ಇರಾನ್ ಯುದ್ಧದಿಂದಾಗಿ ಕಾಂಡೋಮ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಭಾರತದಲ್ಲಿ ಕಾಂಡೋಮ್ ಬೆಲೆ ಶೇ. 50ರಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದು ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಬಹುದು.
ನವದೆಹಲಿ: ಇರಾನ್ ಯುದ್ಧದ ಎಫೆಕ್ಟ್ ಈಗ ಕಾಂಡೋಮ್‌ಗಳ ಮೇಲೂ ಆಗಬಹುದು. ದೇಶದಲ್ಲಿ ಕಾಂಡೋಮ್‌ಗಳ ಬೆಲೆ ಶೇ. 50ರಷ್ಟು ಹೆಚ್ಚಾಗಬಹುದು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಿಮ್ಮಿಷ್ಟದ ಬ್ರ್ಯಾಂಡ್‌ಗಳು ಮಾರುಕಟ್ಟೆಯಿಂದಲೇ ಮಾಯವಾಗಬಹುದು. ಗಲ್ಫ್ ದೇಶಗಳಲ್ಲಿ ಮಿಸೈಲ್‌ಗಳು ಬೀಳ್ತಾ ಇದ್ರೆ, ಭಾರತದಲ್ಲಿ ಕಾಂಡೋಮ್ ಯಾಕೆ ದುಬಾರಿಯಾಗುತ್ತೆ ಅಂತ ನೀವು ಯೋಚಿಸಬಹುದು. ಇದಕ್ಕೆಲ್ಲಾ ಕಾರಣ ಏನು ಗೊತ್ತಾ?
ಕಾಂಡೋಮ್ ತಯಾರಿಸಲು ಬೇಕಾದ ಪ್ರಮುಖ ವಸ್ತುಗಳನ್ನು ಭಾರತ ಹೊರದೇಶಗಳಿಂದಲೇ ತರಿಸಿಕೊಳ್ಳುತ್ತದೆ. 'ಮಿಂಟ್' ವರದಿ ಪ್ರಕಾರ, ಕಾಂಡೋಮ್ ತಯಾರಿಸಲು ಮುಖ್ಯವಾಗಿ 6 ವಸ್ತುಗಳು ಬೇಕಾಗುತ್ತವೆ. ಯುದ್ಧದ ಕಾರಣದಿಂದ ಈ ಎಲ್ಲಾ ವಸ್ತುಗಳ ಸಪ್ಲೈ ಚೈನ್‌ನಲ್ಲಿ ಸಮಸ್ಯೆ ಆಗಿದೆ. ಇದೇ ಕಾರಣಕ್ಕೆ ಮ್ಯಾನ್‌ಕೈಂಡ್ ಫಾರ್ಮಾ (Manforce), HLL ಲೈಫ್‌ಕೇರ್ ಮತ್ತು ಕ್ಯುಪಿಡ್ ಲಿಮಿಟೆಡ್‌ನಂತಹ ದೊಡ್ಡ ಕಂಪನಿಗಳು ಕಚ್ಚಾ ವಸ್ತುಗಳ ಭಾರಿ ಕೊರತೆ ಎದುರಿಸುತ್ತಿವೆ.
ಕಾಂಡೋಮ್ ತಯಾರಿಸಲು ಬೇಕಾದ 6 ವಸ್ತುಗಳು ಯಾವುವು?
ನ್ಯಾಚುರಲ್ ಲ್ಯಾಟೆಕ್ಸ್: ರಬ್ಬರ್ ಮರಗಳಿಂದ ಸಿಗುವ ಇದು ಕಾಂಡೋಮ್‌ನ ಮೂಲ ವಸ್ತು.
ಅಮೋನಿಯಾ: ಲ್ಯಾಟೆಕ್ಸ್ ಗಟ್ಟಿಯಾಗದಂತೆ ತಡೆಯಲು ಅಮೋನಿಯಾ ಬೇಕೇಬೇಕು. ಭಾರತ ತನಗೆ ಬೇಕಾದ ಶೇ. 86ರಷ್ಟು ಅಮೋನಿಯಾವನ್ನು ಸೌದಿ ಅರೇಬಿಯಾ, ಕತಾರ್ ಮತ್ತು ಓಮಾನ್‌ನಿಂದ ತರಿಸಿಕೊಳ್ಳುತ್ತದೆ. ಯುದ್ಧದಿಂದ 'ಹಾರ್ಮುಜ್ ಜಲಸಂಧಿ' ಮಾರ್ಗ ಬಂದ್ ಆಗಿದ್ದು, ಹಡಗುಗಳು ಬರ್ತಿಲ್ಲ. ಈ ಬಿಕ್ಕಟ್ಟಿಗೆ ಇದೇ ಮುಖ್ಯ ಕಾರಣ ಎನ್ನಲಾಗ್ತಿದೆ.
ಸಿಲಿಕಾನ್ ಆಯಿಲ್: ಇದು ಕಾಂಡೋಮ್‌ಗೆ ಲೂಬ್ರಿಕೇಷನ್ (ಜಾರುವಿಕೆ) ನೀಡುತ್ತದೆ. ಚೀನಾದಿಂದ ಬರುವ ಈ ಎಣ್ಣೆಯ ಬೆಲೆ ಗಗನಕ್ಕೇರಿದೆ.
ಸಲ್ಫರ್ ಮತ್ತು ಜಿಂಕ್ ಆಕ್ಸೈಡ್: ಕಾಂಡೋಮ್ ಗಟ್ಟಿಯಾಗಿರಲು ಬೇಕಾದ ಈ ರಾಸಾಯನಿಕಗಳ ಬೆಲೆಯೂ ಹೆಚ್ಚಾಗಿದೆ.
ಪ್ಯಾಕೇಜಿಂಗ್ ಮೆಟೀರಿಯಲ್: ಅಲ್ಯೂಮಿನಿಯಂ ಮತ್ತು ಪಿವಿಸಿ ಫಾಯಿಲ್‌ಗಳ ಬೆಲೆ ಸ್ಥಿರವಾಗಿಲ್ಲ.
ಫ್ಲೇವರ್ ಮತ್ತು ಬಣ್ಣಗಳು: ಇವುಗಳ ಸಪ್ಲೈ ಮೇಲೂ ಗ್ಲೋಬಲ್ ಲಾಜಿಸ್ಟಿಕ್ಸ್‌ನ ಪರಿಣಾಮ ಬಿದ್ದಿದೆ.
ಕಾಂಡೋಮ್ ಬೆಲೆ ಏರಿದರೆ ಏನಾಗುತ್ತೆ?
ಆರೋಗ್ಯ ತಜ್ಞರ ಪ್ರಕಾರ, ಕಾಂಡೋಮ್ ಬೆಲೆಯಲ್ಲಿ ಸ್ವಲ್ಪ ಏರಿಕೆಯಾದರೂ ಅದು ದೊಡ್ಡ ಪರಿಣಾಮ ಬೀರುತ್ತದೆ. ಒಂದು ವೇಳೆ ಬೆಲೆ ಶೇ. 50ರಷ್ಟು ಹೆಚ್ಚಾದರೆ, ಆರ್ಥಿಕವಾಗಿ ಹಿಂದುಳಿದ ವರ್ಗದವರು ಇದರ ಬಳಕೆ ಕಡಿಮೆ ಮಾಡಬಹುದು. ಇದರಿಂದ ಅನಗತ್ಯ ಗರ್ಭಧಾರಣೆ ಪ್ರಕರಣಗಳು ಹೆಚ್ಚಾಗುತ್ತವೆ. ಕಾಂಡೋಮ್ ಬಳಕೆ ಕಡಿಮೆಯಾದರೆ ಲೈಂಗಿಕವಾಗಿ ಹರಡುವ ರೋಗಗಳ (STIs) ಅಪಾಯವೂ ಹೆಚ್ಚಾಗಬಹುದು. ಅಷ್ಟೇ ಅಲ್ಲ, 2030ರ ವೇಳೆಗೆ ಗರ್ಭನಿರೋಧಕಗಳ ಬೇಡಿಕೆಯನ್ನು ಶೇ. 75ರಷ್ಟು ಪೂರೈಸುವ ಭಾರತ ಸರ್ಕಾರದ ಗುರಿಗೂ ಹಿನ್ನಡೆಯಾಗಬಹುದು. ಇದರಿಂದ 'ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮ'ಕ್ಕೆ (National Family Planning Programme) ದೊಡ್ಡ ಹೊಡೆತ ಬೀಳಲಿದೆ.
ಇದನ್ನೂ ಓದಿ: ಹೋಟೆಲ್ ರೂಮ್ ಕ್ಲೀನ್‌ರಿಗೆ ಕಂಡಿದ್ದು ಕಾಂಡೋಮ್ ರಾಶಿ; 1 ಮಿಲಿಯನ್ ವ್ಯೂವ್ ಪಡೆದ ವಿಡಿಯೋ
ಕಾಂಡೋಮ್ ತಯಾರಿಕಾ ಕಂಪನಿಗಳು ಯಾಕೆ ಸುಮ್ಮನಿವೆ?
ಮ್ಯಾನ್‌ಫೋರ್ಸ್, ಡ್ಯುರೆಕ್ಸ್ ಮತ್ತು ಕಾಮಸೂತ್ರದಂತಹ ದೊಡ್ಡ ಬ್ರ್ಯಾಂಡ್‌ಗಳು ಈ ಬಗ್ಗೆ ಮಾತನಾಡಲು ನಿರಾಕರಿಸುತ್ತಿವೆ. ಆದರೆ, ಮಾಧ್ಯಮ ವರದಿಗಳು ಮತ್ತು ಇಂಡಸ್ಟ್ರಿ ಮೂಲಗಳ ಪ್ರಕಾರ, ಸಪ್ಲೈಯರ್‌ಗಳು ಕಚ್ಚಾ ವಸ್ತುಗಳನ್ನು ದಾಸ್ತಾನು ಮಾಡಲು ಶುರು ಮಾಡಿದ್ದಾರೆ. ಇದರಿಂದ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸದಿದ್ದರೆ, ಮಾರುಕಟ್ಟೆಯಿಂದ ಕೆಲವು ದೊಡ್ಡ ಬ್ರ್ಯಾಂಡ್‌ಗಳ ಪ್ಯಾಕೆಟ್‌ಗಳು ಮಾಯವಾಗಬಹುದು.
ಇದನ್ನೂ ಓದಿ: ಭಾರತದಲ್ಲಿ ತಿಂಗಳಿಗೆ ಕಾಂಡೋಮ್ 10 ಕೋಟಿ ತಯಾರಿ! ಎಷ್ಟು ಆದಾಯ ಬರುತ್ತೆ?


