BSNL ಪುನಶ್ಚೇತನಕ್ಕೆ 89,047 ಕೋಟಿ ರೂ. ಪ್ಯಾಕೇಜ್ ಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ ಎನ್ ಎಲ್ ಪುನಶ್ಚೇತನಕ್ಕೆ 89,047 ಕೋಟಿ ರೂ. ಮೊತ್ತದ ಪ್ಯಾಕೇಜ್ ಗೆ  ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ.  ಇದರಲ್ಲಿ ಬಿಎಸ್ ಎನ್ ಎಲ್ ಗೆ 4ಜಿ/5ಜಿ ಸ್ಪೆಕ್ಟ್ರಂ ಹಂಚಿಕೆ ಕೂಡ ಸೇರಿದೆ. 

BSNL Revival Package CCEA Approves Rs 89047 Crore Support anu

ನವದೆಹಲಿ (ಜೂ.7): ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ ಎನ್ ಎಲ್ ಪುನಶ್ಚೇತನಕ್ಕೆ 89,047 ಕೋಟಿ ರೂ. ಮೊತ್ತದ ಪ್ಯಾಕೇಜ್ ಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಬಿಎಸ್ ಎನ್ ಎಲ್ ಗೆ 4ಜಿ/5ಜಿ ಸ್ಪೆಕ್ಟ್ರಂ ಹಂಚಿಕೆ ಕೂಡ ಸೇರಿದೆ. ಈ ಮೊತ್ತವು  ಭಾರತ್ ಸಂಚಾರ್ ನಿಗಮ ಲಿ.( ಬಿಎಸ್ ಎನ್ ಎಲ್) ಪುನಶ್ಚೇತನಕ್ಕೆ ಕಳೆದ ವರ್ಷ ಘೋಷಣೆಯಾದ 1.64 ಲಕ್ಷ ಕೋಟಿ ರೂ. ಪ್ಯಾಕೇಜ್ ಭಾಗವಾಗಿದೆ. ಇನ್ನು ಬಿಎಸ್ ಎನ್ ಎಲ್ ಅಧಿಕೃತ ಬಂಡವಾಳ 1,50,000ಕೋಟಿ ರೂ.ನಿಂದ 2,10,000 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಪುನಶ್ಚೇತನ ಪ್ಯಾಕೇಜ್ ನಿಂದ ಬಿಎಸ್ ಎನ್ ಎಲ್ ಸುಭದ್ರವಾದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿ ರೂಪುಗೊಳ್ಳಲಿದ್ದು, ಭಾರತದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಗಮನ ಕೇಂದ್ರೀಕರಿಸಲಿದೆ ಎಂದು ಸರ್ಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. 2023-24ನೇ ಹಣಕಾಸು ಸಾಲಿನಲ್ಲಿ ಸರ್ಕಾರ 52,937 ಕೋಟಿ ರೂ. ಬಂಡವಾಳ ನೆರವನ್ನು ಘೋಷಿಸಿತ್ತು. ಇದಕ್ಕಿಂತ ಹಿಂದಿನ ಸಾಲಿನಲ್ಲಿ 44,720 ಕೋಟಿ ರೂ. ಬಂಡವಾಳ ನೆರವು ಘೋಷಿಸಲಾಗಿತ್ತು. 

ಇತ್ತೀಚಿನ ಸ್ಪೆಕ್ಟ್ರಂ ಹಂಚಿಕೆಯಿಂದ ಬಿಎಸ್ ಎನ್ ಎಲ್ ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 4ಜಿ ಹಾಗೂ 5ಜಿ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ. ವಿವಿಧ ಸಂಪರ್ಕ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಹಾಗೂ ಸಂಪರ್ಕ ಹೊಂದಿರದ ಹಳ್ಳಿಗಳಿಗೆ 4ಜಿ ಕವರೇಜ್ ಅನ್ನು ಬಿಎಸ್ ಎನ್ ಎಲ್ ನೀಡಬಹುದು. 

BSNL: ಹಳ್ಳಿಗರಿಗೆ ವರವಾದ 4ಜಿ ಸ್ಯಾಚುರೇಶನ್‌ ಪ್ರಾಜೆಕ್ಟ್

ಬಿಎಸ್ಎನ್ಎಲ್ / ಎಂಟಿಎನ್ ಎಲ್ ಗೆ 2019ರಲ್ಲಿ ಮೊದಲ ಪುನಶ್ಚೇತನ ಪ್ಯಾಕೇಜ್ ಗೆ  ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದು 69,000 ಕೋಟಿ ರೂ. ಪ್ಯಾಕೇಜ್ ಆಗಿದ್ದು, ಬಿಎಸ್ ಎನ್ ಎಲ್ /ಎಂಟಿಎನ್ ಎಲ್ ನಲ್ಲಿ ಸ್ಥಿರತೆ ತಂದಿತ್ತು. 2022ರಲ್ಲಿ ಸರ್ಕಾರ ಬಿಎಸ್ ಎನ್ ಎಲ್/ ಎಂಟಿಎನ್ ಎಲ್ ಗೆ 1.64 ಲಕ್ಷ ಕೋಟಿ ರೂ. ಮೊತ್ತದ ಎರಡನೇ ಪುನಶ್ಚೇತನ ಪ್ಯಾಕೇಜ್ ಗೆ ಅನುಮೋದನೆ ನೀಡಿತ್ತು. ಇದು ಬಂಡವಾಳ ವೆಚ್ಚ, ಗ್ರಾಮೀಣ ಲ್ಯಾಮಡ್ ಲೈನ್ ಗಳಿಗೆ ಹಣಕಾಸು ನೆರವು, ಬ್ಯಾಲೆನ್ಸ್ ಶೀಟ್ ನಲ್ಲಿನ ಅಸಮತೋಲನ ತಗ್ಗಿಸಲು ಹಣಕಾಸಿನ ನೆರವು ನೀಡಿತ್ತು. ಹಾಗೆಯೇ ಬಿಬಿಎನ್ ಎಲ್ ಜೊತೆ ಬಿಎಸ್ ಎನ್ ಎಲ್ ವಿಲೀನಕ್ಕೆ ಸಹಾಯ ಮಾಡಿತ್ತು. ಈ ಎರಡು ಪ್ಯಾಕೇಜ್ ಗಳ ಕಾರಣದಿಂದ   2021-22ನೇ ಹಣಕಾಸು ಸಾಲಿನಿಂದ ಬಿಎಸ್ ಎನ್ ಎಲ್ ಲಾಭ ಗಳಿಸಲು ಪ್ರಾರಂಭಿಸಿತ್ತು. ಬಿಎಸ್ ಎನ್ ಎಲ್ ಮೇಲಿನ ಒಟ್ಟು ಸಾಲದ ಹೊರೆ 32,944 ಕೋಟಿ ರೂ.ನಿಂದ 22,289 ಕೋಟಿ ರೂ.ಗೆ ತಗ್ಗಿತ್ತು. 

ಏರ್ ಟೆಲ್, ಜಿಯೋಗೆ BSNL ಟಕ್ಕರ್; 150 ದಿನಗಳ ಪ್ಲ್ಯಾನ್ ಕೇವಲ 397ರೂ.ಗೆ!

ಹೋಮ್ ಫೈಬರ್ ವಲಯದಲ್ಲಿ ಬಿಎಸ್ ಎನ್ ಎಲ್ ಉತ್ತಮ ಬೆಳವಣಿಗೆ ದಾಖಲಿಸಿದೆ. ಇದು ಪ್ರತಿ ವರ್ಷ ಒಂದು ಲಕ್ಷಕ್ಕಿಂತಲೂ ಅಧಿಕ ಹೊಸ ಸಂಪರ್ಕಗಳನ್ನು ನೀಡುತ್ತಿದೆ. 2023ರ ಮೇನಲ್ಲಿಒಟ್ಟು ಹೋಮ್ ಫೈಬರ್ ಚಂದಾದಾರ ಪ್ರಮಾಣ 30.88 ಲಕ್ಷ. ಇನ್ನು ಹೋಮ್ ಫೈಬರ್ ನಿಂದ ಕಳೆದ ವರ್ಷ ಒಟ್ಟು 2,071 ಕೋಟಿ ರೂ. ಆದಾಯ ಬಂದಿತ್ತು. 

ಬಿಎಸ್ ಎನ್ ಎಲ್ ಈ ಹಿಂದೆ ನಿರಂತರ ನಷ್ಟಕ್ಕೆ ತುತ್ತಾಗಿತ್ತು. 2019-20ನೇ ಸಾಲಿನಲ್ಲಿ ಬಿಎಸ್ ಎನ್ ಎಲ್ ಗೆ  15,500 ಕೋಟಿ ರೂ. ನಷ್ಟವಾಗಿತ್ತು. 2019ರಲ್ಲಿ ಪುನಶ್ಚೇತನ ಪ್ಯಾಕೇಜ್ ನೀಡಿದ ಬಳಿಕ  2020-21 ನೇ ಸಾಲಿನಲ್ಲಿ 7,441 ಕೋಟಿ ರೂ.ಗೆ ಇಳಿಕೆಯಾಗಿತ್ತು. 

Latest Videos
Follow Us:
Download App:
  • android
  • ios