ಅನೇಕ ಜವಾಬ್ದಾರಿಗಳನ್ನುಏಕಕಾಲದಲ್ಲಿನಿಭಾಯಿಸೋ ಸಾಮರ್ಥ್ಯ ಹೆಣ್ಣಿಗೆ ಹುಟ್ಟಿನಿಂದಲೇ ಸಿದ್ಧಿಸಿರುತ್ತದೆ.ಅದ್ರಲ್ಲೂನಿಗದಿತ ಬಜೆಟ್‌ನಲ್ಲಿ ಮನೆಯನ್ನುಅಚ್ಚುಕಟ್ಟಾಗಿ ನಿಭಾಯಿಸೋ ಕಲೆ ಬಹುಶಃ ಆಕೆಗೆ ಮಾತ್ರ ಒಲಿದಿರೋದು ಅನಿಸುತ್ತೆ.ಅದೆಷ್ಟೋ ಗೃಹಿಣಿಯರಿಗೆ ಅವರದ್ದೇ ಎನ್ನುವ ವರಮಾನವಿರೋದಿಲ್ಲ.

ಆದ್ರೂ ಪತಿ ಮನೆಯ ತಿಂಗಳ ಖರ್ಚಿಗೆ ನೀಡೋ ಹಣದಲ್ಲೇ ದಿನಸಿ,ಹಾಲು,ಹಣ್ಣುತರಕಾರಿ,ಮಕ್ಕಳ ತಿಂಡಿ-ತಿನಿಸು ಸೇರಿದಂತೆ ಎಲ್ಲ ವೆಚ್ಚಗಳನ್ನುನಿಭಾಯಿಸೋ ಜೊತೆ ಅದ್ರಲ್ಲೇ ಒಂದಿಷ್ಟು ಹಣವನ್ನುಉಳಿಸಿ ಅಡುಗೆಮನೆಯಲ್ಲಿರೋ ದಿನಸಿ ಡಬ್ಬಿಗಳಲ್ಲಿಸೇಪಾಗಿ ಕೂಡಿಟ್ಟು, ಕುಟುಂಬದ ಕಷ್ಟದ ದಿನಗಳಿಗೆ ನೆರವಾಗೋದು ಭಾರತೀಯ ಗೃಹಿಣಿಯ ಜಾಯಮಾನ.ಪತ್ನಿಯನ್ನು ಪತಿ ತಮಾಷೆಗೆ ಹೋಮ್‌ ಮಿನಿಸ್ಟರ್‌ ಎಂದು ಕರೆಯುದುಂಟು.

ವಿಶ್ವದ ಪ್ರಭಾವಿ ಸ್ತ್ರೀಯರ ಪಟ್ಟಿಯಲ್ಲಿ ನಿರ್ಮಲಾ, ಮಜುಂದಾರ್‌ಗೆ ಸ್ಥಾನ

ಆದ್ರೆ ವಾಸ್ತವದಲ್ಲಿಆಕೆ ಕುಟುಂಬದ ಫೈನಾನ್ಸ್‌ ಮಿನಿಸ್ಟರ್‌. ಆದ್ರೆ ಈ ವರ್ಷ ಕೊರೋನಾ ಕಾರಣಕ್ಕೆ ಅನೇಕ  ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸಿವೆ.ಉದ್ಯೋಗ ಕಡಿತ, ಅನಾರೋಗ್ಯ,ವೇತನ ಕಡಿತ ಸಮಸ್ಯೆಗಳ ಕಾರಣಕ್ಕೆ ಕುಟುಂಬದ ಮಾಸಿಕ ಆದಾಯದಲ್ಲೂಇಳಿಕೆಯಾಗಿದೆ.ಇಂಥ ಸಮಯದಲ್ಲಿ ಗೃಹಿಣಿ ನಿತ್ಯದ ವೆಚ್ಚಗಳ ಮೇಲೆ ಇನ್ನಷ್ಟು ಹಿಡಿತ ಹೊಂದಿರಬೇಕಾದ ಅಗತ್ಯವಿದೆ. ಹಾಗಾದ್ರೆ ಗೃಹಿಣಿ ಮನೆ ಖರ್ಚುವೆಚ್ಚಗಳನ್ನು ಹೇಗೆಲ್ಲ ಕಡಿತಗೊಳಿಸಬಹುದು? ಅದಕ್ಕಿರೋ ಉಪಾಯಗಳೇನು?

ತಿಂಗಳ ಬಜೆಟ್‌ ಸಿದ್ಧಪಡಿಸಿ

ಪತಿಯ ಮಾಸಿಕ ಆದಾಯಕ್ಕನುಗುಣವಾಗಿ ಮನೆ ಖರ್ಚಿಗೆ ತಿಂಗಳಿಗೆ ಎಷ್ಟು ಹಣ ವ್ಯಯಿಸಬಹುದು ಎಂಬ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಿ. ಈ ಬಗ್ಗೆ ಪತಿಯೊಂದಿಗೂ ಮಾತನಾಡಿ. ಎಷ್ಟು ಹಣ ಎಂಬುದನ್ನು ನಿರ್ಧರಿಸಿಕೊಂಡ ಬಳಿಕ ಬಜೆಟ್‌ ಸಿದ್ಧಪಡಿಸಿಕೊಳ್ಳಿ. ಅಂದ್ರೆ ಪತಿ ನಿಮಗೆ ಮನೆ ಖರ್ಚಿಗೆಂದು ನೀಡೋ ಹಣದಲ್ಲಿ ಹಾಲು, ಹಣ್ಣು-ತರಕಾರಿ, ದಿನಸಿ ಸಾಮಗ್ರಿಗಳು ಸೇರಿದಂತೆ ಮನೆ ನಡೆಸಲು ಬೇಕಾಗೋ ಸಾಮಗ್ರಿಗಳಿಗೆ ತಿಂಗಳಿಗೆ ಅಂದಾಜು ಎಷ್ಟು ವ್ಯಯಿಸಬಹುದು ಎಂಬುದನ್ನು ನಿರ್ಧರಿಸಿ. ಅದಕ್ಕನುಗುಣವಾಗಿ ಅಗತ್ಯ ಸಾಮಗ್ರಿಗಳ ಪಟ್ಟಿ ಹಾಗೂ ಅಂದಾಜು ವೆಚ್ಚವನ್ನು ಒಂದು ಕಾಗದದ ಮೇಲೆ ಬರೆದಿಡಿ. ಇದ್ರಿಂದ ಅನಗತ್ಯ ವೆಚ್ಚವನ್ನು ತಪ್ಪಿಸಲು ಸಾಧ್ಯವಾಗುತ್ತೆ. 

ಆಸೆ ಹಾಗೂ ಅಗತ್ಯಗಳ ನಡುವಿನ ವ್ಯತ್ಯಾಸ ಗುರುತಿಸಿ

ಆಸೆ ಹಾಗೂ ಅಗತ್ಯಗಳ ನಡುವಿನ ವ್ಯತ್ಯಾಸ ಗುರುತಿಸಲು ನೀವು ಸಫಲರಾದ್ರೆ, ಅನಗತ್ಯ ವೆಚ್ಚ ತಡೆಯಬಹುದು. ಉದಾಹರಣೆಗೆ ಪಕ್ಕದ ಮನೆಯವರು ಡಬಲ್‌ ಡೋರ್‌ ಫ್ರಿಜ್‌ ತಂದಿದ್ದಾರೆ ಎಂಬ ಕಾರಣಕ್ಕೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿರೋ ನಿಮ್ಮನೆ ಸಿಂಗಲ್‌ ಡೋರ್‌ ಫ್ರಿಜ್‌ ಬದಲಾಯಿಸಿ ಡಬಲ್‌ ಡೋರ್‌ ಫ್ರಿಜ್‌ ತರಲು ಹೋಗೋದು ಆಸೆಯೇ ಹೊರತು ಅಗತ್ಯ ಅಲ್ಲವೇ ಅಲ್ಲ. ತಿಂಗಳ ಖರ್ಚಿನಲ್ಲಿ ಎಷ್ಟೋ ಬಾರಿ ಇಂಥ ಅನೇಕ ಆಸೆಗಳು ಸೇರಿಕೊಂಡು ಅನಗತ್ಯ ದುಂದುವೆಚ್ಚಕ್ಕೆ ನಾಂದಿ ಹಾಡುತ್ತವೆ.

ವೆಚ್ಚ ವಿಶ್ಲೇಷಿಸಿ

ತಿಂಗಳ ಕೊನೆಯಲ್ಲಿ ನೀವು ಆ ತಿಂಗಳಿಡೀ ಎಷ್ಟು ಹಣ ವ್ಯಯಿಸಿದ್ದೀರಿ ಎಂಬುದನ್ನು ಪರಿಶೀಲಿಸಲು ಮರೆಯಬೇಡಿ. ಇದ್ರಿಂದ ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೀರಿ ಎಂಬುದು ತಿಳಿಯುತ್ತದೆ. ಅಲ್ಲದೆ, ಅಷ್ಟು ಹಣ ವ್ಯಯಿಸಲು ಕಾರಣವೇನು? ಆ ವೆಚ್ಚವನ್ನು ಮುಂದಿನ ತಿಂಗಳು ಹೇಗೆ ಕಡಿತಗೊಳಿಸಬಹುದು ಎಂಬ ಬಗ್ಗೆ ಯೋಜನೆ ರೂಪಿಸೋದು ಸುಲಭವಾಗುತ್ತೆ.

ಕೊರೋನಾ ಆರ್ಥಿಕ ಹೊರೆ: ಈ ದೇಶದಲ್ಲಿ ಶ್ರೀಮಂತರ ಮೇಲೆ ತೆರಿಗೆ!

ಉದಾಹರಣೆಗೆ ವಿದ್ಯುತ್‌ ಬಿಲ್‌ ಜಾಸ್ತಿ ಬರುತ್ತಿದ್ರೆ, ಅದನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ನೀವು ಯೋಚಿಸಿ, ಮನೆ ಮಂದಿಗೆ ಆ ಬಗ್ಗೆ ನಿರ್ದೇಶನ ನೀಡಬಹುದು. ರೂಮ್‌ನಿಂದ ಹೊರಬರೋವಾಗ ಲೈಟ್‌, ಫ್ಯಾನ್‌  ಆಫ್‌ ಮಾಡೋದು, ಸ್ನಾನಕ್ಕೆ ಹೋಗೋ ಕೆಲವೇ ನಿಮಿಷ ಮೊದಲು ಗೀಸರ್‌ ಆನ್‌ ಮಾಡೋದು ಸೇರಿದಂತೆ ವಿದ್ಯುತ್‌ ಉಳಿತಾಯಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಮನೆ ಸದಸ್ಯರು ಕೈಗೊಳ್ಳುವಂತೆ ನೋಡಿಕೊಳ್ಳಿ.

ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ

ದಿನಸಿ ಸಾಮಗ್ರಿಗಳು, ಬಟ್ಟೆ, ಮಕ್ಕಳಿಗೆ ತಿಂಡಿ-ತಿನಿಸು ಸೇರಿದಂತೆ ಪ್ರತಿ ಖರ್ಚಿನ ಮೇಲೂ ಹಿಡಿತ ಸಾಧಿಸಲು ಪ್ರಯತ್ನಿಸಿ. ಎಲ್ಲಿ ಅನಗತ್ಯವಾಗಿ ಖರ್ಚಾಗುತ್ತಿದೆ ಎಂಬುದನ್ನು ಗುರುತಿಸಿದ್ರೆ ವೆಚ್ಚಕ್ಕೆ ಕಡಿವಾಣ ಹಾಕೋದು ಸುಲಭ. 

ಶಾಪಿಂಗ್‌ಗೆ ಮುನ್ನ ಪಟ್ಟಿ ತಯಾರಿಸಿ

ಶಾಪಿಂಗ್‌ಗೆ ಹೊರಡೋ ಮುನ್ನ ಏನೆಲ್ಲ ಖರೀದಿಸಬೇಕು ಎಂಬುದನ್ನು ಪಟ್ಟಿ ಮಾಡಿ. ಬಟ್ಟೆ ಖರೀದಿಯಿರಲಿ, ದಿನಸಿ ಅಥವಾ ಹಣ್ಣು-ತರಕಾರಿ ಮಾರುಕಟ್ಟೆಗೆ ಹೋಗೋದೇ ಇರಲಿ, ಪಟ್ಟಿ ತೆಗೆದುಕೊಂಡು ಹೋಗಲು ಮರೆಯಬೇಡಿ. ಶಾಪಿಂಗ್‌ ಮಾಡೋವಾಗ ಪಟ್ಟಿಯಲ್ಲಿರೋದನ್ನೆಲ್ಲ ಒಮ್ಮೆಗೆ ಖರೀದಿಸಿ.

ರೋಷನಿ ದೇಶದ ನಂ.1 ಶ್ರೀಮಂತೆ : ಯಾರಾಕೆ..?

ಇದ್ರಿಂದ ಬೇರೆ ಬೇರೆ ಅಂಗಡಿಗಳಿಗೆ ಹೋಗೋ ಶ್ರಮ ಹಾಗೂ ವಾಹನಕ್ಕೆ ವ್ಯಯಿಸೋ ಪೆಟ್ರೋಲ್‌ ಎರಡೂ ಉಳಿಯುತ್ತೆ. ಇನ್ನು ದಿನಸಿ ಸಾಮಗ್ರಿ ತಿಂಗಳಿಗೆ ಎಷ್ಟು ಬೇಕು ಎಂಬುದನ್ನು ಅಂದಾಜಿಸಿ ಒಮ್ಮೆಗೆ ಖರೀದಿಸೋದು ಉತ್ತಮ. ಇದ್ರಿಂದ ಒಂದಿಷ್ಟು ಆಫರ್‌ ಸಿಗೋ ಜೊತೆ ಪದೇಪದೆ ಸೂಪರ್‌ ಮಾರ್ಕೆಟ್‌ಗೆ ಹೋಗೋ ತಾಪತ್ರಯ ತಪ್ಪುತ್ತೆ.

ಬೆಲೆ ಹೋಲಿಕೆ ಮಾಡದೆ ಖರೀದಿಸಬೇಡಿ

ಯಾವುದೇ ವಸ್ತು ಖರೀದಿಸೋ ಮುನ್ನ ಅದರ ಬೆಲೆ ಬಗ್ಗೆ ಒಂದಿಷ್ಟು ರಿಸರ್ಚ್‌ ಮಾಡೋದು ಅಗತ್ಯ. ಇದ್ರಿಂದ ಯಾವ ಶಾಪ್‌ನಲ್ಲಿ ಕಡಿಮೆ ಬೆಲೆಗೆ ಆ ವಸ್ತು ಸಿಗುತ್ತದೆ ಎಂಬುದು ತಿಳಿಯುತ್ತದೆ.

ಡಿಸ್ಕೌಂಟ್‌, ಆಫರ್‌ ಬಳಸಿಕೊಳ್ಳಿ
ಆನ್‌ಲೈನ್‌ ಖರೀದಿ ಇರಲಿ ಅಥವಾ ಶಾಪ್‌ಗೆ ಹೋಗಿ ಕೊಳ್ಳೋದೇ ಇರಲಿ, ಆದಷ್ಟು ಡಿಸ್ಕೌಂಟ್‌ ಹಾಗೂ ಆಫರ್‌ಗಳನ್ನು ಬಳಸಿಕೊಳ್ಳಿ. ಇದ್ರಿಂದ ಒಂದಿಷ್ಟು ಹಣ ಉಳಿತಾಯವಾಗುತ್ತೆ.

ನಗದು ಪಾವತಿಸಿ

ಇತ್ತೀಚೆಗೆ ಆರ್ಥಿಕ ವ್ಯವಹಾರದಲ್ಲಿ ಡಿಜಿಟಲೀಕರಣ ಹೆಚ್ಚಿರೋದೇನೋ ನಿಜ. ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಪೇಮೆಂಟ್‌ಗೆ ಸಾಕಷ್ಟು ಆಫರ್‌, ಡಿಸ್ಕೌಂಟ್‌ಗಳು ಲಭ್ಯವಿವೆ. ಆದ್ರೂ ಚಿಕ್ಕಪುಟ್ಟ ವಸ್ತುಗಳನ್ನು ಖರೀದಿಸಿದ ಬಳಿಕ ನಗದು ರೂಪದಲ್ಲೇ ಪಾವತಿಸಿ. ಇದ್ರಿಂದ ನಿಮ್ಮ ಪರ್ಸ್‌ನಿಂದ ಎಷ್ಟು ಹಣ ಖರ್ಚಾಯಿತು ಎಂಬುದರ ವಾಸ್ತವಿಕ ಅನುಭವ ನಿಮಗೆ ಲಭಿಸುತ್ತದೆ. ಇಲ್ಲವಾದ್ರೆ ಹೇಗೋ ಕ್ರೆಡಿಟ್‌ ಕಾರ್ಡ್‌ ಇದೆಯೆಲ್ಲ ಎಂಬ ಭಂಡ ಧೈರ್ಯದಲ್ಲಿ ದುಂದುವೆಚ್ಚ ಮಾಡೋ ಸಾಧ್ಯತೆ ಹೆಚ್ಚಿರುತ್ತೆ.

ಮರುಬಳಕೆ ಬಗ್ಗೆ ಯೋಚಿಸಿ

ಮನೆಯಲ್ಲಿರೋ ಯಾವುದೇ ವಸ್ತುವನ್ನು ಡಸ್ಟ್‌ಬಿನ್‌ಗೆ ಎಸೆಯೋ ಮುನ್ನ ಅದನ್ನು ಬೇರೆ ಯಾವುದಾದ್ರೂ ಉದ್ದೇಶಕ್ಕೆ ಬಳಸಬಹುದಾ ಎಂದು ಯೋಚಿಸಿ. ಕಸದಿಂದ ರಸ ಮಾಡೋ ಯೋಚನೆ ತಲೆಯಲ್ಲಿರಲಿ. 

ಉಳಿತಾಯದಲ್ಲಿ ರಾಜೀ ಬೇಡ

ಪ್ರತಿ ತಿಂಗಳೂ ಮನೆಯ ಖರ್ಚುಗಳನ್ನೆಲ್ಲ ಕಳೆದು ಉಳಿದ ಹಣವನ್ನು ಉಳಿತಾಯ ಮಾಡೋ ಯೋಚನೆ ನಿಮ್ಮ ತಲೆಯಲ್ಲಿದ್ರೆ ಇಂದೇ ತೆಗೆದು ಹಾಕಿ. ಇಂಥ ಯೋಚನೆಯಿಂದ ಉಳಿಕೆ ಕಡಿಮೆಯಾಗಬಹುದು. ಇದರ ಬದಲು ನಿಮ್ಮ ಪತಿ ಮನೆ ಖರ್ಚಿಗೆಂದು ನೀಡೋ ಹಣದಲ್ಲಿ ಮೊದಲೇ ಒಂದಿಷ್ಟನ್ನು ಉಳಿತಾಯ ಎಂದು ತೆಗೆದಿರಿಸಿಕೊಂಡು ಮಿಕ್ಕ ಹಣವನ್ನು ವ್ಯಯಿಸಿ. ಅಂದ್ರೆ ಆದಾಯ-ಉಳಿತಾಯ= ಖರ್ಚು ಎಂಬಂತಿರಲಿ ನಿಮ್ಮ ಪ್ಲ್ಯಾನಿಂಗ್‌.