ITC Stock Crash: LIC Faces ₹11,500 Crore Notional Loss in Two Days ಐಟಿಸಿ ಷೇರುಗಳ ತೀವ್ರ ಮಾರಾಟದಿಂದಾಗಿ ಕೇವಲ ಎರಡು ದಿನಗಳಲ್ಲಿ ಮೂರು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿಂದ 13,740 ಕೋಟಿ ರೂಪಾಯಿ ಅಳಿಸಿಹಾಕಿದೆ. 

ಮುಂಬೈ (ಜ.2): ಸಿಗರೇಟ್ ಮೇಲಿನ ಸರ್ಕಾರದ ಹೊಸ ಅಬಕಾರಿ ಸುಂಕದ ನಂತರ ಎರಡು ದಿನಗಳಲ್ಲಿ ಐಟಿಸಿ ಷೇರುಗಳು ತೀವ್ರ ಕುಸಿತ ಕಂಡಿವೆ. ಈ ತೀವ್ರ ಮಾರಾಟದಿಂದಾಗಿ ಎಲ್‌ಐಸಿಯಂತಹ ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಗಳು ಸೇರಿದಂತೆ ಅದರ ಹೂಡಿಕೆದಾರರಿಗೆ ದೊಡ್ಡ ಮಟ್ಟದ ಅನ್‌ರಿಯಲಿಸ್ಟಿಕ್‌ ನಷ್ಟವನ್ನು ಉಂಟುಮಾಡಿದೆ. ಜನವರಿ 2 ರಂದು ಐಟಿಸಿ ಷೇರುಗಳು ಶೇ. 5 ರಷ್ಟು ಕುಸಿದು 52 ವಾರಗಳ ಕನಿಷ್ಠ ಮಟ್ಟವಾದ ತಲಾ 345.25 ರೂ.ಗಳನ್ನು ತಲುಪಿದ್ದವು. ಆದರೆ ಕೆಲವು ನಷ್ಟಗಳನ್ನು ಸರಿದೂಗಿಸಿದವು. 2026 ರಲ್ಲಿ ಕೇವಲ ಎರಡು ವಹಿವಾಟು ದಿನಗಳಲ್ಲಿ ಷೇರುಗಳು ಶೇ. 14 ಕ್ಕಿಂತ ಹೆಚ್ಚು ಕುಸಿದಿವೆ.

ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿಗಳಿಗೆ 13,740 ಕೋಟಿ ನಷ್ಟ

2026 ರ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ ಐಟಿಸಿಯ ಷೇರುದಾರರ ಮಾದರಿಯ ಮಾಹಿತಿಯ ಪ್ರಕಾರ, ಕಂಪನಿಯ ಸಂಪೂರ್ಣ 100 ಪ್ರತಿಶತ ಪಾಲನ್ನು ಸಾರ್ವಜನಿಕ ಷೇರುದಾರರು ಹೊಂದಿದ್ದಾರೆ. ಕಂಪನಿಯ ಯಾವುದೇ ಷೇರುಗಳು ಕೂಡ ಪ್ರಮೋಟರ್‌ಗಳ ಬಳಿಯಲ್ಲಿಲ್ಲ. ಐಟಿಸಿಯಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶೇ. 15.86 ರಷ್ಟು ಪಾಲನ್ನು ಹೊಂದಿದ್ದರೆ, ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಜಿಐಸಿ) ಶೇ. 1.73 ರಷ್ಟು ಪಾಲನ್ನು ಮತ್ತು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಶೇ. 1.4 ರಷ್ಟು ಪಾಲನ್ನು ಹೊಂದಿವೆ.

ಐಟಿಸಿಯ ಮಾರಾಟದಿಂದಾಗಿ ಎಲ್‌ಐಸಿ 11,468 ಕೋಟಿ ರೂ.ಗಳಿಗೂ ಹೆಚ್ಚು ಅನ್‌ರಿಯಲಿಸ್ಟಿಕ್‌ ನಷ್ಟ ಅನುಭವಿಸಲಿದೆ. ಡಿಸೆಂಬರ್ 31ರ ಮಾರುಕಟ್ಟೆ ಮುಕ್ತಾಯದ ವೇಳೆ, ಐಟಿಸಿ ಷೇರಿನಲ್ಲಿ ಎಲ್‌ಐಸಿಯ ಹೂಡಕೆಯ ಮೌಲ್ಯ 80,028 ಕೋಟಿ ರೂಪಾಯಿ ಆಗಿತ್ತು. ಅದರ ಮೌಲ್ಯವೀಗ 68,560 ಕೋಟಿ ರೂಪಾಯಿಗೆ ಇಳಿದಿದೆ.

ಅದೇ ರೀತಿ, ಐಟಿಸಿಯ ಮಾರಾಟದಿಂದಾಗಿ ಕೇವಲ ಎರಡು ದಿನಗಳಲ್ಲಿ ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಜಿಐಸಿ) ಸುಮಾರು 1,254 ಕೋಟಿ ರೂ. ಮತ್ತು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯು 1,018 ಕೋಟಿ ರೂಪಾಯಿ ಅನ್‌ರಿಲಿಸ್ಟಿಕ್‌ ನಷ್ಟ ಅನುಭವಿಸಿದೆ.

ಐಟಿಸಿಯ ಷೇರುಗಳಲ್ಲಿ ತೀವ್ರ ಮಾರಾಟದಿಂದ ಈ ಕಂಪನಿಗಳು ಕೇವಲ ಎರಡೇ ದಿನಗಳಲ್ಲಿ 13,740 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಇವುಗಳು ಅನ್‌ರಿಯಲಿಸ್ಟಿಕ್‌ ಅಂದರೆ ಕಾಲ್ಪನಿಕ ನಷ್ಟ ಮಾತ್ರ. ಏಕೆಂದರೆ ಈ ಕಂಪನಿಗಳು ಅದೇ ಮೊತ್ತಕ್ಕೆ ಷೇರನ್ನು ಮಾರಾಟ ಮಾಡಿದರೆ ಅದು ರಿಯಲಿಸ್ಟಿಕ್‌ ನಷ್ಟ ಎನಿಸಿಕೊಳ್ಳುತ್ತದೆ.

ಐಟಿಸಿ ಷೇರು ಬೆಲೆ

ಐಟಿಸಿ ಷೇರುಗಳು ಕೆಲವು ನಷ್ಟಗಳನ್ನು ಚೇತರಿಸಿಕೊಂಡು ಜನವರಿ 2 ರಂದು ಸುಮಾರು 4 ಪ್ರತಿಶತದಷ್ಟು ಕುಸಿದು 350.10 ರೂ.ಗಳಲ್ಲಿ ಮುಕ್ತಾಯಗೊಂಡವು. ಕಳೆದ ಐದು ದಿನಗಳಲ್ಲಿ ಷೇರುಗಳು 13 ಪ್ರತಿಶತಕ್ಕಿಂತ ಹೆಚ್ಚು ಮತ್ತು ಕಳೆದ ಆರು ತಿಂಗಳಲ್ಲಿ 15 ಪ್ರತಿಶತಕ್ಕೂ ಹೆಚ್ಚು ಕುಸಿದಿವೆ. ಈ ತೀವ್ರ ಮಾರಾಟದಿಂದಾಗಿ ಕೇವಲ ಎರಡೇ ದಿನದಲ್ಲಿ ಐಟಿಸಿ ಕಂಪನಿಯ ಮೌಲ್ಯ 72 ಸಾವಿರ ಕೋಟಿ ಇಳಿದಿದೆ. ಪ್ರಸ್ತುತ ಐಟಿಸಿ ಕಂಪನಿಯ ಮೌಲ್ಯ 4,38,639 ಕೋಟಿ ರೂಪಾಯಿ ಆಗಿದೆ.

ಎಲ್‌ಐಸಿ ಷೇರುಗಳು ಸುಮಾರು ಶೇ. 1 ರಷ್ಟು ಏರಿಕೆಯಾಗಿ ತಲಾ 861 ರೂ.ಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿದರೆ, ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಷೇರುಗಳು ತಲಾ 380 ರೂ.ಗಳಲ್ಲಿ ಅಲ್ಪ ಲಾಭದೊಂದಿಗೆ ವಹಿವಾಟು ಅಂತ್ಯಗೊಂಡವು.