ಮುಂಬರುವ 3-4 ತಿಂಗಳಲ್ಲಿ ಮೊಬೈಲ್ ರೀಚಾರ್ಜ್ ದರಗಳು ಶೇ. 12-15ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್ ವರದಿ ಮಾಡಿದೆ. '3+1' ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಸ್ಪರ್ಧೆ ಕಡಿಮೆಯಾಗಿದ್ದು, ಜಿಯೋ ಮತ್ತು ಏರ್‌ಟೆಲ್ ಲಾಭ ಗಳಿಸುವ ನಿರೀಕ್ಷೆಯಿದ್ದರೆ, ವೊಡಾಫೋನ್-ಐಡಿಯಾ ಹಿನ್ನಡೆ ಅನುಭವಿಸಲಿದೆ.
ನವದೆಹಲಿ: ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಎದುರಾಗಿದೆ. ಮುಂಬರುವ 3-4 ತಿಂಗಳಲ್ಲಿ ಮೊಬೈಲ್ ರೀಚಾರ್ಜ್ ದರಗಳು ಶೇಕಡಾ 12 ರಿಂದ 15 ರಷ್ಟು ಹೆಚ್ಚಳವಾಗಬಹುದು ಎಂದು ಪ್ರಮುಖ ಆರ್ಥಿಕ ಸಂಶೋಧನಾ ಸಂಸ್ಥೆಯಾದ 'ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್' ತನ್ನ ಇತ್ತೀಚಿನ ವರದಿಯಲ್ಲಿ ಮುನ್ಸೂಚನೆ ನೀಡಿದೆ.
ಏನಿದು '3+1' ಮಾರುಕಟ್ಟೆ ತಂತ್ರ?
ಪ್ರಸ್ತುತ ಭಾರತೀಯ ದೂರಸಂಪರ್ಕ (ಟೆಲಿಕಾಂ) ಮಾರುಕಟ್ಟೆಯಲ್ಲಿನ ಸ್ಪರ್ಧೆಯು ಕೇವಲ ಬೆರಳೆಣಿಕೆಯ ಸಂಸ್ಥೆಗಳ ನಡುವೆ ಮಾತ್ರ ಉಳಿದುಕೊಂಡಿದೆ. ಸದ್ಯ ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾ (Vi) ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಮಾತ್ರ ಮಾರುಕಟ್ಟೆಯಲ್ಲಿ ಪ್ರಬಲವಾಗಿವೆ. ಈ '3+1' ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಸ್ಪರ್ಧೆ ಕಡಿಮೆಯಾಗಿದ್ದು, ಕಂಪನಿಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ದರ ಏರಿಕೆಯ ಅಸ್ತ್ರ ಬಳಸಲು ಮುಂದಾಗಿವೆ. ಮಾರುಕಟ್ಟೆ ಬಲವರ್ಧನೆಯ ನಂತರ ಕಂಪನಿಗಳಿಗೆ ದರ ಹೆಚ್ಚಿಸಲು ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಸೆಂಟ್ರಮ್ ಸಂಸ್ಥೆ ತನ್ನ Q1FY27 (2026-27ರ ಮೊದಲ ತ್ರೈಮಾಸಿಕ) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಆದಾಯ ಹೆಚ್ಚಳಕ್ಕೆ ಕಾರಣಗಳೇನು?
ಪ್ರಸಕ್ತ ಜೂನ್ ತ್ರೈಮಾಸಿಕದಲ್ಲಿ ಖಾಸಗಿ ಟೆಲಿಕಾಂ ಆಪರೇಟರ್‌ಗಳು ಸಾಧಾರಣ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ. ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU) ಶೇ. 1 ರಿಂದ 1.5 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೆ ಪ್ರಮುಖ ಕಾರಣಗಳು, ಗ್ರಾಹಕರು ವೇಗವಾಗಿ 2G ನೆಟ್‌ವರ್ಕ್‌ನಿಂದ 4G ಮತ್ತು 5G ನೆಟ್‌ವರ್ಕ್‌ಗಳಿಗೆ ವಲಸೆ ಹೋಗುತ್ತಿರುವುದು. ಪೋಸ್ಟ್‌ಪೇಯ್ಡ್ ಚಂದಾದಾರರ ಸಂಖ್ಯೆಯಲ್ಲಿ ಕಂಡುಬಂದಿರುವ ಸರಣಿ ಬೆಳವಣಿಗೆ. ಪ್ರಸಕ್ತ ತ್ರೈಮಾಸಿಕದಲ್ಲಿ ರೀಚಾರ್ಜ್ ದಿನಗಳ ಸಂಖ್ಯೆ ಹೆಚ್ಚಿರುವುದು.
ಜಿಯೋ, ಏರ್‌ಟೆಲ್‌ಗೆ ಲಾಭ; ವೊಡಾಫೋನ್-ಐಡಿಯಾಗೆ ಹಿನ್ನಡೆ
ಮಾರುಕಟ್ಟೆಯಲ್ಲಿನ ಈ ಪೈಪೋಟಿಯು ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪನಿಗಳಿಗೆ ಭಾರಿ ಅನುಕೂಲಕರವಾಗಿ ಪರಿಣಮಿಸಲಿದೆ. ಆದರೆ, ಆರ್ಥಿಕ ಮುಗ್ಗಟ್ಟಿನಲ್ಲಿರುವ ವೊಡಾಫೋನ್ ಐಡಿಯಾ (Vi) ಮಾತ್ರ ತೀವ್ರ ಒತ್ತಡದಲ್ಲೇ ಮುಂದುವರಿಯಲಿದೆ. ವರದಿಯ ಪ್ರಕಾರ, ವೊಡಾಫೋನ್ ಐಡಿಯಾ ಕಂಪನಿಯ ಗ್ರಾಹಕರನ್ನು ಸೆಳೆಯುವ ಮೂಲಕ ಜಿಯೋ ಮತ್ತು ಏರ್‌ಟೆಲ್ ತಮ್ಮ ಮಾರುಕಟ್ಟೆ ಪಾಲನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲಿವೆ. ಈ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಸುಮಾರು 70 ಲಕ್ಷ (7 ಮಿಲಿಯನ್) ಮತ್ತು ಭಾರ್ತಿ ಏರ್‌ಟೆಲ್ 50 ಲಕ್ಷ (5 ಮಿಲಿಯನ್) ಹೊಸ ಚಂದಾದಾರರನ್ನು ಸೇರ್ಪಡೆಗೊಳಿಸಿಕೊಳ್ಳುವ ಅಂದಾಜಿದೆ. ಇದಕ್ಕೆ ವಿರುದ್ಧವಾಗಿ ವೊಡಾಫೋನ್ ಐಡಿಯಾ ಕೇವಲ 2 ಲಕ್ಷ (0.2 ಮಿಲಿಯನ್) ಗ್ರಾಹಕರನ್ನು ಮಾತ್ರ ಗಳಿಸಬಹುದು ಎನ್ನಲಾಗಿದೆ.
ಹೆಚ್ಚುತ್ತಿದೆ 5G ಕ್ರೇಜ್ ಮತ್ತು ಡೇಟಾ ಬಳಕೆ
ದೇಶಾದ್ಯಂತ 4G ಮತ್ತು 5G ನೆಟ್‌ವರ್ಕ್‌ಗಳ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವುದರಿಂದ ಮೊಬೈಲ್ ಡೇಟಾ ಬಳಕೆ ಅತ್ಯಂತ ಗರಿಷ್ಠ ಮಟ್ಟದಲ್ಲಿ ಮುಂದುವರಿಯಲಿದೆ. ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳು ಈಗಾಗಲೇ ದೇಶದ ಶೇ. 90 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಮ್ಮ 5G ಸೇವೆಗಳನ್ನು ಯಶಸ್ವಿಯಾಗಿ ತಲುಪಿಸಿವೆ. ಈಗ ಅವುಗಳ ಗಮನವೇನಿದ್ದರೂ ನೆಟ್‌ವರ್ಕ್‌ಗೆ ಹೆಚ್ಚಿನ ಸಂಖ್ಯೆಯ 5G ಸಾಧನಗಳನ್ನು (Devices) ಜೋಡಿಸುವುದಾಗಿದೆ.
ಇದರ ಜೊತೆಗೆ, ಭಾರತದಲ್ಲಿ ಸದ್ಯಕ್ಕೆ ಅತ್ಯಂತ ಕಡಿಮೆ ಮಾರುಕಟ್ಟೆ ಪ್ರಾತಿನಿಧ್ಯ ಹೊಂದಿರುವ 5G ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (FWA) ಮತ್ತು ಸ್ಥಿರ ಬ್ರಾಡ್‌ಬ್ಯಾಂಡ್ (Fixed Broadband) ಸೇವೆಗಳಲ್ಲೂ ಜಿಯೋ ಹಾಗೂ ಏರ್‌ಟೆಲ್ ಕಂಪನಿಗಳು ಭಾರಿ ವೇಗವನ್ನು ಕಂಡುಕೊಳ್ಳುತ್ತಿವೆ ಎಂದು ಸೆಂಟ್ರಮ್ ವರದಿ ವಿಶ್ಲೇಷಿಸಿದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ಮೊಬೈಲ್ ಬಿಲ್ ಮತ್ತಷ್ಟು ದುಬಾರಿಯಾಗುವುದು ಮಾತ್ರ ಗ್ಯಾರಂಟಿ ಎನ್ನಲಾಗುತ್ತಿದೆ.


