ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಜಾರಿಗೆ ತರಲು ಉದ್ದೇಶಿಸಿದ್ದ ಯುಪಿಐ ಆಧಾರಿತ ಪಿಎಫ್ ಸೇವಾ ಸೌಲಭ್ಯವು ತಾಂತ್ರಿಕ ದೋಷಗಳಿಂದಾಗಿ ವಿಳಂಬವಾಗಿದೆ. ನವೀಕರಿಸಿದ ಪೋರ್ಟಲ್‌ನಲ್ಲಿನ ಸಮಸ್ಯೆಗಳನ್ನು ಸರಿಪಡಿಸಿದ ನಂತರ, ಈ ಸೌಲಭ್ಯವು ಆಗಸ್ಟ್ ತಿಂಗಳಿನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ನವದೆಹಲಿ (ಜು.27): ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಜಾರಿಗೆ ತರಲು ಉದ್ದೇಶಿಸಿದ್ದ ಯುಪಿಐ (UPI) ಆಧಾರಿತ PF ಸೇವಾ ಸೌಲಭ್ಯದ ಚಾಲನೆ ಪ್ರಕ್ರಿಯೆ ವಿಳಂಬವಾಗಿದ್ದು, ಇದೀಗ ಆಗಸ್ಟ್ ತಿಂಗಳಿನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು 2025-26ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪ್ರಾರಂಭಿಸಲು ಈ ಹಿಂದೆ ಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ತಿಂಗಳ ಆರಂಭದಲ್ಲಿ ಇಪಿಎಫ್‌ಒ ಪರಿಚಯಿಸಿದ್ದ ನವೀಕೃತ 'ಸೆಂಟ್ರಲೈಸ್ಡ್ ಐಟಿ ಎನೇಬಲ್ಡ್ ಸರ್ವಿಸಸ್' (CITES 2.01) ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಲು ಸಾಲು ತಾಂತ್ರಿಕ ದೋಷಗಳು (Glitches) ಕಾಣಿಸಿಕೊಂಡಿರುವುದೇ ಈ ವಿಳಂಬಕ್ಕೆ ಮುಖ್ಯ ಕಾರಣವಾಗಿದೆ. ಅಪ್‌ಡೇಟ್ ಆಗಿರುವ ಪೋರ್ಟಲ್‌ನಲ್ಲಿ ಹಳೆಯ ಇಪಿಎಫ್ ಖಾತೆಗಳ ಡೇಟಾ ಕಾಣೆಯಾಗಿದೆ ಎಂದು ಯೂಸರ್‌ಗಳು ದೂರಿಟ್ಟಿದ್ದಾರೆ. ಜತೆಗೆ ಲಾಗಿನ್ ಸಮಸ್ಯೆಗಳು, ಪೋರ್ಟಲ್ ವೇಗ ಕುಸಿತ ಹಾಗೂ ಸಿಸ್ಟಮ್ ಮೈಗ್ರೇಷನ್ ನಂತರ ಕ್ಲೈಮ್‌ಗಳ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಈ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿರುವ PF ಸಂಸ್ಥೆಯು, ಹೊಸ ಡಿಜಿಟಲ್ ಸೇವೆಗಳನ್ನು ಪರಿಚಯಿಸುವ ಮೊದಲು ಅಪ್‌ಡೇಟ್ ಆಗಿರುವ ಪೋರ್ಟಲ್ ಅನ್ನು ಸಂಪೂರ್ಣವಾಗಿ ಸ್ಥಿರಗೊಳಿಸುವುದಕ್ಕೆ (Stabilisation) ಮೊದಲ ಆದ್ಯತೆ ನೀಡಿದೆ. ಆಗಸ್ಟ್ ಮೊದಲ ವಾರದೊಳಗೆ ಎಲ್ಲಾ ಪ್ರಮುಖ ಲೋಪಗಳನ್ನು ಸರಿಪಡಿಸಲಾಗುವುದು, ಅದಾದ ನಂತರ ಯುಪಿಐ ಆಧಾರಿತ ವಹಿವಾಟು ಸೌಲಭ್ಯವನ್ನು ಅಧಿಕೃತವಾಗಿ ಪ್ರಾರಂಭಿಸಲಾಗುವುದು ಎಂದು ಮೂಲಗಳು ದೃಢಪಡಿಸಿವೆ.
ಭೀಮ್-ಯುಪಿಐ (BHIM-UPI) ಮೂಲಕ ನೇರ ಹಣ ವರ್ಗಾವಣೆ
ಈ ಹೊಸ ವ್ಯವಸ್ಥೆಯನ್ನು ಭೀಮ್-ಯುಪಿಐ (BHIM-UPI) ಇಂಟರ್‌ಫೇಸ್ ಮೂಲಕ ಸಕ್ರಿಯಗೊಳಿಸಲಾಗುತ್ತದೆ. ಇದರಿಂದ ಇಪಿಎಫ್ ಸದಸ್ಯರು ತಮ್ಮ ಪಿಎಫ್ ಖಾತೆಗಳನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವ ಮೂಲಕ ಅರ್ಹ ಕ್ಲೈಮ್ ಮೊತ್ತವನ್ನು ನೇರವಾಗಿ ಪಡೆಯಬಹುದು. ಈ ಸೌಲಭ್ಯವು ಪ್ರಸ್ತುತ ಜಾರಿಯಲ್ಲಿರುವ ಎನ್‌ಇಎಫ್‌ಟಿ (NEFT) ಆಧಾರಿತ ಪಾವತಿ ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆಯೇ ವಿನಃ ಅದನ್ನು ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ.
ಇಪಿಎಫ್‌ಒ 3.0 (EPFO 3.0) ಸುಧಾರಣೆಗಳ ಭಾಗವಾಗಿ 2025 ರಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಯುಪಿಐ ಆಧಾರಿತ ಇಪಿಎಫ್ ಕ್ಲೈಮ್ ಪಾವತಿ ಪ್ರಸ್ತಾಪವನ್ನು ಅನಾವರಣಗೊಳಿಸಿದ್ದರು. ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಅರ್ಹ ಕ್ಲೈಮ್‌ಗಳನ್ನು ತಕ್ಷಣವೇ ಜಮಾ ಮಾಡುವ ಗುರಿಯನ್ನು ಹೊಂದಿರುವ ಈ ಉಪಕ್ರಮದ ಪ್ರಗತಿಯನ್ನು ಮಾರ್ಚ್ 2025 ರ ಸಭೆಯಲ್ಲಿ ಇಪಿಎಫ್‌ಒ ಕಾರ್ಯಕಾರಿ ಸಮಿತಿಯು ಪರಿಶೀಲಿಸಿತ್ತು.
ಸಿ-ಡ್ಯಾಕ್‌ನಿಂದ ಹೈ-ಟೆಕ್ ಇಂಟಿಗ್ರೇಷನ್
ಈ ಯುಪಿಐ ಇಂಟಿಗ್ರೇಷನ್ ತಂತ್ರಜ್ಞಾನವನ್ನು ಇಪಿಎಫ್‌ಒದ ತಾಂತ್ರಿಕ ಪಾಲುದಾರ ಸಂಸ್ಥೆಯಾದ 'ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್' (C-DAC) ಅಭಿವೃದ್ಧಿಪಡಿಸುತ್ತಿದೆ. CITES 2.01 ಆಧುನೀಕರಣ ಯೋಜನೆಯಡಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನೊಂದಿಗೆ ಅಗತ್ಯವಿರುವ 'ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್' (APIs) ಮತ್ತು ಸಿಸ್ಟಮ್ ಇಂಟರ್ಫೇಸ್‌ಗಳನ್ನು ಸಿ-ಡ್ಯಾಕ್ ಸಿದ್ಧಪಡಿಸುತ್ತಿದೆ.
ಇಪಿಎಫ್‌ಒ ಪ್ರಸ್ತುತ ₹30 ಟ್ರಿಲಿಯನ್‌ಗಿಂತಲೂ ಹೆಚ್ಚಿನ ನಿವೃತ್ತಿ ಉಳಿತಾಯ ನಿಧಿಯನ್ನು ನಿರ್ವಹಿಸುತ್ತಿದ್ದು, ಸುಮಾರು 80 ಮಿಲಿಯನ್ (8 ಕೋಟಿ) ಸಕ್ರಿಯ ಚಂದಾದಾರರನ್ನು ಹೊಂದಿದೆ. ಇಪಿಎಫ್ ಯೋಜನೆ 2026 ರ ಪ್ರಕಾರ, ಚಂದಾದಾರರು 12 ತಿಂಗಳ ಸದಸ್ಯತ್ವವನ್ನು ಪೂರ್ಣಗೊಳಿಸಿದ ನಂತರ, ತಮ್ಮ ಒಟ್ಟು ಭವಿಷ್ಯ ನಿಧಿಯ ಶೇಕಡಾ 25 ರಷ್ಟನ್ನು ಕಾಯ್ದಿರಿಸಿಕೊಂಡು ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶವಿದೆ.
ಡಿಜಿಟಲ್ ಸೇವೆಗಳನ್ನು ಆಧುನೀಕರಿಸುವುದು ಮತ್ತು ಕ್ಲೈಮ್ ಪ್ರಕ್ರಿಯೆಯ ಸಮಯವನ್ನು ಕಡಿಮೆ ಮಾಡುವುದು ಇಪಿಎಫ್‌ಒದ ಮುಖ್ಯ ಉದ್ದೇಶವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಸಂಸ್ಥೆಯು ಸ್ವಯಂಚಾಲಿತ ಕ್ಲೈಮ್ ಇತ್ಯರ್ಥ (Auto-settlement) ವ್ಯವಸ್ಥೆಯನ್ನು ವಿಸ್ತರಿಸಿದೆ, ಇಪಿಎಫ್ ಯೋಜನೆ 2026 ರ ಅಡಿಯಲ್ಲಿ ಹಣ ಹಿಂಪಡೆಯುವ ನಿಯಮಗಳನ್ನು ಸರಳೀಕರಿಸಿದೆ ಮತ್ತು ನವೀಕರಿಸಿದ ಸದಸ್ಯರ ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ.


