ಬಡತನದ ಕಾರಣಕ್ಕೆಅರ್ಧದಲ್ಲೇ ಶಾಲೆ ಬಿಟ್ಟ ಈತ ಈಗ ದೇಶದ ಜನಪ್ರಿಯ ಎಲೆಕ್ಟ್ರಿಕ್ ವೈರ್ ಕಂಪನಿ ಮಾಲೀಕ
ಬಡತನ,ನೋವು,ಸಂಕಷ್ಟಗಳನ್ನು ಎದುರಿಸಿದ್ದ ಜೈ ಸಿಂಘಾನಿಯಾ, ಇಂದು ಭಾರತದ ಬಿಲಿಯನೇರ್ ಉದ್ಯಮಿಯಾಗಿ ಬೆಳೆದಿದ್ದಾರೆ. ಅವರ ಹೋರಾಟದ ಬದುಕು ಹಲವರಿಗೆ ಪ್ರೇರಣೆ ಕೂಡ.
Business Desk: ತಾಳ್ಮೆ, ಹೋರಾಟ ಹಾಗೂ ದೃಢಸಂಕಲ್ಪಕ್ಕೆ ಇಂದರ್ ಜೈ ಸಿಂಘಾನಿಯಾ ಅತ್ಯುತ್ತಮ ನಿದರ್ಶನ. ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ ಸಿಂಘಾನಿಯಾ, ಇಂದು ಅವುಗಳೆಲ್ಲವನ್ನೂ ಮೀರಿ ಬೆಳೆದು 79,700 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ್ದಾರೆ. ಸಿಂಘಾನಿಯಾ15ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ನಾಲ್ವರು ಮಕ್ಕಳಲ್ಲಿ ಎರಡನೆಯವರಾದ ಇಂದರ್, ತಂದೆಯ ಅಂಗಡಿಯ ಜವಾಬ್ದಾರಿ ನೋಡಿಕೊಳ್ಳಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದರು. ತಂದೆಯ ಪುಟ್ಟ ಎಲೆಕ್ಟ್ರಿಕ್ ಅಂಗಡಿಯನ್ನು ಸಂಭಾಳಿಸಿಕೊಂಡು ಮುನ್ನಡೆದ ಸಿಂಘಾನಿಯಾ 1983ರಲ್ಲಿ ಸಹೋದರರ ಜೊತೆಗೆ ಸೇರಿ ಪಾಲಿಕ್ಯಾಬ್ ಇಂಡಿಯಾ ಎಂಬ ಎಲೆಕ್ಟ್ರಿಕ್ ವೈರ್ ಉತ್ಪಾದಿಸುವ ಕಂಪನಿ ಪ್ರಾರಂಭಿಸುತ್ತಾರೆ. ಇಲ್ಲಿಂದ ಮುಂದೆ ಸಿಂಘಾನಿಯಾ ಹಿಂತಿರುಗಿ ನೋಡಿಯೇ ಇಲ್ಲ. ಇಂದು ಈ ಕಂಪನಿಯ ಮೌಲ್ಯ 79,700 ಕೋಟಿ ರೂ.
ಜೈ ಸಿಂಘಾನಿಯಾ ತನ್ನ ಸಹೋದರರಾದ ಗಿರಿಧರಿ, ಅಜಯ್ ಹಾಗೂ ರಮೇಶ್ ಅವರ ಜೊತೆಗೆ ಸೇರಿ 1983ರಲ್ಲಿ ಪಾಲಿಕ್ಯಾಬ್ ಕಂಪನಿ ಪ್ರಾರಂಭಿಸುತ್ತಾರೆ. ಪ್ರಾರಂಭದಲ್ಲಿ ಸಣ್ಣ ಗ್ಯಾರೇಜ್ ವೊಂದರಿಂದ ಇವರ ಕಂಪನಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು. ಈ ಗ್ಯಾರೇಜ್ ನಲ್ಲೇ ಎಲೆಕ್ಟ್ರಿಕ್ ವೈರ್ ಉತ್ಪಾದಿಸಲು ಪ್ರಾರಂಭಿಸಿದರು. ಆ ಬಳಿಕ ಗುಜರಾತ್ ನಲ್ಲಿ ಅವರು ಉತ್ಪಾದನಾ ಘಟಕ ಪ್ರಾರಂಭಿಸಿದರು. ಕ್ರಮೇಣ ಪಾಲಿಕ್ಯಾಬ್ ಎಲೆಕ್ಟ್ರಿಕ್ ವೈರ್ ಜೊತೆಗೆ ಸ್ವಿಚ್ ಗಳು, ಸ್ವಿಚ್ ಗೇರ್, ಎಲೆಕ್ಟ್ರಿಕ್ ಫ್ಯಾನ್ಸ್ ಹಾಗೂ ಎಲ್ ಇಡಿ ಲೈಟಿಂಗ್ ಸೇರಿದಂತೆ ಇತರ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಉತ್ಪಾದಿಸಲು ಪ್ರಾರಂಭಿಸಿತು.
ವಿದೇಶದಲ್ಲಿನ ಉನ್ನತ ಹುದ್ದೆ ತೊರೆದ ಐಐಟಿ ಪದವೀಧರ ಈಗ 3000 ಕೋಟಿ ಮೌಲ್ಯದ ಕಂಪನಿ ಒಡೆಯ
ಪ್ರಾರಂಭದಲ್ಲಿ ಪಾಲಿಕ್ಯಾಬ್ ಕೇವಲ ಪಿವಿಸಿ ಇನ್ಸುಲೇಟೆಡ್ ವೈರ್ ಹಾಗೂ ಕೇಬಲ್ ಗಳನ್ನುಉತ್ಪಾದಿಸುತ್ತಿತ್ತು. ಆ ಬಳಿಕ ಪವರ್ ಕೇಬಲ್ಸ್, ಕಂಟ್ರೋಲ್ ಕೇಬಲ್ಸ್, ಬಿಲ್ಡಿಂಗ್ ವೈರ್ ಹಾಗೂ ಕಮ್ಯೂನಿಕೇಷನ್ ಕೇಬಲ್ ಗಳ ಉತ್ಪಾದನೆ ಪ್ರಾರಂಭಿಸಿತು. ಇಂದರ್ ಭಾರತೀಯರು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಟ್ಯಾಂಡರ್ಡ್ ಗೆ ಅನುಗುಣವಾಗಿ ವೈರ್ ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು. ಇದರಿಂದ ಬಹುಬೇಗ ಯಶಸ್ಸು ಸಾಧಿಸಲು ಸಾಧ್ಯವಾಯಿತು.
2008ರಲ್ಲಿ ಪಾಲಿಕ್ಯಾಬ್ ಕಂಪನಿ ವಿಶ್ವ ಬ್ಯಾಂಕಿನ ಪ್ರೈವೇಟ್ ಇಕ್ವಿಟಿ ಸಂಸ್ಥೆಯಾದ ಅಂತಾರಾಷ್ಟ್ರೀಯ ಹಣಕಾಸು ಕಾರ್ಪೋರೇಷನ್ ನಿಂದ (ಐಎಫ್ ಸಿ) ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಐಎಫ್ ಸಿ ಪಾಲಿಕ್ಯಾಬ್ ಷೇರುಗಳನ್ನು ಸ್ವಾಧಿನಪಡಿಸಿಕೊಂಡಿತ್ತು. 2014ರಲ್ಲಿ ಕಂಪನಿ ಎಲ್ಇಡಿ ಲೈಟ್ ಗಳು, ಸ್ವಿಚ್ ಗಳು ಹಾಗೂ ಎಲೆಕ್ಟ್ರಿಕ್ ಫ್ಯಾನ್ ಗಳನ್ನು ಸೇರಿಸುವ ಮೂಲಕ ತನ್ನ ಉತ್ಪನ್ನ ಪೋರ್ಟ್ ಫೋಲಿಯೋದಲ್ಲಿ ವೈವಿಧ್ಯತೆಯನ್ನು ಕಾಯ್ದುಕೊಂಡಿತು.
2019ರಲ್ಲಿ ಜೈ ಸಿಂಘಾನಿಯಾ ಪಾಲಿಕ್ಯಾಬ್ ಕಂಪನಿಯನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡಿದರು. 2021ರಲ್ಲಿ ಇಂದರ್ ಜೈ ಸಿಂಘಾನಿಯಾ ಅವರ ಹೆಸರು ಫೋರ್ಬ್ಸ್ ಲಿಸ್ಟ್ ಆಫ್ ಇಂಡಿಯನ್ ಬಿಲಿಯನೇರ್ ನಲ್ಲಿ ಸ್ಥಾನ ಪಡೆದುಕೊಂಡಿತು. ಇಂದು ಇಂದರ್ ಜೈ ಸಿಂಘಾನಿಯಾ ಅವರ ನಿವ್ವಳ ಸಂಪತ್ತು 53,000 ಕೋಟಿ ರೂ. ಇನ್ನು ಪಾಲಿಕ್ಯಾಬ್ ಇಂಡಿಯಾದ ಮಾರುಕಟ್ಟೆ ಮೌಲ್ಯ 79,700 ಕೋಟಿ ರೂ.
ಇ-ಕಾಮರ್ಸ್ ಕಂಪನಿ ಸ್ಥಾಪಿಸಿ, ಕೆಲವೇ ವರ್ಷಗಳಲ್ಲಿ ಮಾರಾಟ ಮಾಡಿ 17000 ಕೋಟಿ ಗಳಿಸಿದ ಉದ್ಯಮಿ
ಇಂದರ್ ಜೈ ಸಿಂಘಾನಿಯಾ 2023ನೇ ಸಾಲಿನ 100 ಶ್ರೀಮಂತರ ಪಟ್ಟಿಯಲ್ಲಿ 32ನೇ ಸ್ಥಾನ ಗಳಿಸಿದ್ದಾರೆ. ಇನ್ನು ಅವರ ನಿವ್ವಳ ಸಂಪತ್ತು ಅಂದಾಜು 53,298 ಕೋಟಿ ರೂ. ಇನ್ನು ಪಾಲಿಕ್ಯಾಬ್ ಎಫ್ ಎಂಇಜಿ ಉತ್ಪನ್ನಗಳ ವಲಯದಲ್ಲಿ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದೆ.
ಒಟ್ಟಾರೆ ಬಾಲ್ಯದಲ್ಲಿ ಆರ್ಥಿಕ ಸಂಕಷ್ಟದಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ ಜೈ ಸಿಂಘಾನಿಯಾ ಇಂದು ಅವೆಲ್ಲವನ್ನೂ ಮೀರಿ ಬೆಳೆದಿದ್ದಾರೆ. ಭಾರತದ ಬಿಲಿಯನೇರ್ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ ಉದ್ಯಮ ಕ್ಷೇತ್ರಕ್ಕೆ ಕಾಲಿಡುವ ಅನೇಕರಿಗೆ ಪ್ರೇರಣೆ ಕೂಡ ಆಗಿದ್ದಾರೆ.