಾಲವನ್ನು ಅವಧಿಗೆ ಮುನ್ನ ಮರುಪಾವತಿಸಿದ್ರೆ ಬ್ಯಾಂಕ್ ಗಳು ದಂಡ ವಿಧಿಸುತ್ತವಾ?
ಬ್ಯಾಂಕ್ ಗಳು ಸಾಲಗಳನ್ನು ಅವಧಿಗೂ ಮುನ್ನ ಮರುಪಾವತಿ ಮಾಡಿದ್ರೆ ಗ್ರಾಹಕರ ಮೇಲೆ ವಿಧಿಸುವ ದಂಡ ಒಟ್ಟು ಸಾಲದ ಮೊತ್ತದ ಶೇ.2-4ರಷ್ಟು ಇರುತ್ತದೆ. ಇದೇ ಕಾರಣಕ್ಕೆ ಬಹುತೇಕರು ಸಾಲವನ್ನು ಅವಧಿಗೂ ಮುನ್ನ ಮರುಪಾವತಿ ಮಾಡಲು ಕೂಡ ಯೋಚಿಸುತ್ತಾರೆ. ಆದರೆ, ಬಹುತೇಕರಿಗೆ ಒಂದು ಸಂಗತಿ ತಿಳಿದಿಲ್ಲ. ಕೆಲವು ವಿಧದ ಗೃಹಸಾಲಗಳನ್ನು ಅವಧಿಗೂ ಮುನ್ನ ಮರುಪಾವತಿಸಿದ್ರೆ ಅದಕ್ಕೆ ಶುಲ್ಕ ಅಥವಾ ದಂಡ ವಿಧಿಸುವಂತಿಲ್ಲ.
1.ಫ್ಲೋಟಿಂಗ್ ಬಡ್ಡಿದರ ಹೊಂದಿರುವ ಗೃಹಸಾಲ: ನಿಮ್ಮ ಗೃಹಸಾಲ ಫ್ಲೋಟಿಂಗ್ ಬಡ್ಡಿದರವನ್ನು ಆಧರಿಸಿದ್ರೆ ನೀವು ಅವಧಿಗೂ ಮುನ್ನ ಸಾಲ ಮರುಪಾವತಿಸಿದ್ರೆ ಅಥವಾ ಕ್ಲೋಸ್ ಮಾಡಿದ್ರೆ ಬ್ಯಾಂಕ್ ಗಳು ನಿಮಗೆ ಯಾವುದೇ ದಂಡ ಶುಲ್ಕ ವಿಧಿಸುವಂತಿಲ್ಲ. 2019, 2014 ಹಾಗೂ 2012ರಲ್ಲಿ ಆರ್ ಬಿಐ ಹೊರಡಿಸಿರುವ ಸುತ್ತೋಲೆ ಅನ್ವಯ ಬ್ಯಾಂಕ್ ಗಳು ಗೃಹಸಾಲದ ಅವಧಿಗೂ ಮುನ್ನ ಮರುಪಾವತಿ ಮೇಲೆ ಯಾವುದೇ ಶುಲ್ಕ ವಿಧಿಸುವಂತಿಲ್ಲ.
ದಿನಕ್ಕೆ ಕೇವಲ 100ರೂ. ಉಳಿಸಿದ್ರೆ ಸಾಕು, 50 ಲಕ್ಷ ರೂ. ಗೃಹಸಾಲದಲ್ಲಿ 12ಲಕ್ಷ ರೂ. ಉಳಿತಾಯವಾಗುತ್ತೆ, ಹೇಗೆ?
2.ಎಚ್ ಎಫ್ ಸಿಗಳ ಸ್ಥಿರ ದರದ ಗೃಹಸಾಲವನ್ನು ಸ್ವಂತ ನಿಧಿಯಿಂದ ಪಾವತಿ: ಎಚ್ ಎಫ್ ಸಿಗಳು ಸ್ಥಿರ ದರ ಹೊಂದಿರುವ ಗೃಹಸಾಲವನ್ನು ವ್ಯಕ್ತಿ ತನ್ನ ಸ್ವಂತ ಹಣದಿಂದ ಮರುಪಾವತಿಸಿದ್ರೆ ಯಾವುದೇ ಶುಲ್ಕ ವಿಧಿಸುವಂತಿಲ್ಲ.
3. ಉಭಯ ದರದ ಗೃಹಸಾಲ: ಸಾಲಗಾರರು ಸಾಲ ಬದಲಾಗುವ ದರ ಯೋಜನೆಗೆ ಶಿಫ್ಟ್ ಆಗುವ ಮೂಲಕ ಫ್ಲೋಟಿಂಗ್ ದರದ ಗೃಹಸಾಲ ಹೊಂದಿದ್ರೆ ಆಗ ಬ್ಯಾಂಕ್ ಗಳು ಹಾಗೂ ಎಚ್ ಎಫ್ ಸಿಗಳು ಯಾವುದೇ ದಂಡ ವಿಧಿಸುವಂತಿಲ್ಲ.
ಮೊದಲ ಬಾರಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಸಾಲದ ಜೊತೆಗೆ ಪಡೆಯಬಹುದು ಈ ಎಲ್ಲ ಪ್ರಯೋಜನ!
ಗೃಹಸಾಲದ ಅವಧಿಗೂ ಮುನ್ನ ಮರುಪಾವತಿ ಅಂದ್ರೇನು?
ಒಂದು ವೇಳೆ ನೀವು ನಿಮ್ಮ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನೀವು ಗೃಹಸಾಲವನ್ನು ಅವಧಿಗೂ ಮುನ್ನ ಪಾವತಿಸುವ ನಿರ್ಧಾರ ಕೈಗೊಳ್ಳುತ್ತೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮಗೊಂಡ ತಕ್ಷಣ ಗೃಹಸಾಲದ ಸ್ವಲ್ಪ ಭಾಗವನ್ನು ಅಥವಾ ಪೂರ್ಣವಾಗಿ ತೀರಿಸಿ ಬಿಡಬೇಕು ಎಂದು ಬಹುತೇಕರು ಬಯಸುತ್ತಾರೆ. ಒಂದು ವೇಲೆ ನೀವು ನಿಮ್ಮ ಗೃಹಸಾಲವನ್ನು ಅವಧಿಗೂ ಮುನ್ನ ಸಂಪೂರ್ಣವಾಗಿ ಅಥವಾ ನಿಗದಿತ ಅವಧಿಗೂ ಮುನ್ನ ಸ್ವಲ್ಪ ಭಾಗವನ್ನು ತೀರಿಸಿದ್ರೆ ಅದನ್ನು ಮರುಪಾವತಿ ಎಂದು ಪರಿಗಣಿಸಲಾಗುತ್ತದೆ. ಬಹುತೇಕ ಬ್ಯಾಂಕ್ ಗಳು ಗೃಹಸಾಲವನ್ನು ಅವಧಿಗೂ ಮುನ್ನ ಪಾವತಿಸಲು ಅವಕಾಶ ನೀಡುತ್ತವೆ. ಇನ್ನೂ ಕೆಲವು ಬ್ಯಾಂಕ್ ಗಳು ಅವಧಿಗೂ ಮುನ್ನ ಸಾಲದ ಮರುಪಾವತಿ ಮೇಲೆ ಸಣ್ಣ ಮೊತ್ತದ ಶುಲ್ಕ ವಿಧಿಸುತ್ತವೆ.