ಮೆಟಾ ಮಾಲೀಕತ್ವದ ಅತೀದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ಸ್ಥಾನದಿಂದ ವಿಲ್ ಕ್ಯಾಥಕಾರ್ಟ್ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಕ್ರೆಡ್ ಸಂಸ್ಥೆ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ.
ನವದೆಹಲಿ (ಜೂ.22) ಮಾರ್ಕ್ ಜುಕರ್‌ಬರ್ಗ್ ನೇತೃತ್ವ ಮೆಟಾ ಕಂಪನಿಯ ಹಲವು ತಾಣಗಳ ಪೈಕಿ ಅತೀ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥಕಾರ್ಟ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಸ್ಥಾನಕ್ಕೆ ಭಾರತದ ಫಿನ್ ಟೆಕ್ ಆ್ಯಪ್ ಕ್ರೆಡ್ (CRED) ಕಂಪನಿ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ. ವಿಶೇಷ ಅಂದರೆ ಕ್ರೆಡ್ ಸಂಸ್ಥೆ ಇದೀಗ ವ್ಯಾಟ್ಸಾಪ್‌ನಲ್ಲಿ ಬರೋಬ್ಬರಿ 8550 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಕ್ರೆಡ್ ಸಂಸ್ಥೆಯ ಜಾಹೀರಾತು ಭಾರಿ ವೈರಲ್ ಆಗಿತ್ತು. ಜಾಹೀರಾತಿನಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನಾನು ಇಂದಿರಾನಗರ ಗೂಂಡಾ ಎಂದಿದ್ದರು. ಈ ಭಿನ್ನ ಯೋಚನೆ ಹಿಂದಿದ್ದ ಕ್ರೆಡ್ ಸಂಸ್ಥೆ ಸಂಸ್ಥಾಪಕ ಕುನಾಲ್ ಶಾ ಇದೀಗ ವ್ಯಾಟ್ಸಾಪ್ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಭಾರತದಲ್ಲಿ ವ್ಯಾಟ್ಸಾಪ್ ವಿಸ್ತರಣೆ
ಕುನಾಲ್ ಶಾ ವ್ಯಾಟ್ಸಾಪ್ ಮುಖ್ಯಸ್ಥರಾಗಿ ನೇಮಕ ಹಾಗೂ ಕ್ರೆಡ್ ಕಂಪನಿಯಿಂದ ಬರೋಬ್ಬರಿ 8550 ಕೋಟಿ ರೂಪಾಯಿ ಹೂಡಿಕೆ ಹಿಂದೆ ವ್ಯಾಟ್ಸಾಪ್ ಕಾರ್ಯವ್ಯಾಪ್ತಿ ವಿಸ್ತರಣೆ ಯೋಜನೆ ಅಡಗಿದೆ. ಭಾರತದಲ್ಲಿ ವ್ಯಾಟ್ಸಾಪ್ ಕೇವಲ ಮೆಸೇದಿಂಗ್ ಪ್ಲಾಟ್‌ಫಾರ್ಮ್ ಆಗಿ ಉಳಿದಿಲ್ಲ. ಇದು ಡಿಜಿಟಲ್ ಪೇಮೆಂಟ್, ಇ ಕಾಮರ್ಸ್ ಸೇರಿದಂತೆ ವ್ಯಾಪಾರ ಮತ್ತು ಆರ್ಥಿಕ ವಹಿವಾಟಿನ ಅತೀ ದೊಡ್ಡ ಕೇಂದ್ರವಾಗಿ ಬದಲಾಗಲಿದೆ.
ಕುನಾಲ್ ಶಾ ಕ್ರೆಡ್ ಸಿಇಒ ಜವಾಬ್ದಾರಿ ಜೊತೆ ವ್ಯಾಟ್ಸಾಪ್ ಮುಖ್ಯಸ್ಥರಾಗಿ ಜಾಗತಿಕ ಕಾರ್ಯತಂತ್ರ ಹಾಗೂ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸಲಿದ್ದಾರೆ. ಕ್ರೆಡ್ ಹಾಗೂ ವ್ಯಾಟ್ಸಾಪ್ ಇನ್ಮುಂದೆ ಜಂಟಿಯಾಗಿ ಕಾರ್ಯನಿರ್ವಹಿಸಲಿದೆ. ಭಾರತೀಯ ಗ್ರಾಹಕರ ಹಣಕಾಸು ನಡವಳಿಕೆ ಸೇರಿದಂತೆ ಭಾರತೀಯ ಗ್ರಾಹಕರು, ಬಳಕೆದಾರರ ಸಂಪೂರ್ಣ ಜ್ಞಾನವಿರುವ ಕುನಾಲ್ ಶಾ ಇದೀಗ ವ್ಯಾಟ್ಸಾಪ್ ಮುಖ್ಯಸ್ಥರಾಗಿ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ವ್ಯಾಟ್ಸಾಪ್ ವಿಸ್ತರಿಸಲು ಮಹತ್ವದ ಪ್ಲಾನ್ ರೂಪಿಸಿದ್ದಾರೆ.
ಯಾರು ಈ ಕುನಾಲ್ ಶಾ?
ಭಾರತದ ಉದ್ಯಮಿಗಳ ಪಟ್ಟಿಯಲ್ಲಿ ಪ್ರಮುಖ ಹೆಸರು ಕುನಾಲ್ ಶಾ. ತಂತ್ರಜ್ಞಾನ ಬಳಸಿಕೊಂಡು, ಸದ್ಯದ ಪರಿಸ್ಥಿತಿಗೆ ತಕ್ಕಂತೆ ಉದ್ಯಮ ಕಟ್ಟುವ ಜ್ಞಾನ, ತಂತ್ರಜ್ಞಾನದ ಅರಿವು ಕುನಾಲ್ ಶಾಗೆ ಇದೆ. ಫ್ರೀಚಾರ್ಜ್ ಉದ್ಯಮ ಕಟ್ಟಿ ಭಾರಿ ಯಶಸ್ಸು ಕಂಡಿರುವ ಕುನಾಲ್ ಶಾ, ಬಳಿಕ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕ್ರೆಡ್ ಸಂಸ್ಥೆ ಸ್ಥಾಪಿಸಿ ಯಶಸ್ಸು ಸಾಧಿಸಿದ್ದಾರೆ. ಇದೀಗ ವ್ಯಾಟ್ಸಾಪ್ ವಿಶ್ವದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯ ಹೊಣೆಯನ್ನು ಭಾರತದ ಉದ್ಯಮಿಗೆ ನೀಡಿರುವುದು ಭಾರತದ ಸ್ಟಾರ್ಟ್ಅಪ್‌ಗೆ ಸಿಕ್ಕ ಗೌರವವಾಗಿದೆ. ವ್ಯಾಟ್ಸಾಪ್ ಜೊತೆ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿರುವ ಕ್ರೆಡ್ ಉದ್ಯಮದ ಮೌಲ್ಯ ಗಣನೀಯವಾಗಿ ಏರಿಕೆಯಾಗಲಿದೆ.


