Budget 2023: ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್ ಅಭಿವೃದ್ಧಿ: ಮಂಕಿ, ಕೇಣಿಯಲ್ಲಿ ಬಂದರು
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ 8,766 ಕೋಟಿ ರು. ವೆಚ್ಚದ 1,110 ಕಿ.ಮೀ. ಉದ್ದದ 9 ರೈಲ್ವೆ ಯೋಜನೆಗಳು, 803 ಕೋಟಿ ರು. ವೆಚ್ಚದ ರೈಲ್ವೆ ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ, ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಿಸುವುದು.
ಬೆಂಗಳೂರು (ಜು.08): ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ 8,766 ಕೋಟಿ ರು. ವೆಚ್ಚದ 1,110 ಕಿ.ಮೀ. ಉದ್ದದ 9 ರೈಲ್ವೆ ಯೋಜನೆಗಳು, 803 ಕೋಟಿ ರು. ವೆಚ್ಚದ ರೈಲ್ವೆ ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ, ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಿಸುವುದು, ಬಂದರುಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜನಸಾರಿಗೆ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜ್ಯ ಸರ್ಕಾರ 8,766 ಕೋಟಿ ರು. ಹೂಡಿಕೆಯೊಂದಿಗೆ 1,110 ಕಿ.ಮೀ. ಉದ್ದದ 9 ರೈಲ್ವೆ ಯೋಜನೆ ಕಾಮಗಾರಿಗಳು ಮತ್ತು 803 ಕೋಟಿ ರು. ವೆಚ್ಚದಲ್ಲಿ ಕೈಗೊಂಡಿರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ರಾಜ್ಯದಲ್ಲಿ ವಾಯುಯಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡಲು ‘ಸಮಗ್ರ ನಾಗರಿಕ ವಿಮಾನಯಾನ ನೀತಿ’ ರೂಪಿಸಲಾಗುವುದು. ಈ ನೀತಿಯಡಿ ಕೈಗೆಟಕುವ ಬೆಲೆಯಲ್ಲಿ ವಾಯುಯಾನ ಸಂಚಾರ, ಪ್ರವಾಸೋದ್ಯಮ, ಸರಕು ಸಾಗಣೆ ಹಾಗೂ ಕೈಗಾರಿಕೋದ್ಯಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಪ್ರವಾಸೋದ್ಯಮ ಮತ್ತು ಉದ್ಯಮ ವಲಯಗಳನ್ನು ಉತ್ತೇಜಿಸಲು ಹಾಗೂ ವಿಪತ್ತು ನಿರ್ವಹಣೆ ವೇಳೆ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ‘ಏರ್‌ಸ್ಟ್ರಿಪ್’ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.
ಕುರಿ ಸತ್ತರೆ 5000, ಹಸು ಸತ್ತರೆ 10000 ಪರಿಹಾರ: ಗುಜರಾತ್‌ನ ಅಮುಲ್‌ನಲ್ಲಿ ನಂದಿನಿ ವಿಲೀನ ಇಲ್ಲ
ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಸಕ್ತ ಸಾಲಿನಲ್ಲಿಯೇ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಲಾಗುವುದು. ರಾಜ್ಯದಲ್ಲಿನ ನೈಸರ್ಗಿಕ ಅನಿಲ ವಿತರಣಾ ಜಾಲದ ವಿಸ್ತರಣೆಗೆ ಅನುವು ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಏಕರೂಪದ ಅನುಮತಿ ಶುಲ್ಕ ಒಳಗೊಂಡಂತೆ, ‘ನಗರ ಅನಿಲ ವಿತರಣಾ ನೀತಿ’ ರೂಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಬಂದರು ಅವಲಂಬಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸರ್ವ ಋುತು ‘ಡೀಪ್‌ವಾಟರ್ ಗ್ರೀನ್‌ಫೀಲ್ಡ್ ಬಂದರು’ ಅಭಿವೃದ್ಧಿ ಪಡಿಸಲಾಗುವುದು.
ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ಬಹುಪಯೋಗಿ ಬಂದರಿನ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವುದಾಗಿ ಬಜೆಟ್‌ನಲ್ಲಿ ಭರವಸೆ ನೀಡಲಾಗಿದೆ. ಮೀನುಗಾರಿಕಾ ದೋಣಿಗಳು ತಂಗುವ ಜೆಟ್ಟಿಗಳು ಹಾಗೂ ಬಂದರುಗಳಲ್ಲಿ ಹೂಳು ತೆಗೆಯುವುದು ಮತ್ತು ಮಲ್ಪೆ, ಹೊನ್ನಾವರ, ಭಟ್ಕಳ, ಕುಂದಾಪುರ ಮತ್ತು ಬೇಲೆಕೇರಿ ಬಂದರುಗಳಲ್ಲಿ 2 ವರ್ಷಕ್ಕೊಮ್ಮೆ ಹೂಳೆತ್ತಲು ಕ್ರಮ ರೂಪಿಸುವುದು, ರಾಜ್ಯದ ಕಿರು ಬಂದರುಗಳ ವಾಣಿಜ್ಯಕರಣ ಮತ್ತು ಸುಸ್ಥಿರ ಕಾರ್ಯ ನಿರ್ವಹಣೆಗೆ ವಿಸ್ತೃತ ಕ್ರಿಯಾ ಯೋಜನೆ ರೂಪಿಸುವುದು, ನೈಸರ್ಗಿಕ ಮೀನುಗಾರಿಕಾ ಬಂದರುಗಳನ್ನು ಸುಸ್ಥಿತಿಯಲ್ಲಿಡಲು ಸಮಗ್ರ ಕರಾವಳಿ ನಿರ್ವಹಣಾ ಸಮಿತಿ ಸಬಲೀಕರಣಗೊಳಿಸುವುದಾಗಿ ಹೇಳಲಾಗಿದೆ.
14 ಬಜೆಟ್‌ಗಳ ಪೈಕಿ ಮೊದಲ ಬಾರಿಗೆ ಕೊರತೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
5 ಗ್ಯಾರಂಟಿ ನಡುವೆಯೂ ಉತ್ತಮ ಬಜೆಟ್: ಇದೊಂದು ಸಮತೋಲಿತ ಬಜೆಟ್. ಈ ಬಜೆಟ್‌ನಲ್ಲಿ ಎಲ್ಲ ವರ್ಗಗಳಿಗೂ ಒತ್ತು ನೀಡಲಾಗಿದೆ. ಈ ಅದರಲ್ಲೂ ಮೂಲಸೌಕರ್ಯ, ಬಂದರು ಮತ್ತು ಒಳನಾಡು ಜಲಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರೈಲ್ವೆ ಕಾಮಗಾರಿಗಳ ಪೂರ್ಣಗೊಳಿಸಲು ಕ್ರಮ, ಸಮಗ್ರ ನಾಗರಿಕ ವಿಮಾನಯಾನ ನೀತಿ, ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಗೊಳಿಸುವುದಾಗಿ ಹೇಳಲಾಗಿದೆ. ಇದರಿಂದ ಪ್ರವಾಸೋದ್ಯಮ, ಕೈಗಾರಿಕೋದ್ಯಮದ ಅಭಿವೃದ್ಧಿಯಾಗಲಿದೆ. ಬಂದರುಗಳ ಅಭಿವೃದ್ಧಿಯಿಂದ ರಫ್ತು ಮತ್ತು ಆಮದು ಹೆಚ್ಚಳವಾಗಲಿದೆ. ಕರಾವಳಿಯ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳಾಗಲಿವೆ. ನನ್ನ ಪ್ರಕಾರ ಮುಖ್ಯಮಂತ್ರಿಗಳು 5 ಗ್ಯಾರಂಟಿಗಳ ನಡುವೆಯೂ ಉತ್ತಮ ಬಜೆಟ್ ಮಂಡಿಸಿದ್ದಾರೆ.
- ಡಾ.ಪೆರಿಕಲ್ ಎಂ.ಸುಂದರ್, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ