ಗ್ಯಾಸ್ ಸಿಲಿಂಡರ್ ತೂಕ 14.2 ಕೆಜಿ ಇರುವುದರ ಹಿಂದೆ ಬಲವಾದ ತರ್ಕವಿದೆ. ಸಾಮಾನ್ಯ ವ್ಯಕ್ತಿ ಸುಲಭವಾಗಿ ಸಾಗಿಸಬಹುದಾದ ಗರಿಷ್ಠ ತೂಕ, ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವ ಅಂದಾಜು ಪ್ರಮಾಣ, ಮತ್ತು ಪೂರೈಕೆ ಸರಪಳಿಯ ಸುಲಭ ನಿರ್ವಹಣೆ.
ಬೆಂಗಳೂರು (ಮಾ.19): ಪ್ರಸ್ತುತ ಅಡುಗೆ ಅನಿಲ (LPG) ಬಿಕ್ಕಟ್ಟಿನಿಂದಾಗಿ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಮುಂಜಾನೆಯಿಂದಲೇ ಉದ್ದನೆಯ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇಂತಹ ಸಮಯದಲ್ಲಿ ಎಲ್ಲರ ಮನಸ್ಸಿನಲ್ಲಿ ಮೂಡುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ, ಈ ಗ್ಯಾಸ್ ಸಿಲಿಂಡರ್ ಮೇಲೆ '14.2 KG' ಅಂತಲೇ ಏಕಿದೆ? ಅದನ್ನು ರೌಂಡ್ ಫಿಗರ್ ಆಗಿ 14 ಅಥವಾ 15 ಕೆಜಿ ಮಾಡಬಹುದಿತ್ತಲ್ಲವೇ? ಈ ಒಂದು ವಿಚಿತ್ರ ಸಂಖ್ಯೆಯ ಹಿಂದಿರುವ ತರ್ಕ ಮಾತ್ರ ನಿಜಕ್ಕೂ ಬೆರಗುಗೊಳಿಸುವಂತಿದೆ.
14.2 ಕೆಜಿ ಎಂಬುದು ಕಡ್ಡಾಯವೇ?
ನಿಜ ಹೇಳಬೇಕೆಂದರೆ, ಸಿಲಿಂಡರ್ ತೂಕ 14.2 ಕೆಜಿ ಇರಲೇಬೇಕು ಎಂಬ ಕಟ್ಟುನಿಟ್ಟಿನ ನಿಯಮವೇನೂ ಇಲ್ಲ. ಈ ನಿರ್ಧಾರವನ್ನು ಯಾವಾಗ ಬೇಕಾದರೂ ಬದಲಿಸಬಹುದು. ಆದರೆ, ಈ ಸಂಖ್ಯೆಯನ್ನು ನಿಗದಿಪಡಿಸುವ ಹಿಂದೆ ಬಲವಾದ ತರ್ಕವಿದೆ. ಸಾಮಾನ್ಯ ಜನರು ಸಿಲಿಂಡರ್ ಅನ್ನು ಸುಲಭವಾಗಿ ಬಳಸಬೇಕು, ಸಾಗಾಟ ಮಾಡಬೇಕು ಮತ್ತು ಅದು ಗ್ರಾಹಕರ ಜೇಬಿಗೆ ಹೊರೆಯಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ.
ಇತಿಹಾಸದ ಪುಟಗಳಲ್ಲಿ ಅಡಗಿದೆ ರಹಸ್ಯ!
ಭಾರತದಲ್ಲಿ ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆ ಆರಂಭವಾಗಿದ್ದು 1950ರ ದಶಕದಲ್ಲಿ. ಆ ಸಮಯದಲ್ಲಿ 'ಬರ್ಮಾ ಶೆಲ್' (Burmah Shell) ಎಂಬ ವಿದೇಶಿ ಕಂಪನಿಯು ಅಡುಗೆ ಅನಿಲವನ್ನು ಪೂರೈಸುತ್ತಿತ್ತು. ಈ ಕಂಪನಿಯೇ ಮೊದಲ ಬಾರಿಗೆ ಸಿಲಿಂಡರ್‌ನ ಗಾತ್ರ ಮತ್ತು ತೂಕವನ್ನು ನಿರ್ಧರಿಸಿತ್ತು. ನಂತರ ಇದೇ ಕಂಪನಿಯು ಮರುನಾಮಕರಣಗೊಂಡು ಇಂದಿನ ಭಾರತ್ ಪೆಟ್ರೋಲಿಯಂ (BPCL) ಆಗಿ ಬದಲಾಯಿತು.
ಆ ಮೂರು ಪ್ರಮುಖ ಕಾರಣಗಳು ಇಲ್ಲಿವೆ
ಬರ್ಮಾ ಶೆಲ್ ಕಂಪನಿಯು ಸಿಲಿಂಡರ್ ತೂಕ ನಿರ್ಧರಿಸುವಾಗ ಜನರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡಿತ್ತು. 14.2 ಕೆಜಿ ಅನಿಲದ ಜೊತೆಗೆ ಲೋಹದ ಖಾಲಿ ಟ್ಯಾಂಕ್‌ನ ತೂಕ ಸೇರಿ ಒಟ್ಟು ಸುಮಾರು 29 ರಿಂದ 30 ಕೆಜಿ ತೂಕವಾಗುತ್ತದೆ. ಅಂದಿನ ಸರ್ವೆಯ ಪ್ರಕಾರ, ಒಬ್ಬ ಸಾಮಾನ್ಯ ಮನುಷ್ಯ ಸುಲಭವಾಗಿ ಎತ್ತಿ ಸಾಗಿಸಬಲ್ಲ ಗರಿಷ್ಠ ತೂಕವಿದು. ಒಂದು ವೇಳೆ ಇದು 30 ಕೆಜಿಗಿಂತ ಹೆಚ್ಚಿದ್ದರೆ ಅದನ್ನು ಹೊರುವುದು ಅಥವಾ ಮನೆಯೊಳಗೆ ಎಳೆದುಕೊಂಡು ಹೋಗುವುದು ಕಷ್ಟವಾಗುತ್ತಿತ್ತು.
ಸಂಶೋಧನೆ ಮತ್ತು ತಜ್ಞರ ಅಂದಾಜಿನ ಪ್ರಕಾರ, ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬಕ್ಕೆ ತಿಂಗಳಿಗೆ ಎಷ್ಟು ಗ್ಯಾಸ್ ಬೇಕಾಗಬಹುದು ಎಂದು ಲೆಕ್ಕ ಹಾಕಲಾಗಿತ್ತು. 14.2 ಕೆಜಿ ಗ್ಯಾಸ್ ಸುಮಾರು 30 ರಿಂದ 45 ದಿನಗಳವರೆಗೆ (ಅಂದರೆ ಒಂದು ಅಥವಾ ಒಂದೂವರೆ ತಿಂಗಳು) ಬರುತ್ತದೆ ಎಂದು ಕಂಡುಬಂದಿತ್ತು. ಒಮ್ಮೆ ಸಿಲಿಂಡರ್ ತಂದರೆ ಅದು ಕನಿಷ್ಠ ಒಂದು ತಿಂಗಳು ಪೂರೈಸಬೇಕು ಎಂಬ ಉದ್ದೇಶದಿಂದ ಈ ಪ್ರಮಾಣ ನಿಗದಿಪಡಿಸಲಾಯಿತು.
ಒಂದು ಕುಟುಂಬಕ್ಕೆ ಸಿಲಿಂಡರ್ ಒಂದು ತಿಂಗಳು ಬರುತ್ತದೆ ಎಂದು ತಿಳಿದ ಮೇಲೆ, ಗ್ಯಾಸ್ ಏಜೆನ್ಸಿಗಳಿಗೆ ಪೂರೈಕೆಯ ಲೆಕ್ಕಾಚಾರ ಹಾಕುವುದು ಸುಲಭವಾಯಿತು. ಹೊಸ ಸಿಲಿಂಡರ್ ಬುಕ್ಕಿಂಗ್ ಮತ್ತು ಡೆಲಿವರಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಈ 'ಮಾಡೆಲ್' ತುಂಬಾ ಯಶಸ್ವಿಯಾಯಿತು. ಹಲವು ದಶಕಗಳಿಂದ ಈ 14.2 ಕೆಜಿ ಮಾದರಿಯು ಭಾರತದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಾ ಬಂದಿದೆ.


