14 ಬಜೆಟ್‌ಗಳ ಪೈಕಿ ಮೊದಲ ಬಾರಿಗೆ ಕೊರತೆ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ

ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಐದು ಗ್ಯಾರಂಟಿಗಳ ಈಡೇರಿಕೆಗೆ 35,410 ಕೋಟಿಯಷ್ಟು ಬೃಹತ್‌ ಮೊತ್ತ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

CM Siddaramaiah presented a deficit budget for the first time out of 14 budgets gvd

ವಿಧಾನಸಭೆ (ಜು.08): ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಐದು ಗ್ಯಾರಂಟಿಗಳ ಈಡೇರಿಕೆಗೆ 35,410 ಕೋಟಿಯಷ್ಟುಬೃಹತ್‌ ಮೊತ್ತ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಗ್ಯಾರಂಟಿ ಬಜೆಟ್‌ನಲ್ಲಿ ದೂರದೃಷ್ಟಿಯುಳ್ಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಬೃಹತ್‌ ಯೋಜನೆಗಳಿಗೆ ಕೈಹಾಕದೆ ಮಹಿಳೆಯರು, ರೈತರು, ಯುವಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಸೇರಿದಂತೆ ವಿವಿಧ ವರ್ಗಗಳ ಜನರ ಕೈಗಳಿಗೆ ನೇರವಾಗಿ ಲಾಭ ತಂದಿಡುವ ಸಣ್ಣ ಸಣ್ಣ ಕಾರ್ಯಕ್ರಮಗಳ ಗುಚ್ಛವನ್ನೇ ನೀಡಿದ್ದಾರೆ. ರಾಜ್ಯದ ಆರ್ಥಿಕತೆ ಅಧೋಗತಿಗೆ ಜಾರದಂತೆ ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನ, ಸಂಕಷ್ಟದಲ್ಲಿರುವ ವರ್ಗಗಳ ಕಲ್ಯಾಣ, ಹೆಚ್ಚಿನ ತೆರಿಗೆ ಭಾರ ಆಗದಂತೆ ಸೀಮಿತ ವರ್ಗಕ್ಕೆ ತೆರಿಗೆ ಭಾರ ಮಾಡುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದು, ತನ್ಮೂಲಕ ‘ಸರ್ವಜನ ಕಲ್ಯಾಣಕಾರಿ’ ಬಜೆಟ್‌ ಮಂಡಿಸಿದ್ದಾರೆ.

14ನೇ ಬಾರಿಗೆ ಬಜೆಟ್‌ ಮಂಡನೆ ಮಾಡುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ದಾಖಲೆ ಬರೆದಿರುವ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ತಮ್ಮ ಬಜೆಟ್‌ಗಳ ಇತಿಹಾಸದಲ್ಲಿ ವಿತ್ತೀಯ ಕೊರತೆ ಬಜೆಟ್‌ ಮಂಡನೆ ಮಂಡಿದ್ದಾರೆ. ಸಿದ್ದರಾಮಯ್ಯ ಆಯವ್ಯಯದ ಲೆಕ್ಕಾಚಾರದಲ್ಲಿ ಜಮೆ ಹಾಗೂ ವೆಚ್ಚಗಳ ನಡುವೆ 12,523 ಕೋಟಿ ರು. ಕೊರತೆ ಉಂಟಾಗಲಿದ್ದು, 3,27,747 ಕೋಟಿ ರು. ಗಾತ್ರದ ಬಜೆಟ್‌ನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಫೆಬ್ರವರಿಯ ಚುನಾವಣಾ ಬಜೆಟ್‌ಗೆ ಹೋಲಿಸಿದರೆ ಶೇ.6ರಷ್ಟುಹಾಗೂ 2022-23ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ ಶೇ.19ರಷ್ಟುಗಾತ್ರ ವೃದ್ಧಿಯಾಗಿದೆ. ಜತೆಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ ಬಜೆಟ್‌ ಭಾಷಣದಲ್ಲಿಯೇ ಕೇಂದ್ರ ಸರ್ಕಾರ ಹಾಗೂ ಹಿಂದಿನ ರಾಜ್ಯಸರ್ಕಾರದ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ. ತನ್ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

Karnataka Budget 2023: ರಾಷ್ಟ್ರೀಯ ಸ್ಮಾರಕಗಳಿಗೆ ರಾತ್ರಿ ವೇಳೆ ಪ್ರವಾಸ ವ್ಯವಸ್ಥೆಗೆ ಸರ್ಕಾರ ಪ್ಲ್ಯಾನ್‌

ವಿವಿಧ ವರ್ಗಗಳಿಗೆ ನೇರ ಲಾಭ: ತಮ್ಮ ಐತಿಹಾಸಿಕ 14ನೇ ಬಜೆಟ್‌ನಲ್ಲಿ ಡೆಲಿವರಿ ಬಾಯ್‌್ಸಗೂ (ಜೀವವಿಮೆ ಹಾಗೂ ಅಪಘಾತ ವಿಮೆ) ಸೇರಿದಂತೆ ಎಲ್ಲಾ ವರ್ಗದ ಜನರ ಕೈಗಳಿಗೂ ನೇರವಾಗಿ ಆರ್ಥಿಕ ಸಹಾಯ ಒದಗಿಸುವ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಮಹಿಳಾ ಬಜೆಟ್‌ಗೆ ವಿಶೇಷ ಒತ್ತು ನೀಡಿದ್ದು, ಮಹಿಳೆಯರಿಗೆ ಹಿಂದಿನ ಬಜೆಟ್‌ಗಿಂತ ಶೇ.40 ರಷ್ಟುಹೆಚ್ಚು ಅನುದಾನ ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ 42,434 ಕೋಟಿ ರು. ಒದಗಿಸಿದ್ದರೆ ಈ ಬಾರಿ 70,420 ಕೋಟಿ ರು. ಮೀಸಲಿಡಲಾಗಿದೆ. 

ಶಕ್ತಿ ಯೋಜನೆ (2,800), ಗೃಹ ಲಕ್ಷ್ಮೇ (17,500 ಕೋಟಿ ರು.) ಯೋಜನೆಯಡಿ ಸಾಕಷ್ಟುಹಣ ಮೀಸಲಿಟ್ಟಿದ್ದು, ಮಹಿಳಾ ಉದ್ಯಮಿಗಳಿಗೆ ಶೇ.4ರ ಬಡ್ಡಿ ದರದಲ್ಲಿ 5 ಕೋಟಿ ರು.ವರೆಗೆ ಸಾಲ, ಆ್ಯಸಿಡ್‌ ದಾಳಿ ಸಂತ್ರಸ್ತ ಮಹಿಳೆಯರಿಗೆ 5 ಲಕ್ಷ ರು.ವರೆಗೆ ಬಡ್ಡಿ ರಹಿತ ಸಾಲ, ವಸತಿ ಸೌಲಭ್ಯ, 4,000 ವಿಕಲಚೇತನ ಮಹಿಳೆಯರಿಗೆ ಯಂತ್ರಚಾಲಿತ ವಾಹನ ಸೇರಿದಂತೆ ಸಾಲು-ಸಾಲು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ರೈತರಿಗೆ ಕೃಷಿ ಭಾಗ್ಯ, ಅನುಗ್ರಹದಂತಹ ಯೋಜನೆ ಮುಂದುವರೆಸುವ ಜತೆಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರು.ವರೆಗೆ ಸಾಲ, ಶೇ.3ರ ಬಡ್ಡಿ ದರದಲ್ಲಿ 15 ಲಕ್ಷ ರು.ವರೆಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ಪ್ರಕಟಿಸಲಾಗಿದೆ.

ವಿದ್ಯಾರ್ಥಿಗಳ ಪೈಕಿ ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರುವ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿವೇತನ ಮುಂದುವರಿಕೆ, ‘ಅರಿವು’ ಶೈಕ್ಷಣಿಕ ಸಾಲ, ಹೊಸ ಶಿಕ್ಷಣ ನೀತಿ, ಪಠ್ಯ ಪುಸ್ತಕ ಪರಿಷ್ಕರಣೆ, 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಚಿಕ್ಕಿ, ಬಾಳೆಹಣ್ಣಿನಂತಹ ಪೌಷ್ಟಿಕ ಆಹಾರ ನೀಡುವುದಾಗಿ ಹೇಳಲಾಗಿದೆ. ಉಳಿದಂತೆ ಯುವಕರಿಗೆ ವಿಶೇಷ ಒತ್ತು ನೀಡಿದ್ದು ಯುವನಿಧಿ ಮಾತ್ರವಲ್ಲದೆ ವಿದ್ಯಾನಿಧಿ, ಸ್ವಯಂ ಉದ್ಯೋಗಕ್ಕೆ ಹಣಕಾಸು ಸಹಾಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಲಾಗಿದೆ.

ಮದ್ಯಪ್ರಿಯರಿಗೆ ತೆರಿಗೆ ಬರೆ: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಹಾಗೂ ಹಳೆಯ ಭಾಗ್ಯಗಳನ್ನು ಮುಂದುವರೆಸುವ ಸಲುವಾಗಿ ನೇರವಾಗಿ ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ಶೇ.10ರಿಂದ 20ರಷ್ಟುಹೆಚ್ಚಳ ಮಾಡಿದ್ದು, ವಿಸ್ಕಿ ಮೇಲಿನ ತೆರಿಗೆ ಶೇ.20 ಹಾಗೂ ಬಿಯರ್‌ ಮೇಲಿನ ತೆರಿಗೆ ಶೇ.10ರಷ್ಟುಹೆಚ್ಚಳ ಮಾಡಲಾಗಿದೆ. ತನ್ಮೂಲಕ 36,000 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಮೋಟಾರು ವಾಹನಗಳ ನೋಂದಣಿ ಶುಲ್ಕ ಪರಿಷ್ಕರಣೆಯಿಂದ 1 ಸಾವಿರ ಕೋಟಿ ರು., ಜತೆಗೆ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳದ ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಆದಾಯ 6 ಸಾವಿರ ಕೋಟಿ ರು.ಗಳಷ್ಟುವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಬಕಾರಿ, ವಾಣಿಜ್ಯ ತೆರಿಗೆ, ಜಿಎಸ್‌ಟಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಗಣಿಗಾರಿಕೆ, ಮೋಟಾರು ವಾಹನ ತೆರಿಗೆ ಸಂಗ್ರಹ ಗುರಿ ಹೆಚ್ಚಿಸಿದ್ದು, ಪೆಟ್ರೋಲ್‌-ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳದಂತಹ ಕ್ರಮಗಳಿಗೆ ಕೈ ಹಾಕದೆ ಜನಸಾಮಾನ್ಯರ ಹಿತಿ ಕಾಯುವ ಪ್ರಯತ್ನ ಮಾಡಲಾಗಿದೆ.

ತಪ್ಪಿತು ಸಿದ್ದು ಆರ್ಥಿಕ ಶಿಸ್ತು: ಆರ್ಥಿಕ ಶಿಸ್ತಿನ ಜಪ ಮಾಡುವ ಸಿದ್ದರಾಮಯ್ಯ ಈ ಬಾರಿ ಆರ್ಥಿಕ ಶಿಸ್ತಿನ ಲಯ ತಪ್ಪಿದ್ದಾರೆ. 2002ರ ವಿತ್ತೀಯ ಹೊಣೆಗಾರಿಕೆ ಕಾಯಿದೆಯಲ್ಲಿನ ಮೂರು ನಿಯಮಗಳ ಪೈಕಿ ಒಂದು ನಿಯಮ ಉಲ್ಲಂಘನೆಯಾಗಿದೆ. 85,818 ಕೋಟಿ ರು. ಸಾಲ ಮಾಡುವುದಾಗಿ ಬಜೆಟ್‌ನಲ್ಲಿ ತಿಳಿಸಿದೆ. ಇದು ರಾಜ್ಯದ ಒಟ್ಟು ಜಿಡಿಪಿಯ ಶೇ.3ಕ್ಕಿಂತ ಕಡಿಮೆ ಇರಬೇಕಿದ್ದು, ಶೇ.2.6ರಷ್ಟಿದೆ. ಇನ್ನು ಒಟ್ಟು ಸಾಲದ ಪ್ರಮಾಣವು ಒಟ್ಟು ಜಿಡಿಪಿಯ ಶೇ.25ಕ್ಕಿಂತ ಕಡಿಮೆಯಿರಬೇಕಿದ್ದು ಶೇ.22.3 ರಷ್ಟಿದೆ. ಆದರೆ, ಉಳಿತಾಯ ಬಜೆಟ್‌ ಆಗಿರಬೇಕೆಂಬ ನಿಯಮ ಉಲ್ಲಂಘನೆಯಾಗಿದ್ದು, ಪ್ರಸ್ತುತ ಬಜೆಟ್‌ನಲ್ಲಿ 12,523 ಕೋಟಿ ರು. ಆದಾಯ ಕೊರತೆ ಆಗಿದೆ. ಎಲ್ಲಾ ಸ್ವೀಕೃತಿಗಳನ್ನು ಪರಿಗಣಿಸಿದರೂ ಈ ಮೊತ್ತ 3,269 ಕೋಟಿಗಿಂತಲೂ ಕಡಿಮೆಯಾಗುತ್ತಿಲ್ಲ.

ಐಟಿ ವಲಯಕ್ಕೆ ಸಿದ್ದರಾಮಯ್ಯ ಕೃಪಾಕಟಾಕ್ಷ: ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ ರಚನೆ

ಬಿಜೆಪಿ ಕಾರ್ಯಕ್ರಮಗಳಿಗೆ ಕೊಕ್‌: ಇನ್ನು ‘ಕೃಷಿ ಭಾಗ್ಯ’, ‘ಅನುಗ್ರಹ’, ಅರಿವು, ‘ಇಂದಿರಾ ಕ್ಯಾಂಟೀನ್‌’ ಪುನರ್‌ ಜಾರಿ ಮಾಡಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ ಎನ್‌ಇಪಿ, ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ಎಪಿಎಂಪಿ ತಿದ್ದುಪಡಿ ಕಾಯ್ದೆ, ನಮ್ಮ ಕ್ಲಿನಿಕ್‌ ಸೇರಿದಂತೆ 17ಕ್ಕೂ ಹೆಚ್ಚು ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಬಜೆಟ್‌ನಲ್ಲಿ ಕೊಕ್‌ ನೀಡಿದೆ.

Latest Videos
Follow Us:
Download App:
  • android
  • ios