ಭಾರತದಲ್ಲಿ ಸಿಗರೇಟ್‌ ಮೇಲೆ ಹೊಸ ತೆರಿಗೆ ವಿಧಿಸಲಾಗುತ್ತಿದ್ದು, ಒಂದು ಸಿಗರೇಟ್ ಬೆಲೆ 72 ರೂ. ಆಗಲಿದೆ ಎಂಬ ಸುದ್ದಿ ಸುಳ್ಳು. ಈ ಲೇಖನವು ಹೊಸ ತೆರಿಗೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಮತ್ತು ಪ್ರತಿ ಸಿಗರೇಟಿನ ನೈಜ ಬೆಲೆ ಏರಿಕೆ ₹2.5 ರಿಂದ ₹10.3 ರಷ್ಟಿರಬಹುದು ಎಂಬುದನ್ನು ವಿವರಿಸುತ್ತದೆ.

ಬೆಂಗಳೂರು (ಡಿ.29): ಭಾರತದಲ್ಲಿ ಸಿಗರೇಟ್‌ ಮೇಲೆ ಹಾಕಲಾಗುತ್ತಿರುವ ಹೊಸ ತೆರಿಗೆಯ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಸೋಶಿಯಲ್‌ ಮೀಡಿಯಾದಿಂದ ಹಿಡಿದು ಗಲ್ಲಿಗಲ್ಲಿಯಲ್ಲೂ ಅದರ ಬಗ್ಗೆ ಚರ್ಚೆ ಆಗುತ್ತಿದೆ. ಸಿಗರೇಟ್‌ ಬೆಲೆ ಎಷ್ಟಾಗಬಹುದು ಎನ್ನುವ ಕುತೂಹಲದೊಂದಿಗೆ, ಹೊಸ ತೆರಿಗೆ ಅಡಿಯಲ್ಲಿ ಒಂದು ಸಿಗರೇಟ್‌ನ ಬೆಲೆ 72 ರೂಪಾಯಿಗೆ ಏರಿಕೆ ಆಗಲಿದೆ ಎನ್ನುವ ಸುದ್ದಿಗಳು ಬಂದಿದ್ದವು. ಆದರೆ, ಸಿಗರೇಟ್‌ ಮೇಲೆ ಹಾಕಲಾಗುತ್ತಿರುವ ನಿಜವಾದ ತೆರಿಗೆ ಹಾಗೂ ಸುಂಕವನ್ನು ಗಮನಿಸಿದರೆ ಈ ವಿಚಾರ ತಪ್ಪು ಅನ್ನೋದು ಗೊತ್ತಾಗುತ್ತದೆ. ಸಿಗರೇಟ್‌ ಬೆಲೆ ಏರಿಕೆ ಆಗುವುದು ಖಚಿತ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ, ಒಂದು ಸಿಗರೇಟ್‌ಗೆ 18 ರಿಂದ 72 ರೂಪಾಯಿ ಆಗೋದು ಸುಳ್ಳು. ಬೆಲೆ ಏರಿಕೆ ಪ್ರಮಾಣ ಹೇಗಿರಲಿದೆ ಅನ್ನೋದನ್ನು ರೆಡ್ಡಿಟ್‌ನಲ್ಲಿ ಯೂಸರ್‌ ಒಬ್ಬರು ವಿವರಿಸಿದ್ದಾರೆ.

ಸಿಗರೇಟ್‌ಗೆ ಸುಂಕ ಹೇಗೆ ವಿಧಿಸಲಾಗುತ್ತದೆ?

ಭಾರತದಲ್ಲಿ ಸಿಗರೇಟ್ ಮೇಲೆ ಅಬಕಾರಿ ಸುಂಕವನ್ನು ಪ್ರತಿ 1,000 ಸಿಗರೇಟ್‌ಗೆ ವಿಧಿಸಲಾಗುತ್ತದೆ, ಪ್ರತಿ ಸಿಗರೇಟ್‌ಗೆ ಸುಂಕ ವಿಧಿಸುವ ಪದ್ಧತಿ ಇಲ್ಲ. ಪ್ರಸ್ತಾವಿತ ಬೆಲೆ ಏರಿಕೆಯ ನಿಜವಾದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಈ ವ್ಯತ್ಯಾಸ ಪ್ರಮುಖವಾಗಿದೆ.

ಹಳೆಯ ಸುಂಕ ರಚನೆ (ಪ್ರತಿ 1,000 ಸಿಗರೇಟ್‌ಗಳಿಗೆ)

ರೇಂಜ್‌: ₹200 ರಿಂದ ₹735

ಪ್ರತಿ ಸಿಗರೇಟ್:

₹200 ÷ 1,000 = ₹0.20

₹735 ÷ 1,000 = ₹0.735

ಹೊಸ ಪ್ರಸ್ತಾವಿತ ಸುಂಕ (ಪ್ರತಿ 1,000 ಸಿಗರೇಟ್‌ಗೆ)

ರೇಂಜ್‌: ₹2,700 ರಿಂದ ₹11,000

ಪ್ರತಿ ಸಿಗರೇಟ್‌ಗೆ:

₹2,700 ÷ 1,000 = ₹2.70

₹11,000 ÷ 1,000 = ₹11.00

ಪ್ರತಿ ಸಿಗರೇಟ್‌ಗೆ ನಿಜವಾದ ತೆರಿಗೆ ಹೆಚ್ಚಳ

ನಿಜವಾದ ಪರಿಣಾಮವು ಹೊಸ ಮತ್ತು ಹಳೆಯ ಸುಂಕಗಳ ನಡುವಿನ ವ್ಯತ್ಯಾಸದಿಂದ ಬರುತ್ತದೆ. ಹೊಸ ತೆರಿಗೆಯ ಪ್ರಕಾರ ನಿಮ್ಮ ಸಿಗರೇಟ್‌ಗೆ ಕನಿಷ್ಠ 2.50 ರೂಪಾಯಿ ಗರಿಷ್ಠ 10.30 ರೂಪಾಯಿ ಏರಿಕೆ ಆಗಬಹುದು.

ಕನಿಷ್ಠ ಹೆಚ್ಚಳ:

₹2.70 − ₹0.20 = ₹2.50 ಪ್ರತಿ ಸಿಗರೇಟು

ಗರಿಷ್ಠ ಹೆಚ್ಚಳ:

₹11.00 − ₹0.735 ≈ ಪ್ರತಿ ಸಿಗರೇಟಿಗೆ ₹10.30

ನಿಜವಾದ ತೆರಿಗೆ ಹೆಚ್ಚಳ = ಪ್ರತಿ ಸಿಗರೇಟಿಗೆ ₹2.5 ರಿಂದ ₹10.3

ಕೆಲವು ವೈರಲ್ ಚರ್ಚೆಗಳಲ್ಲಿ ಹೇಳಿರುವಂತೆ ತೆರಿಗೆ ಹೆಚ್ಚಳವು ಪ್ರತಿ ಸಿಗರೇಟಿಗೆ 54 ರೂಪಾಯಿ ಆಗೋದಿಲ್ಲ ಅನ್ನೋದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

ರಿಟೇಲ್‌ ಸಿಗರೇಟ್‌ ದರ ಎಷ್ಟಾಗಬಹುದು?

ಪ್ರಸ್ತುತ ಧಮ್‌ ಎಳೆಯೋರು ಸಾಮಾನ್ಯವಾಗಿ ಸೇದುವ ಸಿಗರೇಟ್‌ನ ಬೆಲೆ 18 ರೂಪಾಯಿ ಎಂದುಕೊಳ್ಳೋಣ. ಸರ್ಕಾರ ಹೇರಿರುವ ಎಲ್ಲಾ ತೆರಿಗೆಯನ್ನು ಗ್ರಾಹಕರ ಮೇಲೆಯೇ ಹಾಕಿದಲ್ಲಿ ಬೆಲೆ ಇಷ್ಟಾಬಹುದು.

ಲೋವರ್‌ ಬ್ಯಾಂಡ್‌: ₹18 + ₹2.5 ≈ ₹20.5

ಅಪ್ಪರ್‌ ಬ್ಯಾಂಡ್‌: ₹18 + ₹10.3 ≈ ₹28.3

ಇದರಿಂದ ಪ್ರತಿ ಸಿಗರೇಟ್‌ಗೆ ₹21 ರಿಂದ ₹28 ರೂಪಾಯಿ ಏರಿಕೆ ಆಗಬಹುದು. ಇದು ಅರ್ಥಪೂರ್ಣ ಹೆಚ್ಚಳ. ಆದರೆ, ಈಗ ಚರ್ಚೆ ಆಗುತ್ತಿರುವಂತೆ [fರತಿ ಸಿಗರೇಟ್‌ಗೆ 72 ರೂಪಾಯಿ ಆಗುವುದು ಶುದ್ಧ ಸುಳ್ಳು.

ಇದು ಧೂಮಪಾನವನ್ನು ನಿಲ್ಲಿಸುತ್ತದೆಯೇ?

ಐತಿಹಾಸಿಕವಾಗಿ, ಮಧ್ಯಮ ಬೆಲೆ ಏರಿಕೆಗಳು ಬಳಕೆಯನ್ನು ಕ್ರಮೇಣ ಕಡಿಮೆ ಮಾಡುತ್ತವೆ ಆದರೆ ಧೂಮಪಾನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಿಲ್ಲ. ಬೆಲೆಗಳ ಬಗ್ಗೆ ಚಿಂತೆ ಮಾಡುವ ಧಮ್ಮಿಗರು, ಬ್ರ್ಯಾಂಡ್‌ಗಳನ್ನು ಬದಲಾಯಿಸಬಹುದು ಅಥವಾ ಸಿಗರೇಟ್‌ನ ಸಂಖ್ಯೆ ಕಡಿಮೆ ಮಾಡಬಹುದು. ಆದರೆ, ಬೆಲೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದವರು, ಇದರ ಬಗ್ಗೆ ಚಿಂತೆ ಮಾಡೋದಿಲ್ಲ. ಭಾರತದಲ್ಲಿ ಸಿಗರೇಟ್ ಬೆಲೆಗಳು ಹೊಸ ನೀತಿಯಿಂದಾಗಿ ಏರಿಕೆಯಾಗುವ ಸಾಧ್ಯತೆಯಿದ್ದರೂ, ಪ್ರತಿ ಸಿಗರೇಟ್ ಬೆಲೆ ₹18 ರಿಂದ ₹72ರೂಪಾಯಿ ಅನ್ನೋದು ಸುಳ್ಳು.