ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದುಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯು ತೀವ್ರ ಕುಸಿತ ಕಂಡಿದೆ. ಫೆಬ್ರವರಿ ಅಂತ್ಯದಿಂದ ಆಸ್ತಿ ಮಾರಾಟದಲ್ಲಿ ಶೇ. 44ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರ ವಿಶ್ವಾಸ ಕುಗ್ಗಿದೆ. ಆದಾಗ್ಯೂ, ಆಸ್ತಿ ಬೆಲೆಗಳಲ್ಲಿ ದೊಡ್ಡ ಕುಸಿತವಾಗಿಲ್ಲ ಮತ್ತು ಪರಿಸ್ಥಿತಿ ಸುಧಾರಿಸಿದರೆ ಮಾರುಕಟ್ಟೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಹಿನ್ನೆಲೆ, ದುಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಸ್ಪಷ್ಟ ಕುಸಿತದ ಲಕ್ಷಣಗಳು ಕಾಣಿಸುತ್ತಿವೆ. ದುಬೈ ಭೂ ಇಲಾಖೆ (DLD) ದತ್ತಾಂಶದ ಪ್ರಕಾರ, ಫೆಬ್ರವರಿ ಅಂತ್ಯದಿಂದ ಆಸ್ತಿ ಮಾರಾಟವು ವರ್ಷದಿಂದ ವರ್ಷಕ್ಕೆ ಸುಮಾರು ಶೇ. 44ರಷ್ಟು ಕುಸಿತ ಕಂಡಿದೆ. ಈ ಕುಸಿತವು ಮನೆ, ವಿಲ್ಲಾ, ಕಚೇರಿ ಮತ್ತು ವಾಣಿಜ್ಯ ಆಸ್ತಿಗಳ ಎಲ್ಲಾ ವಿಭಾಗಗಳ ಮೇಲೂ ಪರಿಣಾಮ ಬೀರಿದೆ.

Add Asianetnews Kannada as a Preferred SourcegooglePreferred

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ, ಇರಾನ್‌ನ ಪ್ರತೀಕಾರದ ದಾಳಿಗಳ ಭೀತಿ ಹೆಚ್ಚಾಗಿ ಸಂಘರ್ಷವು ಪಶ್ಚಿಮ ಏಷ್ಯಾದ ವಿವಿಧ ಭಾಗಗಳಿಗೆ ವಿಸ್ತರಿಸಿತು. ಈ ಬೆಳವಣಿಗೆಗಳು ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿ, ದುಬೈ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿವೆ.

ಫೆಬ್ರವರಿ 28ರಿಂದ ಮಾರ್ಚ್ 22ರವರೆಗೆ DLD ಒಟ್ಟು 8,059 ಆಸ್ತಿ ವ್ಯವಹಾರಗಳನ್ನು ದಾಖಲಿಸಿದ್ದು, ವಿಶ್ಲೇಷಕರ ಪ್ರಕಾರ ಯುದ್ಧ ಪರಿಸ್ಥಿತಿ ಹಾಗೂ ಅದರ ಅನಿಶ್ಚಿತತೆ ಹೂಡಿಕೆದಾರರನ್ನು ಮಾರುಕಟ್ಟೆಯಿಂದ ದೂರ ಉಳಿಯುವಂತೆ ಮಾಡಿದೆ. ಕೆಲವು ವಿಮಾನ ನಿಲ್ದಾಣಗಳಲ್ಲಿ ಉಂಟಾದ ಅಡಚಣೆಗಳು ಮತ್ತು ವಿಮಾನ ಸಂಚಾರದ ವ್ಯತ್ಯಯ ಕೂಡ ಖರೀದಿದಾರರ ಚಟುವಟಿಕೆಯನ್ನು ಕುಗ್ಗಿಸಿವೆ.

ದುಬೈ ಐತಿಹಾಸಿಕವಾಗಿ ಸ್ಥಿರತೆ, ತೆರಿಗೆ ಸೌಲಭ್ಯಗಳು ಮತ್ತು ಉತ್ತಮ ಆದಾಯ ನೀಡುವ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಪ್ರಸಿದ್ಧವಾಗಿದ್ದು, ಜಾಗತಿಕ ಹೂಡಿಕೆದಾರರು ಮತ್ತು ಶ್ರೀಮಂತ ವಲಸಿಗರನ್ನು ಆಕರ್ಷಿಸುತ್ತಿತ್ತು. ಆದರೆ ಇತ್ತೀಚಿನ ಉದ್ವಿಗ್ನತೆಗಳು ಇದಕ್ಕೂ ಪೆಟ್ಟು ಬೀಳುವಂತೆ ಮಾಡಿದೆ. ಅದರಲ್ಲೂ ದುಬೈನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರತೀಯರು ಅಗ್ರ ಖರೀದಿದಾರರ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದಲ್ಲಿದ್ದಾರೆ

ದುಬೈಗೆ ಭೇಟಿ ನೀಡಿ ಆಸ್ತಿ ಖರೀದಿಸುವವರು ಹೆಚ್ಚು

ವರದಿಗಳ ಪ್ರಕಾರ ಮಾರ್ಚ್ ಆರಂಭದಲ್ಲಿ ದುಬೈನಲ್ಲಿ ಆಸ್ತಿ ವ್ಯವಹಾರಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ. 37 ಮತ್ತು ತಿಂಗಳಿನಿಂದ ತಿಂಗಳಿಗೆ ಶೇ. 49ರಷ್ಟು ಕುಸಿದಿದೆ. ಮುಂಬೈ ಮೂಲದ ಆಸ್ತಿ ವ್ಯಾಪಾರಿಯೊಬ್ಬರ ಪ್ರಕಾರ, ಹಲವರು ದುಬೈಗೆ ಭೇಟಿ ನೀಡಿ ಆಸ್ತಿಯನ್ನು ನೇರವಾಗಿ ಪರಿಶೀಲಿಸಿ ಖರೀದಿಸಲು ಇಷ್ಟಪಡುತ್ತಾರೆ. ಆದರೆ ಯುದ್ಧ ಪರಿಸ್ಥಿತಿ ಮತ್ತು ವಿಮಾನ ಸಂಚಾರದ ಅಡಚಣೆಗಳಿಂದಾಗಿ ಈ ಪ್ರಕ್ರಿಯೆ ಬಹಳ ಮಟ್ಟಿಗೆ ಸ್ಥಗಿತಗೊಂಡಿದೆ.

ಬುರ್ಜ್ ಖಲೀಫಾ ಮತ್ತು ಪಾಮ್ ಜುಮೇರಾದಂತಹ ಪೇಮಸ್ ಪ್ರದೇಶಗಳಲ್ಲೂ ಕುಸಿತ ಕಂಡುಬರುತ್ತಿರುವುದು, ಈ ಸಮಸ್ಯೆ ಕೇವಲ ಹೊರವಲಯಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಸುಮಾರು ಐದು ವರ್ಷಗಳ ಕಾಲ ನಿರಂತರವಾಗಿ ಬೆಲೆ ಏರಿಕೆಯನ್ನು ಕಂಡಿದ್ದ ದುಬೈ ಮಾರುಕಟ್ಟೆ ಈಗಾಗಲೇ ಗರಿಷ್ಠ ಮಟ್ಟ ತಲುಪಿತ್ತು. ಈ ಹಿನ್ನೆಲೆಯಲ್ಲಿ, ವಿಶ್ಲೇಷಕರು ಬದಲಾವಣೆ ಸಂಭವಿಸುವ ಸಾಧ್ಯತೆಯನ್ನು ಮುಂಚಿತವಾಗಿ ಎಚ್ಚರಿಸಿದ್ದರು. ಪ್ರಸ್ತುತ ಯುದ್ಧ ಪರಿಸ್ಥಿತಿ ಈ ಬದಲಾವಣೆಯನ್ನು ವೇಗವಾಗಿ ಹೆಚ್ಚಿಸಿದೆ.

ಕುಗ್ಗಿದ ಖರೀದಿದಾರರ ಮನೋಭಾವ

ಎಮಾರ್ ಪ್ರಾಪರ್ಟೀಸ್ ಸೇರಿದಂತೆ ಪ್ರಮುಖ ಡೆವಲಪರ್ ಕಂಪನಿಗಳ ಷೇರುಗಳು ಸಂಘರ್ಷ ಪ್ರಾರಂಭವಾದ ನಂತರ ಶೇ. 26 ಕ್ಕಿಂತ ಹೆಚ್ಚು ಕುಸಿದಿರುವುದು ಮಾರುಕಟ್ಟೆಯ ಆತಂಕವನ್ನು ತೋರಿಸುತ್ತದೆ. ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಭೀತಿ ದುಬೈ, ಅಬುಧಾಬಿ, ದೋಹಾ ಮತ್ತು ಇತರ ನಗರಗಳ ಮೇಲೂ ಪರಿಣಾಮ ಬೀರಿದ್ದು, ಖರೀದಿದಾರರ ಮನೋಭಾವ ಕುಗ್ಗಿದೆ.

ದುಬೈನಲ್ಲಿ ಅನಿವಾಸಿ ಖರೀದಿದಾರರು ಸಾಮಾನ್ಯವಾಗಿ ಮಾನ್ಯತೆ ಪಡೆದ ದಲ್ಲಾಳಿಗಳು, ವಕೀಲರು ಅಥವಾ ಪರಿಚಿತರ ಮೂಲಕ ಪವರ್ ಆಫ್ ಅಟಾರ್ನಿ ನೀಡುವ ಮೂಲಕ ಆಸ್ತಿ ಖರೀದಿಸಬಹುದು. ಆದರೆ ವಿಮಾನ ರದ್ದತಿ ಮತ್ತು ಪ್ರಯಾಣದ ಅಡಚಣೆಗಳಿಂದಾಗಿ ಈ ಪ್ರಕ್ರಿಯೆಯೂ ನಿಧಾನಗೊಂಡಿದೆ.

ಬೆಲೆಗಳ ವಿಚಾರದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬಂದಿಲ್ಲ. DLD ದತ್ತಾಂಶದ ಪ್ರಕಾರ, ದುಬೈನಲ್ಲಿ ವಸತಿ ಆಸ್ತಿಯ ಸರಾಸರಿ ಬೆಲೆ ಸುಮಾರು 99,250 ಡಾಲರ್ ಆಗಿದ್ದು, ಪ್ರತಿ ಚದರ ಅಡಿಗೆ ಸುಮಾರು 500 ಡಾಲರ್ ಇದೆ. ಹಿಂದಿನ ವರ್ಷದ ಹೋಲಿಕೆಯಲ್ಲಿ ಬೆಲೆಗಳು ಕೇವಲ 4-5 ಶೇಕಡಾ ಮಟ್ಟಿಗೆ ಮಾತ್ರ ಇಳಿಕೆಯಾಗಿವೆ.

ಸ್ಥಳೀಯ ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ಹೂಡಿಕೆದಾರರು ಈಗ ತಾತ್ಕಾಲಿಕವಾಗಿ ಮಾರುಕಟ್ಟೆಯಿಂದ ಹಿಂದೆ ಸರಿದಿದ್ದಾರೆ. ವಿಶೇಷವಾಗಿ ನಗರದ ಅಂಚಿನ ಪ್ರದೇಶಗಳಲ್ಲಿ ಹೆಚ್ಚು ವ್ಯವಹಾರಗಳು ಕಡಿಮೆಯಾಗಿವೆ. ಆದರೆ ಡೌನ್‌ಟೌನ್ ದುಬೈ ಪ್ರದೇಶದಲ್ಲಿ ಬೆಲೆಗಳು ಇನ್ನೂ ಸ್ಥಿರವಾಗಿದ್ದು, ಕೆಲವು ದೊಡ್ಡ ವ್ಯವಹಾರಗಳು ನಡೆಯುತ್ತಿವೆ.

ದೊಡ್ಡ ದಲ್ಲಾಳಿಗಳ ಪ್ರಕಾರ, ಡೌನ್‌ಟೌನ್ ದುಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿ ಚದರ ಅಡಿಗೆ $480ರಿಂದ $700ರವರೆಗೆ ಬೆಲೆ ಇದ್ದು, ಐಷಾರಾಮಿ ಯೋಜನೆಗಳಲ್ಲಿ $2,000 ಕ್ಕಿಂತ ಹೆಚ್ಚು ಬೆಲೆ ಇದೆ.

ಭವಿಷ್ಯದ ಬಗ್ಗೆ ನೋಡಿದರೆ, ಪ್ರಸ್ತುತ ಉದ್ವಿಗ್ನತೆ ಕಡಿಮೆಯಾಗಿದರೆ ಮಾರುಕಟ್ಟೆಯಲ್ಲಿ ನಿಧಾನವಾಗಿ ಚೇತರಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದುಬೈನಲ್ಲಿ ವಾಸಿಸುವ ವಲಸಿಗರ ಪ್ರಮಾಣ ಹೆಚ್ಚು ಇರುವುದರಿಂದ ಮಾರುಕಟ್ಟೆಗೆ ಇದು ಒಂದು ಬಲವಾಗಿದೆ.

ಇತ್ತೀಚಿನ ವಾರಗಳಲ್ಲಿ ಕೆಲವು ದೇಶಗಳು ತಮ್ಮ ನಾಗರಿಕರನ್ನು ಸ್ಥಳಾಂತರಿಸಿದರೂ, ಅನೇಕರು ಯುದ್ಧ ಭೀತಿ ಅಥವಾ ಈದ್ ಹಬ್ಬದ ಹಿನ್ನೆಲೆ ತಮ್ಮ ತಾಯ್ನಾಡಿಗೆ ತಾತ್ಕಾಲಿಕವಾಗಿ ತೆರಳಿದ್ದಾರೆ. ದುಬೈ ರಿಯಲ್ ಎಸ್ಟೇಟ್ ಮಾರುಕಟ್ಟೆ ಪ್ರಸ್ತುತ ತಾತ್ಕಾಲಿಕ ಕುಸಿತದ ಹಂತದಲ್ಲಿದ್ದು, ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಸುಧಾರಿಸಿದರೆ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ.