ಎಲೋನ್ ಮಸ್ಕ್ ಮತ್ತು ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್, ವಾಟ್ಸಾಪ್‌ನ ಗೌಪ್ಯತಾ ನೀತಿಯನ್ನು ಪ್ರಶ್ನಿಸಿದ್ದು, ಇದೊಂದು 'ಎನ್‌ಕ್ರಿಪ್ಶನ್ ವಂಚನೆ' ಎಂದು ಕರೆದಿದ್ದಾರೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಇದ್ದರೂ, ಮೆಟಾ ಖಾಸಗಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದೆ ಎಂದಿದ್ದಾರೆ.

ಕ್ಯಾಲಿಫೋರ್ನಿಯಾ (ಏ.10): ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'X' ಮಾಲೀಕ ಎಲೋನ್ ಮಸ್ಕ್ ಮತ್ತು ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್, ವಾಟ್ಸಾಪ್‌ನ ಗೌಪ್ಯತೆ (Privacy) ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. "ವಾಟ್ಸಾಪ್ ಅನ್ನು ಎಂದಿಗೂ ನಂಬಲು ಸಾಧ್ಯವಿಲ್ಲ" ಎಂದು ಮಸ್ಕ್ ಹೇಳಿದ್ದರೆ, ಡುರೊವ್ ಇದನ್ನು "ಇತಿಹಾಸದ ಅತಿದೊಡ್ಡ ಎನ್‌ಕ್ರಿಪ್ಶನ್ ವಂಚನೆ" ಎಂದು ಕರೆದಿದ್ದಾರೆ.

Add Asianetnews Kannada as a Preferred SourcegooglePreferred

ಈ ವರ್ಷದ ಜನವರಿಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ಫೆಡರಲ್ ಕೋರ್ಟ್‌ನಲ್ಲಿ ಬ್ರಿಯಾನ್ ವೈ. ಶಿರಾಜಿ ಮತ್ತು ನಿಡಾ ಸ್ಯಾಮ್ಸನ್ ಎಂಬ ಇಬ್ಬರು ಬಳಕೆದಾರರು ವಾಟ್ಸಾಪ್ ವಿರುದ್ಧ ದಾಖಲಿಸಿರುವ 'ಕ್ಲಾಸ್ ಆಕ್ಷನ್' ಮೊಕದ್ದಮೆಯಿಂದ ಈ ವಿವಾದ ಆರಂಭವಾಗಿದೆ. ಈ ಮೊಕದ್ದಮೆಯಲ್ಲಿ ಮೆಟಾ ಪ್ಲಾಟ್‌ಫಾರ್ಮ್‌ ಮತ್ತು ಆಕ್ಸೆಂಚರ್ (Accenture) ಕಂಪನಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಎನ್‌ಕ್ರಿಪ್ಶನ್ ಇದ್ದರೂ ಖಾಸಗಿ ಸಂದೇಶಗಳನ್ನು ಓದುತ್ತಿದೆ ವಾಟ್ಸಾಪ್!

ವಾಟ್ಸಾಪ್ ತನ್ನ ಬಳಕೆದಾರರ ಸಂದೇಶಗಳನ್ನು ಕದ್ದು ಕೇಳಿಸಿಕೊಳ್ಳುತ್ತಿದೆ ಮತ್ತು ಅವುಗಳನ್ನು ಪ್ರತಿಬಂಧಿಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ವಾಟ್ಸಾಪ್ ಕ್ಲೈಮ್ ಮಾಡುವಂತೆ ಸಂದೇಶಗಳು 'ಎಂಡ್-ಟು-ಎಂಡ್ ಎನ್‌ಕ್ರಿಪ್ಟ್' ಆಗಿದ್ದರೂ ಸಹ, ಮೆಟಾ ಕಂಪನಿಯು ಈ ಖಾಸಗಿ ಸಂದೇಶಗಳನ್ನು ಆಕ್ಸೆಂಚರ್‌ನಂತಹ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಮಸ್ಕ್ ಮತ್ತು ಡುರೊವ್ ಅವರ ಸಲಹೆ

ವಾಟ್ಸಾಪ್ ಬದಲಿಗೆ 'X Chat' ಬಳಸಿ ಎಂದು ಜನರಿಗೆ ಕರೆ ನೀಡಿದ್ದಾರೆ. ಇದು "ನಿಜವಾದ ಗೌಪ್ಯತೆಯನ್ನು" ನೀಡುತ್ತದೆ ಎಂದು ಮಸ್ಕ್‌ ಪ್ರತಿಪಾದಿಸಿದ್ದಾರೆ. "ವಾಟ್ಸಾಪ್ ಶತಕೋಟಿ ಬಳಕೆದಾರರನ್ನು ದಾರಿತಪ್ಪಿಸುತ್ತಿದೆ. ಟೆಲಿಗ್ರಾಮ್ ಅಂತಹ ಕೆಲಸವನ್ನು ಎಂದಿಗೂ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ" ಎಂದು ಪಾವೆಲ್ ಡುರೊವ್ ಗುಡುಗಿದ್ದಾರೆ.

ಮೆಟಾ ಸ್ಪಷ್ಟನೆ: "ಆರೋಪಗಳು ಹಾಸ್ಯಾಸ್ಪದ"

ಈ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮೆಟಾ ವಕ್ತಾರರು, "ಈ ಮೊಕದ್ದಮೆಯಲ್ಲಿ ಮಾಡಲಾದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಅತ್ಯಂತ ಹಾಸ್ಯಾಸ್ಪದವಾಗಿವೆ. ವಾಟ್ಸಾಪ್ ಕಳೆದ ಒಂದು ದಶಕದಿಂದ 'ಸಿಗ್ನಲ್ ಪ್ರೋಟೋಕಾಲ್' ಬಳಸುತ್ತಿದೆ. ಕಳುಹಿಸುವವರು ಮತ್ತು ಸ್ವೀಕರಿಸುವವರನ್ನು ಹೊರತುಪಡಿಸಿ ನಿಮ್ಮ ಸಂದೇಶಗಳನ್ನು ಬೇರೆ ಯಾರು ಓದಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಮಸ್ಕ್ ಮತ್ತು ಜುಕರ್‌ಬರ್ಗ್ ವೈಷಮ್ಯ

ಎಲೋನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್ ನಡುವಿನ ಶೀತಲ ಸಮರ ಹಳೆಯದು.ಮಸ್ಕ್ ಟ್ವಿಟರ್ ಖರೀದಿಸಿದ ನಂತರ, ಜುಕರ್‌ಬರ್ಗ್ ಅದಕ್ಕೆ ಸ್ಪರ್ಧೆಯಾಗಿ 'ಥ್ರೆಡ್ಸ್' (Threads) ಬಿಡುಗಡೆ ಮಾಡಿದ್ದರು. 2025ರಲ್ಲಿ ಮಸ್ಕ್ ತಮ್ಮ ಎಐ ಚಾಟ್‌ಬಾಟ್ 'Grok' ಮೆಟಾ ಎಐಗಿಂತ ಶ್ರೇಷ್ಠ ಎಂದು ಘೋಷಿಸಿದ್ದರು. ಜೂನ್ 2023ರಲ್ಲಿ ಮಸ್ಕ್ ಜುಕರ್‌ಬರ್ಗ್‌ಗೆ 'ಕೇಜ್ ಫೈಟ್' ಸವಾಲು ಹಾಕಿದ್ದರು.

ಏನಿದು 'ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್'?

ಸರಳವಾಗಿ ಹೇಳುವುದಾದರೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಎಂಬುದು ಒಂದು ಭದ್ರತಾ ತಂತ್ರಜ್ಞಾನ. ಇದು ನಿಮ್ಮ ಸಂದೇಶಗಳನ್ನು ಗುಪ್ತ ಸಂಕೇತಗಳಾಗಿ (Secret Code) ಪರಿವರ್ತಿಸುತ್ತದೆ. ಇದನ್ನು ಕಳುಹಿಸುವವರು ಮತ್ತು ಸ್ವೀಕರಿಸುವವರು ಮಾತ್ರ ಓದಬಲ್ಲರು. ಹ್ಯಾಕರ್‌ಗಳು, ಇಂಟರ್ನೆಟ್ ಸೇವಾ ಪೂರೈಕೆದಾರರು ಅಥವಾ ಸ್ವತಃ ವಾಟ್ಸಾಪ್ ಕಂಪನಿಯೂ ಸಹ ನಿಮ್ಮ ಸಂದೇಶಗಳನ್ನು ನೋಡಲು ಅಥವಾ ಕೇಳಲು ಸಾಧ್ಯವಿಲ್ಲ.