ಒಂದು ಕಾಲದಲ್ಲಿ ಸೈಕಲ್ ಬೈಕ್‌ನಲ್ಲಿ ಓಡಾಡ್ತಿದ್ದ ಯುವಕನೋರ್ವ ಈಗ ದುಬೈನಲ್ಲಿ ಕ್ರೂಸ್ ಶಿಪ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಆತನ ಈ ಅನಿರೀಕ್ಷಿತ ಸಂಪತ್ತಿನ ಬಗ್ಗೆ ಈಗ ಇಡಿ ಕಣ್ಣು ಬಿದ್ದಿದೆ.

ಒಂದು ಕಾಲದಲ್ಲಿ ಸೈಕಲ್ ಬೈಕ್‌ನಲ್ಲಿ ಓಡಾಡ್ತಿದ್ದ ಯುವಕನೋರ್ವ ಈಗ ದುಬೈನಲ್ಲಿ ಕ್ರೂಸ್ ಶಿಪ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಆತನ ಈ ಅನಿರೀಕ್ಷಿತ ಸಂಪತ್ತಿನ ಬಗ್ಗೆ ಈಗ ಇಡಿ ಕಣ್ಣು ಬಿದ್ದಿದೆ. ಹೌದು ಉತ್ತರ ಪ್ರದೇಶದ ಉನ್ನಾವೋದ ಯೂಟ್ಯೂಬರ್ ಅನುರಾಗ್ ದ್ವಿವೇದಿ ತನ್ನ ಹೈ ಪ್ರೊಫೈಲ್ ಜೀವನಶೈಲಿ ಹಾಗೂ ಮದುವೆಯಿಂದಾಗಿ ಜಾರಿ ನಿರ್ದೇಶನಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ. ಆತನ ಐಷಾರಾಮಿ ಜೀವನ ಹಾಗೂ ಆದಾಯದ ಬಗ್ಗೆ ತನಿಖೆಗಿಳಿದ ಇಡಿ ಈಗ ಆತನ ಮನೆಯ ಮೇಲೆ ದಾಳಿ ಮಾಡಿದ್ದು, ದಾಳಿ ವೇಳೆ ಮನೆಯ ಗ್ಯಾರೇಜ್‌ನಲ್ಲಿ ಐಷಾರಾಮಿ ವಾಹನಗಳೇ ಕಂಡು ಬಂದಿವೆ. ಆತನ ಬಳಿ ಇದ್ದ ಲ್ಯಾಂಬೋರ್ಘಿನಿ, BMW, ಮರ್ಸಿಡಿಸ್ ಮತ್ತು ಥಾರ್ ಕಾರುಗಳನ್ನು ಇಡಿ ವಶಕ್ಕೆ ಪಡೆದಿದ್ದು, ಈ ಐಷಾರಾಮಿ ಕಾರುಗಳ ಮೌಲ್ಯ 10 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಇದರ ಜೊತೆಗೆ ಅನುರಾಗ್ ಮತ್ತು ಅವರ ಕುಟುಂಬ ಸದಸ್ಯರ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಖಾತೆಗಳಿಂದ ನಡೆದ ವಹಿವಾಟುಗಳ ಬಗ್ಗೆಯೂ ತನಿಖೆ ಆರಂಭವಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಈ ಕ್ರಮ ಕೈಗೊಳ್ಳಲಾಗಿದೆ. ಅನುರಾಗ್ ದುಬೈನಲ್ಲಿ ಹಲವಾರು ಆಸ್ತಿಗಳನ್ನು ಖರೀದಿಸಿದ್ದು, ಕೆಲ ಸಮಯದಿಂದ ಆತ ದುಬೈನಲ್ಲಿ ವಾಸಿಸುತ್ತಿದ್ದಾನೆ ಎಂದು ವರದಿಯಾಗಿದೆ. ಈ ವರ್ಷದ ನವೆಂಬರ್ 22 ರಂದು ದುಬೈನ್‌ ಕ್ರೂಸ್‌ನಲ್ಲಿ ಈತನ ಮದುವೆ ನಡೆದಿತ್ತು. ಈ ಐಷಾರಾಮಿ ಮದುವೆಯ ನಂತರ ಈತನ ಶ್ರೀಮಂತಿಕೆ ಇಡಿ ಕಣ್ಣಿಗೆ ಬಿದ್ದಿದೆ.

ಬುಧವಾರವೇ ಇಡಿ ಅನುರಾಗ್‌ಗೆ ಸೇರಿದ ಉನ್ನಾವ್ ಮತ್ತು ಲಕ್ನೋದ 9 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ, 12 ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲಿಸಲಾಯಿತು. ಆರಂಭಿಕ ತನಿಖೆಗಳಲ್ಲಿ ಕಂಡು ಬಂದಂತೆ ಕ್ರಿಕೆಟ್ ಬೆಟ್ಟಿಂಗ್, ಹವಾಲಾ ಜಾಲ ಮತ್ತು ಟಿಪ್ಪಿಂಗ್ ಮೂಲಕ ಆತನ ಗಣನೀಯ ಹಣ ಗಳಿಕೆ ಮಾಡಿರುವುದು ಗೊತ್ತಾಗಿದೆ. ಆತ ಕಪ್ಪು ಹಣವನ್ನು ದುಬೈ ಮತ್ತು ಇತರ ವಿದೇಶಗಳಲ್ಲಿ ಹೂಡಿಕೆ ಮಾಡಲು ಬಳಸಿದ್ದಾನೆ ಎಂಬ ಮಾಹಿತಿ ಇದೆ.

5 ಕಾರುಗಳಲ್ಲಿ ಬಂದ 16 ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಬುಧವಾರ ಬೆಳಗ್ಗೆ 7 ಗಂಟೆಗೆ ಅನುರಾಗ್ ದ್ವಿವೇದಿ ಅವರ ಗ್ರಾಮವಾದ ಖಜೂರ್‌ಗೆ 3 ಕಾರುಗಳಲ್ಲಿ ಮತ್ತು ನವಾಬ್‌ಗಂಜ್ ಪಟ್ಟಣದ ಚಿಕ್ಕಪ್ಪ ನೃಪೇಂದ್ರ ನಾಥ್ ದ್ವಿವೇದಿ ಅವರ ಮನೆಗೆ 2 ಕಾರುಗಳಲ್ಲಿ ಆಗಮಿಸಿದ್ದರು.

ಈ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ನಂತರ ಬೆಳಿಗ್ಗೆ 11 ಗಂಟೆ ಸುಮಾರಿಗೆ, ಇಡಿ ತಂಡವು ಅನುರಾಗ್ ಅವರ ತಾಯಿಯನ್ನು ಗ್ರಾಮದಿಂದ ನವಾಬ್‌ಗಂಜ್‌ಗೆ ಕರೆತಂದು ಬೀಗ ತೆರೆಸಿದರು. ತಂಡವು ತನಿಖೆ ನಡೆಸುತ್ತಿರುವಾಗ, ನೃಪೇಂದ್ರ ನಾಥ್ ಮತ್ತು ಅವರ ಪತ್ನಿ ಕೂಡ ಮನೆಗೆ ಬಂದರು. ನಂತರ ಸಂಜೆ 7 ಗಂಟೆಯವರೆಗೆ ಇಡಿ ಅಧಿಕಾರಿಗಳು ಮನೆಯ ಪ್ರತಿಯೊಂದು ಮೂಲೆಯನ್ನೂ ಹುಡುಕಿದರು. 12 ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲಿಸಿ ಮನೆಯ, ಪ್ರತಿಯೊಂದು ಮೂಲೆಯನ್ನೂ ಹುಡುಕಲಾಯಿತು. ಈ ವೇಳೆ ಸಿಆರ್‌ಪಿಎಫ್ ಅವರ ಮನೆಯ ಹೊರಗೆ ಠಿಕಾಣಿ ಹೂಡಿತು.

ತನಿಖಾ ಸಂಸ್ಥೆಯ ಅಧಿಕಾರಿಗಳು ಬ್ಯಾಂಕ್ ವಹಿವಾಟುಗಳು, ಆಸ್ತಿ ದಾಖಲೆಗಳು ಮತ್ತು ಡಿಜಿಟಲ್ ಗ್ಯಾಜೆಟ್‌ಗಳನ್ನು ಮನೆಯಿಂದ ವಶಪಡಿಸಿಕೊಂಡಿದೆ. ಡ್ರೀಮ್ 11 ಬೆಟ್ಟಿಂಗ್ ಆಪ್‌ನಿಂದ ಗಳಿಸಿದ ಕೋಟಿಗಳ ಮೂಲವನ್ನು ಕಂಡುಹಿಡಿಯಲು ತಂಡ ಪ್ರಯತ್ನಿಸುತ್ತಿದೆ. ಈ ಹಣವನ್ನು ಯಾವುದೇ ಅಕ್ರಮ ಜಾಲವನ್ನು ನಡೆಸಲು ಬಳಸಲಾಗಿದೆಯೇ? ಎಂಬ ಬಗ್ಗೆ ತನಿಖೆ ಡೆಯುತ್ತಿದೆ. ದಾಳಿಯ ಸಮಯದಲ್ಲಿ ಅನುರಾಗ್ ಮನೆಯಲ್ಲಿ ಇರಲಿಲ್ಲ. ಅನುರಾಗ್ ಅವರ ವಿದೇಶಿ ವಾಸ್ತವ್ಯ ಮತ್ತು ಅಲ್ಲಿನ ಹಣಕಾಸಿನ ವಹಿವಾಟುಗಳ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ. ಆದರೆ ತನಿಖಾ ಅಧಿಕಾರಿಗಳು ಇನ್ನೂ ಯಾವುದೇ ವಶಪಡಿಸಿಕೊಂಡ ಅಧಿಕೃತ ವಸ್ತುಗಳ ಬಗ್ಗೆ ಘೋಷಿಸಿಲ್ಲ.

ಅನುರಾಗ್ ಈ ಹಣವನ್ನು ಭಾರತದಿಂದ ಅಕ್ರಮವಾಗಿ ಹೊರಗೆ ಕಳುಹಿಸಿ ನಂತರ ಕಾನೂನುಬದ್ಧ ಹಣವಾಗಿ ವಾಪಸ್ ತಂದಿದ್ದಾರೆಯೇ ಎಂಬ ಅನುಮಾನವಿದ್ದು, ಈ ಆಪಾದಿತ ಜಾಲದಲ್ಲಿ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಅನುರಾಗ್ ದ್ವಿವೇದಿ ಮತ್ತು ಅವರ ಆಪ್ತರನ್ನು ವಿಚಾರಣೆಗೆ ಒಳಪಡಿಸಬಹುದು.

ಅನುರಾಗ್ ಅವರು ಆಪ್ತ ಸ್ನೇಹಿತರಿಂದ ಹಲವಾರು ಎಕರೆ ಭೂಮಿಯನ್ನು ಖರೀದಿಸಿದ್ದರು. ಎರಡು ವರ್ಷಗಳ ಹಿಂದೆ ಲಕ್ನೋದ ಗಾಲ್ಫ್ ಸಿಟಿಯಲ್ಲಿ ಐಷಾರಾಮಿ ಫ್ಲಾಟ್ ಅನ್ನು ಸಹ ಖರೀದಿಸಿದ್ದರು. ಈ ವ್ಯವಹಾರಗಳ ವಿವರಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

25 ವರ್ಷದ ಅನುರಾಗ್ ಒಂದು ಕಾಲದಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದರು. ಆದರೆ, ಈಗ ಅವರು ಬಿಎಂಡಬ್ಲ್ಯು ಮತ್ತು ಡಿಫೆಂಡರ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ನವೆಂಬರ್ 22 ರಂದು, ಅನುರಾಗ್ ದುಬೈನಲ್ಲಿ ಕ್ರೂಸ್‌ನಲ್ಲಿ ಲಕ್ನೋ ಮೂಲದ ತನ್ನ ಗೆಳತಿಯನ್ನು ವಿವಾಹವಾದರು. ಈ ಮದುವೆಗಾಗಿ ಉನ್ನಾವೊದ ನವಾಬ್‌ಗಂಜ್‌ನಿಂದ ದುಬೈಗೆ ಸುಮಾರು 100 ಸಂಬಂಧಿಕರನ್ನು ಕರೆದುಕೊಂಡು ಹೋಗಿದ್ದು, ಈ ಪ್ರಯಾಣ ಮತ್ತು ವಸತಿ ವೆಚ್ಚವನ್ನು ಅವರೇ ಭರಿಸಿದರು.

ಮದುವೆಯ ನಂತರ ದುಬೈನಿಂದ ಹಿಂದಿರುಗಿದ ಜನರು ಅನುರಾಗ್ ಅವರ ಐಷಾರಾಮಿ ಜೀವನಶೈಲಿಯ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ಇದು ಕೊನೆಗೆ ತನಿಖಾ ಏಜೆನ್ಸಿಗೆ ತಲುಪಿದೆ. ಅನುರಾಗ್ 7 ವರ್ಷಗಳಿಂದ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಡ್ರೀಮ್ -11 ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್‌ ಜೊತೆಗೂ ಸಂಪರ್ಕ ಹೊಂದಿದ್ದು, ಕ್ರಿಕೆಟ್ ಮತ್ತು ಕ್ರಿಕೆಟಿಗರ ಬಗ್ಗೆ ವೀಡಿಯೊಗಳನ್ನು ಮಾಡುತ್ತಾರೆ.

ಇದನ್ನೂ ಓದಿ: ಈ ಟ್ರೆಂಡ್ ಶುರು ಮಾಡಿದ್ದು ಮೆಹಬೂಬಾ: ನಿತೀಶ್‌ಕುಮಾರ್ ಬುರ್ಖಾ ಎಳೆದಿದ್ದಕ್ಕೆ ಮುಫ್ತಿಗೆ ಟಾಂಗ್ ನೀಡಿದ ಒಮರ್ ಅಬ್ದುಲ್ಲಾ

ಅನುರಾಗ್ ದ್ವಿವೇದಿ ಅವರು ಯೂಟ್ಯೂಬ್ ಚಾನೆಲ್‌ನಲ್ಲಿ 7 ಮಿಲಿಯನ್ ಚಂದಾದಾರರನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 2.4 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಈ ಫಾಲೋವರ್ಸ್‌ಗಳಿಗಾಗಿ, ಅನುರಾಗ್ 2024 ರ ಜನವರಿ 7ರಂದು ಲಕ್ನೋದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ತು ಕರ್ ಲೇಗಾ ಎಂಬ ಘೋಷ ವಾಕ್ಯದಡಿ ತಮ್ಮ ಮೊದಲ ಅದ್ಧೂರಿ ಕಾರ್ಯಕ್ರಮ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಫ್ಯಾಂಟಸಿ ಕ್ರಿಕೆಟ್ ಪ್ರಿಯರು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಅನುರಾಗ್ ಅವರ ಬ್ರಾಂಡ್ ಮೌಲ್ಯ ಮತ್ತು ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿತು ಎಂದು ವರದಿಯಾಗಿದೆ.

ಇದನ್ನೂ ಓದಿ: 2ನೇ ಪತ್ನಿಯ ಸಾಕುವ ತಾಕತ್ತಿರುವವ ಮೊದಲ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ:ಹೈಕೋರ್ಟ್ ತೀರ್ಪು