2ನೇ ಪತ್ನಿಯನ್ನು ಪೋಷಿಸುವ ಗಂಡ ಮೊದಲ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಎರಡನೇ ಪತ್ನಿಯ ಕಷ್ಟಸುಖಗಳಿಗೆ ಹೆಗಲಾಗುವ ಗಂಡ ಮೊದಲ ಪತ್ನಿಗೆ ಜೀವನಾಂಶವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಎರಡನೇ ಪತ್ನಿಯನ್ನು ಪೋಷಿಸಲು ಸಾಧ್ಯವಾಗುವ ಪತಿಯ ಆರ್ಥಿಕ ಸಾಮರ್ಥ್ಯವು ಮೊದಲ ಪತ್ನಿಯ ಜೀವನಾಂಶ ಹಕ್ಕನ್ನು ನಿರಾಕರಿಸಲು ಕಾರಣವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಅಲಹಾಬಾದ್ ಹೈಕೋರ್ಟ್ ಗುರುವಾರ ಈ ತೀರ್ಪು ನೀಡಿದೆ.
ಅರ್ಜಿದಾರರು ಜೂನ್ 6 ರಂದು ಅಲಿಘರ್ ಕೌಟುಂಬಿಕ ನ್ಯಾಯಾಲಯವು ತನ್ನ ಮೊದಲ ಪತ್ನಿಗೆ ಮಾಸಿಕ 20,000 ರೂ. ಜೀವನಾಂಶ ನೀಡುವಂತೆ ಆದೇಶಿಸಿದ್ದ ಆದೇಶವನ್ನು ಪ್ರಶ್ನಿಸಿದ್ದರು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿರುವಾಗ ಮತ್ತು ಆರ್ಥಿಕವಾಗಿ ತನ್ನ ಹೆತ್ತವರ ಮೇಲೆ ಅವಲಂಬಿತಳಾಗಿದ್ದಾಗ ಆಕೆಗೆ ಆರ್ಥಿಕ ನೆರವು ಅತ್ಯಗತ್ಯ ಎಂದು ಗಮನಿಸಿದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಹರ್ವೀರ್ ಸಿಂಗ್ ಅವರ ಏಕಸದಸ್ಯ ಪೀಠವೂ, ಕೌಟುಂಬಿಕ ನ್ಯಾಯಾಲಯ ನೀಡಿದ ಜೀವನಾಂಶ ಆದೇಶದ ವಿರುದ್ಧ ಪತಿ ಮೊಹಮ್ಮದ್ ಆಸಿಫ್ ಎಂಬುವವರು ಸಲ್ಲಿಸಿದ್ದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ವಜಾಗೊಳಿಸಿತು. ಅರ್ಜಿದಾರರಾದ ಮೊಹಮ್ಮದ್ ಆಸಿಫ್ ಅವರು ಜೂನ್ 6 ರಂದು ಅಲಿಘರ್ ಕೌಟುಂಬಿಕ ನ್ಯಾಯಾಲಯವು ತನ್ನ ಮೊದಲ ಪತ್ನಿಗೆ ಮಾಸಿಕ 20,000 ರೂ. ಜೀವನಾಂಶವನ್ನು ನೀಡುವಂತೆ ಆದೇಶಿಸಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ಮತಾಂತರವಾದ ವ್ಯಕ್ತಿ ಸಮಾಧಿ ವಿಚಾರಕ್ಕೆ ಗಲಾಟೆ: ಮತಾಂತರಿಗಳ ಬೆನ್ನಟ್ಟಿ ಚರ್ಚ್‌ಗೆ ಬೆಂಕಿ ಹಚ್ಚಿದ ಬುಡಕಟ್ಟು ಜನರು
ಆಸಿಫ್ ತನ್ನ ಅರ್ಜಿಯಲ್ಲಿ ತಾನು ಬೆಂಗಳೂರಿನ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕನಾಗಿದ್ದು, ತನ್ನ ಮೊದಲ ಪತ್ನಿಗೆ ತಿಂಗಳಿಗೆ 20,000 ರೂ. ಪಾವತಿಸಲು ತನ್ನ ಸಂಬಳ ಸಾಕಾಗುವುದಿಲ್ಲ ಎಂದು ವಾದಿಸಿದ್ದರು. ಈ ನಿರ್ವಹಣಾ ಮೊತ್ತವು ಅಧಿಕವಾಗಿದ್ದು, ತನ್ನ ಆರ್ಥಿಕ ಸಾಮರ್ಥ್ಯವನ್ನು ಮೀರಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು. ಆಲಿಘರ್ ಕೌಟುಂಬಿಕ ನ್ಯಾಯಾಲಯವು ಆದೇಶ ಹೊರಡಿಸುವಾಗ, ಅರ್ಜಿದಾರರ ವಾರ್ಷಿಕ ಆದಾಯ ಸುಮಾರು 83,000 ರೂ. ಎಂದು ಹೇಳುವ 2018ರ ಆದಾಯ ಪ್ರಮಾಣಪತ್ರವನ್ನು ಕಡೆಗಣಿಸಲಾಗಿದೆ ಎಂದು ಆಸಿಫ್ ಅವರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವೂ ಪ್ರಮಾಣಪತ್ರವು ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಎಂದಿದೆ.
ಆರಂಭದಲ್ಲಿ ಕೌಟುಂಬಿಕ ನ್ಯಾಯಾಲಯವು 2,000 ರೂ.ಗಳ ಮಧ್ಯಂತರ ಜೀವನಾಂಶವನ್ನು ನೀಡಿತ್ತು, ನಂತರ ಅದನ್ನು 20,000 ರೂ.ಗಳಿಗೆ ಹೆಚ್ಚಿಸಿತ್ತು, ಇದು ಅತಿಯಾದದ್ದು ಮಾತ್ರವಲ್ಲದೆ ದಾಖಲೆಯಲ್ಲಿರುವ ಸಂಗತಿಗಳು ಮತ್ತು ಸಾಕ್ಷ್ಯಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರತಿವಾದಿ ಪತ್ನಿ ಪರ ವಕೀಲರು ನ್ಯಾಯಾಲಯಕ್ಕೆ ಆಸಿಫ್ ಇನ್ನೊಬ್ಬ ಮಹಿಳೆಯನ್ನು ಮರು ಮದುವೆಯಾಗಿದ್ದಾನೆ ಎಂದು ತಿಳಿಸಿದರು. ಜೂನ್ 6 ರ ಆದೇಶದಲ್ಲಿ ಈ ಅಂಶ ಬೆಳಕಿಗೆ ಬಂದಿತು. ಆಸಿಫ್ ಕೆಲಸ ಮಾಡುವ ಹಾರ್ಡ್‌ವೇರ್ ಅಂಗಡಿಯು ಅವನ ತಂದೆಯ ಒಡೆತನದಲ್ಲಿದೆ ಮತ್ತು ಇಬ್ಬರೂ ತೆರಿಗೆದಾರರು ಎಂದು ಮಹಿಳಾ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು. ಅವರ ಹಾರ್ಡ್‌ವೇರ್ ಅಂಗಡಿಯು ನೋಂದಾಯಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಖ್ಯೆಯನ್ನು ಸಹ ಹೊಂದಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಭಾರತ ವಿರೋಧಿ ತೀವ್ರಗಾಮಿ ನಾಯಕನ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ಅರ್ಜಿದಾರರು ತಮ್ಮ ಎರಡನೇ ಪತ್ನಿಯನ್ನು ಸಾಕಲು ಸಾಧ್ಯವಾದರೆ, ಮೊದಲ ಪತ್ನಿಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ವಕೀಲರು ವಾದಿಸಿದರು. ಪ್ರತಿವಾದಿಯು ಯಾವುದೇ ಆದಾಯದ ಮೂಲವಿಲ್ಲದ ನಿರುದ್ಯೋಗಿ ಮಹಿಳೆಯಾಗಿದ್ದು, ಆರ್ಥಿಕವಾಗಿ ತನ್ನ ಹೆತ್ತವರ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಹೇಳಿದರು. ಇವೆಲ್ಲವನ್ನು ಆಲಿಸಿದ ನ್ಯಾಯಾಲಯವೂ ಈ ಹಿಂದೆ ಶಮೀಮಾ ಫಾರೂಕಿ ವಿ ಶಾಹಿದ್ ಖಾನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ, ಕಾನೂನುಬದ್ಧವಾಗಿ ವಿವಾಹಿತ ಪತ್ನಿಯನ್ನು ಪೋಷಿಸುವ ಜವಾಬ್ದಾರಿಯನ್ನು ಕೇವಲ ಅಂತಹ ಪರಿಗಣನೆಗಳ ಆಧಾರದ ಮೇಲೆ ಅಳಿಸಿ ಹಾಕಲಾಗುವುದಿಲ್ಲ ಎಂದು ಹೇಳಿ, ಪತಿಯ ಅರ್ಜಿಯನ್ನು ವಜಾ ಮಾಡಿದೆ.


