ವಿದೇಶದಲ್ಲಿನ ಉನ್ನತ ಹುದ್ದೆ ತೊರೆದ ಐಐಟಿ ಪದವೀಧರ ಈಗ 3000 ಕೋಟಿ ಮೌಲ್ಯದ ಕಂಪನಿ ಒಡೆಯ
ಉದ್ಯಮ ಕ್ಷೇತ್ರ ಪ್ರವೇಶಿಸಿರುವ ಅನೇಕ ಐಐಟಿ ಪದವೀಧರರು ಅದರಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಅಂಥವರಲ್ಲಿ ರಜನೀಶ್ ಕುಮಾರ್ ಕೂಡ ಒಬ್ಬರು. ಟ್ರಾವೆಲ್ ಅಪ್ಲಿಕೇಷನ್ ಸ್ಥಾಪಿಸಿ ಯಶಸ್ಸು ಕಂಡ ರಜನೀಶ್ ಅವರ ಹೋರಾಟದ ಕಥೆ ಇಲ್ಲಿದೆ.
Business Desk: ಕಳೆದ ಕೆಲವು ದಶಕಗಳಲ್ಲಿ ಐಐಟಿ ಪದವೀಧರರು ಭಾರತದಲ್ಲಿ ಬೃಹತ್ ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಾಗೆಯೇ ವಿಶ್ವದ ಕೆಲವು ಜನಪ್ರಿಯ ಟೆಕ್ ಕಂಪನಿಗಳನ್ನು ಐಐಟಿ ಪದವೀಧರರು ಮುನ್ನಡೆಸುತ್ತಿದ್ದಾರೆ. ಅಲ್ಲದೆ, ದೇಶದಲ್ಲಿನ ಇಂಟರ್ನೆಟ್ ಕ್ರಾಂತಿ ಅನೇಕರಿಗೆ ಅಧಿಕ ವೇತನದ ಉದ್ಯೋಗ ತೊರೆದು ಸ್ವಂತ ಉದ್ಯಮ ಕೈಗೊಳ್ಳಲು ಪ್ರೇರಣೆ ನೀಡಿದೆ. ಈ ರೀತಿ ಪ್ರೇರಣೆ ಪಡೆದು ಸ್ವಂತ ಉದ್ಯಮ ಸ್ಥಾಪಿಸಿದವರಲ್ಲಿ ರಜನೀಶ್ ಕುಮಾರ್ ಕೂಡ ಒಬ್ಬರು. ಐಐಟಿ ಪದವೀಧರರಾಗಿರುವ ರಜನೀಶ್ ಪ್ರಾರಂಭಿಸಿರುವ ಕಂಪನಿಯ ಮೌಲ್ಯ ಈಗ 3000 ಕೋಟಿ ರೂ. ತನ್ನ ಪಾಲುದಾರನ ಜೊತೆಗೆ ಉದ್ಯಮ ಜಗತ್ತು ಪ್ರವೇಶಿಸಲು ರಜನೀಶ್ ಫ್ರಾನ್ಸ್ ನಲ್ಲಿನ ಅಧಿಕ ವೇತನದ ಉದ್ಯೋಗ ತ್ಯಜಿಸಿದ್ದರು. ಈ ಇಬ್ಬರು ಈಗ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿದ್ದಾರೆ.
ರಜನೀಶ್ ಕುಮಾರ್ ಇಕ್ಸಿಗೋ ಸಂಸ್ಥೆಯ ಸಹಸಂಸ್ಥಾಪಕರು. ಈ ಸಂಸ್ಥೆಯಲ್ಲಿ ಅವರು ಗ್ರೂಪ್ ಚೀಫ್ ಪ್ರಾಡಕ್ಟ್ ಹಾಗೂ ಟೆಕ್ನಾಲಜಿ ಆಫೀಸರ್ (CPTO) ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇವರು ಗುರ್ಗಾಂವ್ ಮೂಲದ ಟ್ರಾವೆಲ್ ಕಂಪನಿಯೊಂದರ ಸಹಸಂಸ್ಥಾಪಕರು ಕೂಡ ಹೌದು. 2007ರಲ್ಲಿ ಅಲೋಕೆ ಬಾಜಪೇಯಿ ಜೊತೆಗೆ ಸೇರಿ ಈ ಕಂಪನಿ ಸ್ಥಾಪಿಸಿದರು.
ಇ-ಕಾಮರ್ಸ್ ಕಂಪನಿ ಸ್ಥಾಪಿಸಿ, ಕೆಲವೇ ವರ್ಷಗಳಲ್ಲಿ ಮಾರಾಟ ಮಾಡಿ 17000 ಕೋಟಿ ಗಳಿಸಿದ ಉದ್ಯಮಿ
ರಜನೀಶ್ ಕುಮಾರ್ ಐಐಟಿ ಕಾನ್ಪುರದಿಂದ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ನಲ್ಲಿ 2001ರಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ಇಟಿಎಚ್ ಝುರಿಚ್ ನಲ್ಲಿ ಅವರು ಇಂಟರ್ನ್ ಆಗಿ ಸೇರಿದರು. ಉದ್ಯಮದ ಜೊತೆಗೆ ತಂತ್ರಜ್ಞಾನವನ್ನು ಸೇರಿಸುವಲ್ಲಿ ಹಾಗೂ ನಿತ್ಯದ ಸಮಸ್ಯೆಗಳನ್ನು ನಿವಾರಿಸುವ ಉತ್ಪನ್ನಗಳನ್ನು ನಿರ್ಮಿಸುವಲ್ಲಿ ರಜನೀಶ್ ಪರಿಣಿತರು. ಅವರು ಫ್ರಾನ್ಸ್ ನಲ್ಲಿ ಅಮಡೆಸ್ ಎಸ್ ಎಎಸ್ ಸಂಸ್ಥೆಯನ್ನು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇರ್ಪಡೆಗೊಂಡರು ಆ ಬಳಿಕ ಅದರ ಟೆಕ್ನಿಕಲ್ ಹೆಡ್ ಆದರು.
ರಜನೀಶ್ ಅವರ ಮಾರ್ಗದರ್ಶನದಲ್ಲಿ ಇಕ್ಸಿಗೋ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಟಾಪ್ 10 ಡೌನ್ಲೋಡೆಡ್ ಟ್ರಾವೆಲ್ ಅಪ್ಲಿಕೇಷನ್ ಗಳಲ್ಲಿ ಒಂದಾಗಿದೆ. 2022ರಲ್ಲಿ ಈ ಸಂಸ್ಥೆ 8ನೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಷನ್ ಆಗಿ ಗುರುತಿಸಿಕೊಂಡಿದೆ. ಇನ್ನು ರಜನೀಶ್ ಅವರು ಹೊಸ ಉತ್ಪನ್ನಗಳ ನಿರ್ಮಾಣದಲ್ಲಿ ಕೂಡ ಸಾಕಷ್ಟು ಪರಿಜ್ಞಾನ ಹೊಂದಿದ್ದಾರೆ. ಹೊಸ ಉತ್ಪನ್ನಗಳ ಅಭಿವೃದ್ಧಿ, ಮುಂದುವರಿದ ತಂತ್ರಜ್ಞಾನಗಳ ಬಳಕೆ, ಉತ್ಪನ್ನ ಹಾಗೂ ಬೆಳವಣಿಗೆ ಮಾರ್ಕೆಟಿಂಗ್, ರಿಸರ್ಚ್ ಹಾಗೂ ಎಐ ಮುಂದಾಲೋಚನೆ ಹಾಗೂ ಟಾಪ್ ಜಾಗತಿಕ ಪರಿಣಿತರ ನೇಮಕ ಮುಂತಾದ ವಿಷಯಗಳಲ್ಲಿ ರಜನೀಶ್ ಸಾಕಷ್ಟು ಅನುಭವ ಹೊಂದಿದ್ದಾರೆ. ಇದು ಇಕ್ಸಿಗೋ ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಯಲು ನೆರವು ನೀಡಿದೆ.
ಒಂದೇ ವರ್ಷದಲ್ಲಿ ಅಂದಾಜು 40 ಕೋಟಿ ಗಳಿಸಿದ ಉದ್ಯಮಿ, ಮಾಡ್ತಿರೋ ಬಿಸಿನೆಸ್ ಏನು?
ರಜನೀಶ್ ಇಕ್ಸಿಗೋ ಕಂಪನಿಯನ್ನು ಗುರ್ಗಾಂವ್ ನ ಪುಟ್ಟ ಅಪಾರ್ಟ್ ಮೆಂಟ್ ನಲ್ಲಿ ಪ್ರಾರಂಭಿಸಿದರು. ಕೇವಲ 6ಲಕ್ಷ ರೂ. ಹೂಡಿಕೆಯೊಂದಿಗೆ ಅವರು ಉದ್ಯಮ ಪ್ರಾರಂಭಿಸಿದ್ದರು. ಹಾಗೆಯೇ ಗ್ರಾಹಕಸ್ನೇಹಿ ಮೆಟಾ ಸರ್ಚ್ ಮಾಡೆಲ್ ಸೃಷ್ಟಿಸುವ ಗುರಿ ಹೊಂದಿದ್ದರು. ಪ್ರಾರಂಭದಲ್ಲಿ ಇಕ್ಸಿಗೋ ಬಸ್ ಗಳು ಹಾಗೂ ರೈಲುಗಳ ಸಮಯ ತಿಳಿಯಲು ಸರ್ಚ್ ಇಂಜಿನ್ ಮಾದರಿಯಲ್ಲಿ ಕಾರ್ಯನಿರ್ವಹಿಸಿತು. ಆದರೆ, ಕಂಪನಿಗೆ ಟರ್ನಿಂಗ್ ಪಾಯಿಂಟ್ ಅಂದರೆ ಅದು ಟಿಕೆಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು. ಯಾವಾಗ ಈ ಅಪ್ಲಿಕೇಷನ್ ನಲ್ಲಿ ಟಿಕೆಟ್ ಬುಕ್ ಮಾಡಲು ಪ್ರಾರಂಭಿಸಿದರೂ ಅದು ಕಂಪನಿಯ ಭವಿಷ್ಯದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ರಜನೀಶ್ ಟ್ರಾವೆಲ್ ತಂತ್ರಜ್ಞಾನದಲ್ಲಿನ ಮಹತ್ವದ ಬಗ್ಗೆ ತಿಳಿದುಕೊಂಡರು. ಹಾಗೆಯೇ ಹೊಸ ತಂತ್ರಜ್ಞಾನವನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳುತ್ತ ಸಾಗಿದರು. ಇದು ಇಕ್ಸಿಗೋ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ನೆರವು ನೀಡಿತು.