ಭಾರತ ಸರ್ಕಾರವು ತನ್ನ ರಕ್ಷಣಾ ಉತ್ಪಾದನಾ ನೀತಿಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಖಾಸಗಿ ಕಂಪನಿಗಳಿಗೂ ಕ್ಷಿಪಣಿಗಳನ್ನು ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ.

ನವದೆಹಲಿ (ಜು.13): ದೇಶದ ರಕ್ಷಣಾ ಉತ್ಪಾದನೆ ನೀತಿಯಲ್ಲಿ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದ್ದು, ಭಾರತೀಯ ಖಾಸಗಿ ಕಂಪನಿಗಳಿಗೂ ಕ್ಷಿಪಣಿಗಳನ್ನು ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ. ಹೀಗಾಗಿ ಇದುವರೆಗೆ ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ಅವಕಾಶ ಇನ್ನು ಖಾಸಗಿ ಸಂಸ್ಥೆಗಳಿಗೂ ತೆರೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ವಿಮಾನ, ಡ್ರೋನ್‌, ಫಿರಂಗಿ, ನೌಕಾ ಫ್ಲಾಟ್‌ಫಾರ್ಮ್‌ಗಳು ಸೇರಿದಂತೆ ಹಲವಾರು ರಕ್ಷಣಾ ಉತ್ಪನ್ನಗಳ ನಿರ್ಮಾಣಕ್ಕೆ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದೀಗ ಕ್ಷಿಪಣಿ ಉತ್ಪಾದನೆಯನ್ನೂ ಖಾಸಗಿಗೆ ಮುಕ್ತಗೊಳಿಸುತ್ತಿರುವುದು ದೇಶದ ರಕ್ಷಣಾ ಉತ್ಪಾದನೆಯಲ್ಲಿ ಅತಿದೊಡ್ಡ ಸುಧಾರಣೆಗಳಲ್ಲಿ ಒಂದಾಗಲಿದೆ.

ಇಂಡೋನೇಷ್ಯಾವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಸ್ತ್ರ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದೆ. ಇತರ ದೇಶಗಳಿಂದಲೂ ಭಾರತದ ಕ್ಷಿಪಣಿಗಳಿಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ದೇಶೀಯವಾಗಿ ಉತ್ಪಾದನೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ.

ಮೊದಲಿಗೆ ಅಸ್ತ್ರ ನಿರ್ಮಾಣ?

180-200 ಕಿ.ಮೀ. ಗುರಿ ಭೇದಿಸುವ ಸಾಮರ್ಥ್ಯವುಳ್ಳ ಅಸ್ತ್ರ ಮಾರ್ಕ್ 2 ಕ್ಷಿಪಣಿಯನ್ನು ಇದುವರೆಗೆ ಡಿಆರ್‌ಡಿಒ ತಯಾರಿಸುತ್ತಿದೆ. ರಕ್ಷಣಾ ಸಚಿವಾಲಯವು ಶೀಘ್ರದಲ್ಲೇ ಈ ಕ್ಷಿಪಣಿ ತಯಾರಿಸಲು ಖಾಸಗಿ ಕಂಪನಿಗಳನ್ನು ಆಹ್ವಾನಿಸುವ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರಲ್ಲಿ ಐಸಿಒಎಂಎಂ, ಅದಾನಿ, ಭಾರತ್ ಫೋರ್ಜ್, ಟಾಟಾ ಗ್ರುಪ್ ಮತ್ತು ಮಹೀಂದ್ರಾ ಗ್ರುಪ್ ಭಾಗವಹಿಸುವ ನಿರೀಕ್ಷೆಯಿದೆ. ಮುಂದಿನ ಹಂತದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ನಿರ್ಮಾಣಕ್ಕೂ ಅವಕಾಶ ನೀಡಲಿದೆ ಎಂದು ಮೂಲಗಳು ತಿಳಿಸಿವೆ.