57 ನಿಮಿಷದಲ್ಲಿ 10KM ಮ್ಯಾರಥಾನ್ ಓಟ, ಪತ್ನಿ ಸೀಮಾ ಕಾಮತ್ ಸಾಧನೆ ಹಾಗೂ ಹೋರಾಟದ ಕುರಿತು ಉದ್ಯಮಿ ನಿತಿನ್ ಕಾಮತ್ ಹೇಳಿಕೊಂಡಿದ್ದಾರೆ. ಏನಿದು ಶ್ರೀಮಂತ ಯುವ ಉದ್ಯಮಿ ಹಿಂದಿನ ಹೋರಾಟದ ಹಾದಿ
ಮುಂಬೈ (ಜ.18) ಝೆರೋಧಾ ಸಂಸ್ಥಾಪಕ, ಶ್ರೀಮಂತ ಯುವ ಉದ್ಯಮಿ ನಿತಿನ್ ಕಾಮತ್ ಹೋರಾಟದ ಬದುಕಿನ ಸಂತಸ ಹಂಚಿಕೊಂಡಿದ್ದಾರೆ. ಮುಂಬೈ ಮ್ಯಾರಾಥಾನ್‌ನಲ್ಲಿ ನಿತಿನ್ ಕಾಮತ್ ಪತ್ನಿ ಸೀಮಾ ಕಾಮತ್ ಪಾಲ್ಗೊಂಡಿದ್ದಾರೆ. 10 ಕಿಲೋಮೀಟರ್ ಓಟವನ್ನು 57 ನಿಮಿಷದಲ್ಲಿ ಪೂರೈಸಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ ಮ್ಯಾರಥಾನ್‌ಗಳಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಫಿಟ್ನೆಸ್ ರನ್ ಮಾಡುವುದು ಹೊಸದೇನಲ್ಲ. ಇದರಲ್ಲಿ ಶ್ರೀಮಂತರು, ರಾಜಕಾರಣಿಗಳು, ಸೆಲೆಬ್ರೆಟಿಗಳು ಪಾಲ್ಗೊಳ್ಳುತ್ತಾರೆ. ಆದರೆ ಸೀಮಾ ಕಾಮತ್ ಮ್ಯಾರಥಾನ್ ಓಟ ವಿಶೇಷವಾಗಿತ್ತು. ಕಾರಣ ಕ್ಯಾನ್ಸರ್ ವಿರುದ್ದ ಹೋರಾಡಿ ಮೃತ್ಯವನ್ನೇ ಗೆದ್ದ ಸೀಮಾ ಕಾಮತ್, 57 ನಿಮಿಷದಲ್ಲಿ ಮುಂಬೈ ಮ್ಯಾರಾಥನ್‌ನಲ್ಲಿ 10 ಕಿಲೋಮೀಟರ್ ಓಟ ಪೂರ್ತಿಗೊಳಿಸಿದ್ದಾರೆ. ಈ ಕುರಿತ ಹೋರಾಟದ ಹಾದಿಯನ್ನು ನಿತಿನ್ ಕಾಮತ್ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
2.5 ವರ್ಷ ಬಳಿಕ ಮ್ಯಾರಥಾನ್ ಓಟ
ಕಳೆದ 2.5 ವರ್ಷಗಳ ಬಳಿಕ ಸೀಮಾ ಕಾಮತ್ ಮುಂಬೈ ಮ್ಯಾರಥಾನ್‌ನಲ್ಲಿ 10 ಕಿಲೋಮೀಟರ್ ಓಡಿದ್ದಾರೆ. ಕಳೆದ ಎರಡುವರೆ ವರ್ಷಗಳಿಂದ ಕ್ಯಾನ್ಸರ್ ವಿರುದ್ದ ಹೋರಾಟ ಮಾಡುತ್ತಿದ್ದ ಸೀಮಾ ಕಾಮತ್ ಇದೀಗ ಚೇತರಿಸಿಕೊಂಡಿದ್ದಾರೆ. ಅತ್ಯಂತ ಸಂಕಷ್ಟದ ದಿನಗಳನ್ನು ಕಳೆದಿದ್ದ ಸೀಮಾ, ಕೀಮೋ ಥೆರಪಿ ಸೇರಿದಂತೆ ಹಲವು ಕಠಿಣ ಚಿಕಿತ್ಸೆಗಳನ್ನು ಪಡೆದಿದ್ದಾರೆ. ಎರಡೂವರೆ ವರ್ಷಗಳ ಸತತ ಹೋರಾಟದ ಬಳಿಕ ಇದೀಗ ಮುಂಬೈ ಮ್ಯಾರಾಥಾನ್‌ನಲ್ಲಿ ಯಶಸ್ವಿಯಾಗಿ ಓಟ ಪೂರೈಸಿದ್ದಾರೆ.
ಸಂಭ್ರಮ ಹಂಚಿಕೊಂಡ ನಿತಿನ್ ಕಾಮತ್
ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ವಿಶೇಷ ಚೇತನದಲ್ಲಿದ್ದ ಉತ್ಸಾಹ, ಸಂಭ್ರಮ, ಹೋರಾಟವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಈ ಮ್ಯಾರಥಾನ್ ನೋಡಿದಾಗ ನನಗೆ ಅನಿಸಿತ್ತು, ಜೀವನದಲ್ಲಿ ನಮಗೆ ಯಾವುದರ ಬಗ್ಗೆ ದೂರು ನೀಡಲ ಏನು ಹಕ್ಕಿದೆ. ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಕಾರಣ ನನ್ನ ವೈಯುಕ್ತಿಕ ವಿಚಾರಕ್ಕೆ ಬಂದರೆ, ಪತ್ನಿ ಸೀಮಾ ಕಾಮತ್ 2.5 ವರ್ಷಗಳ ಬಳಿಕ ಕ್ಯಾನ್ಸರ್ ಹೋರಾಟದಲ್ಲಿ ಮೃತ್ಯುಗೆದ್ದು ಬಂದಿದ್ದಾರೆ. ಕ್ಯಾನ್ಸರ್‌ನಿಂದ ಗುಣಮುಖರಾದ ಬಳಿಕ ಇಂದ ಮುಂಬೈ ಮ್ಯಾರಾಥಾನ್‌ನಲ್ಲಿ 10 ಕಿಲೋಮೀಟರ್ ಓಟವನ್ನು 57 ನಿಮಿಷದಲ್ಲಿ ಪೂರೈಸಿದ್ದಾರೆ ಎಂದು ನಿತಿನ್ ಕಾಮತ್ ಹೇಳಿಕೊಂಡಿದ್ದಾರೆ.
ಸೀಮಾ ಕಾಮತ್ ಉತ್ತಮ ಆಹಾರ ಪದ್ಧತಿ ಅನುಸರಿಸುತ್ತಿದ್ದರು. ಫಿಟ್ನೆಸ್, ಜಿಮ್ ಅಭ್ಯಾಸ ಸೇರಿದಂತೆ ಎಲ್ಲಾ ವ್ಯಾಯಾಮ ಕಸರತ್ತುಗಳನ್ನು ಮಾಡುತ್ತಿದ್ದರು.ಆದರೆ 2021ರಲ್ಲಿ ಸೀಮಾ ಕಾಮತ್‌ಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಪತ್ತೆಯಾಗುವ ವೇಳೆ ಸ್ಟೇಜ್ 2 ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್ ಪತ್ತೆ ಸೀಮಾ ಕಾಮತ್‌ಗೆ ಆಘಾತ ತಂದಿತ್ತು. ಆಪ್ತರನ್ನು ಹೊರತುಪಡಿಸಿದರೆ ಇನ್ಯಾರ ಬಳಿಯೂ ಸೀಮಾ ಕಾಮತ್ ಹೇಳಿಕೊಂಡಿರಲಿಲ್ಲ. ಪತಿ ನಿತಿನ್ ಕಾಮತ್ ಹೆಜ್ಜೆ ಹೆಜ್ಜೆಗೂ ಬೆನ್ನೆಲುಬಾಗಿ ನಿಂತಿದ್ದರು. ಸ್ಟೇಜ್ 2ರಲ್ಲಿ ಕ್ಯಾನ್ಸರ್ ಪತ್ತೆಯಾದ ಕಾರಣ ಸೀಮಾ ಕಾಮತ್ ಚಿಕಿತ್ಸೆ ಆರಂಭಿಸಿದ್ದರು. ಸಾಮಾನ್ಯವಾಗಿ ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ನರಕ ಯಾತನೆ. ಕೀಮೋ ಥೆರಪಿಯಿಂದ ಹಿಡಿದು ಎಲ್ಲಾ ಥೆರಪಿಗಳು ಬದುಕಿನ ಉತ್ಸಾಹವನ್ನೇ ಕಸಿದು ಬಿಡುತ್ತದೆ. ಈ ಎಲ್ಲಾ ಸಂದರ್ಭಗಳಲ್ಲೂ ಸೀಮಾ ಕಾಮತ್ ಗಟ್ಟಿ ಮನಸ್ಸಿನಿಂದ ಹೋರಾಡಿದ್ದಾರೆ. ಇದೀಗ ಮೃತ್ಯ ಗೆದ್ದು ಬಂದು ಮುಂಬೈ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದಾರೆ.
ಈ ಕುರಿತು ಸೀಮಾ ಕಾಮತ್ ತಮ್ಮ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಹೋರಾಟದ ಬದುಕು, ಚಿಕಿತ್ಸೆ ನಡುವಿನ ಸಂಕಷ್ಟಗಳನ್ನು ಸೀಮಾ ಕಾಮತ್ ಹೇಳಿಕೊಂಡಿದ್ದಾರೆ. ಸೀಮಾ ಕಾಮತ್ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸೀಮಾ ಸಾಧನೆಗೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.


