Budget 2023: ಕುರಿ ಸತ್ತರೆ 5000, ಹಸು ಸತ್ತರೆ 10000 ಪರಿಹಾರ: ಗುಜರಾತ್‌ನ ಅಮುಲ್‌ನಲ್ಲಿ ನಂದಿನಿ ವಿಲೀನ ಇಲ್ಲ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಆಯವ್ಯಯದಲ್ಲಿ 3024 ಕೋಟಿ ರು.ಗಳ ಅನುದಾನ ನೀಡಲಾಗಿದೆ. ಜೊತೆಗೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅನುಗ್ರಹ ಯೋಜನೆಯನ್ನು ಪುನರ್ ಆರಂಭಿಸಲಾಗಿದೆ.
ಬೆಂಗಳೂರು (ಜು.08): ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಆಯವ್ಯಯದಲ್ಲಿ 3024 ಕೋಟಿ ರು.ಗಳ ಅನುದಾನ ನೀಡಲಾಗಿದೆ. ಜೊತೆಗೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅನುಗ್ರಹ ಯೋಜನೆಯನ್ನು ಪುನರ್ ಆರಂಭಿಸಲಾಗಿದೆ. ಈ ಯೋಜನೆಯಿಂದಾಗಿ ಆಕಸ್ಮಿಕವಾಗಿ ಸಾವಿಗೀಡಾಗುವ ಕುರಿ, ಮೇಕೆಗೆ 5 ಸಾವಿರ ರು. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10 ಸಾವಿರ ರು.ಗಳಂತೆ ಜಾನುವಾರುಗಳ ಮಾಲೀಕರಿಗೆ ಪರಿಹಾರ ಸಿಗಲಿದೆ.
ಗುಜರಾತಿನ ಅಮೂಲ್ ಸಂಸ್ಥೆಯೊಂದಿಗೆ ನಂದಿನಿ ವಿಲೀನ ಮಾಡುವುದಿಲ್ಲ ಎಂದು ಮತ್ತೊಮ್ಮೆ ರಾಜ್ಯ ಸರ್ಕಾರ ಉಚ್ಚರಿಸಿದ್ದು, ಕನ್ನಡಿಗರೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿರುವ ನಂದಿನಿ ಬ್ರಾಂಡ್ ಉಳಿಸಿ, ಇನ್ನಷ್ಟು ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಉತ್ತಮ ಹಾಲು ನೀಡುವ ತಳಿಗಳನ್ನು ಅಭಿವೃದ್ಧಿಪಡಿಸುವ ಹಾಗೂ ರೋಗಗಳಿಂದ ಬಳಲುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ, ಔಷಧಿ, ಲಸಿಕೆಗಳನ್ನು ಒದಗಿಸಿ ಹಾಲಿನ ಇಳುವರಿ ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.
14 ಬಜೆಟ್‌ಗಳ ಪೈಕಿ ಮೊದಲ ಬಾರಿಗೆ ಕೊರತೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಮರಣ ಹೊಂದಿರುವ ಒಟ್ಟು 25,859 ಜಾನುವಾರುಗಳಿಗೆ 53 ಕೋಟಿ ರು. ಪರಿಹಾರ ವಿತರಿಸಲಾಗಿದೆ. ಬಾಕಿ ಇರುವ 5,851 ಜಾನುವಾರುಗಳ ಮಾಲೀಕರಿಗೆ 12 ಕೋಟಿ ರು. ಪರಿಹಾರ ವಿತರಿಸಲು ಕ್ರಮ ವಹಿಸುವ ಭರವಸೆ ನೀಡಲಾಗಿದೆ. ಗ್ರಾಹಕರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಪ್ರೋಟೀನ್‌ಯುಕ್ತ ಮಾಂಸ ಮತ್ತು ಮೊಟ್ಟೆಪೂರೈಕೆಗೆ ಅವಕಾಶ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳು ಹಾಗೂ ಉತ್ತಮವಾದ ಮಾರುಕಟ್ಟೆಅಭಿವೃದ್ಧಿ ಮಾಡುವ ಭರವಸೆ ನೀಡಲಾಗಿದೆ.
ಮೀನುಗಾರಿಕೆ ಇಲಾಖೆ: ಮೀನುಗಾರರಿಗೆ ಬಂಪರ್ ಕೊಡುಗೆ ಬಜೆಟ್‌ನಲ್ಲಿ ದೊರಕಿದ್ದು, ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಕಿಲೋಲೀಟರ್‌ಗಳವರೆಗೆ ಹೆಚ್ಚಿಸಿದ್ದಾರೆ. ಇದರಿಂದ ಮೀನುಗಾರಿಗೆ ಸರ್ಕಾರದಿಂದ 250 ಕೋಟಿ ರು.ಗಳಷ್ಟುನೆರವು ಘೋಷಿಸಲಾಗಿದೆ. ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಉದ್ದೇಶಕ್ಕಾಗಿ ಬ್ಯಾಂಕುಗಳಲ್ಲಿ ನೀಡುವ ಬಡ್ಡಿ ರಹಿತ ಸಾಲವನ್ನು 50 ಸಾವಿರದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ 4 ಸಾವಿರ ದೋಣಿಗಳನ್ನು ಪೆಟ್ರೋಲ್, ಡೀಸೆಲ್ ಎಂಜಿನ್‌ಗಳಾಗಿ ಬದಲಾಯಿಸಲು 20 ಕೋಟಿ ರು. ಸಹಾಯ ಧನ ಮೀಸಲು ಇಡಲಾಗಿದೆ. ಹೆಚ್ಚಿನ ಬೇಡಿಕೆಯಿರುವ ಕಾಟ್ಲಾ ಮತ್ತು ರೋಹು ಮೀನು ಮರಿಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹಿಸಲಾಗುವುದು. ಸೀಗಡಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಉತ್ತಮ ಮಾರುಕಟ್ಟೆಯನ್ನು ಕಲ್ಪಿಸಲು ಕ್ರಮ ವಹಿಸಲು ನಿರ್ಧರಿಸಲಾಗಿದೆ. ಶೈತ್ಯಾಗಾರಗಳನ್ನು ಸಹ ಹೆಚ್ಚಿಸುವುದಾಗಿ ಭರವಸೆ ನೀಡಲಾಗಿದೆ.
Karnataka Budget 2023: ರಾಷ್ಟ್ರೀಯ ಸ್ಮಾರಕಗಳಿಗೆ ರಾತ್ರಿ ವೇಳೆ ಪ್ರವಾಸ ವ್ಯವಸ್ಥೆಗೆ ಸರ್ಕಾರ ಪ್ಲ್ಯಾನ್
ಮೂಗಿಗೆ ತುಪ್ಪ ಸವರಿದ್ದಾರೆ: ಪ್ರಾಣಿಗಳಿಗೆ ವಿಮೆ ಮಾಡಲು ಯಾವುದೇ ಕಂಪನಿಗಳು ಮುಂದೆ ಬರುತ್ತಿಲ್ಲ. ಸರ್ಕಾರ ಕೊಡುವ ಪರಿಹಾರ ರೈತರಿಗೆ ಯಾವುದಕ್ಕೂ ಸಾಲದು. ಪ್ರಾಣಿಗಳ ವಿಮೆಗೆ ಹೆಚ್ಚು ಆದ್ಯತೆ ಕೊಟ್ಟರೆ ಒಳ್ಳೆಯದು. ನಂದಿನಿಗೆ ಬಾಯಿ ಮಾತಿನಲ್ಲಿ ಶಕ್ತಿ ತುಂಬಿದರೆ ಪ್ರಯೋಜನವಿಲ್ಲ. ಭ್ರೂಣ ವರ್ಗಾವಣೆ ತಂತ್ರಜ್ಞಾನ ಬಳಸಿ, ಹೆಚ್ಚಾಗಿ ಹೆಣ್ಣು ಕರು ಜನಿಸುವಂತೆ ಮಾಡಬೇಕಿದೆ. ಅದಕ್ಕೆ ಪ್ರೋತ್ಸಾಹದ ಅಗತ್ಯವಿದೆ. ಇನ್ನು ಮೀನುಗಾರಿಕೆಗೆ ಸರ್ಕಾರ ಹೆಚ್ಚಿನ ಸಹಕಾರ ನೀಡಿರುವುದು ಸ್ವಾಗತಾರ್ಹ. ಒಟ್ಟಾರೆ, ಕೆಲವೊಂದು ಯೋಜನೆಗೆ ಸರಿಯಾದ ವ್ಯಾಖ್ಯಾನ ಕೊಟ್ಟಿಲ್ಲ. ಮೂಗಿಗೆ ತುಪ್ಪ ಸವರಿದಂತಾಗಿದೆ.
- ಡಾ.ಬಿ.ಎಲ್.ಚಿಂದಾನಂದ, ನಿವೃತ್ತ ಪ್ರಾಧ್ಯಾಪಕ, ಕೃಷಿ ವಿವಿ, ಬೆಂಗಳೂರು