ಭೂಮಿಯ ಮೇಲಿನ ವಿದ್ಯುತ್, ಜಾಗದ ಕೊರತೆ ಮತ್ತು ಅಧಿಕ ತೆರಿಗೆಯಂತಹ ಸಮಸ್ಯೆಗಳನ್ನು ತಪ್ಪಿಸಲು, ಎಲಾನ್ ಮಸ್ಕ್ ಬಾಹ್ಯಾಕಾಶದಲ್ಲಿ ಎಐ ಡೇಟಾ ಸೆಂಟರ್‌ ಸ್ಥಾಪಿಸುವ ಯೋಜನೆ ಮುಂದಿಟ್ಟಿದ್ದಾರೆ. 

ಭೂಮಿಯಲ್ಲಿ ಸೌರಫಲಕಗಳ ಮೇಲೆ ಶೇ.100ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್‌ ಪಾರ್ಕ್‌ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್‌ ಮಿಲ್‌ಗಳನ್ನು ಸ್ಥಾಪಿಸಿದರೆ, ಇವುಗಳ ಭವಿಷ್ಯವಿರುವುದು 2030ರ ವರೆಗೆ ಮಾತ್ರ. ಪ್ರಸ್ತುತ ಜಗತ್ತಿನಲ್ಲಿ ಅವುಗಳಿಗೆ ಬೇಕಾಗುವ ಬೃಹತ್‌ ರೆಕ್ಕೆ ಸೇರಿದಂತೆ ಇತರೆ ಭಾಗಗಳನ್ನು ತಯಾರಿಸುವ ಕೇವಲ 3 ಕಂಪನಿಗಳಿವೆ. ಅವುಗಳಿಂದ ಒಮ್ಮೆಲೆ ಅಧಿಕ ಸಂಖ್ಯೆಯಲ್ಲಿ ವಿಂಡ್‌ಮಿಲ್‌ ಉತ್ಪಾದನೆ ಕಷ್ಟಸಾಧ್ಯ.

ಎಲಾನ್‌ ಮಸ್ಕ್‌ ಎಕ್ಸ್‌ಎಐ ಸಿಇಒ

ಇಂದಿನಿಂದ 3 ವರ್ಷಕ್ಕೆ ಸರಿಯಾಗಿ ಬಾಹ್ಯಾಕಾಶದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಡೇಟಾ ಸೆಂಟರ್‌ ತಲೆಯೆತ್ತಲಿದೆ. ಇದು ವಿಚಿತ್ರವೆನಿಸಿದರೂ ಅತಿಶಯೋಕ್ತಿ ಅಲ್ಲ. ಏಕೆಂದು ವಿವರಿಸುತ್ತೇನೆ. ಎಐ ಅಭಿವೃದ್ಧಿಗೆ ಡೇಟಾ ಸೆಂಟರ್‌ ಅಗತ್ಯ. ಅದರ ಕಾರ್ಯನಿರ್ವಹಣೆಗೆ ನಿರಂತರ ವಿದ್ಯುತ್‌ ಪೂರೈಕೆ ಅತ್ಯಗತ್ಯ. ಇಂದು ಚೀನಾದಲ್ಲಿ ಬಿಟ್ಟರೆ ಜಗತ್ತಿನಲ್ಲಿ ಬೇರೆಲ್ಲೂ ಈ ಸೌಲಭ್ಯ ಲಭ್ಯವಿಲ್ಲ. ಹೀಗಿರುವಾಗ, ಚೀನಾ ಹೊರತುಪಡಿಸಿ ಇನ್ನೆಲ್ಲಿ ಡೇಟಾ ಸೆಂಟರ್‌ ಸ್ಥಾಪಿಸಲು ಬಯಸುತ್ತೀರಿ ಎಂದು ಕೇಳಿದರೆ, ನನ್ನ ಉತ್ತರ ‘ಬಾಹ್ಯಾಕಾಶ’.

ಸೌರಫಲಕದೊಂದಿಗೆ ಅಂತರಿಕ್ಷಕ್ಕೆ ಹೋಗಿ. ಅಲ್ಲಿ ಅದು ಭೂಮಿಗಿಂತ 5 ಪಟ್ಟು ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಕಾರಣ, ಕಕ್ಷೆಯಲ್ಲಿ ಹಗಲು/ಇರುಳಿನ ಆಟ ಇರದ ಕಾರಣ ಸೂರ್ಯರಶ್ಮಿ ನಿರಂತರವಾಗಿರುತ್ತದೆ. ಜತೆಗೆ ನೇರವಾಗಿ ಫಲಕದ ಮೇಲೇ ಅದು ಬೀಳುವುದರಿಂದ, ಭೂಮಿಯ ವಾತಾವರಣ ಪ್ರವೇಶದ ವೇಳೆ ಆಗುವ ಶೇ.30ರಷ್ಟು ಸೌರಶಕ್ತಿನಷ್ಟವೂ ಆಗದು. ಅಂತೆಯೇ, ಅಲ್ಲಿ ಸೂರ್ಯ ಮುಳುಗದು, ಮೋಡ ಅಡ್ಡ ಬರದು, ಋುತುಗಳ ಬದಲಾವಣೆಯ ಜಂಜಾಟಗಳಿಲ್ಲ. ಈ ಎಲ್ಲಾ ಕಾರಣಗಳಿಂದ, ತುರ್ತುಸ್ಥಿತಿಗಾಗಿ ಬ್ಯಾಟರಿ ಹೊತ್ತೊಯ್ಯುವ ತಲೆನೋವೂ ಇಲ್ಲದೆ ಸಂಪೂರ್ಣ ಸೋಲಾರ್‌ ಮೇಲೆ ಅವಲಂಬಿತವಾಗಿರಬಹುದು. ಇದು ಲಾಭದಾಯಕ.

ಅಂತರಿಕ್ಷದ ಮೇಲೇಕೆ ಕಣ್ಣು?:

ಅಮೆರಿಕದಲ್ಲೇ ದೊಡ್ಡ ಸೋಲಾರ್‌ ಪಾರ್ಕ್‌ ನಿರ್ಮಿಸಿ ಎನ್ನಬಹುದು. ಆದರೆ ನೆವಾಡಾ ಅಥವಾ ಟೆಕ್ಸಸ್‌ನಲ್ಲಿ ಇದಕ್ಕೆ ಜಾಗ ಕೇಳಿದರೆ ಕೊಡುವವರು ಯಾರು? ಸರ್ಕಾರದ ಪರವಾನಗಿ, ಪರಿಸರ ಹಾನಿಯ ವಿಮರ್ಶೆಗಳಿಗೆ ವರ್ಷಗಳು ಬೇಕಾಗುತ್ತವೆ. ಆ ಬಳಿಕವೂ ಸಿಗುವುದು ಸೀಮಿತ ಜಾಗ. ಆದರೆ ಅಂತರಿಕ್ಷದಲ್ಲಿ ಡೇಟಾ ಸೆಂಟರ್‌ ಸ್ಥಾಪಿಸುವುದಾದರೆ ಒಮ್ಮೆ ಉಡಾವಣೆ ಮಾಡಿದರಾಯಿತು. ಅದಕ್ಕೆ ಗಡಿಗಳ ಮಿತಿಯಿಲ್ಲ, ಅನುಮತಿಗಳ ಆವಶ್ಯಕತೆ ಇರುವುದಿಲ್ಲ. ಹಾಗಾಗಿ ಇನ್ನು 36 ತಿಂಗಳುಗಳಲ್ಲಿ ಅಥವಾ ಅದಕ್ಕೂ ಮೊದಲು, ಅರ್ಥಾತ್‌ 30 ತಿಂಗಳುಗಳಲ್ಲಿ ಎಐ ಅಭಿವೃದ್ಧಿಗೆ ಸೂಕ್ತ ಹಾಗೂ ಅಗ್ಗದ ಜಾಗ ಅಂತರಿಕ್ಷವಾಗಲಿದೆ.

ಜಿಪಿಯು ಕೆಟ್ರೆ ಏನ್ಮಾಡೋದು?:

ಚಿತ್ರಗಳು ಮತ್ತು ವೀಡಿಯೊಗಳನ್ನು ತ್ವರಿತವಾಗಿ ಸೃಷ್ಟಿ ಮಾಡುವ ಜಿಪಿಯು(ಗ್ರಾಫಿಕ್ಸ್‌ ಪ್ರೊಸೆಸಿಂಗ್ ಯೂನಿಟ್‌)ಗಳು ಎಐ ಟೂಲ್‌ಗಳಿಗೆ ತರಬೇತಿ ನೀಡಲು ಅತ್ಯಗತ್ಯ. ಇವುಗಳು ಭೂಮಿಯಾಚೆ ಕೈಕೊಟ್ಟರೆ ಏನು ಮಾಡುವುದು ಎಂಬ ಸಂದೇಹ ಮೂಡುವುದು ಸಹಜ. ಆದರೆ ಆತಂಕದ ಬೇಡ. ಏಕೆಂದರೆ ಒಮ್ಮೆ ಜಿಪಿಯುಗಳನ್ನು ತಯಾರಿಸಿ, ಪರೀಕ್ಷಿಸಿ, ದೋಷಮುಕ್ತಗೊಳಿಸಿದರೆ ಆಯ್ತು. ಮತ್ತೆ ಅವುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಯವ ಸಾಧ್ಯತೆ ಅತಿ ವಿರಳ. ವಿಕಿರಣದಿಂದ ಸಮಸ್ಯೆಯಾಗುವುದನ್ನು ತಡೆಯಲು ಅವುಗಳ ಚಿಪ್‌ ಮತ್ತು ಹೊರಪದರವನ್ನು ಕೊಂಚ ದಪ್ಪ ಮಾಡಿದರೆ ಸಾಕು. ಬ್ಯಾಂಡ್‌ವಿಡ್ತ್‌ ಚಿಂತೆಯೂ ಬೇಡ. ಈಗಾಗಲೇ ನಾವು ನಮ್ಮ ಸ್ಟಾರ್‌ಲಿಂಕ್‌ನಲ್ಲಿ ಮಾಡಿರುವಂತೆ ಲೇಸರ್‌ ಬಳಸಿ ಅವುಗಳನ್ನು ಲಿಂಕ್‌ ಮಾಡಬಹುದು. ಒಟ್ಟಿನಲ್ಲಿ, ಒಮ್ಮೆ ಬಾಹ್ಯಾಕಾಶದಲ್ಲಿ ಪೂರ್ಣ ತಯಾರಿಯೊಂದಿಗೆ ಡೇಟಾ ಸೆಂಟರ್‌ ಸ್ಥಾಪನೆಯಾದರೆ ನಿರ್ವಹಣೆಯ ತಲೆನೋವು ಇರುವುದಿಲ್ಲ.

ಭೂಮಿ ಮೇಲಿನ ಸಮಸ್ಯೆಗಳು:

ಭೂಮಿಯಲ್ಲಿ ಸೌರಫಲಕ ಸ್ಥಾಪನೆಗೆ ಜಾಗ ಮತ್ತು ನಿರಂತರ ಸೂರ್ಯರಶ್ಮಿಗೆ ಇರುಳಿನ ತೊಡಕುಗಳ ನಡುವೆ ಅವುಗಳ ಮೇಲೆ ಶೇ.100ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್‌ ಪಾರ್ಕ್‌ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್‌ ಮಿಲ್‌ಗಳನ್ನು ಸ್ಥಾಪಿಸುವ ಆಯ್ಕೆಯಿದೆ. ಆದರೆ ಇವುಗಳ ಭವಿಷ್ಯವಿರುವುದು 2030ರ ವರೆಗೆ ಮಾತ್ರ. ಪ್ರಸ್ತುತ ಜಗತ್ತಿನಲ್ಲಿ ಅವುಗಳಿಗೆ ಬೇಕಾಗುವ ಬೃಹತ್‌ ರೆಕ್ಕೆ ಸೇರಿದಂತೆ ಇತರೆ ಭಾಗಗಳನ್ನು ತಯಾರಿಸುವ ಕೇವಲ 3 ಕಂಪನಿಗಳಿವೆ. ಅವುಗಳಿಂದ ಒಮ್ಮೆಲೆ ಅಧಿಕ ಸಂಖ್ಯೆಯಲ್ಲಿ ವಿಂಡ್‌ಮಿಲ್‌ ಉತ್ಪಾದನೆ ಕಷ್ಟಸಾಧ್ಯ.

ಇನ್ನು ಡೇಟಾ ಸೆಂಟರ್‌ಗಳು ನಿರಂತರ ಕೆಲಸ ಮಾಡುವುದರಿಂದ ಅಲ್ಲಿ ಬಳಸಲಾಗುವ ಚಿಪ್‌ಗಳಿಗೆ ವಿಶ್ರಾಂತಿ ಸಿಗುವುದಿಲ್ಲ. ಪರಿಣಾಮ ಅವುಗಳು ಅತ್ಯಂತ ಬಿಸಿಯಾಗುತ್ತವೆ. ಆ ಚಿಪ್‌ಗಳನ್ನು ತಣಿಸಲು ಇನ್ನೂ ಶೇ.40ರಷ್ಟು ಅಧಿಕ ವಿದ್ಯುತ್‌ ಶಕ್ತಿ ಬೇಕಾಗುತ್ತದೆ. ಸರ್ವಿಸ್‌ ಮಾಡಲು ಶೇ.20-25ರಷ್ಟು ಹೆಚ್ಚು ವಿದ್ಯುತ್‌ ಮತ್ತೆ ಖರ್ಚಾಗುತ್ತದೆ. ಒಟ್ಟಿನಲ್ಲಿ, ಡೇಟಾ ಸೆಂಟರ್‌ ಜೀವಂತವಾಗಿರಲು ಬೇಕಾದ ವಿದ್ಯುತ್‌ ಶಕ್ತಿಯೇ ಇಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಇವುಗಳ್ಯಾವುವೂ ಬಾಹ್ಯಾಕಾಶದಲ್ಲಿ ಇರುವುದಿಲ್ಲ.

ಮುಂದಿನ ಯೋಜನೆ ಇಂತಿದೆ:

ಇತ್ತೀಚೆಗಷ್ಟೇ ಎಕ್ಸ್‌ಎಐ ಮತ್ತು ಸ್ಪೇಸ್‌ಎಕ್ಸ್‌ ವಿಲೀನಗೊಂಡಿವೆ. ಹೀಗಿರುವಾಗ, ಇನ್ನೈದು ವರ್ಷಗಳಲ್ಲಿ ಸ್ಪೇಸ್‌ಎಕ್ಸ್‌ನಲ್ಲಿ, ಪ್ರತಿ ವರ್ಷ ಸಾವಿರಾರು ಎಐ ಸೂಪರ್‌ಕಂಪ್ಯೂಟರ್‌ಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆಯಿದೆ. ಇದಕ್ಕಾಗಿ ಅಂದಾಜು ಪ್ರತಿ ಗಂಟೆಗೆ ಒಂದೊಂದು ಮರುಬಳಕೆಯಾಗಬಲ್ಲ ಸ್ಟಾರ್‌ಶಿಪ್‌ ರಾಕೆಟ್‌ ಹಾರಿಸಲಾಗುವುದು. ಅಲ್ಲಿಗೆ ವರ್ಷಕ್ಕೆ 10,000 ಉಡಾವಣೆಗಳಾಗುತ್ತವೆ. ಇವು ಕ್ರಮೇಣ 30,000ಕ್ಕೂ ಹೆಚ್ಚಬಹುದು.

YouTube video player