ಬಿಲಿಯನೇರ್‌ ಇಲಾನ್ ಮಸ್ಕ್‌ ತಮ್ಮ ಅವಳಿ ಮಕ್ಕಳಲ್ಲಿ ಒಬ್ಬನಿಗೆ 'ಸ್ಟ್ರೈಡರ್ ಶೇಖರ್' ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ 'ಶೇಖರ್' ಎಂಬ ಹೆಸರು ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ವಿಜ್ಞಾನಿಯ ಹೆಸರು. ಅದೇಕೆ ಅವರ ಹೆಸರು? ಇಲ್ಲಿದೆ ಓದಿ. 

ಹೌದು, ನೀವು ಸರಿಯಾಗಿ ಓದಿಕೊಂಡಿದ್ದೀರಿ. ಇಲಾನ್‌ ಮಸ್ಕ್‌ ಭಾರತೀಯನಲ್ಲ, ಹೆಂಡತಿಯೂ ಇಂಡಿಯಾದವಳಲ್ಲ. ಆದರೂ ತಮ್ಮ 14 ಮಕ್ಕಳಲ್ಲಿ ಒಬ್ಬ ಮಗನಿಗೆ ಭಾರತೀಯ ವಿಜ್ಞಾನಿಯೊಬ್ಬರ ಹೆಸರು ಇಟ್ಟಿದ್ದಾರೆ. ಮಗುವಿನ ಹೆಸರೇನು, ಭಾರತೀಯ ವಿಜ್ಞಾನಿ ಯಾರು, ಇದನ್ನೆಲ್ಲ ತಿಳಿಯೋಣ ಬನ್ನಿ.

ಬಿಲಿಯನೇರ್‌ ಇಲಾನ್‌ ಮಸ್ಕ್‌ ಮೊನ್ನೆ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ತಮ್ಮ ಕುಟುಂಬದ ಒಂದು ಫೋಟೋ ಹಾಕಿ ವಿಶ್ವದ ಗಮನ ಸೆಳೆದರು. ಅದರಲ್ಲಿ ಮಸ್ಕ್‌ ಜೊತೆ ಅವರ ಅವಳಿ ಮಕ್ಕಳಿದ್ದರು. ಅದಕ್ಕೆ ಅವರು ಹಾಕಿದ ಕ್ಯಾಪ್ಷನ್‌ ಹೀಗಿತ್ತು- “ನನ್ನ ಮಗ ಸ್ಟ್ರೈಡರ್ ಶೇಖರ್ (ಅರಗೋನ್ ಪಾತ್ರ ಮತ್ತು ಮಹಾನ್ ಭಾರತೀಯ ಭೌತಶಾಸ್ತ್ರಜ್ಞ ಚಂದ್ರಶೇಖರ್ ಅವರ ಹೆಸರು) ಹಾಗೂ ನನ್ನ ಮಗಳು ಕಾಮೆಟ್ ಅಝುರ್ (ಎಲ್ಡನ್ ರಿಂಗ್ ವಿಡಿಯೋ ಗೇಮಿನ ಒಂದು ಅತ್ಯಂತ ಶಕ್ತಿಶಾಲಿ ಮಂತ್ರ)”. ಈ ಕಾಮೆಂಟ್‌ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.

ಸ್ಟ್ರೈಡರ್ ಶೇಖರ್ ಮತ್ತು ಕಾಮೆಟ್ ಅಝುರ್ ಇಬ್ರೂ ಮಸ್ಕ್‌ನ ಮಕ್ಕಳು. ಈ ಅವಳಿ ಮಕ್ಕಳು 2021ರ ನವೆಂಬರ್‌ನಲ್ಲಿ ಇಲಾನ್ ಮಸ್ಕ್‌ ಹಾಗೂ ನ್ಯೂರಾಲಿಂಕ್ ಕಂಪನಿಯ ಕಾರ್ಯನಿರ್ವಾಹಕಿ ಶಿವೋನ್ ಜಿಲಿಸ್ ಅವರಿಗೆ ಐವಿಎಫ್‌ ವಿಧಾನದ ಮೂಲಕ ಜನಿಸಿದವರು. ಇವರಿಬ್ಬರ ಹೆಸರಿನಲ್ಲಿ ‘ಸ್ಟ್ರೈಡರ್’ ಎಂಬ ಹೆಸರು ಪ್ರಸಿದ್ಧ ಫ್ಯಾಂಟಸಿ ಕಾದಂಬರಿ ʼದಿ ಲಾರ್ಡ್ ಆಫ್ ದ ರಿಂಗ್ಸ್‌ʼನಲ್ಲಿರುವ ಒಂದು ಪ್ರಮುಖ ಪಾತ್ರದ್ದು. ‘ಶೇಖರ್’ ಎಂಬ ಹೆಸರು ಭಾರತೀಯ- ಅಮೆರಿಕನ್ ಖಗೋಳ ಭೌತಶಾಸ್ತ್ರಜ್ಞ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ಪ್ರೊ. ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಹೆಸರಿನ ಒಂದು ಭಾಗ. ಸುಬ್ರಹ್ಮಣ್ಯನ್‌ ಚಂದ್ರಶೇಖರ್‌ ಎಂದರೆ ಇಲಾನ್‌ ಮಸ್ಕ್‌ಗೆ ತುಂಬಾ ಗೌರವ. ಫ್ಯಾಂಟಸಿ ಸಾಹಿತ್ಯ ಮತ್ತು ವಿಜ್ಞಾನವನ್ನು ಒಂದೇ ಹೆಸರಿನಲ್ಲಿ ಜೋಡಿಸಿದ ಮಸ್ಕ್‌ ಅವರ ಈ ಆಯ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ.

ಮಸ್ಕ್‌ ಅವರ ಇನ್ನೊಬ್ಬ ಮಗಳ ಹೆಸರು ಕಾಮೆಟ್ ಅಝುರ್. ಇದು ಜನಪ್ರಿಯ ವಿಡಿಯೋ ಗೇಮ್ ‘ಎಲ್ಡನ್ ರಿಂಗ್’ನಲ್ಲಿನ ಅತ್ಯಂತ ಶಕ್ತಿಶಾಲಿ ಒಂದು ಮಂತ್ರದಿಂದ ಪಡೆದಿದ್ದು. ಇದು ಗೇಮಿಂಗ್‌ನಲ್ಲಿ ಮಸ್ಕ್‌ಗೆ ಇರುವ ಆಸಕ್ತಿಯ ಪ್ರತೀಕವಂತೆ.

20 ವರ್ಷಗಳಲ್ಲಿ 14 ಮಕ್ಕಳು!

ಇಲಾನ್ ಮಸ್ಕ್‌ ಕಳೆದ 20 ವರ್ಷಗಳಲ್ಲಿ ಒಟ್ಟು 14 ಮಕ್ಕಳಿಗೆ ತಂದೆಯಾಗಿದ್ದಾರೆ. 2002ರಲ್ಲಿ ಅವರ ಮೊದಲ ಪತ್ನಿ, ಕೆನಡಿಯನ್ ಲೇಖಕಿ ಜಸ್ಟಿನ್ ವಿಲ್ಸನ್ ಅವರಿಂದ ಜನಿಸಿದ ಪುತ್ರ ನೆವಾಡಾ ಅಲೆಕ್ಸಾಂಡರ್ 10 ವಾರಗಳಲ್ಲೇ ದುರಂತದಿಂದ ತೀರಿಹೋದ. ನಂತರ ದಂಪತಿಗೆ ವಿವಿಯನ್ ಮತ್ತು ಗ್ರಿಫಿನ್ ಎಂಬ ಜೋಡಿ ಮಕ್ಕಳು ಹಾಗೂ ಕೈ, ಸ್ಯಾಕ್ಸನ್ ಮತ್ತು ಡೇಮಿಯನ್ ಎಂಬ ಮೂರು ಮಕ್ಕಳು ಜನಿಸಿದರು.

Scroll to load tweet…

2008ರಲ್ಲಿ ವಿಚ್ಛೇದನದ ನಂತರ, ಮಸ್ಕ್‌ ನಟಿ ತಾಲುಲಾ ರೈಲಿ ಅವರನ್ನು ಎರಡು ಬಾರಿ ವಿವಾಹವಾಗಿ ಮತ್ತೆ ವಿಚ್ಛೇದನ ಪಡೆದರು. ಇವರಿಗೆ ಮಕ್ಕಳಿರಲಿಲ್ಲ. 2020ರಲ್ಲಿ ಗಾಯಕಿ ಗ್ರೈಮ್ಸ್ ಅವರೊಂದಿಗೆ ಮಸ್ಕ್‌ ತಮ್ಮ ಮಗ X Æ A-12 ಅನ್ನು ಸ್ವಾಗತಿಸಿದರು. ನಂತರ ಇವರಿಗೆ ಎಕ್ಸಾ ಡಾರ್ಕ್ ಸೈಡೆರೇಲ್ ಎಂಬ ಮಗಳು ಮತ್ತು ಟೆಕ್ನೋ ಮೆಕಾನಿಕಸ್ ಎಂಬ ಮಗ ಜನಿಸಿದರು.

2021ರ ನವೆಂಬರ್‌ನಲ್ಲಿ ಶಿವೋನ್ ಜಿಲಿಸ್ ಅವರೊಂದಿಗೆ ಸ್ಟ್ರೈಡರ್ ಮತ್ತು ಅಝುರ್ ಎಂಬ ಜೋಡಿ ಮಕ್ಕಳು ಜನಿಸಿದರು. 2024ರ ಫೆಬ್ರವರಿಯಲ್ಲಿ ಜಿಲಿಸ್ ಮತ್ತು ಮಸ್ಕ್‌ ಅವರಿಗೆ ಆರ್ಕೇಡಿಯಾ ಎಂಬ ಮಗಳು ಜನಿಸಿದಳು. 2025ರ ಫೆಬ್ರವರಿಯಲ್ಲಿ ಲೇಖಕಿ ಆಶ್ಲಿಸ್ಟ್. ಕ್ಲೇರ್ ಅವರು ಮಸ್ಕ್‌ ಅವರಿಂದ ರೊಮ್ಯುಲಸ್ ಎಂಬ ಮಗನನ್ನು ಪಡೆದಿರುವುದಾಗಿ ಬಹಿರಂಗಪಡಿಸಿದರು. ನಂತರ ಜಿಲಿಸ್ ಅವರು ಸೆಲ್ಡನ್ ಲೈಕರ್ಗಸ್ ಎಂಬ ಮಗನನ್ನು ಕೂಡ ರಹಸ್ಯವಾಗಿ ಪಡೆದಿರುವುದಾಗಿ ತಿಳಿಸಿದ್ದಾರೆ.